ಪ್ರತಿಯೊಬ್ಬ ಕೂಲಿಕಾರರು ಗುಳೆ ಹೋಗದೆ ಮನರೇಗಾ ಯೋಜನೆಯಡಿ ನಡೆಯುವ ಕೂಲಿ ಕೆಲಸ ನಿರ್ವಹಿಸಿ ಕೂಲಿ ಪಡೆದು ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಚಂದ್ರಶೇಖರ ಬನ್ನಾಳೆ ಹೇಳಿದರು.
ಭಾಲ್ಕಿ ತಾಲೂಕಿನ ಜ್ಯಾಂತಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ರೋಜಗಾರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ‘ಬಡಜನರ, ಕೂಲಿ ಕಾರ್ಮಿಕರ ಆರ್ಥಿಕ ಸಬಲತೆಗೆ ನರೇಗಾ ಯೋಜನೆ ಸಹಕಾರಿ ಆಗಿದೆ’ ಎಂದರು.
ʼಮನರೇಗಾ ಯೋಜನೆಯ ಮಾರ್ಗಸೂಚಿ ಪ್ರಕಾರ ಪ್ರತಿ ದಿನಕ್ಕೆ ₹370 ನಿಗದಿಪಡಿಸಿದ್ದು ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕುʼ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅನಿತಾ ಕೆಪ್ಟೆ, ಕಾಯಕ ಮಿತ್ರ, ಮೇಟಿ ಸೇರಿದಂತೆ ಹಲವರು ಇದ್ದರು.