ಲೋಪಗಳಾಗದಂತೆ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಡಲಾಗಿತ್ತು. ಆದರೆ, ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಯದ ಕಾರಣ ಪರೀಕ್ಷೆಗೆ ಅನುಮತಿ ನೀಡಿಲ್ಲ. ಇದು ನಿಜಕ್ಕೂ ಖಂಡನೀಯ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅನುಮತಿ ನೀಡದ ಕಾರಣ ವಿದ್ಯಾರ್ಥಿ ಗಣಿತ ಪರೀಕ್ಷೆ ಬರೆದಿಲ್ಲ. ಎಲ್ಲಾ ಸಂಪ್ರದಾಯಗಳನ್ನು ನಾವು ಗೌರವಿಸಬೇಕು. ಈ ಕುರಿತು ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಅವರೊಂದಿಗೆ ಮಾತಾಡಿದ್ದೇನೆ ಎಂದು ಹೇಳಿದರು.
ಈ ನಡೆಯನ್ನು ನಮ್ಮ ಸರಕಾರ ಒಪ್ಪುವುದಿಲ್ಲ. ಈಗಾಗಲೇ ವರದಿ ಕಳಿಸುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳಿಂದ ವರದಿ ಬಂದ ಬಳಿಕ ವಿದ್ಯಾರ್ಥಿಗೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಾತಿ ಗಣತಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವಾರು ವಿಚಾರಗಳು ಚರ್ಚೆಯಾಗಿವೆ. ಕೆಲ ಮಾಹಿತಿಯನ್ನು ಕೇಳಿದ್ದಾರೆ. ಎಲ್ಲರಿಗೂ ಸೂಕ್ತ ಮಾಹಿತಿ ನೀಡಲಾಗುವುದು. ಜತೆಗೆ ಎಲ್ಲರ ಅಭಿಪ್ರಾಯವನ್ನು ಪಡೆದ ಬಳಿಕ ಮುಂದಿನ ಸಂಪುಟ ಸಭೆಯಲ್ಲಿ ಮತ್ತೊಮ್ಮೆ ವಿಸ್ತೃತವಾದ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಮರು ಜಾತಿಗಣತಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಎಲ್ಲರಿಗೂ ಅವರದೇ ಆದ ಜಾತಿ ಜನಸಂಖ್ಯೆ ಗ್ರಹಿಕೆ ಇತ್ತು. ಯಾರ ಬಳಿಯೂ ನಿಖರವಾದ ಮಾಹಿತಿ ಇಲ್ಲ. ನಿಖರವಾದ ಮಾಹಿತಿಯಿಲ್ಲದ ಕಾರಣ ಮೀಸಲಾತಿ, ರಾಜಕೀಯ ಅಧಿಕಾರದ ಕಾರಣ ಸರಕಾರದ ಮೇಲೆ ಒತ್ತಡ ಹೇರುವ ಕೆಲಸವಾಗುತ್ತಿದೆ. 2011ರಲ್ಲಿ 6 ಕೋಟಿ 11 ಲಕ್ಷ ಇತ್ತು, ನಂತರ 2015ರಲ್ಲಿ 6 ಕೋಟಿ 35 ಲಕ್ಷ ಇತ್ತು. ಈಗಿನ ಸಮೀಕ್ಷೆಯಲ್ಲಿ 5 ಕೋಟಿ 98 ಲಕ್ಷ ಇದೆ. ಸುಮಾರು 2.5ಲಕ್ಷ ಮಂದಿ ನಿಖರವಾದ ಜಾತಿ ಹೇಳಿಲ್ಲ. 1.95ಲಕ್ಷ ಮಂದಿ ಕೆಲವರು ಜಾತಿ ಸಮೀಕ್ಷೆಯಲ್ಲಿ ಭಾಗವಹಿಸಿಲ್ಲ. ಹಾಗಾಗಿ ಕೆಲವರಿಗೆ ಕಡಿಮೆ ಎನಿಸಿರಬಹುದು ಎಂದು ಹೇಳಿದರು.
ಇದನ್ನೂ ಓದಿ : ಜನಿವಾರ ವಿವಾದ | ಒಂದು ಕೈಯಲ್ಲಿ ದೊಣ್ಣೆ, ಮತ್ತೊಂದು ಕೈಯಲ್ಲಿ ಬೆಣ್ಣೆ – ಇದು ಬಿಜೆಪಿ ನೀತಿ
ಜಾತಿ ಗಣತಿ ವಿಚಾರದಲ್ಲಿ ವಿರೋಧ ಪಕ್ಷದವರು ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮೀಕ್ಷೆಯ ಕುರಿತು ಸಂಪೂರ್ಣ ವಿವರವನ್ನು ಸರಕಾರ ಜನರ ಮುಂದಿಡಲಿದೆ. ಮುಂದಿನ ದಿನಗಳಲ್ಲಿ ಸರಕಾರ ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.