ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳ ನಿರ್ವಹಣೆಗಾಗಿ ನೇಮಕ ಮಾಡಲಾಗಿರುವ ಅಧಿಕಾರಿಗಳನ್ನೊಳಗೊಂಡ ವಿವಿಧ ಸಮಿತಿಗಳ ಪೂರ್ವಭಾವಿ ಸಿದ್ದತಾ ಸಭೆಯನ್ನು ಮೈಸೂರು ಪ್ರಾದೇಶಿಕ ಆಯುಕ್ತರಾದ ಡಿ. ಎಸ್. ರಮೇಶ್ ನಡೆಸಿದರು.
” ಸಚಿವ ಸಂಪುಟ ಸಂಬಂಧ ಕಾರ್ಯ ನಿರ್ವಹಣೆಗಾಗಿ ರಚಿಸಲಾಗಿರುವ ಅಧಿಕಾರಿಗಳನ್ನು ಒಳಗೊಂಡ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳಿಂದ ಕೈಗೊಳ್ಳಲಾಗಿರುವ ಸಿದ್ದತೆಗಳ ಕುರಿತು ವಿವರ ಪಡೆದರು. ಸಚಿವ ಸಂಪುಟ ನಡೆಯುವ ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ವಡ್ಡುವಿನಲ್ಲಿ ಎಲ್ಲ ಸಿದ್ದತಾ ಕಾರ್ಯಗಳನ್ನು ಖುದ್ದು ಪರಿಶೀಲಿಸಿ ಕೆಲಸಗಳು ತ್ವರಿತವಾಗಿ ಪೂರ್ಣಗೊಳಿಸಬೇಕು. ಆಯಾ ಸಮಿತಿಗಳು ನಿರ್ವಹಿಸಬೇಕಿರುವ ಕೆಲಸಗಳು ಹಾಗೂ ಪೂರ್ವ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಬೇಕು ” ಎಂದರು.
ಶಿಷ್ಟಾಚಾರ, ಸ್ವಾಗತ, ವಸತಿ, ಸಾರಿಗೆ ಸಂಪರ್ಕ, ಇನ್ನಿತರ ಎಲ್ಲ ಕಾರ್ಯಗಳನ್ನು ಯಾವುದೇ ಲೋಪವಿಲ್ಲದಂತೆ ನಿರ್ವಹಿಸಬೇಕು. ಸ್ವಚ್ಚತೆಗೆ ವಿಶೇಷ ಗಮನ ನೀಡಬೇಕು. ಸಚಿವ ಸಂಪುಟ ಸಭೆ ನಡೆಯಲು ಜಿಲ್ಲೆಗೆ ಅವಕಾಶ ದೊರೆತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಶ್ರದ್ದೆ ಮುತುವರ್ಜಿಯಿಂದ ನಿಯೋಜಿಸಲಾಗಿರುವ ಕರ್ತವ್ಯವನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ ‘ ಈಗಾಗಲೇ ಸಮಿತಿಯ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಮಾರ್ಗದರ್ಶನ ಮಾಡಲಾಗಿದೆ. ಕಾರ್ಯನಿರ್ವಹಣೆ ಸಂಬಂಧ ವಿವರ ಪಡೆಯಲಾಗುತ್ತಿದೆ. ಸಿದ್ದತಾ ಕಾರ್ಯಗಳನ್ನು ಪರಿಶೀಲಿಸಲಾಗುತ್ತಿದೆ ‘ ಎಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಅಂಧ ಯುವತಿ ನೆರವಿಗೆ ಧಾವಿಸಿದ ಜಿಲ್ಲಾಧಿಕಾರಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪ ವಿಭಾಗಾಧಿಕಾರಿ ಮಹೇಶ್, ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.