ದೆಹಲಿಯ ಮುಸ್ತಫಾಬಾದ್ ಪ್ರದೇಶದಲ್ಲಿ ಇಂದು ನಸುಕಿನ ಜಾವ 4 ಅಂತಸ್ತಿನ ಕಟ್ಟಡ ಕುಸಿದು ನಾಲ್ವರು ಮೃತಪಟ್ಟಿರುವ ಘಟನೆ ನಡೆದಿದೆ.
ಘಟನೆಯಲ್ಲಿ 18 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಹಲವರು ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಶಾನ್ಯ ದೆಹಲಿಯ ದಯಾಳ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಚಾಂದಿನಿ, ದಾನಿಶ್, ರೇಷ್ಮಾ ಮತ್ತು ನವೀದ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹುಬ್ಬಳ್ಳಿ, ಮಂಗಳೂರು ಅತ್ಯಾಚಾರ ಪ್ರಕರಣ; ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು
ಕಟ್ಟಡ ಕುಸಿದಾಗ ಸುಮಾರು 24 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ಅವರಲ್ಲಿ 18 ಮಂದಿಯನ್ನು ರಕ್ಷಿಸಲಾಗಿದ್ದು, ಈ ಪೈಕಿ ತೀವ್ರವಾಗಿ ಗಾಯಗೊಂಡಿದ್ದ 14 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರು ಅವಶೇಷಗಳಡಿಯಲ್ಲಿ ಹೂತು ಹೋಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಎನ್‌ಡಿಆರ್‌ಎಫ್, ಡಾಗ್ ಸ್ಕ್ವಾಡ್, ದೆಹಲಿ ಪೊಲೀಸರ ತಂಡಗಳು ಮತ್ತು ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಈವರೆಗೆ 18 ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ ಎಂದು ಸ್ಥಳೀಯ ಡಿಸಿಪಿ ಸಂದೀಪ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆ ಮತ್ತು ಗುಡುಗು ಸಹಿತ ಮಳೆಯಿಂದಾಗಿ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಕಟ್ಟಡಗಳು ಕುಸಿದಿರುವ ವರದಿಗಳಾಗಿವೆ.
ಕಳೆದ ವಾರ ಇದೇ ರೀತಿಯ ಘಟನೆಯಲ್ಲಿ, ಮಧು ವಿಹಾರ್ ಪೊಲೀಸ್ ಠಾಣೆ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಗೋಡೆ ಧೂಳಿನ ಬಿರುಗಾಳಿಯ ಸಮಯದಲ್ಲಿ ಕುಸಿದು ಒಬ್ಬ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದರು. ಪೊಲೀಸರ ಪ್ರಕಾರ, ಗೋಡೆಯು ನಿರ್ಮಾಣ ಹಂತದಲ್ಲಿರುವ ಆರು ಅಂತಸ್ತಿನ ಕಟ್ಟಡಕ್ಕೆ ಸೇರಿತ್ತು.