- ‘ಬಿಜೆಪಿಯಲ್ಲಿ ಬರೋಬ್ಬರಿ ಇಪ್ಪತ್ತು ಗುಂಪುಗಳು ಹುಟ್ಟಿಕೊಂಡಿವೆ’
- ‘ಬಿಜೆಪಿಯವರನ್ನು ಚುನಾವಣೆಯಲ್ಲಿ ರಾಜ್ಯದ ಜನ ತಿರಸ್ಕರಿಸಿದ್ದಾರೆ’
ಬಸವರಾಜ ಬೊಮ್ಮಾಯಿ ಅವರು ಖಾಲಿ ಕುರ್ಚಿಯಲ್ಲಿ ಕೂತಿದ್ದಾರೆ. ಬಿಜೆಪಿ ಛಿದ್ರವಾಗಿದೆ. ಒಂದಲ್ಲ, ಎರಡಲ್ಲ, ಬಿಜೆಪಿಯೊಳಗೆ ಬರೋಬ್ಬರಿ ಇಪ್ಪತ್ತು ಗುಂಪುಗಳು ಹುಟ್ಟಿಕೊಂಡಿವೆ. ಬಿಜೆಪಿಯನ್ನು ಜೋಡಿಸಲು ಯಾರಿಂದಲೂ ಸಾಧ್ಯವಿಲ್ಲ, ಅಷ್ಟು ಛಿದ್ರ ಛಿದ್ರವಾಗಿದೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತ ಬಳಿಕ ಬಿಜೆಪಿ ನಾಯಕರಲ್ಲಿ ಆಂತರಿಕ ಕಚ್ಚಾಟ ಶುರುವಾಗಿದೆ. ಸ್ವಪಕ್ಷದ ನಾಯಕರ ವಿರುದ್ದವೇ ಬಿಜೆಪಿ ನಾಯಕರು ಬಹಿರಂಗವಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ” ಎಂದರು.
“ಬಿಜಾಪುರದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿ ಹೊಡೆದಾಟ ಆಗುತ್ತಿದೆ. ಬಿಜೆಪಿ ಅಂತಿಮ ಘಟ್ಟ ತಲುಪಿದೆ. ಬಿಜೆಪಿಗೆ ಫೆವಿಕಲ್ ಹಚ್ಚಿದ್ರೂ ಅದು ಅಂಟಲ್ಲ” ಎಂದು ಲೇವಡಿ ಮಾಡಿದರು.
ಬಿಜೆಪಿಯನ್ನು ಜನರು ತಿರಸ್ಕರಿಸಿದ್ದಾರೆ
“ಬಿಜೆಪಿಯವರನ್ನು ರಾಜ್ಯದ ಜನ ತಿರಸ್ಕರಿಸಿದ್ದಾರೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. 40% ಕಮಿಷನ್ ಹೊಡೆಯೋದು ಬಿಟ್ಟು ಬೇರೇನೂ ಇವರು ಮಾಡಿಲ್ಲ” ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಅಂದರೆ ಉದ್ಯಮಿಗಳು, ಐಟಿ ಬಿಟಿ ಶ್ರೀಮಂತರಷ್ಟೇ ಅಲ್ಲ!
“ಅಕ್ಕಿ ಇದ್ದರೂ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ. ಅದಕ್ಕೆ ಅಕ್ಕಿ ಬದಲು ಹಣ ನೀಡುತ್ತೇವೆ. ಇದೇ ಸಿ.ಟಿ ರವಿ ಅಕ್ಕಿ ಇಲ್ಲ ಅಂದ್ರೆ ಹಣ ಕೊಡಿ ಎಂದು ಹೇಳಿದರು. ಈಗ ನಾವು ಹಣವನ್ನೇ ಕೊಡ್ತಿದ್ದೀವಿ” ಎಂದರು.
ಕಾಸಿಗಾಗಿ ವರ್ಗಾವಣೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, “ನಮ್ಮ ಸರ್ಕಾರದಲ್ಲಿ ಕಾಸಿಗಾಗಿ ವರ್ಗಾವಣೆ ನಡೆದಿಲ್ಲ. ಪಾರದರ್ಶಕವಾಗಿ ನಡೆಯುತ್ತಿದೆ. ಟೆಂಡರ್ ಕೂಡ ನಾವು ಇನ್ನೂ ಕರೆದಿಲ್ಲ. ಕುಮಾರಸ್ವಾಮಿ ಬಹಳ ಆತುರರಾಗಿದ್ದಾರೆ” ಎಂದರು.
“ಯತೀಂದ್ರ ಹೆಸರು ಯಾಕೆ ತರ್ತೀರಿ. ಯತೀಂದ್ರ ಎಂಎಲ್ ಎ ಆಗಿದ್ದಾರಾ? ಎಂಎಲ್‌ಎಗಳು ಹೋದಾಗ ಶಿಫಾರಸ್ಸು ಪತ್ರ ಕೊಟ್ಟಿರುತ್ತಾರೆ. ಅದಕ್ಕೆ ಹಣ ಲೇಪ ಕೊಡೋದು ಸರಿಯಲ್ಲ, ಕುಮಾರಸ್ವಾಮಿ ಎರಡೆರಡು ಲೆಟರ್ ಕೊಟ್ಟಿರಲಿಲ್ವಾ” ಎಂದರು ಪ್ರಶ್ನಿಸಿದರು.
ಮುಂದೆ ಬಿಜೆಪಿ ರಾಷ್ಟ್ರದಲ್ಲಿ ಛಿದ್ರ ಛಿದ್ರ ಆಗಲಿದೆ.