ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಕೊನೆಗಾಣಿಸಲು ‘ರೋಹಿತ್ ಮೇಮುಲಾ ಕಾಯ್ದೆ’ಯನ್ನು ಜಾರಿಗೊಳಿಸಬೇಕೆಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ. ಈ ಬೆನ್ನಲ್ಲೇ, ಕರ್ನಾಟಕದಲ್ಲಿ ಕಾಯ್ದೆಯನ್ನು ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಶೀಘ್ರವೆ ಕಾಯ್ದೆ ಜಾರಿಯಾಗಲಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಪತ್ರ ಬರೆದಿದ್ದು, “ಅಂಬೇಡ್ಕರ್ ಎದುರಿಸಿದ ತಾರತಮ್ಯವು ಅತ್ಯಂತ ಶೋಚನೀಯ. ಭಾರತದ ಯಾವುದೇ ಮಗು ಈ ರೀತಿಯ ನೋವನ್ನು ಅನುಭವಿಸಬಾರದು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಂದಿಗೂ ದಲಿತ, ಆದಿವಾಸಿ ಹಾಗೂ ಒಬಿಸಿ ಸಮುದಾಯಗಳ ಲಕ್ಷಾಂತರ ವಿದ್ಯಾರ್ಥಿಗಳು ಇಂತಹ ಕ್ರೂರ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಇದು ಶೋಚನೀಯ ಸಂಗತಿ” ಎಂದು ಹೇಳಿದ್ದರು.
“ರೋಹಿತ್ ವೇಮುಲಾ, ಪಾಯಲ್ ತಡ್ವಿ ಮತ್ತು ದರ್ಶನ್ ಸೋಲಂಕಿಯಂತಹ ಪ್ರತಿಭಾವಂತ ಯುವಕರ ಹತ್ಯೆಯು ನೋವುಂಟುಮಾಡಿದೆ. ಇಂತಹ ಹತ್ಯೆಗಳನ್ನು ಸಹಿಸಲಾಗದು. ಇದಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಅಂಬೇಡ್ಕರ್, ರೋಹಿತ್ ವೇಮುಲಾ ಮತ್ತು ಲಕ್ಷಾಂತರ ಇತರರು ಅನುಭವಿಸಿದ ತಾರತಮ್ಯ-ನೋವನ್ನು ಭಾರತದ ಯಾವುದೇ ಮಗು ಎದುರಿಸದಂತೆ ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ನಾನು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.
ಅವರ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ಎಕ್ಸ್’ನಲ್ಲಿ ಟ್ವೀಟ್ ಮಾಡಿದ್ದು, “ಕರ್ನಾಟಕದಲ್ಲಿ ಯಾವುದೇ ವಿದ್ಯಾರ್ಥಿಯು ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಎದುರಿಸಬಾರದು. ಅದಕ್ಕಾಗಿ, ರೋಹಿತ್ ವೇಮುಲಾ ಕಾಯ್ದೆಯನ್ನು ಜಾರಿಗೆ ತರುವುದರಲ್ಲಿ ನಮ್ಮ ಸರ್ಕಾರದ ಸಂಕಲ್ಪ ದೃಢವಾಗಿದೆ. ರೋಹಿತ್, ಪಾಯಲ್, ದರ್ಶನ್ ಹಾಗೂ ಅಸಂಖ್ಯಾತ ಇತರರ ಕನಸುಗಳನ್ನು ಗೌರವಿಸಲು ನಾವು ರೋಹಿತ್ ಕಾಯ್ದೆಯನ್ನು ಜಾರಿಗೆ ತರುತ್ತೇವೆ” ಎಂದು ಹೇಳಿದ್ದಾರೆ.
I thank Shri @RahulGandhi for his heartfelt letter and unwavering commitment to social justice.
— Siddaramaiah (@siddaramaiah) April 18, 2025
Our Govt stands firm in its resolve to enact the Rohith Vemula Act in Karnataka — to ensure no student faces discrimination based on caste, class, or religion. We will bring this… https://t.co/XsmtXW7NDF
“ಅಂಬೇಡ್ಕರ್ ಅವರ ಸಮಾನತೆಯ ದೃಷ್ಟಿಕೋನದ ಭಾರತದ ಸಾಕಾರಗೊಳಿಸುವತ್ತ ಇದು ಒಂದು ಹೆಜ್ಜೆಯಾಗಿದೆ” ಎಂದು ಹೇಳಿದ್ದಾರೆ.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ರೋಹಿತ್ ವೇಮುಲಾ ಅವರು 2016ರಲ್ಲಿ ಜಾತಿ ಆಧಾರಿತ ತಾರತಮ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಶ್ವವಿದ್ಯಾಲಯದ ಆಡಳಿತವು ಅವರು ನೀಡುತ್ತಿದ್ದ ಫೆಲೋಶಿಪ್‌ಅನ್ನು ಸ್ಥಗಿತಗೊಳಿಸಿತ್ತು. ಹಾಸ್ಟೆಲ್‌ನಿಂದ ಹೊರ ಹಾಕಿತ್ತು. ವಿಶ್ವವಿದ್ಯಾಯದ ಜಾತಿವಾದಿ ಧೋರಣೆಯ ವಿರುದ್ಧ ನಿರಂತರ ಪ್ರತಿಭಟನೆ ನಡೆಸಿದ್ದ ರೋಹಿತ್ ಅವರು ಕ್ಯಾಂಪಸ್‌ನ ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯಗೆ ಶರಣಾಗಿದ್ದರು.