The Hindu ಪತ್ರಿಕೆಯಲ್ಲಿ ಪ್ರಕಟವಾದ ಪ್ರಕಾಶ್ ರಾಜ್ ಅವರ ಅಂಕಣ ಬರಹ. ಕನ್ನಡ ಅನುವಾದ- ಚರಣ್ ಗೌಡ ಬಿ ಕೆ
ಚಿತ್ರೀಕರಣದ ನಿಮಿತ್ತ ದೆಹಲಿಯಲ್ಲಿದ್ದೆ. ಎಲ್ಲವೂ ರಾತ್ರಿ ವೇಳೆಯ ಚಿತ್ರೀಕರಣಗಳು. ಹೀಗಾಗಿ ಹಗಲುಗಳು ಬಿಡುವಾಗಿದ್ದವು. ಕೆಂಡದಂತೆ ಸುಡುತ್ತಿತ್ತು ದೆಹಲಿ ಬೇಸಿಗೆ, ದೆಹಲಿಯಲ್ಲಿ ಹೊಸ ರಾಜ್ಯ ಸರ್ಕಾರ, ದೇಶದ ಎಲ್ಲೆಡೆಯ ಸಂಸದರು ದೆಹಲಿಯಲ್ಲಿ ಸಮಾವೇಶಗೊಳ್ಳುತ್ತಿದ್ದರು. ವಕ್ಫ್ ತಿದ್ದುಪಡಿ ಮಸೂದೆಯ ವಿವಾದ (ಈಗ ಅಧಿನಿಯಮ) ಸಂಸತ್ತನ್ನು ಕುದಿಸತೊಡಗಿತ್ತು.
ನನ್ನ ಆಲೋಚನೆ ಉಮರ್ ಖಾಲಿದ್ ನತ್ತ ಹೊರಳಿತು. ಆತನನ್ನು ಸೆರೆಮನೆಗೆ ತಳ್ಳಿ ಐದು ವರ್ಷಗಳೇ ಉರುಳಿವೆ. ತಿಹಾರ್ ಜೈಲಿನೊಳಗೆ ಈ ಕ್ರೂರ ಬೇಸಿಗೆಯ ಬೇಗೆಯನ್ನು ಆತ ಹೇಗೆ ಸಹಿಸುತ್ತಿರಬಹುದು? ಉಮರ್ ನ ತಂದೆ ತಾಯಿ ನೆನಪಾದರು. ಭೇಟಿಯಾಗಲು ಅವರ ಮನೆಯತ್ತ ಹೊರಟೆ.
ಅಂದ ಹಾಗೆ ದೇಶದ್ರೋಹಿ ಉಮರ್ ಖಾಲಿದ್ ಯಾರೆಂದು ಗೊತ್ತೇ ನಿಮಗೆ? ಅದಕ್ಕಿಂತ ಮುಂಚೆ, ದೇಶದ್ರೋಹಿ ಯಾರೆಂದು ಅಂತ ಅರ್ಥ ಮಾಡಿಕೊಳ್ಳೋಣ ಅಲ್ಲವೇ? ಹೀಗೆ ಅರ್ಥ ಮಾಡಿಕೊಳ್ಳದೆ ಹೋದರೆ, ಒಬ್ಬ ದೇಶದ್ರೋಹಿ ಮತ್ತು ಒಬ್ಬ ದೇಶಭಕ್ತನ ನಡುವಿನ ವ್ಯತ್ಯಾಸವನ್ನು ಹೇಳಲು ಹೇಗೆ ಸಾಧ್ಯ?
ಅರ್ಥ ಮಾಡಿಕೊಳ್ಳಲು ಬಹಳ ಹಿಂದಕ್ಕೇನೂ ಹೋಗಬೇಕಾಗಿಲ್ಲ. ಇತ್ತೀಚಿನ ಇತಿಹಾಸದ ಉದಾಹರಣೆಯೇ ಸಾಕು.
ಮಹಾತ್ಮ ಗಾಂಧಿ, ಅಹಿಂಸೆಯ ತತ್ವದತ್ತ ದೇಶವನ್ನು ಒಗ್ಗೂಡಿಸಿದ ವ್ಯಕ್ತಿ. ಸದಾ ಧಾರ್ಮಿಕ ಸಾಮರಸ್ಯದ ಮಹತ್ವಕ್ಕೆ ಒತ್ತು ನೀಡಿದವರು. ದೇಶವೆಂದರೆ ಅದರಲ್ಲಿ ಬದುಕಿ ಬಾಳುವ ಜನರೇ ವಿನಾ, ಅದು ಬರಿಯ ಭೂಪಟವಲ್ಲ ಎಂದು ನಂಬಿದವರು. ದೇಶದ ಸಮಸ್ತ ಜನರಿಗೆ ತಮ್ಮ ತಮ್ಮ ಇಚ್ಚೆಯ ಧರ್ಮವನ್ನು ಅನುಸರಿಸುವ ಹಕ್ಕಿದೆ ಎಂದು ದೃಢವಾಗಿ ನಂಬಿದವರು. ಯಾವ ಭಾಷೆಯನ್ನಾದರೂ ಮಾತಾಡಲಿ, ಯಾವ ಧರ್ಮವನ್ನಾದರೂ ಅನುಸರಿಸಲಿ ಮತ್ತು ಯಾವ ಜಾತಿಯಲ್ಲಾದರೂ ಜನಿಸಿರಲಿ ಆದರೆ ಅವರೆಲ್ಲರನ್ನೂ ರಾಷ್ಟ್ರವು ಭ್ರಾತೃತ್ವದ ಹುರುಪಿನಲ್ಲಿ ಒಗ್ಗೂಡಿಸಿರಬೇಕು ಎಂದು ನಂಬಿದ್ದರು. ಬ್ರಿಟಿಷ್ ಭಾರತದಲ್ಲಿ ಬದುಕುಳಿದ ಈ ವ್ಯಕ್ತಿ, ತಮ್ಮ ಇಂತಹ ನಿಲುವು-ನಂಬಿಕೆಗಳಿಗಾಗಿಯೇ ಸ್ವತಂತ್ರ ಭಾರತದಲ್ಲಿ ನಾಥೂರಾಮ್ ಗೋಡ್ಸೆ ಎಂಬ ಧಾರ್ಮಿಕ ಮೂಲಭೂತವಾದಿಯಿಂದ ಹತ್ಯೆಗೀಡಾದದ್ದು ಬಹು ದೊಡ್ಡ ವಿಪರ್ಯಾಸ.
ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಾಗಿನಿಂದ ಗಾಂಧಿ ‘ದೇಶದ್ರೋಹಿ’ಯಾಗಿದ್ದಾರೆ ಮತ್ತು ಗೋಡ್ಸೆ ‘ದೇಶಭಕ್ತ’ನಾಗಿದ್ದಾನೆ. ಸಮುದಾಯಗಳನ್ನು ಒಡೆದು, ಧಾರ್ಮಿಕ ದ್ವೇಷವನ್ನು ಬಿತ್ತುವ ಐತಿಹಾಸಿಕ ಕಾರ್ಯಸೂಚಿಯನ್ನು ಹೊಂದಿರುವವರು ತಮ್ಮನ್ನು ದೇಶಭಕ್ತರೆಂದು ಬಣ್ಣಿಸಿಕೊಳ್ಳುತ್ತಿದ್ದಾರೆ. ಈ ಸ್ವಯಂಘೋಷಿತ ದೇಶಭಕ್ತರು, ತಮ್ಮ ಕೋಮುವಾದದ ವಿರುದ್ಧ ನಿಲ್ಲುವವರಿಗೆ ದೇಶದೋಹಿಗಳೆಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ. ಉಮರ್ ಖಾಲಿದ್ ಎಂಬ ನಮ್ಮ ಕಾಲದ ಉಜ್ವಲ ಯುವಮನಸೊಂದು ‘ದೇಶದ್ರೋಹಿ’ ಆದದ್ದು ಅಪ್ಪಟ ಇದೇ ಬಗೆಯಲ್ಲಿ.
ಪ್ರಕರಣ ಎಲ್ಲಿಗೆ ಬಂದು ನಿಂತಿದೆ?
ಇಷ್ಟಕ್ಕೂ ಉಮರ್ ಖಾಲಿದ್‌ನ ಅಪರಾಧವಾದರೂ ಏನು? ದೇಶದ ವೈವಿಧ್ಯತೆಯೇ ಸಂವಿಧಾನದ ಹೃದಯ ಮತ್ತು ಆತ್ಮವೆಂದು ನಂಬಿದ್ದು ಆತನ ಅಪರಾಧ; ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವವರ ವಿರುದ್ಧ ಪ್ರತಿಭಟಿಸಿದ್ದು ಆತನ ಅಪರಾಧ; ಅಲ್ಪಸಂಖ್ಯಾತ ಸಮುದಾಯಗಳನ್ನು ತುಳಿಯುತ್ತಿರುವ ಆಳುವವರ ವಿರುದ್ಧ ದನಿಯೆತ್ತಿದ್ದು ಆತನ ಅಪರಾಧ; ಮತೀಯ ದ್ವೇಷವನ್ನು ಹಬ್ಬಿಸುತ್ತಿರುವ ಮತ್ತು ರಾಜಕೀಯ ಲಾಭಕ್ಕೆ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವವರ ವಿರುದ್ಧ ಬೀದಿಗಿಳಿದಿದ್ದು ಆತನ ಅಪರಾಧ.
ನದಿಯ ಹರಿವಿನೊಂದಿಗೆ ಸಾಗಲು ಯಾವ ಪ್ರಯತ್ನವೂ ಬೇಕಿಲ್ಲ. ನಿರ್ಜೀವ ಮೀನು ಕೂಡ ಹರಿವಿನೊಂದಿಗೆ ಸಾಗಬಲ್ಲದು. ಹರಿವಿಗೆ ವಿರುದ್ಧವಾಗಿ ಈಜಬೇಕಿದ್ದರೆ ಉಮರ್ ಖಾಲಿದ್‌ನಂತೆ ಜೀವಂತ ಮಿಡಿಯುತ್ತಿರಬೇಕು. ಆತ ನಿರ್ಭೀತನಾಗಿ ಸುಳ್ಳು ಮತ್ತು ದ್ವೇಷದ ಪ್ರವಾಹದ ವಿರುದ್ದ ಈಜುತ್ತಿದ್ದಾನೆ. ಗಾಂಧಿವಾದದ ನಿಜ ವಾರಸುದಾರನಿಂದ ಇದಕ್ಕಿಂತ ಇನ್ನೇನನ್ನು ತಾನೇ ನೀರಿಕ್ಷಿಸಲು ಸಾಧ್ಯ? “ನಿರಂಕುಶವಾದದ ವಿರುದ್ಧ ಹೋರಾಡುವುದರಲ್ಲಿ ನಾವೇ ಮೊದಲಿಗರೇನಲ್ಲ. ಹಾಗೆಯೇ, ನಿರಂಕುಶವಾದ ನಮ್ಮ ಸಾವಿನೊಂದಿಗೆ ಕೊನೆಗೊಳ್ಳುವುದೂ ಇಲ್ಲ” ಎಂದು ಭಗತ್ ಸಿಂಗ್ ಹೇಳಿದ್ದರು. ಇದೇ ಭಗತ್ ಸಿಂಗ್ ಪರಂಪರೆಯ ಮುಂದುವರಿಕೆಯೇ ಉಮರ್ ಖಾಲಿದ್.
ದೇಶವನ್ನು ಒಡೆಯುವ ಮತ್ತು ಸೋದರತ್ವ ನಾಶದ ಉದ್ದೇಶವುಳ್ಳ ಪೌರತ್ವ ತಿದ್ದುಪಡಿ ಕಾಯ್ದೆ 2019ರ ವಿರುದ್ಧ ಉಮರ್ ಖಾಲಿದ್ ವಿದ್ಯಾರ್ಥಿ ನಾಯಕನಾಗಿ ಸೆಣೆಸಿದ. ಮುಸಲ್ಮಾನರಿಗೆ ಪೌರತ್ವ ನಿರಾಕರಿಸಲು ಉದ್ದೇಶಿಸಿದ್ದ ಈ ಕಾನೂನಿನ ವಿರುದ್ಧ ಫೆಬ್ರವರಿ 2020ರಲ್ಲಿ ದೆಹಲಿಯೂ ಪ್ರತಿಭಟನೆಯ ಕಡುನೋವಿನಲ್ಲಿತ್ತು. ಈ ಕರಾಳ ಕಾಯಿದೆಯನ್ನು ಬೆಂಬಲಿಸುತ್ತಿದ್ದವರ ಪ್ರವೇಶದಿಂದ, ಇಡೀ ಚಿತ್ರಣ ಹಿಂಸಾತ್ಮಕವಾಯಿತು. ಶಾಂತಿಯುತವಾಗಿ ನಡೆಯುತ್ತಿದ್ದ ಸಿಎಎ ಪ್ರತಿಭಟನೆಯನ್ನು ಹಾಳುಗೆಡವಲಾಯಿತು. ದೊಂಬಿ ದಾಂಧಲೆಗಳಲ್ಲಿ 53 ಮಂದಿ, ಬಹುತೇಕ ಮುಸ್ಲಿಮರು, ಪ್ರಾಣ ತೆತ್ತರು.
ಹಿಂಸೆಯನ್ನು ಹರಿಬಿಡುವ ಉದ್ದೇಶದಿಂದಲೇ ದೊಂಬಿಗೆ ಪ್ರಚೋದನೆ ನೀಡಿದ್ದ ಆಡಳಿತ ಪಕ್ಷದ ನೇತಾರರು ಆರಾಮಾಗಿ ಓಡಾಡಿಕೊಂಡಿದ್ದರು. ಆದರೆ ಉಮರ್ ಖಾಲಿದ್‌ನನ್ನು ಗುಂಪು ಗಲಭೆಯನ್ನು ಪ್ರಚೋದಿಸಿದ ಆರೋಪದ ಮೇಲೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯ ಅಡಿಯಲ್ಲಿ ಬಂಧಿಸಲಾಯಿತು.
ಸೆಷನ್ಸ್ ನ್ಯಾಯಾಲಯ ಮಾತ್ರವಲ್ಲದೆ ದೆಹಲಿ ಉಚ್ಚ ನ್ಯಾಯಾಲಯ ಕೂಡ ಆತನ ಜಾಮೀನು ಮನವಿಯನ್ನು ತಿರಸ್ಕರಿಸಿತು. ಸರ್ವೋಚ್ಚ ನ್ಯಾಯಾಲಯದ ಮುಂದೆ 2023ರಲ್ಲಿ ಸಲ್ಲಿಸಿದ ಜಾಮೀನು ಅರ್ಜಿ ಈಗಲೂ ಇತ್ಯರ್ಥವಾಗದೆ ಬಾಕಿಯಿದೆ. ಐದು ವರ್ಷಗಳ ಕಾಲ ಆರೋಪ ಸಾಬೀತು ಮಾಡದೆ, ಕನಿಷ್ಠ ತನಿಖೆ ಅಥವ ವಿಚಾರಣೆಯನ್ನೂ ಮಾಡದೆ ಆರೋಪಿಯನ್ನು ಸೆರೆಯಲ್ಲಿಟ್ಟಿರುವುದು ಕಾನೂನುಬಾಹಿರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ.
“ಉಮರ್ ಖಾಲಿದ್ ನಿರಪರಾಧಿಯೆಂದು ಸಾಬೀತು ಮಾಡಲು ಸರ್ವೋಚ್ಚ ನ್ಯಾಯಾಲಯ ಇಪ್ಪತ್ತು ನಿಮಿಷ ಸಮಯಾವಕಾಶ ನೀಡಿದರೆ ಸಾಕು” ಎಂದು ಅವನ ಪರ ವಕೀಲರು ಹೇಳುತ್ತಾರೆ. ಆದರೆ 2023ರಿಂದ ಇಲ್ಲಿಯವರೆಗೆ ಉಮರ್‌ನ ಜಾಮೀನು ಅರ್ಜಿ ಆಲಿಸಲು ಸುಪ್ರೀಮ್ ಕೋರ್ಟಿಗೆ 20 ನಿಮಿಷಗಳಷ್ಟು ವ್ಯವಧಾನವೂ ಇಲ್ಲವಾಗಿದೆ.
ಪ್ರಭುತ್ವದ ವಿರುದ್ಧ ಎದೆ ಸೆಟೆಸಿ ನಿಲ್ಲುವುದೆಂದರೆ…
ಉಮರ್‌ನ ಮನೆಗೆ ಹೋಗುವ ದಾರಿಯಲ್ಲಿ ಆತನ ಕೆಲವು ಸ್ನೇಹಿತರು ಜೊತೆಯಾದರು. ಅವರೆಲ್ಲರೂ ಉಮರ್‌ನನ್ನು ಪ್ರತಿ ವಾರ ಜೈಲಿನಲ್ಲಿ ಭೇಟಿಯಾಗಲು ಬಲು ಪ್ರಯಾಸಪಡುತ್ತಾರೆಂದು ತಿಳಿಯಿತು. “ನಿಮ್ಮ ಬಿಡುವಿಲ್ಲದ ಬದುಕಿನಲ್ಲಿ ಇವೆಲ್ಲವನ್ನು ಹೇಗೆ ನಿಭಾಯಿಸುತ್ತಿದ್ದೀರಿ?” ಎಂದು ಕೇಳಿದೆ.
ಉಮರ್‌ನ ಒಬ್ಬ ಗೆಳೆಯ ಜೈಲಿನಲ್ಲಿದ್ದ ಅಮಿರ್ ಎಂಬುವನ ಕಥೆ ಹೇಳಿದ. ಆತನ ಬಂಧನದ ಮೊದಲ ಮೂರು ತಿಂಗಳಲ್ಲಿ ಅವನ ಪೋಷಕರು ಮತ್ತು ಗೆಳೆಯರು ನಿಯಮಿತವಾಗಿ ಭೇಟಿಕೊಡುತ್ತಿದ್ದರು. ಆನಂತರ ಬಡತನ ಮತ್ತು ಹೊಟ್ಟೆ ಹೊರೆಯುವ ಕಷ್ಟಗಳ ನಡುವೆ ಭೇಟಿಯಾಗಲು ಆಗುತ್ತಿರಲಿಲ್ಲ. ಆ ಕೆಲವು ತಿಂಗಳಲ್ಲಿ ಗಟ್ಟಿಯಾಗಿದ್ದ ಅಮಿರ್, ಬರಬರುತ್ತ ಕುಸಿದು ಹೋದನು. ಅವನಿಗೆ ಹೆಚ್ಚುಕಡಿಮೆ ಜಾಮೀನು ಸಲೀಸಾಗಿ ಸಿಗುತ್ತಿತ್ತು. ಆದರೂ 10 ವರ್ಷಗಳ ಕಾಲ ಸೆರೆಮನೆ ವಾಸ ತಪ್ಪಲಿಲ್ಲ.
ಆತ್ಮೀಯರಿಂದ ಆಗಲುವ ನೋವು ಒಂದೆಡೆಯಾದರೆ, ಸೆರೆವಾಸವು ವ್ಯಕ್ತಿಯ ಆತ್ಮವಿಶ್ವಾಸವನ್ನು ಕಸಿದು ಮನುಷ್ಯ ಚೈತನ್ಯವನ್ನು ಉಡುಗಿಸಿಬಿಡುತ್ತದೆ. ಅಮಿರ್‌ನ ಈ ದುಃಖದ ಅನುಭವವು ಉಮರ್‌ನ ಸ್ನೇಹಿತರಲ್ಲಿ ಆತನನ್ನು ಪ್ರತಿ ವಾರ ಭೇಟಿಯಾಗುವ ದೃಢಸಂಕಲ್ಪವನ್ನು ಬಲಪಡಿಸಿದೆ “ನಾವೆಲ್ಲರೂ ನಿನ್ನೊಂದಿಗೆ ಇದ್ದೇವೆ” ಎಂದು ಹೇಳಲಷ್ಟೇ ಅವರು ಉಮರ್ ನನ್ನು ನಿಯಮಿತವಾಗಿ ಭೇಟಿಯಾಗುತ್ತಾರೆ. ತಮ್ಮ ಒಡನಾಡಿಯ ಭಾವನಾತ್ಮಕ ಯೋಗಕ್ಷೇಮವನ್ನು ನಿರ್ದಯೀ ಪ್ರಭುತ್ವದ ಕ್ರೌರ್ಯದಿಂದ ಹೀಗೆ ಕಾಪಾಡುತ್ತಿರುವ ಈ ಯುವ ಜನರನ್ನು ನೋಡಿ ಹೆಮ್ಮೆಯೆನಿಸಿತು… ಭಾವುಕನಾದೆ.
ಉಮರ್‌ನ ಅಮ್ಮ ನನ್ನನ್ನು ವಾತ್ಸಲ್ಯದಿಂದ ಸ್ವಾಗತಿಸಿದರು. ವಕ್ಫ್ ತಿದ್ದುಪಡಿ ಕಾಯ್ದೆಯ ಚರ್ಚೆಗೆ ಹೋಗಿದ್ದ ಅವನ ತಂದೆ ಮರಳಿ ಬೇಗ ಬರಲಿದ್ದರು. ಈದ್ ಕಳೆದು ಕೆಲವೇ ದಿನಗಳಾಗಿತ್ತು.
ಮಗ ಜೇಲು ಪಾಲಾಗಿರುವ ನೋವು ಆಳದಲ್ಲಿ ಅಡಗಿ ಕಾಡಿದ್ದರೂ, ಆಕೆ ನಗುಮುಖದಿಂದ ನಮಗೆ ಸಿಹಿತಿನಿಸುಗಳನ್ನು ತಂದು ಬಡಿಸಿದರು. “ನನ್ನ ಮಗ ಬೇಗ ಬಿಡುಗಡೆಯಾಗಲಿದ್ದಾನೆ. ನಮಗೆ ನ್ಯಾಯಾಂಗದ ಮೇಲೆ ತುಂಬಾ ನಂಬಿಕೆ ಇದೆ” ಎಂದರು. ನಮ್ಮನ್ನು ಸಂತೈಸಲು ಆಕೆ ಆಡಿದ ಮಾತು ಕಣ್ಣೀರು ತರಿಸಿತು. ಈ ನಡುವೆ ಉಮರ್‌ನ ತಂದೆ ಹಿಂದಿರುಗಿದರು. ನಮಗಾಗಿ ಚಹಾ ಮಾಡಿಕೊಟ್ಟು ಮಾತಿಗೆ ಕುಳಿತರು.
“ನಿಮ್ಮ ಮಗ ಒಬ್ಬಂಟಿಯಲ್ಲ. ಅವನೊಂದಿಗೆ ನಾವೆಲ್ಲ ಇದ್ದೇವೆ” ಎಂದೆ.
“ಆತ ಹೋರಾಡಿ ಜೈಲು ಸೇರಿದ್ದು ಯಾವ ಕಾರಣಕ್ಕಾಗಿ ಎಂಬುದು ನಮಗೆ ತಿಳಿದಿದೆ. ನಾವೂ ಕೂಡ ಅವನೊಂದಿಗಿದ್ದೇವೆ” ಎಂದು ಅವರು ಹೇಳಿದರು. ಈ ತಂದೆಯ ಮಾತು ನನ್ನ ಮನ ಕಲಕಿತು.
“ಬಾಬಾ, ಉಮರ್ ಜಾಮೀನಿನ ಮೇಲೆ ಹೊರಬಂದಾಗ, ನಾವು ಅವನನ್ನು ಪ್ರಕಾಶ್ ಸರ್ ಅವರೊಂದಿಗೆ ದಕ್ಷಿಣ ಭಾರತಕ್ಕೆ ಕಳುಹಿಸೋಣ. ಆತ ಅಲ್ಲಿ ಸುರಕ್ಷಿತವಾಗಿ ಇರಲಿದ್ದಾನೆ” ಎಂದು ಉಮರ್ ಗೆಳೆಯನೊಬ್ಬ, ಉಮರ್ ತಂದೆಗೆ ಹೇಳಿದ.
“ಅವನ ಸಂಘರ್ಷದ ಕಾರ್ಯಕಾರಣ ಇಲ್ಲಿ ದೆಹಲಿಯಲ್ಲಿದೆ. ಬೇರೆ ಕಡೆ ಹೋಗಿ ಏಕೆ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬೇಕು?” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು ಉಮರ್‌ನ ತಂದೆ.
ಅಷ್ಟೇ.
ನಾವು ಜೀವಂತ ಇದ್ದೇವೆ ಎನ್ನುವುದಕ್ಕೆ ಹೋರಾಟದಲ್ಲಿ ತೊಡಗಿಕೊಂಡಿರುವುದೇ ಘನವಾದ ಸಾಕ್ಷಿ. ಘನತೆಯ ಬದುಕಿಗಾಗಿ ನಾವು ಹೋರಾಡಬೇಕು. ಜೀವಂತ ಶವವಾಗಿದ್ದು ಏನು ಪ್ರಯೋಜನ?
ಜನತೆ ಮತ್ತು ಅವರ ಹಕ್ಕು
ಉಮರ್ ಖಾಲಿದ್ ಮತ್ತು ಆತನ ಪೋಷಕರು ನಿಜವಾದ ದೇಶಭಕ್ತರು ಎನ್ನುವುದಕ್ಕೆ ಇತಿಹಾಸವು ಸಾಕ್ಷಿಯಾಗಲಿದೆ. ಹೆಚ್ಚು ಕಡಿಮೆ ಐದು ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿರುವ ಉಮರ್ ಖಾಲಿದ್ ಎಂಬ ಒಂದು ವ್ಯಕಿ ಮಾತ್ರವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು; ಇದು ನಮ್ಮ ಘನತೆಯ ಹಕ್ಕು: ಮತ್ತು ಸಂವಿಧಾನ ಈ ಎಲ್ಲದಕ್ಕೂ ಖಾತ್ರಿಯಾಗಿ ನಿಂತಿದೆ.