ವಾಕ್ ಮತ್ತು ಶ್ರವಣ ದೋಷವುಳ್ಳ 11 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರ ಎಸಗಿ, ಚಿತ್ರಹಿಂಸೆ ನೀಡಿ ವಿಕೃತಿ ಮರೆದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ಸಂಜೆಯಿಂದ ಬಾಲಕಿ ಕಾಣೆಯಾಗಿದ್ದಳು. ಕುಟುಂಬ ಸದಸ್ಯರು ಆಕೆಗಾಗಿ ಹುಡುಕುತ್ತಿದ್ದರು. ನಿನ್ನೆ ಬೆಳಿಗ್ಗೆ, ಆಕೆ ಹೊಲದಲ್ಲಿ ಬೆತ್ತಲೆಯಾಗಿ ಗಾಯಗೊಂಡಿದ್ದು ಪತ್ತೆಯಾಗಿತ್ತು. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಮೀರತ್‌ಗೆ ಕರೆದೊಯ್ಯಲಾಯಿತು. ಅಪ್ರಾಪ್ತ ವಯಸ್ಕಳ ಮೇಲಿನ ಅತ್ಯಾಚಾರ ಆರೋಪದಡಿಯಲ್ಲಿ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ದೌರ್ಜನ್ಯ ನಡೆದ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಅದೇ ಗ್ರಾಮದ ನಿವಾಸಿ ಡಾನ್ ಸಿಂಗ್ (24) ಎಂಬಾತನನ್ನು ಶಂಕಿತ ಎಂದು ಗುರುತಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದಾಗ, ಆತ ಪೊಲೀಶರ ಮೇಲೆಯೇ ಗುಂಡು ಹಾರಿಸಿದ್ದಾನೆ, ಪ್ರತಿದಾಳಿಯಲ್ಲಿ ಗಾಯಗೊಂಡನು ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ರಾಜ್ಯಪಾಲರ ದುರುಪಯೋಗ; ಮೋದಿ ಸರ್ಕಾರದ ಕುತಂತ್ರಕ್ಕೆ ಸುಪ್ರೀಂ ಕಡಿವಾಣ
“ಇದು ಒಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳಿಂದ ನಡೆದ ಅತ್ಯಾಚಾರದ ಸ್ಪಷ್ಟ ಪ್ರಕರಣವಾಗಿದೆ. ಏಕೆಂದರೆ, ಆಕೆಯ ಖಾಸಗಿ ಭಾಗಗಳಲ್ಲಿ ಅನೇಕ ಗಾಯಗಳಾಗಿದ್ದವು. ಆಕೆಯ ಮುಖಕ್ಕೆ ಮೊಂಡಾದ ವಸ್ತುವಿನಿಂದ ಹೊಡೆದಿದ್ದು, ಅದು ಊದಿಕೊಂಡಿತ್ತು. ಆಕೆ ಭಯಭೀತಳಾಗಿದ್ದಳು ಮತ್ತು ಏನನ್ನೂ ವಿವರಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ನಾನು ನೋಡಿದ ಅತ್ಯಂತ ಭಯಾನಕ ಲೈಂಗಿಕ ಅಪರಾಧಗಳಲ್ಲಿ ಒಂದಾಗಿದೆ” ಎಂದು ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ ಡಾ. ಅಂಜು ಸಿಂಗ್ ಹೇಳಿದ್ದಾರೆ.
ಮಾತನಾಡಲು ಅಥವಾ ಕೇಳಲು ಸಾಧ್ಯವಾಗದ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಬಾಲಕಿಯ ತಾಯಿ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ರಾಂಪುರ ಪೊಲೀಸ್ ಮುಖ್ಯಸ್ಥೆ ವಿದ್ಯಾ ಸಾಗರ್ ಮಿಶ್ರಾ ಹೇಳಿದ್ದಾರೆ.
“ನಾವು ಪ್ರಕರಣ ದಾಖಲಿಸಿ, ಬಾಲಕಿಯ ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದೇವೆ. ಆರೋಪಿಯನ್ನು ಪತ್ತೆಹಚ್ಚಲು ಮೂರು ತಂಡಗಳನ್ನು ರಚಿಸಲಾಗಿತ್ತು. ನಾವು ಆತನನ್ನು ಬಂಧಿಸಲು ಪ್ರಯತ್ನಿಸಿದಾಗ, ಆತ ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ. ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಿಂದ ಆತನಿಗೆ ಗುಂಡು ತಗುಲಿತು. ಆರೋಪಿಯ ವಿರುದ್ಧ ನಮ್ಮಲ್ಲಿ ಎಲೆಕ್ಟ್ರಾನಿಕ್ ಪುರಾವೆಗಳಿವೆ. ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಅವರು ಹೇಳಿದರು.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಯು ಬಾಲಕಿಯ ಮನೆಯ ಹೊರಗೆ ಮಾತನಾಡುತ್ತಿರುವುದು ಕಂಡುಬಂದಿದೆ ಎಂದು ಹಿರಿಯ ಅಧಿಕಾರಿ ಹೇಳಿದರು.
ಗಮನಿಸಿ: ಅತ್ಯಾಚಾರವು ಒಂದು ಗಂಭೀರ ಸಾಮಾಜಿಕ ದುಷ್ಕೃತ್ಯ. ಈ ಕ್ರೂರ ಕೃತ್ಯವು ಸಮಾಜದ ನೈತಿಕತೆ ಮತ್ತು ಮಾನವೀಯತೆಯನ್ನು ಕುಂದಿಸುತ್ತದೆ. ಅತ್ಯಾಚಾರವನ್ನು ತಡೆಯುವುದು ಮತ್ತು ಅತ್ಯಾಚಾರ ಮುಕ್ತ ಸಮಾಜವನ್ನು ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ. ಮಹಿಳೆಯರು ಭಯಮುಕ್ತವಾಗಿ ಬದುಕಲು ಹೆಣ್ಣುಮಕ್ಕಳ ಸುರಕ್ಷತೆ, ಗೌರವ ಮತ್ತು ನ್ಯಾಯವನ್ನು ಕಾಪಾಡಲು ನಾವು ಒಗ್ಗೂಡಿ ಹೋರಾಡಬೇಕು.ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ಜಾರಿಯಾಗಬೇಕು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ನಮ್ಮ ಕುಟುಂಬಗಳಲ್ಲಿ, ಶಾಲೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹೆಣ್ಣುಮಕ್ಕಳ ಜೊತೆ ಗೌರವ ಮತ್ತು ಸಂವೇದನೆಯಿಂದ ನಡೆದುಕೊಳ್ಳಬೇಕು. ಮಹಿಳೆಯರ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ.