- ಅಜಿತ್ ರೈಗೆ ಸಂಬಂಧಿಸಿದ 10 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ
- 2022 ನವೆಂಬರ್‌ನಲ್ಲಿ ಅಮಾನತು ಆಗಿದ್ದ ಅಜಿತ್ ಕುಮಾರ್ ರೈ
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಹಲವೆಡೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು ಗುರುವಾರ ಕೆಆರ್ ಪುರ ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರನ್ನು ಬಂಧಿಸಿದ್ದಾರೆ.
ಅಜಿತ್ ರೈ ಅವರಿಗೆ ಸಂಬಂಧಿಸಿದ 10 ಸ್ಥಳಗಳಿಗೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳನ್ನು, ಐಷಾರಾಮಿ ಕಾರು ಮತ್ತು ಬೈಕ್ಗಳನ್ನು ವಶಕ್ಕೆ ಪಡೆದಿದ್ದರು.
ದಾಳಿ ವೇಳೆ ಅಜಿತ್ ರೈಗೆ ಸೇರಿದ 150 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಪರಿಶೀಲನೆ ನಡೆಸಿ ಅಜಿತ್ ರೈ ಅವರನ್ನು ವಶಕ್ಕೆ ಪಡೆದಿದ್ದಾರೆ.
ಮೂಲಗಳ ಪ್ರಕಾರ ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ತಯಾರಿ ನಡೆಸುತ್ತಿದ್ದ ಅಜಿತ್ ರೈ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಆದಾಯ ಹೊಂದಿದ್ದಾರೆ ಎನ್ನಲಾಗಿದೆ. ಆದರೂ ಇರುವ ಆದಾಯ, ದೊರೆತಿರುವ ಆಸ್ತಿಗಳು ಹಾಗೂ ಐಷಾರಾಮಿ ವಸ್ತುಗಳಿಗೆ ತಾಳೆ ಮಾಡಿದಾಗ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ.
ಈ ಸುದ್ದಿ ಓದಿದ್ದೀರಾ? ಈದಿನ ವಿಶೇಷ | ಕೃಷಿ ವಿವಿಗಳಲ್ಲಿ ಡಿಪ್ಲೊಮಾ ಕೋರ್ಸ್ ಸ್ಥಗಿತ, ಕೃಷಿಕರ ಮಕ್ಕಳ ಭವಿಷ್ಯಕ್ಕೆ ಬರೆ ಎಳೆದ ಸರ್ಕಾರ!
ಅಮಾನತುಗೊಂಡಿದ್ದ ಅಜಿತ್ ರೈ
ಬಿಬಿಎಂಪಿ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆಗೆ ಸಹಕರಿಸಿದ ಅರೋಪದಡಿ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಶೀಲ್ದಾರ್ ಆಗಿದ್ದ ಅಜಿತ್ ಕುಮಾರ್ ರೈಯನ್ನು ಸರ್ಕಾರ 2022, ನವೆಂಬರ್‌ನಲ್ಲಿ ಅಮಾನತು ಮಾಡಿತ್ತು. ಈ ಪ್ರಕರಣದಲ್ಲಿ ತಹಶೀಲ್ದಾರ್ ಅಜಿತ್ ಕುಮಾರ್ ರೈ ಒತ್ತುವರಿದಾರರಿಗೆ ಸಹಕಾರ ನೀಡುವ ಮೂಲಕ ಕಾನೂನಾತ್ಮಕವಾಗಿ ತೆರವು ಮಾಡದಂತೆ ನೋಡಿಕೊಂಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು.
ಅಮಾನತು ಆದೇಶದ ವಿರುದ್ದ ಕೆಎಟಿಯಲ್ಲಿ ಪ್ರಶ್ನಿಸಿ ತಡೆ ತೆರವು ಮಾಡಿದ್ದ ಅಜಿತ್ ರೈ ಮತ್ತೆ ಬೆಂಗಳೂರು ಪೂರ್ವ ತಾಲೂಕಿನ (ಕೆ.ಆರ್.ಪುರ) ತಹಶೀಲ್ದಾರ್ ಆಗಿ ನೇಮಕಗೊಂಡಿದ್ದರು.