- ಸರ್ಕಾರದಿಂದ ಹಣ ಬಂದಿಲ್ಲ ಎನ್ನುತ್ತಿರುವ ಜಿವಿಕೆ ಕಂಪನಿ
- ಜೂನ್ ತಿಂಗಳು ಸೇರಿ ನಾಲ್ಕು ತಿಂಗಳು ವೇತನ ಬಾಕಿ
ರಾಜ್ಯ ಸರ್ಕಾರದ 108-ಆರೋಗ್ಯ ಕವಚ ಯೋಜನೆಯಡಿ ಆ್ಯಂಬುಲೆನ್ಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಜು. 7ರೊಳಗೆ ಬಾಕಿ ಉಳಿಸಿಕೊಂಡಿರುವ ವೇತನ ಪಾವತಿಯಾಗಬೇಕು. ಇಲ್ಲದಿದ್ದರೆ, ಜು. 8ರಿಂದ ಸಾಮೂಹಿಕ ರಜೆ ಹಾಕಲಾಗುವುದು ಎಂದು ನೌಕರರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ 108 ಆಂಬ್ಯುಲೆನ್ಸ್ ಸೇವೆಯ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಹಳ್ಳೂರು, “ಈ ಯೋಜನೆಯನ್ನು ನಿರ್ವಹಣೆ ಮಾಡುತ್ತಿರುವ ಜಿವಿಕೆ-ಇಎಂಆರ್‌ಐ ಸಂಸ್ಥೆಯು ಕಳೆದ ನಾಲ್ಕು ತಿಂಗಳಿನಿಂದ ನಮಗೆ ವೇತನ ಪಾವತಿ ಮಾಡಿಲ್ಲ. ಎರಡು ತಿಂಗಳು ವೇತನ ನೀಡದಿದ್ದರೆ, ಹೇಗೋ ಒದ್ದಾಡಿ ಜೀವನ ನಡೆಸಬಹುದು. ಆದರೆ, ಕಳೆದ ನಾಲ್ಕು ತಿಂಗಳಿನಿಂದ ನಮಗೆ ವೇತನವಾಗಿಲ್ಲ. ಇದರಿಂದ ನಾವು ದುಡಿದು ಉಪಯೋಗವಿಲ್ಲದಂತಾಗಿದೆ. ಜೀವನ ನಡೆಸುವುದು ತುಂಬಾ ಕಷ್ಟವಾಗಿದೆ” ಎಂದು ತಿಳಿಸಿದರು.
“ಈ ಜೂನ್ ತಿಂಗಳಿನಲ್ಲಿ ಶಾಲೆಗಳ ಆರಂಭವಾಗಿದೆ. ಮಕ್ಕಳ ಶಾಲೆಯ ಶುಲ್ಕ, ಪುಸ್ಕಕ ಸೇರಿದಂತೆ ಹೆಚ್ಚಿನ ಹೊರೆ ನಮ್ಮ ಮೇಲೆ ಇರುತ್ತದೆ. ಈ ಬಗ್ಗೆ ಸಂಸ್ಥೆಯ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೂ ಏನು ಪ್ರಯೋಜನವಾಗಿಲ್ಲ. ಈ ಜೂನ್ ತಿಂಗಳು ಸೇರಿ ನಮಗೆ ನಾಲ್ಕು ತಿಂಗಳು ವೇತನ ನೀಡಬೇಕು. ಜುಲೈ 7ರೊಳಗೆ ವೇತನ ನೀಡಬೇಕು. ಇಲ್ಲದಿದ್ದರೆ, ಜು.8ರಿಂದ ನಾವು ಸಾಮೂಹಿಕವಾಗಿ ರಜೆ ಹಾಕಿ ವೇತನ ಹಾಕುವವರೆಗೂ ಕೂಲಿ ಕೆಲಸಕ್ಕೆ ತೆರಳುತ್ತೇವೆ” ಎಂದರು.
“ಆರೋಗ್ಯ ಕವಚ ಯೋಜನೆಯಡಿ 3,500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿವಿಕೆ ಗುತ್ತಿಗೆ ಕಂಪನಿ ಬಳಿ ಹೋಗಿ ವೇತನ ಕೇಳಿದರೆ, ಅವರು ಸರ್ಕಾರ ಇನ್ನೂ ಹಣ ಹಾಕಿಲ್ಲ ಎಂದು ಹೇಳುತ್ತಾರೆ. ಸರ್ಕಾರದ ಬಳಿ ಹೋಗಿ ಕೇಳಿದರೆ ಅವರಿಗೆ ಹಣ ಕಳುಹಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ, ನಮಗೆ ವೇತನ ಇಲ್ಲ. ನಮಗೆ ಸರ್ಕಾರ ಹಿಂಬಾಕಿಯನ್ನು ಸಹ ಕೂಡಲೇ ಪಾವತಿ ಮಾಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮಹಿಳಾ ಸೆಕ್ಯುರಿಟಿ ಗಾರ್ಡ್‌ಗೆ ಕೊಳಚೆ ನೀರು ಕುಡಿಯುವಂತೆ ಒತ್ತಾಯ: ಅಪಾರ್ಟ್‌ಮೆಂಟ್ ನಿವಾಸಿ ಕಿರುಕುಳ
ಕರ್ನಾಟಕದಲ್ಲಿ 108 ಆಂಬ್ಯುಲೆನ್ಸ್ ಕಾರ್ಯಾಚರಣೆಯನ್ನು ನಿರ್ವಹಿಸುವ ಜಿವಿಕೆ-ಇಎಂಆರ್‌ಐನ ಅಧಿಕಾರಿಯೊಬ್ಬರು ಮಾತನಾಡಿ, “ಮಾರ್ಚ್‌ನಿಂದ ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ, ಇದರಿಂದಾಗಿ ವೇತನ ಪಾವತಿಯಾಗುತ್ತಿಲ್ಲ” ಎಂದು ತಿಳಿಸಿದರು.