ರಾಜ್ಯದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ತಮ್ಮ ನಾಲಿಗೆ ಹರಿಬಿಡುವ ಎಂದಿನ ಪ್ರವೃತ್ತಿಯನ್ನು ಮುಂದುವರೆಸಿ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ, ಈ ಎದುರಾಟ ಜನಪರ ವಿಷಯಗಳ ಬದಲು ಧರ್ಮಾಧಾರಿತ ರಾಜಕೀಯಕ್ಕೆ ಜಾರುತ್ತಿರುವುದು ಆತಂಕಕಾರಿ.
ನಿನ್ನೆ ಕುಂದಾನಗರಿ ಬೆಳಗಾವಿಯಲ್ಲಿ ನಡೆದ ಬಿಜೆಪಿ ನೇತೃತ್ವದ ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಂಡು, “ಸಿಎಂ ಸಿದ್ದರಾಮಯ್ಯ ಕರ್ನಾಟಕವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಸಿಎಂ ಸ್ಥಾನಕ್ಕೆ ಮುಂದಿನ ನವೆಂಬರ್‌ನಲ್ಲಿ ಟೈಂ ಬಾಂಬ್ ಫಿಕ್ಸ್ ಆಗಿದೆ” ಎಂದು ಅಶೋಕ್ ಹೇಳಿಕೆ ಕೊಟ್ಟಿದ್ದಾರೆ. ಅಸಲಿಗೆ, ಅವಕಾಶ ಸಿಕ್ಕಾಗಲೆಲ್ಲಾ ಧರ್ಮಗಳ ನಡುವೆ, ಸಮುದಾಯಗಳ ನಡುವೆ ದ್ವೇಷ ಬಿತ್ತುವ ಹೇಳಿಕೆಗಳನ್ನು ಕೊಡುವ ಇವರು, ರಾಜ್ಯದ ಜನತೆ ಮುಂದೆ ಸಾಮಾಜಿಕ ಕಳಕಳಿ ಇರದ ಕೆಳ ಮಟ್ಟದ ಸಂಘಟನೆಯೊಂದರ ನಾಯಕನಂತೆ ಕಾಣುತ್ತಾರೆ ಎನ್ನುವುದನ್ನು ಅವರು ಗಮನಿಸುವುದೇ ಇಲ್ಲ.
ಅಶೋಕ್ ಅವರು ನೀಡುವ ಹೇಳಿಕೆ ಇದೇ ಮೊದಲೇನಲ್ಲ. ʼಕಾಂಗ್ರೆಸ್ ಮತಾಂಧರಿಗೆ ಜಾಗ ಕೊಡುತ್ತಿದೆʼ, ʼಕರ್ನಾಟಕ ಮಿನಿ ಪಾಕಿಸ್ತಾನ ಆಗುತ್ತಿದೆʼ, ʼಕರ್ನಾಟಕದಲ್ಲಿ ತಾಲಿಬಾನ್ ಶೈಲಿಯ ಆಡಳಿತ ನಡೆಯುತ್ತಿದೆʼ.. ಇವೆಲ್ಲವೂ ಅವರ ಬಾಯಿಂದಲೇ ಉದುರಿದ ಕೋಮುದ್ವೇಷಿ ನುಡಿಮುತ್ತುಗಳು. ಅಶೋಕ್ ಅವರ ಈ ಹೇಳಿಕೆಗಳು ರಾಜಕೀಯ ವಾದ ವಿವಾದಗಳನ್ನು ಹುಟ್ಟಿಸುತ್ತಿರುವುದು ಎಷ್ಟು ಸತ್ಯವೋ ಅವು ಸಮಾಜದಲ್ಲಿ ಧಾರ್ಮಿಕ ವಿಭಜನೆ ಮತ್ತು ಅಸಹಿಷ್ಣುತೆಯನ್ನು ಹೆಚ್ಚಿಸುವುದೂ ಅಷ್ಟೇ ಸತ್ಯ. ರಾಜಕೀಯ ನಾಯಕರಿಂದ ಇಂತಹ ಹೇಳಿಕೆಗಳು ಸಮಾಜದಲ್ಲಿ ಭಯ, ಅಸಮಾಧಾನ ಮತ್ತು ದ್ವೇಷವನ್ನು ಹುಟ್ಟಿಸಬಹುದು, ಇದು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಶಾಂತಿಗೆ ಹಾನಿಕಾರಕವಾಗಿದೆ.
ಈ ನಾಡಿನಲ್ಲಿ ಗಣೇಶ ಹಬ್ಬಕ್ಕೂ, ಇಫ್ತಾರ್ಗೂ, ದಸರಾ-ದೀಪಾವಳಿಗೂ, ಬೌದ್ಧ ಪೌರ್ಣಮಿಗೂ, ಕ್ರಿಸ್‌ಮಸ್‌ಗೂ ಸಮಾನ ಅವಕಾಶವಿದೆ. ಇಂತಹ ನಾಡನ್ನು ಜಾತಿ ಆಧಾರಿತ ರಾಜಕೀಯ, ಸೈನಿಕ ಆಳ್ವಿಕೆ ಇರುವ ಪಾಕಿಸ್ತಾನಕ್ಕೆ ಹೋಲಿಕೆ ಮಾಡಿ, “ಮಿನಿ ಪಾಕಿಸ್ತಾನ್”, “ಉಗ್ರರ ಗಡಿಭಾಗ” ಎಂದು ಕರೆಯುವುದು, ನಿಜಕ್ಕೂ ಈ ನಾಡಿನ ಅಸ್ತಿತ್ವವನ್ನೇ ಕಿತ್ತುಕೊಳ್ಳುವುದಕ್ಕೆ ಸಮಾನ. ಇಲ್ಲಿ ನೂರಾರು ಭಾಷೆಗಳ ಜನ ಬಾಳುತ್ತಿದ್ದಾರೆ. ಒಂದಾದಮೇಲೆ ಒಂದಾಗಿ, ಮಾತ್ರವಲ್ಲ ಒಟ್ಟಾಗಿ ಎನ್ನುವುದನ್ನು ಅಶೋಕ್ ಅವರಿಗೆ ಮನವರಿಕೆ ಮಾಡಲು ಶಿಕ್ಷಕರೊಬ್ಬರು ಬೇಕಾಗಬಹುದು.
ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ, ಆರ್. ಅಶೋಕ್ ಅವರ ವಿಪಕ್ಷ ನಾಯಕನ ನೇಮಕವನ್ನು ವಿರೋಧಿಸಿ, ಪಕ್ಷದಲ್ಲಿ ‘ಅಡ್ಜಸ್ಟ್‌ಮೆಂಟ್ ರಾಜಕೀಯ’ ಹೆಚ್ಚಾಗಿದೆ ಎಂದು ಅಸಮಾಧಾನ ಹೊರಹಾಕಿದ್ದರು. ಇದು ಪಕ್ಷದ ನೈತಿಕತೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿತ್ತು. ಅದೇ ರೀತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ರಾಜ್ಯದ ಹಲವು ಬಿಜೆಪಿ ನಾಯಕರು ಅಶೋಕ್ ಅವರ ಹೇಳಿಕೆಗಳನ್ನು ವಿರೋಧಿಸುತ್ತಾರೆ. ಪಕ್ಷದ ಹಿರಿಯ ನಾಯಕರೇ, ಅವರ ಭಾಷೆಗೂ, ಆಡಳಿತ ಶೈಲಿಗೂ ವಿರೋಧ ವ್ಯಕ್ತಪಡಿಸಿದರೂ, ಅಶೋಕ್ ಅವರ ಮಾತುಗಳು ಪಕ್ಷದ ಒಳಒಡಕುಗಳನ್ನು ಮತ್ತಷ್ಟು ಚರ್ಚೆಗೆ ತೆರೆದಿಟ್ಟಿವೆ.
ಪಾಕಿಸ್ತಾನದ ಕುರಿತು ಹೇಳಿಕೆ ನೀಡಿದರೆ ಕೆಲವೊಮ್ಮೆ ದೇಶದ್ರೋಹವೆಂದೆನಿಸುತ್ತದೆ. ಆದರೆ ಕರ್ನಾಟಕದಂತಹ ಭಾರತದ ಒಂದು ರಾಜ್ಯವನ್ನು ‘ಮಿನಿ ಪಾಕಿಸ್ತಾನ’ ಎನ್ನುತ್ತಾರೆ ಅಶೋಕ್.. ಅದನ್ನು ಖಂಡಿಸದೆ ಮೌನವಾಗಿ ತಿರುಚಿ ಹೋಗುವುದು ಹೇಗೆ ನ್ಯಾಯಸಮ್ಮತ? ಒಬ್ಬನು ಪಾಕಿಸ್ತಾನವನ್ನು ಟೀಕಿಸಿದರೆ ‘ದ್ವೇಷದ ಹರಿವು’ ಎನ್ನಲಾಗುತ್ತದೆ. ಆದರೆ ಇತ್ತ ಇನ್ನೊಬ್ಬನು ಭಾರತದ ಒಂದು ಭಾಗವನ್ನೇ ಪಾಕಿಸ್ತಾನ ಎಂದು ಕರೆದರೆ, ಅದನ್ನು “ಸತ್ಯ ಮಾತನಾಡಿದ್ದಾರೆ” ಎಂದು ಕೆಲವರು ಪ್ರಶಂಸಿಸುತ್ತಾರೆ. ಈ ದ್ವಂದ್ವ ಧೋರಣೆಗೆ ತಾತ್ವಿಕ ನೆಲೆಯೆಲ್ಲಿ?
ಇದನ್ನೂ ಓದಿ: ಬೆಂಗಳೂರು | ‘ಐಪಿಎಲ್’ ಬೆಟ್ಟಿಂಗ್ ದಂಧೆ: ಬಿಜೆಪಿ ಕಾರ್ಯಕರ್ತನ ಬಂಧನ
ರಾಜ್ಯವೊಂದರ ವಿರೋಧ ಪಕ್ಷದ ನಾಯಕ, ಜನರ ಪರವಾಗಿ ಸರ್ಕಾರದ ತಪ್ಪುಗಳನ್ನು ಎತ್ತಿ ತೋರಬೇಕು. ಆದರೆ ಜನರಿಂದಲೇ ಆಯ್ಕೆಯಾಗಿ ಬಂದ ಜನಪ್ರತಿನಿಧಿಯೊಬ್ಬ ತನ್ನ ಜವಾಬ್ದಾರಿ ಮರೆತು, ಜನರೇ ವಾಸಿಸುವ ಭೂಮಿಯನ್ನು ʼಮಿನಿ ಪಾಕಿಸ್ತಾನʼ ಎನ್ನುವುದು ಒಂದು ಗಂಭೀರ ಅಪಹಾಸ್ಯ.
ಮಾಧ್ಯಮಗಳು ಮಾಡುತ್ತಿರುವುದೆಂಥದು?
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವೆನಿಸಿಕೊಳ್ಳುವ ಮಾಧ್ಯಮಗಳು, ಸಮಾಜದ ಬೆಳವಣಿಗೆ ಮತ್ತು ಸರ್ಕಾರದ ಜವಾಬ್ದಾರಿಯ ನಡುವಣ ಸೇತುವೆಯಾಗಿ ಕೆಲಸ ಮಾಡಬೇಕು. ಆದರೆ, ಇತ್ತೀಚೆಗೆ ಮಾಧ್ಯಮಗಳು ನೈತಿಕ ಬದ್ಧತೆ, ತಟಸ್ಥತೆ ಮತ್ತು ವಿಚಾರಪ್ರಜ್ಞೆ ಎನ್ನುವ ಮೂಲ ಧರ್ಮವನ್ನೇ ಮರೆತು, ದಿನದಿಂದ ದಿನಕ್ಕೆ ಈ ಅಂಶಗಳನ್ನು ಮೂಲೆಗುಂಪು ಮಾಡುತ್ತಿರುವುದು ನಾಡಿನ ಜನತೆಗೆ ಗಂಭೀರ ಎಚ್ಚರಿಕೆ ಸಂದೇಶವಾಗಿದೆ.
ಕೆಲ ರಾಜಕೀಯ ನಾಯಕರ ವಿಭಜನೆಯ ಮಾತುಗಳು, ಧರ್ಮದ ಹೆಸರಿನಲ್ಲಿ ಜನರ ಭಾವನೆಗಳಿಗೆ ತಿವಿದ ಮಾತುಗಳು ಸುತ್ತಲೂ ಸದ್ದು ಮಾಡುತ್ತಿರುವುದು ಮಾತ್ರವಲ್ಲದೆ, ಅವುಗಳಿಗೆ ಮಾಧ್ಯಮಗಳು ನೀಡುತ್ತಿರುವ ವೇದಿಕೆ ಕೂಡ ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ತಕ್ಷಣದ ವೀಕ್ಷಣೆಗಾಗಿ, ಜಾಹೀರಾತುಗಳ ಲಾಭಕ್ಕಾಗಿ, ಮಾಧ್ಯಮಗಳು ‘ಸತ್ಯ’ ಎಂಬ ಮಾದರಿಯ ಬದಲು ‘ಸದ್ದು’ ಎಂಬ ಮಾದರಿಯನ್ನು ಮೆರೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ರಾಜಕೀಯ ವ್ಯಕ್ತಿಯೊಬ್ಬನು ತನ್ನ ಸ್ಥಾನಕ್ಕೆ ತಕ್ಕ ನೈತಿಕತೆ ಮರೆತು ವಿಭಜನೆಯ ರಾಜಕೀಯ ನಡೆಸಿದಾಗ ಅವನ ಆಕ್ಷೇಪಾರ್ಹ ಮಾತುಗಳನ್ನು ವಿಸ್ತರಿಸಿ, ಬಾರಿ ಬಾರಿ ಪ್ರಸಾರ ಮಾಡುವುದು, ಅವನ ಉದ್ದೇಶಕ್ಕೂ ಮೀರಿ ಪ್ರಚೋದನೆಗೆ ಕಾರಣವಾಗುತ್ತದೆ. ಇದರಲ್ಲಿ ವೀಕ್ಷಕನಿಗೆ ಮಾಹಿತಿ ಸಿಗುವುದಿಲ್ಲ ಬದಲಿಗೆ, ಭಯ, ಅಸಹಿಷ್ಣುತೆ ಮತ್ತು ಕ್ರೋಧ ಮಾತ್ರ ಪಸರಿಸುತ್ತದೆ. ಇದು ಮಾಧ್ಯಮಗಳ ಗಮನಕ್ಕೆ ಬಾರದಿರುವಂಥದ್ದೇನೂ ಅಲ್ಲ. ಹಣ ಸಂಪಾದನೆ, ಪಕ್ಷ ಪೂಜೆ, ವ್ಯಕ್ತಿ ಪೂಜೆಗಳನ್ನೇ ಧ್ಯೇಯವಾಗಿರಿಸಿಕೊಂಡಿದ್ದಾಗ ನೈತಿಕತೆ ಅಕ್ಷರಶಃ ಕತ್ತಲೆಗೆ ಸರಿಯುತ್ತದೆ.
ಪ್ರಚೋದನೆಯ ಪ್ರತಿಧ್ವನಿ ನೀಡುವುದರಲ್ಲಿ ಮಾಧ್ಯಮ ತೊಡಗಿದಾಗ ಅದು ಪ್ರಜಾಪ್ರಭುತ್ವದ ಶಕ್ತಿಯನ್ನೇ ಕುಗ್ಗಿಸುತ್ತದೆ. ಮಾಧ್ಯಮಗಳ ಜವಾಬ್ದಾರಿ ರಾಜಕೀಯ ನಾಯಕರಷ್ಟೆ ಪ್ರಬಲ. ಅವರು ತಟಸ್ಥವಾಗಿ, ಪರಿಶೀಲಿತವಾಗಿ, ವಿವೇಕದೊಂದಿಗೆ ಕಾರ್ಯನಿರ್ವಹಿಸಬೇಕಾದುದು ಇಂದು ಕೇವಲ ಆದರ್ಶವಲ್ಲ, ಅವಶ್ಯಕತೆಯಾಗಿದೆ.
ಇದನ್ನೂ ಓದಿ: ದೆಹಲಿಯಲ್ಲಿ ವಸೂಲಿಗೆ ನಿಂತ ಖಾಸಗಿ ಶಾಲೆಗಳು; ಹೈರಾಣಾದ ಪೋಷಕರು