ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದ ಆರೋಪಿಯನ್ನು ಬೆತ್ತಲೆಗೊಳಿಸಿ, ಎತ್ತಿನ ಬಂಡಿಗೆ ಕಟ್ಟಿ, ಮೆರವಣಿಗೆ ಮಾಡಿ, ಹಲ್ಲೆ ನಡೆಸಿ, ನಾಯಿ ಬಿಟ್ಟು ಕಚ್ಚಿಸಿ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ವಿಶೇಶ್ವರಗಂಜ್ ಪ್ರದೇಶದಲ್ಲಿ ಘಟನೆ ನಡೆಸಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದ ಯುವಕನ ಸಂಬಂಧಿ ಮಹಿಳೆಯೊಬ್ಬರು ದಾಖಲಿಸಿದ ದೂರಿನ ಆಧಾರದ ಮೇಲೆ ಗ್ರಾಮದ ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ; 22 ವರ್ಷದ ಯುವಕನನ್ನು ಬೆತ್ತಲೆಗೊಳಿಸಿ ಎತ್ತಿನ ಬಂಡಿಗೆ ಕಟ್ಟಿ ಮೆರವಣಿಗೆ ಮಾಡಿರುವುದು, ಥಳಿಸಿರುವುದ ಕಂಡುಬಂದಿದೆ. ಅಲ್ಲದೆ, ಆತನ ಮೇಲೆ ದಾಳಿ ಮಾಡುವಂತೆ ನಾಯಿಯನ್ನು ಪ್ರೇರೇಪಿಸುವುದು ಕಂಡುಬಂದಿದೆ. ಜೊತೆಗೆ, ‘ನಾಯಿಯನ್ನು ಬಿಡಿ, ಆತನ ಮೇಲೆ ದಾಳಿ ಮಾಡಲಿ, ಆತ ಸತ್ತರೆ ಸಾಯಲಿ’ ಎಂದು ಹಿಂದಿಯಲ್ಲಿ ಹೇಳುತ್ತಿರುವ ಧ್ವನಿಯೂ ಕೇಳಿಸುತ್ತದೆ.
ಹಲ್ಲೆಗೊಳಗಾದ ಯುವಕ ಸಂಬಂಧಿ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಏಪ್ರಿಲ್ 3ರಂದು ತನ್ನ ಭಾವನನ್ನು ಹಗ್ಗಗಳಿಂದ ಕಟ್ಟಿ ಹಲ್ಲೆ ನಡೆಸಲಾಗಿದೆ. ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ವರದಿ ಓದಿದ್ದೀರಾ?: Encounter | ಬಲಾಢ್ಯರು- ಪ್ರಭಾವಿಗಳ ಒಂದೇ ಒಂದು ಎನ್‌ಕೌಂಟರ್ ಆಗಿದ್ದರೆ ತೋರಿಸಿ…
“ಮಹಿಳೆಯೊಬ್ಬರ ಲಿಖಿತ ದೂರಿನ ಆಧಾರದ ಮೇಲೆ, ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಪಾಂಡೆ ತಿಳಿಸಿದ್ದಾರೆ.
“ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆಗೈದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸದ್ಯ, ತನಿಖೆ ನಡೆಯುತ್ತಿದೆ” ಎಂದು ಪಾಂಡೆ ಹೇಳಿದ್ದಾರೆ.
ಸಂತ್ರಸ್ತ ಯುವಕ ಕೂಡ ಅದೇ ಗ್ರಾಮದವನಾಗಿದ್ದಾನೆ. ಆತನ ವಿರುದ್ಧ ಮತ್ತೊಂದು ಸಮುದಾಯದ ಮಹಿಳೆಯು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆತನ ಈವರೆಗೆ ಪೊಲೀಸರಿಗೆ ಸಿಕ್ಕಿರಲಿಲ್ಲ. ಇದೀಗ, ಗ್ರಾಮಸ್ಥರು ಆತನ ಮೇಲೆ ಅಮಾನವೀಯವಾಗಿ ದಾಳಿ ನಡೆಸಿದ್ದಾರೆ. ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.