ಜನಿವಾರ ವಿವಾದ ಎಂಬುದು ಕಾಂಗ್ರೆಸ್ ಸರ್ಕಾರಕ್ಕೆ ಮಸಿಬಳಿಯಲು ಬಿಜೆಪಿ ಅಸ್ತ್ರಮಾಡಿಕೊಂಡಿರುವ ಸಂಗತಿ. ಹಿಂದೂಗಳಿಗೆ ಧಾರ್ಮಿಕ ಸಂಕೇತಗಳನ್ನು ಬಳಸಲು ಮುಕ್ತ ಅವಕಾಶ ಬೇಕು, ಮುಸ್ಲಿಂ ಸಮುದಾಯಕ್ಕೆ ಬೇಡ ಎಂದರೆ ಇದು ಯಾವ ನ್ಯಾಯ ಎಂಬುದನ್ನು ಜನಿವಾರ ವಿಚಾರವನ್ನು ವಿರೋಧಿಸುವವರು ಉತ್ತರಿಸಬೇಕು.
ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ರಾಜ್ಯಾದ್ಯಂತ ನಡೆದ ಸಿಇಟಿ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ಬೀದರ್‌ನಲ್ಲಿ ಅಧಿಕಾರಿಗಳು ತಪಾಸಣೆ ವೇಳೆ ವಿದ್ಯಾರ್ಥಿಗಳಿಗೆ ಜನಿವಾರ ತೆಗೆದು ಹಾಕುವಂತೆ ಸೂಚಿಸಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ವಿರೋಧಿಸುವವರು ಯಾರು ಅಂತ ನೋಡಿದರೆ ಜಾತಿ ವ್ಯವಸ್ಥೆಯನ್ನು ಅಪ್ಪಿಕೊಂಡ, ಜನಿವಾರ ಧರಿಸಿದವರು ಶ್ರೇಷ್ಠ ಎನ್ನುವ ಮನೋಭಾವದವರೇ ಆಗಿದ್ದಾರೆ. ಅವರಿಗೆಲ್ಲ ಜನಿವಾರ ತೆಗಿಸುತ್ತಿರುವುದಕ್ಕೆ ಸಿಟ್ಟಾಗಿದೆಯೋ ಇಲ್ವೋ ಗೊತ್ತಿಲ್ಲ, ಆದರೆ, ಬ್ರಾಹ್ಮಣ ಸಮುದಾಯವನ್ನು ಮುಟ್ಟಿದರೆ ಹುಷಾರ್ ಎನ್ನುವ ಎಚ್ಚರಿಕೆಯನ್ನು ಕೊಡಲು ಇದನ್ನು ವಿವಾದವಾಗಿ ಮಾಡುತ್ತಿದ್ದಾರೆ.
ಯಾವುದೇ ಪರೀಕ್ಷೆ ಇರಲಿ ಅಲ್ಲಿ ಅಕ್ರಮಕ್ಕೆ ದಾರಿ ಮಾಡಿಕೊಡಬಾರದು ಎನ್ನುವ ಉದ್ದೇಶದಿಂದ ಇತ್ತೀಚೆಗೆ ಕೆಲವು ಕಟ್ಟು ನಿಟ್ಟಿನ ಸೂಚನೆಗಳನ್ನು ಪಾಲಿಸುತ್ತ ಬರಲಾಗಿದೆ. ಮಹಿಳೆಯರಿಗೂ ಸಹ ಕಿವಿಯೋಲೆ, ಬಳೆ, ಬಿಂದಿಯನ್ನು ನಿರ್ಬಂಧಿಸಿ ಪರೀಕ್ಷಾ ಕೊಠಡಿಯೊಳಗೆ ಬಿಡುವುದು ಸಾಮಾನ್ಯವಾಗಿದೆ. ಗಂಡು ಮಕ್ಕಳಿಗೆ ಉದ್ದನೆಯ ತೋಳುಗಳ ಪೋಷಾಕನ್ನು ನಿರ್ಬಂಧಿಸಲಾಗಿದೆ.
2021 ಅಕ್ಟೋಬರ್ 3 ರಂದು 545 ಪಿಎಸ್‌ಐ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆದಿತ್ತು. ಆಗ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರು. ಪರೀಕ್ಷಾ ಕೇಂದ್ರದೊಳಗೆ ಬ್ಲೂಟೂಥ್ ಸಾಧನಗಳನ್ನು ಅಕ್ರಮವಾಗಿ ತಂದು ಪರೀಕ್ಷೆ ಬರೆದಿದ್ದು ದೊಡ್ಡ ಸುದ್ದಿಯಾಯಿತು. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿದಂತೆ ಅನೇಕ ನಾಯಕರ ಹೆಸರುಗಳು ಕೇಳಿಬಂದವು. ಪ್ರಕರಣಕ್ಕೆ ಸಂಬಂಧಿಸಿದಂತೆ 52 ಆರೋಪಿಗಳು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಅಂದಿನಿಂದ ರಾಜ್ಯದಲ್ಲಿ ಯಾವುದೇ ಮುಖ್ಯ ಪರೀಕ್ಷೆ ನಡೆಯಲಿ ಅಭ್ಯರ್ಥಿಗಳನ್ನು ತಪಾಸಣೆ ಮಾಡಿಯೇ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಇದರ ಉದ್ದೇಶ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯವುದೇ ಆಗಿದೆ ಎಂಬುದನ್ನು ಗಮನಿಸಬೇಕು.
ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಇದನ್ನು ರಾಜಕೀಯಗೊಳಿಸಿ, “ಬೀದರ್‌ನಲ್ಲಿ ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆಗೆ ಅವಕಾಶ ಕೊಡದೇ, ಶಿವಮೊಗ್ಗದಲ್ಲಿ ವಿದ್ಯಾರ್ಥಿಯೊಬ್ಬನ ಜನಿವಾರ ಕಿತ್ತೆಸೆಯಲು ದರ್ಪ ಮೆರೆದು ವಿದ್ಯಾರ್ಥಿಯ ಭವಿಷ್ಯಕ್ಕೆ ಕಲ್ಲು ಹಾಕಿದ ಅಧಿಕಾರಿ, ಸಿಬ್ಬಂದಿಗಳ ವರ್ತನೆ ಅತ್ಯಂತ ಹೇಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು, “ಈ ರೀತಿಯ ಬೌದ್ಧಿಕ ವಿಕೃತಿ ಹಾಗೂ ಮನುಷ್ಯತ್ವ ಇಲ್ಲದ ನಡೆ ಇನ್ನೊಂದಿರಲಾರದು, ಇದು ಕಾಂಗ್ರೆಸ್ ಸರ್ಕಾರದ ಹೀನ ಮನಸ್ಥಿತಿಯ ಮುಖವಾಡವನ್ನು ಪ್ರದರ್ಶಿಸಿದೆ. ಜನಿವಾರ ತೊಡುವುದು ಒಂದು ಕುಟುಂಬ ಹಾಗೂ ಭಾರತೀಯ ಸಮುದಾಯದ ಆಚಾರ ವಿಚಾರಕ್ಕೆ ಸಂಬಂಧಿಸಿದ್ದು, ವಿದ್ಯಾರ್ಥಿ ಬರೆಯುವ ಪರೀಕ್ಷೆಯ ಮೇಲೆ ಜನಿವಾರ ಏನು ಪ್ರಭಾವ ಅಥವಾ ಪರಿಣಾಮ ಬೀರುತ್ತದೆ? ಎಂಬುದಕ್ಕೆ ಸಂಬಂಧಿಸಿದ ಸಚಿವರು ಹಾಗೂ ಸರ್ಕಾರ ಉತ್ತರಿಸಬೇಕು. ಶಿಕ್ಷಣವೆಂದರೆ ಸಂಸ್ಕಾರ, ಅದು ಇಲ್ಲದವರು ಶಿಕ್ಷಣ ಖಾತೆಯನ್ನು ನಿರ್ವಹಿಸಿದರೆ ಏನು ಪರಿಣಾಮ ಬೀರಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶವನ್ನಾಳುವ ಪ್ರಧಾನಿ ಮೋದಿ ಬಡ ಮುಸ್ಲಿಮರ ಪರವೇ?
ಇದೇ ಪ್ರಶ್ನೆಗಳನ್ನು ಜನಿವಾರದ ಹೆಸರಿನಲ್ಲಿ ಹಿಜಾಬ್ ಇಟ್ಟು ನೋಡಿದರೆ ಇವರಿಂದ ಉತ್ತರವೇನು? ಬಿಜೆಪಿ ಅವಧಿಯಲ್ಲಿ ಉಡುಪಿಯ ಕಾಪು ತಾಲೂಕಿನ ಕೂಸು ಹಿಜಾಬ್ ವಿವಾದ, ನಂತರ ಜಿಲ್ಲೆಯ ಇತರ ಭಾಗಗಳಿಗೂ ವ್ಯಾಪಿಸಿ ಅಲ್ಲಿಂದ ರಾಜ್ಯದೆಲ್ಲಡೆ ಹರಿದಾಡಿ, ದೇಶದಲ್ಲಿ ದೊಡ್ಡ ಸುದ್ದಿಯಾಯಿತು. ಶಿಕ್ಷಣ ಕೇಂದ್ರಗಳಲ್ಲಿ ಧರ್ಮ, ರಾಜಕೀಯಕ್ಕೆ ಏನು ಕೆಲಸ ಎನ್ನುವ ನಿಯಮಗಳನ್ನು ಮೀರಿ ಹಿಜಾಬ್-ಕೇಸರಿ ವಿವಾದ ತಾರಕಕ್ಕೇರಿ ರಾಜಕೀಯಗೊಂಡಿತು. ಬಿಜೆಪಿಯ ನಾಯಕರು ಮುಸ್ಲಿಂ ದ್ವೇಷದ ಮನಸ್ಥಿತಿಯಲ್ಲೇ ಹಿಜಾಬ್ ಅನ್ನು ವಿರೋಧಿಸಿದರು. ಧಾರ್ಮಿಕ ಸಂಕೇತಗಳನ್ನು ಶಾಲಾ-ಕಾಲೇಜುಗಳಲ್ಲಿ ಪ್ರದರ್ಶಿಸುವಂತಿಲ್ಲ ಎಂದು ಮುಸ್ಲಿಂ ಸಮುದಾಯದ ವಿರುದ್ಧ ಕಿಡಿಕಾರಿದರು. ಹಿಜಾಬ್ ಧರಿಸುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಬರುವುದಾಗಿ ಘೋಷಿಸಿದರು.
2018ರ ಅಸೆಂಬ್ಲಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹನ್ನೆರಡು ಅಸೆಂಬ್ಲಿ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರವನ್ನು ಹೊರತುಪಡಿಸಿ, ಬಿಜೆಪಿ ಇಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಅಂತಹ ಪೂರಕ ಪರಿಸ್ಥಿತಿ 2023ರ ವೇಳೆಗೆ ಬಿಜೆಪಿಗೆ ಇಲ್ಲ ಎನ್ನುವುದನ್ನು ಅರಿತು ಧರ್ಮ ರಾಜಕಾರಣಕ್ಕೆ ಬಿಜೆಪಿ ಇಳಿದಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬಂದವು.
5 ಮಾರ್ಚ್ 2022 ರಂದು ಕರ್ನಾಟಕ ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸಮವಸ್ತ್ರವನ್ನು ಸೂಚಿಸುವ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವನ್ನು ಎತ್ತಿಹಿಡಿಯಿತು. ಆಗ ಬಿಜೆಪಿ ನಾಯಕರು ರಣಕೇಕೆ ಹಾಕಿ ಸಂಭ್ರಮಿಸಿದರು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ತಡೆ ಬಿದ್ದು, ತನಿಖೆ ನಡೆಯುತ್ತಿದೆ.
ಸಂವಿಧಾನವೇ ಧಾರ್ಮಿಕ ಸ್ವಾತ್ರಂತ್ಯದ ಹಕ್ಕನ್ನು ಕಲ್ಪಿಸಿದೆ. ಅದನ್ನು ನಾವು ಹೇಗೆ ಪ್ರದರ್ಶನ ಮಾಡಬೇಕು ಎಂಬುದು ಮುಖ್ಯ. ಮುಸ್ಲಿಂ ಸಮುದಾಯಕ್ಕೆ ಒಂದು ನ್ಯಾಯ, ಹಿಂದೂ ಸಮಾಜಕ್ಕೆ ಒಂದು ನ್ಯಾಯ ಎಂಬುದನ್ನು ಒಪ್ಪಲಾಗದು. ಆಗ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತದ ಆಧಾರದಲ್ಲಿ ಹಿಜಾಬ್ ಅನ್ನು ವಿರೋಧಿಸುವವರು ಈಗ ಜನಿವಾರವನ್ನು ಸಹ ವಿರೋಧಿಸಬೇಕು. ತಮ್ಮ ಸಂಪ್ರದಾಯಗಳನ್ನು ತಮ್ಮ ಮನೆಯೊಳಗೆ ಇಟ್ಟುಕೊಳ್ಳದೇ ಪರೀಕ್ಷಾ ಕೇಂದ್ರಕ್ಕೆ ತಂದರೆ ಯಾರೂ ಸಹ ಅದನ್ನು ಒಪ್ಪಲು ಸಾಧ್ಯವಿಲ್ಲ. ಇಲ್ಲಿ ಜನಿವಾರ ತೆಗೆಸಿರುವುದು ಪರೀಕ್ಷಾ ಅಕ್ರಮ ತಡೆಯಲು ಹೊರತು ಸಂಪ್ರದಾಯಗಳನ್ನು ವಿರೋಧಿಸಲು ಅಲ್ಲ ಎಂಬುದು ಮುಖ್ಯವಾದ ಸಂಗತಿ.
ಈ ವಿಚಾರವಾಗಿ ಶಿಕ್ಷಣ ತಜ್ಞ ವಿ ಪಿ ನಿರಂಜನಾರಾಧ್ಯ ಅವರು ಈ ದಿನ.ಕಾಮ್ ಜೊತೆ ಮಾತನಾಡಿ, “ಹಿಜಾಬ್ ಅನ್ನು ಮುಂದಿಟ್ಟುಕೊಂಡು ನೋಡಿದರೆ ಇದು ತಪ್ಪಲ್ಲ. ಒಬ್ಬರಿಗೊಂದು ನ್ಯಾಯ, ಇನ್ನೊಬ್ಬರಿಗೊಂದು ನ್ಯಾಯ ಯಾವತ್ತೂ ಇರಕೂಡದು. ಪರೀಕ್ಷಾ ಅಕ್ರಮಗಳ ದೃಷ್ಟಿಯಿಂದ ಇದನ್ನೆಲ್ಲ ಮಾಡಿರುತ್ತಾರೆ. ಇದು ಅಂತಹ ದೊಡ್ಡ ಸಂಗತಿಯಲ್ಲ. ತಿಳಿ ಹೇಳಿ ಅಲ್ಲಿಗೆ ಈ ವಿಷಯವನ್ನು ಮುಗಿಸಬಹುದಿತ್ತು. ಇದು ರಾಜಕೀಯಗೊಳ್ಳುವ ಸಂಗತಿಯೇ ಅಲ್ಲ” ಎಂದು ಹೇಳಿದರು.
“ಉದ್ದೇಶಪೂರ್ವಕವಾಗಿ ಕೆಲವರು ಜನಿವಾರ ಸಂಗತಿಯನ್ನು ರಾಜಕೀಯ ಮಾಡುತ್ತಿದ್ದಾರೆ. ಹಿಜಾಬ್ ವಿವಾದವಾದಾಗ ಇವರೆಲ್ಲಿದ್ದರು? ಪರೀಕ್ಷಾ ದೃಷ್ಟಿಯಿಂದ ಇದೆಲ್ಲ ಆಗಿದೆ ಎಂಬುದನ್ನು ನಾವು ಗಮನಿಸಬೇಕು. ಈಗ ಪರೀಕ್ಷೆಗಳಲ್ಲಿ ಸಾಕಷ್ಟು ಅಕ್ರಮಗಳು ಆಗುತ್ತಿವೆ. ಇದನ್ನು ತಡೆಯಲು ಅಷ್ಟೇ ಜನಿವಾರವನ್ನು ತೆಗೆಸಲಾಗಿದೆ. ಇದರಲ್ಲಿ ಯಾವ ಹೆಚ್ಚುಗಾರಿಕೆಯೂ ಇಲ್ಲ. ಹೆಣ್ಣು ಮಕ್ಕಳ ಕಿವಿಯೊಲೆಗಳನ್ನು ತೆಗೆಯಿಸಿ ಪರೀಕ್ಷಾ ಕೇಂದ್ರದೊಳಗೆ ಬಿಡಲಾಗುತ್ತಿದೆ. ಜನಿವಾರ ಇದ್ದ ಮಾತ್ರಕ್ಕೆ ಆ ವಿದ್ಯಾರ್ಥಿಗಳಿಗೆ ವಿಶೇಷ ಹಕ್ಕು ಕಲ್ಪಿಸಬೇಕಿಲ್ಲ” ಎಂದು ಶಿಕ್ಷಣ ತಜ್ಞ ಶ್ರೀಪಾದ ಭಟ್ ತಿಳಿಸಿದರು.
ಒಟ್ಟಾರೆ ಜನಿವಾರ ವಿವಾದ ಎಂಬುದು ಕಾಂಗ್ರೆಸ್ ಸರ್ಕಾರಕ್ಕೆ ಮಸಿಬಳಿಯಲು ಬಿಜೆಪಿ ಅಸ್ತ್ರಮಾಡಿಕೊಂಡಿರುವ ಸಂಗತಿ. ಹಿಂದೂಗಳಿಗೆ ಧಾರ್ಮಿಕ ಸಂಕೇತಗಳನ್ನು ಬಳಸಲು ಮುಕ್ತ ಅವಕಾಶ ಬೇಕು, ಮುಸ್ಲಿಂ ಸಮುದಾಯಕ್ಕೆ ಬೇಡ ಎಂದರೆ ಇದು ಯಾವ ನ್ಯಾಯ ಎಂಬುದನ್ನು ಜನಿವಾರ ವಿಚಾರವನ್ನು ವಿರೋಧಿಸುವವರು ಉತ್ತರಿಸಬೇಕು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.