ಅಮೆರಿಕಾ ದೇಶದ ಉಪಾಧ್ಯಕ್ಷ ಜೆಡಿ ವಾನ್ಸ್ ಭಾರತ ಭೇಟಿಯನ್ನು ವಿರೋಧಿಸಿ, ಭಾರತವು ಮಾರಾಟಕ್ಕಿಲ್ಲ ಎಂಬ ಬಲವಾದ ಸಂದೇಶ ರವಾನಿಸಲು, ಏಪ್ರಿಲ್ 21,2025 ರಂದು ರಾಜ್ಯಾದ್ಯಂತ ಪ್ರತಿಭಟಿಸಲು ತನ್ನ ಎಲ್ಲ ಘಟಕಗಳಿಗೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.
ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸಾರಿರುವ ಸುಂಕ ಸಮರದ ಬೆದರಿಕೆ ಮೂಲಕ ಭಾರತದ ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಮಾರುಕಟ್ಟೆ ಯನ್ನು ಅಮೆರಿಕಾ ದೇಶದ ಉತ್ಪನ್ನಗಳಿಗೆ ಸುಂಕ ರಹಿತವಾಗಿ ಮುಕ್ತಗೊಳಿಸುವಂತೆ ಒತ್ತಡ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಉಪಾಧ್ಯಕ್ಷ ಭೇಟಿ ಮತ್ತು ವಾಣಿಜ್ಯ ಮಾತುಕತೆ ಭಾರತದ ಕೋಟ್ಯಾಂತರ ರೈತಾಪಿ ಸಮುದಾಯಕ್ಕೆ ಮರಣ ಶಾಸನವಾಗಲಿದೆ. ಅದ್ದರಿಂದ ಈ ಭೇಟಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಟ್ರಂಪ್ -ವಾನ್ಸ್ ಪ್ರತಿಕೃತಿ ದಹಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಯು ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ದೇಶದಲ್ಲೇ ಎರಡನೆ ಅತಿ ದೊಡ್ಡ ಹಾಲು ಉತ್ಪಾದಕ ರಾಜ್ಯವಾಗಿರುವ ಕರ್ನಾಟಕದ ಸುಮಾರು ಹತ್ತಕ್ಕೂ ಹೆಚ್ಚು ಜಿಲ್ಲೆಗಳ ರೈತ ಕುಟುಂಬಗಳು ತಮ್ಮ ಜೀವನಾಧಾರಕ್ಕಾಗಿ ಹೈನುಗಾರಿಕೆಯನ್ನು ಅವಲಂಬಿಸಿವೆ. ತೊಗರಿ ಸೋಯಾಬೀನ್, ಬಟಾಣಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಮೆಕ್ಕೆಜೋಳ, ಎಥೆನಾಲ್ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಪ್ರಮುಖ ಬೆಳೆಗಳಾಗಿವೆ. ಅದೇ ರೀತಿ ಕರಾವಳಿ ಕರ್ನಾಟಕದ ಪ್ರಮುಖ ಜೀವನೋಪಾಯ ಮೀನುಗಾರಿಕೆ ಕೃಷಿಯನ್ನು ಅವಲಂಬಿಸಿದೆ. ಈ ಎಲ್ಲ ಕೃಷಿ ಉತ್ಪನ್ನಗಳು ಈಗಾಗಲೇ ಬೆಂಬಲ ಬೆಲೆ ಅಭಾವ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಕಷ್ಟ ಹಾಗೂ ನಷ್ಟವನ್ನು ಅನುಭವಿಸುತ್ತಿವೆ. ಇಂತಹ ಸಂದರ್ಭದಲ್ಲಿ ಈ ವಲಯಗಳು ಸೇರಿದಂತೆ ವಿವಿಧ ರೀತಿಯ ತೋಟಾಗಾರಿಕೆ ಉತ್ಪನ್ನಗಳ ಸುಂಕ ರಹಿತ ಅಮದು ಈ ಎಲ್ಲಾ ರೈತರನ್ನು ಸಂಪೂರ್ಣವಾಗಿ ದಿವಾಳಿಯೆಬ್ಬಿಸಿ ರಾಜ್ಯದ ರೈತರನ್ನು ನಿರುದ್ಯೋಗ-ಸಾಲಭಾಧೆಗೆ ಸಿಲುಕಿಸಲಿದೆ. ವಿಶೇಷವಾಗಿ ರಾಜ್ಯದ ಹೈನುಗಾರಿಕೆಗೆ ಮತ್ತು ಕರ್ನಾಟಕ ಹಾಲು ಒಕ್ಕೂಟ (KMF) ಕ್ಕೆ ಈ ಅಮದು ಸುಂಕ ನಿರ್ಧಾರ ಶವಪಟ್ಟಿಗೆಗೆ ಹೊಡೆಯುವ ಕೊನೆ ಮೊಳೆ ಆಗಲಿದೆ. ಹೀಗಾಗಿ ಯಾವುದೇ ಒತ್ತಡಕ್ಕೂ ಮಣಿಯದೇ ಹೈನುಗಾರಿಕೆ, ಮೀನುಗಾರಿಕೆ ,ತೋಟಗಾರಿಕೆ ಸೇರಿದಂತೆ ಒಟ್ಟಾರೆ ಕೃಷಿಯನ್ನು ವಾಣಿಜ್ಯ ಮಾತುಕತೆಗಳಿಂದ ಹೊರಗಿಡಬೇಕು” ಎಂದು ಆಗ್ರಹಿಸಿದ್ದಾರೆ.
ಅಮೆರಿಕಾದಲ್ಲಿ ಶೇ.70 ರಷ್ಟು ಮಾರುಕಟ್ಟೆ ಹೊಂದಿದ್ದ ಚೀನಾ, ಕೆನಡಾ , ಮೆಕ್ಸಿಕೋ ಮುಂತಾದ ದೇಶಗಳು ಅಮೆರಿಕಾದ ಸುಂಕ ಸಮರದ ಬೆದರಿಕೆಗೆ ಯಾವುದೇ ರೀತಿಯಲ್ಲಿ ಮಣಿಯದೇ ತಿರುಗೇಟು ನೀಡಿದೆ. ಆದರೆ ಅಮೆರಿಕಾದ ಜೊತೆ ವ್ಯಾಪಾರದ ಕೊರತೆ ಇರುವ ಭಾರತ ಇಂತಹ ದಿಟ್ಟ ನಿಲುವು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಸ್ವತಃ ನರೇಂದ್ರ ಮೋದಿರವರ ಸಮ್ಮುಖದಲ್ಲೇ ಭಾರತವನ್ನು ಸುಂಕ ರಾಜ ಎಂದು ಡೋನಾಲ್ಡ್ ಟ್ರಂಪ್ ಅಣಕಿಸಿ ಸ್ವಾಭಿಮಾನಕ್ಕೆ ಧಕ್ಕೆ ತಂದಾಗಲೂ, ಭಾರತದ ವಲಸೆ ಕಾರ್ಮಿಕರನ್ನು ಕೋಳ ತೊಡಿಸಿ ಅಮಾನವೀಯವಾಗಿ ನಡೆಸಿಕೊಂಡಾಗಲೂ ಸೂಕ್ತ ಪ್ರತಿಭಟನೆ ವ್ಯಕ್ತಪಡಿಸಿಲ್ಲ” ಎಂದಿದ್ದಾರೆ.
“ಕೆಲವೇ ಕೆಲವು ದೊಡ್ಡ ಉದ್ಯಮಿಗಳ ರಪ್ತು ವ್ಯವಹಾರಕ್ಕಾಗಿ, ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಾಗಿ ಕೋಟ್ಯಾಂತರ ರೈತರ ಜೀವನೋಪಾಯ ಸರ್ವನಾಶ ಮಾಡುವ ಮಾತುಕತೆಗಳು ಆಹಾರ ಭದ್ರತೆ, ಆಹಾರ ಸ್ವಾವಲಂಬನೆ ಅಂತಿಮವಾಗಿ ದೇಶದ ಸಾರ್ವಭೌಮತ್ವವನ್ನು ಅಪಾಯಕಾರಿ ಪರಿಸ್ಥಿತಿಗೆ ಕೊಂಡೊಯ್ಯಲಿದೆ. ವಾನ್ಸ್ ಭೇಟಿ ಹಿನ್ನಲೆಯಲ್ಲಿ ಅಮೆರಿಕಾ ವಾಣಿಜ್ಯ ಕಾರ್ಯದರ್ಶಿ ಹೋವರ್ಡ್ ಲುಟ್ನಿಕ್ ರವರು ಕೃಷಿ ಮಾರುಕಟ್ಟೆ ಮುಕ್ತಗೊಳಿಸುವುದೇ ಭಾರತದ ಮಾತುಕತೆಯಲ್ಲಿ ಪ್ರಮುಖ ಆದ್ಯತಾ ವಿಷಯ ವಾಗಿದ್ದು ಯಾವುದೇ ಸುಂಕ ಹಾಗೂ ಇತರೆ ತಡೆಗಳನ್ನು ನಿವಾರಿಸಬೇಕು ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅದ್ದರಿಂದ ಅಮೆರಿಕಾ ಉಪಾಧ್ಯಕ್ಷರ ಜೊತೆ ವಾಣಿಜ್ಯ ಮಾತುಕತೆಗಳನ್ನು ರದ್ದುಪಡಿಸಬೇಕು” ಎಂದು ಆಗ್ರಹಿಸಿದ್ದಾರೆ.