ಹಿಂದಿನ ಬಿಜೆಪಿ ಸರ್ಕಾರದ ವೈದಿಕಶಾಹಿ ನೀತಿಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಕೊಂಚವೂ ಬದಲಾವಣೆ ಇಲ್ಲದೆ ಮುಂದುವರೆಸುತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ಸೋಲಿಸಿ, ಕಾಂಗ್ರೆಸ್ ಅನ್ನು ಆಯ್ಕೆ ಮಾಡಬೇಕಾಯಿತೇ ಎಂದು ಶಿಕ್ಷಣ ತಜ್ಞ ಬಿ.ಶ್ರೀಪಾದ ಭಟ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, “ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿಯಲ್ಲಿ ಬರುವ ವಿಶ್ವ ವಿದ್ಯಾಲಯ ಗಳಿಗೆ/ಸಂಸ್ಥೆಗಳಿಗೆ (ರಾಜ್ಯ ವಲಯದ ಯೋಜನೆಗಳು) ಸಂಬಂಧಿಸಿದಂತೆ 2025-26 ಸಾಲಿನ ಮುಂದುವರಿಕೆ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅನುಮೋದನೆ ಬಿಡುಗಡೆ ಮತ್ತು ಎಪ್ರಿಲ್ 25-ಜೂನ್ 25ರ ಮೊದಲನೇ ತ್ರೈಮಾಸಿಕ ಅನುದಾನವಾಗಿ
ರೂ. 2.5 ಕೋಟಿ ಬಿಡುಗಡೆ ಕುರಿತು ‘ಕರ್ನಾಟಕ ಸರ್ಕಾರದ ನಡಾವಳಿಗಳು’ ಎಂದು ಸುತ್ತೋಲೆ ಪ್ರಕಟಿಸಿದ್ದಾರೆ. ಇದರಲ್ಲಿ ರಾಜ್ಯದ ವಿವಿಗಳು, ಅಕಾಡೆಮಿಗಳು ಒಳಗೊಂಡಿದೆ. ಇದರಲ್ಲಿ ಸಂಸ್ಕೃತ, ವೈದಿಕ ಸಂಶೋಧನಾ ಸಂಸ್ಥೆಗಳು ಅಡಿಯಲ್ಲಿ 11 ವೈದಿಕ, ಚಾತುರ್ವರ್ಣದ ಬ್ರಾಹ್ಮಣಶಾಹಿ ಸಂಸ್ಥೆಗಳಿಗೂ ಅನುದಾನ ಹಂಚಿಕೆ ಮಾಡಿದ್ದಾರೆ” ಎಂದು ಆಕ್ಷೇಪ ಎತ್ತಿದ್ದಾರೆ.
“ಉನ್ನತ ಶಿಕ್ಷಣ ಸಚಿವರಿಗೆ ತಮ್ಮ ಇಲಾಖೆಯ ಈ ನಡೆ ಕುರಿತು ಮಾಹಿತಿ ಇಲ್ಲವೇ? ಅಥವಾ ಗೊತ್ತಿದ್ದೂ ಇವರೂ ಒಪ್ಪಿಕೊಂಡು ಮುಂದುವರಿಸುತ್ತಿದ್ದಾರೆಯೇ? ಅಥವಾ ಹಂತ ಹಂತವಾಗಿ ಬದಲಾಯಿಸುವ ಉದ್ದೇಶವಿದೆಯೇ? ಇದ್ದರೆ ಕಾಲಮಿತಿಯೇನು” ಎಂದು ಪ್ರಶ್ನಿಸಿದ್ದಾರೆ.

“ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿರುವುದಿಲ್ಲ. ಗಮನಕ್ಕೆ ಬಂದ ನಂತರವಾದರೂ ಕ್ರಮ ತೆಗೆದುಕೊಳ್ಳುವರೇ? ಕಾಂಗ್ರೆಸ್ ಸರ್ಕಾರ ಮತ್ತು ಕಾರ್ಯಾಂಗ ಒಟ್ಟಾಗಿ ಆರ್‌ಎಸ್‌ಎಸ್ ಸಿದ್ಧಾಂತ ಪೋಷಿಸುತ್ತಿದ್ದಾರೆಯೇ? ರಾಜ್ಯ ಶಿಕ್ಷಣ ನೀತಿ ರೂಪಿಸುತ್ತಿರುವ ವಿದ್ವಾಂಸರು ಇಂತಹ ವೈದಿಕಶಾಹಿಯನ್ನು ಒಪ್ಪುವರೇ? ಇಲ್ಲವೆಂದರೆ ಅವರ ನಿಲುವು ಏನಾಗಿರುತ್ತದೆ” ಎಂದು ಕೇಳಿದ್ದಾರೆ.
“ರಾಜ್ಯ ಸರ್ಕಾರದ ನುಡಿಯೇ ಬೇರೆ, ನಡೆಯೇ ಬೇರೆಯೇ? ಕಾಮೂವಿನ ಪ್ಲೇಗ್ ಕಾದಂಬರಿಯ ಡಾ.ಬರ್ನಾಡ್ ಹೇಳುತ್ತಾನೆ; ‘ಇತಿಹಾಸದಿಂದ ಪುಟಿದೆದ್ದು ಬರುತ್ತಿರುವ ನೂರು ಮಿಲಿಯನ್ ಶವಗಳು ನಮಗೆ ಕಲ್ಪನೆಯ ಹೊಗೆಯಾಗಿ ಕಾಣಿಸುತ್ತಿವೆ’ ನಾವೂ ಸಹ ಇವೆಲ್ಲ ಕಲ್ಪಿತ ಬಿಕ್ಕಟ್ಟುಗಳು ಎಂದುಕೊಂಡು ‘ಆರಾಮ , ವಿರಾಮ ಕಾಲ’ದಲ್ಲಿದ್ದೇವೆ. ಹೀಗಾಗಿ ಈ ಪ್ರಶ್ನೆಗಳೂ ಸಹ
‘ ಇದೆಲ್ಲ ಮಾಮೂಲಿ’ ಎನ್ನುವ ವಾತಾವರಣ ಸೃಷ್ಟಿಸುತ್ತದೆ ಅಲ್ಲವೇ?” ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.