ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯ ಭಾಗವಾಗಿ ಮಳಿಗೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯಾಪ್ತಿಯ ಮಳಿಗೆಗಳು ತೆರವುಗೊಳ್ಳುತ್ತಿದ್ದು, ಈ ಹಿಂದೆ ಮಳಿಗೆ ಕಳೆದುಕೊಂಡವರು ಹೊಸ ಮಳಿಗೆ ನೀಡುವ ಭರವಸೆ ಕುರಿತು ಪ್ರಶ್ನೆ ಎತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಯಲ್ಲಮ್ಮ ಗುಡ್ಡ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಸ್ಥಳೀಯ ಜನರೊಂದಿಗೆ ಮಾತನಾಡುವ ಸಂದರ್ಭ, ಅಲ್ಲಿ ಇರುವ ಮಹಿಳಾ ವ್ಯಾಪಾರಸ್ಥರ ವಿರುದ್ಧ ಅಶ್ಲೀಲ ಹಾಗೂ ಕೆಟ್ಟ ಪದಗಳನ್ನು ಉಪಯೋಗಿಸಿ ನಿಂದನೆ ಮಾಡಿದರೆಂದು ಆರೋಪ ಹೊರಿಸಲಾಗಿದೆ.
ಈ ಆರೋಪದ ವಿರುದ್ಧವಾಗಿ ಮಳಿಗೆ ವ್ಯಾಪಾರಸ್ಥರು ಹಾಗೂ ಸ್ಥಳೀಯ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ. ಅಧಿಕಾರಿಗಳು ಕ್ಷಮೆ ಕೇಳದಿದ್ದರೆ, ಜಾತಿ ನಿಂದನೆ ಪ್ರಕರಣ ದಾಖಲಿಸಿ ಅಧಿಕಾರಿಯನ್ನು ಇಲ್ಲಿಂದ ತೂರಿ ಹಾಕುವವರೆಗೆ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.