ನಿಜವಾದ ಲೇಖಕ ಯಾವುದೇ ಕಾರಣಕ್ಕೂ ಅಸೂಕ್ಷ್ಮವಾಗಿ, ವಾಸ್ತವಕ್ಕೆ ವಿಮುಖನಾಗಿ ಇರಲು ಸಾಧ್ಯವಿಲ್ಲ ಎಂಬುದು ಲೋರ್ಕಾನ ಬಹು ದೊಡ್ಡ ನಂಬಿಕೆಯಾಗಿತ್ತು. ಸ್ಪೇನಿನ ಮಣ್ಣಿನ ಲೋರ್ಕಾ ಜಗತ್ತಿನ ವಿಸ್ಮಯ ಪ್ರತಿಭೆ, ಅವನ ಕಾವ್ಯ ಮತ್ತು ನಾಟಕಗಳು ಇಪ್ಪತ್ತನೆ ಶತಮಾನದ ಅಚ್ಚರಿಗಳು.
ಅದೊಂದು ಚಂದ್ರನಿರದ ರಾತ್ರಿ, ನಾಲ್ವರು ಖೈದಿಗಳನ್ನು ತುಂಬಿಕೊಂಡು ಕಾರೊಂದು ಗ್ರನಾಡದಿಂದ ಹೊರಟು ಹಳ್ಳಿಯ ಕೊರಕಲು ರಸ್ತೆಯಲ್ಲಿ ಏದುಸಿರು ಬಿಟ್ಟುಕೊಂಡು ಸಾಗುತ್ತಾ ಸಮುದ್ರ ಮಟ್ಟಕ್ಕಿಂತ ಮೂರು ಸಾವಿರ ಅಡಿಗಳಷ್ಟು ಎತ್ತರದಲ್ಲಿರುವ, ಹಿಮದಿಂದ ಪೂರಾ ತೊಯ್ಯಲ್ಪಟ್ಟಿರುವ ವಿಝರ್ ಎಂಬ ಹಳ್ಳಿಯನ್ನು ತಲುಪಿ ಹದಿನೆಂಟನೆಯ ಶತಮಾನದ ಪುರಾತನ ಕಟ್ಟಡವೊಂದರ ಎದುರು ನಿಲ್ಲುತ್ತದೆ. ತುಂಬಾ ದಿನಗಳವರೆಗೂ ಹಳ್ಳಿಯ ಮಕ್ಕಳುಗಳ ಆಟದ ತಾಣವಾಗಿದ್ದ ಅದನ್ನು ಇತ್ತೀಚೆಗಷ್ಟೇ ರಾಷ್ಟ್ರೀಯ ಪ್ರತ್ಯೇಕತಾವಾದಿಗಳು ತಮ್ಮ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿರುತ್ತಾರೆ. ಅದರ ಮೊದಲ ಮಹಡಿಯಲ್ಲಿ ಸೈನಿಕರು, ಗಾರ್ಡ್‌ಗಳು ಹಾಗೂ ಸಮಾಧಿ ಅಗೆಯುವವರು ಮುಂತಾದವರು ಇರುತ್ತಾರೆ. ಅದರ ನೆಲಮಾಳಿಗೆಗೆ ಕಾರಿನಲ್ಲಿ ಕರೆತಂದ ನಾಲ್ವರು ಖೈದಿಗಳನ್ನು ದಬ್ಬುತ್ತಾರೆ. ಆಗ ಹಿಮದ ಜತೆಗೆ ಕತ್ತಲು ಇನ್ನೂ ತೊಟ್ಟಿಕ್ಕುತ್ತಿರುತ್ತದೆ.
ಅದಾದ ಎರಡು ದಿನಗಳ ಬಳಿಕ ಅಂದರೆ ಆಗಸ್ಟ್ 18, 1936ರ ಇನ್ನೂ ಬೆಳಕರಿಯುವುದಕ್ಕೂ ಮುನ್ನವೇ ನೆಲಮಾಳಿಗೆಗೆ ದಬ್ಬಿದ್ದ ನಾಲ್ವರು ಖೈದಿಗಳನ್ನು ಹೊರಡಿಸಿಕೊಂಡು ಆಲೀವ್ ಮರಗಳಿಂದ ತುಂಬಿಹೋಗಿದ್ದ ಗುಡ್ಡದ ತಪ್ಪಲೊಂದಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ಆ ಗುಡ್ಡದ ತಪ್ಪಲಿನ ಕತ್ತಲೆಯಲ್ಲಿ ಬಂದೂಕಿನ ಕುದುರೆಗಳನ್ನು ಮೀಟುವ ಸದ್ದು ಖೈದಿಗಳ ಕಿವಿಗಳನ್ನು ತುಂಬಿಕೊಳ್ಳುತ್ತಿರುವಾಗ ಇನ್ನೂ ಸೂರ್ಯ ಎದ್ದಿರಲಿಲ್ಲ. ಬೆಳಕಿಗೆ ಸತ್ಯದ ಗುಟ್ಟನ್ನು ಬಿಟ್ಟುಕೊಡಬಾರದು ಎಂಬಂತೆ ಬಂದೂಕಿನಿಂದ ಸಿಡಿದ ಗುಂಡುಗಳು ಆ ನಾಲ್ವರ ತಲೆಗಳನ್ನು ಹಿಂಬದಿಯಿಂದ ಹಾದು ಹಣೆಯಿಂದ ಆಚೆ ನುಗ್ಗುತ್ತವೆ. ಹಂಗೆ ಕೊಲ್ಲಲ್ಪಟ್ಟವರಲ್ಲಿ ಒಬ್ಬ ಸ್ಕೂಲ್ ಮಾಸ್ಟರ್, ಎಡಪಂಥೀಯ ರಾಜಕೀಯ ಆಲೋಚನೆಗಳಿಗೆ ಹೆಸರಾಗಿದ್ದ ಇಬ್ಬರು ಗೂಳಿಕಾಳಗದವರು ಹಾಗೂ ಇಪ್ಪತ್ತನೆಯ ಶತಮಾನ ಕಂಡ ಮಹಾನ್ ಪ್ರತಿಭೆ ಕವಿ ಹಾಗೂ ನಾಟಕಕಾರ ಫೆಡರಿಕೊ ಗಾರ್ಸಿಯಾ ಲೋರ್ಕಾ. ಆಗ ಅವನಿಗಿನ್ನೂ ಮುವ್ವತ್ತೆಂಟು ವರ್ಷ. ಅವನ ಸುಪ್ರಸಿದ್ದ ನಾಟಕಗಳಲ್ಲಿ ಒಂದಾದ ‘ದ ಹೌಸ್ ಆಫ್ ಬರ್ನರ್ದ ಆಲ್ಬ’ ನಾಟಕವನ್ನು ಬರೆದು ಕೇವಲ ಎರಡು ತಿಂಗಳಾಗಿರುತ್ತದೆ.
ಆಗ ಫೋನನ್ನು ಆಳುತ್ತಿದ್ದ ಫ್ರಾಂಕೋನ ಸರ್ವಾಧಿಕಾರದ ಸರ್ಕಾರ ಲೋರ್ಕಾನ ಸಾವಿಗೆ ಹೊಣೆಯನ್ನು ನಿರಾಕರಿಸುತ್ತದೆ. ಅಲ್ಲದೆ ಸರ್ಕಾರದ ವಿರುದ್ಧ ದನಿ ಎತ್ತಿದವರ ಪಟ್ಟಿಗೆ ಲೋರ್ಕಾನನ್ನೂ ಸೇರಿಸಿ, ‘1936ರ ಆಗಸ್ಟ್ ತಿಂಗಳಲ್ಲಿ ಯುದ್ಧದ ಗಾಯಗಳಿಂದ ಸತ್ತವರು’ ಎಂಬ ಹೇಳಿಕೆಯೊಂದಿಗೆ ಕೈ ತೊಳೆದುಕೊಂಡುಬಿಡುತ್ತದೆ. ಜತೆಗೆ ಲೋರ್ಕಾನಾ ದೇಹ ಪತ್ತೆಯಾಗುವುದೇ ಇಲ್ಲ. ಲೋರ್ಕಾನನ್ನು ಕೊಂದು ಹಾಕಿದ ಜಾಗ ಸಾವಿರಾರು ಜನರ ಸಾವನ್ನು ಅರಗಿಸಿಕೊಂಡಂತೆ ಲೋರ್ಕಾನ ಸಾವನ್ನೂ ಅರಗಿಸಿಕೊಂಡು ಬಿಡುತ್ತದೆ. ನಂತರದ ವರ್ಷಗಳಲ್ಲಿ ಸ್ಪೇನಿನಲ್ಲಿ ಅಧಿಕಾರಕ್ಕೆ ಬಂದ ಸಮಾಜವಾದಿ ಸರ್ಕಾರ ‘ಲೋರ್ಕಾ ಮತ್ತು ಸಿವಿಲ್ ಯುದ್ಧದಲ್ಲಿ ಮಡಿದವರ ಸ್ಮಾರಕ’ ಎಂಬುದಾಗಿ ಆ ಜಾಗವನ್ನು ಘೋಷಿಸುತ್ತದೆ.
ಇದನ್ನು ಓದಿದ್ದೀರಾ?: ನೊಬೆಲ್ ಪುರಸ್ಕೃತ ಲ್ಯಾಟಿನ್ ಅಮೆರಿಕದ ಅಪ್ರತಿಮ ಬರಹಗಾರ ಯೋಸಾ
ನಿಜವಾದ ಲೇಖಕ ಯಾವುದೇ ಕಾರಣಕ್ಕೂ ಅಸೂಕ್ಷ್ಮವಾಗಿ ಇರಲು ಸಾಧ್ಯವಿಲ್ಲ. ಅಂತೆಯೇ ವಾಸ್ತವಕ್ಕೆ ವಿಮುಖನಾಗಿ ಇರಲು ಸಾಧ್ಯವಿಲ್ಲ ಎಂಬುದು ಲೋರ್ಕಾನ ಬಲು ದೊಡ್ಡ ನಂಬಿಕೆಯಾಗಿತ್ತು. ಅವನ ಇಂಥ ಜನಮುಖಿ ಭಾವನೆಗಳು, ಉದಾರಿ ದೃಷ್ಟಿಕೋನಗಳು ಹಾಗೂ ಕ್ರಾಂತಿಕಾರಿ ಸಮಾಜವಾದಿ ಸಂಘಟನೆಯೊಂದಿಗಿನ ನಂಟು ಮನೆಯವರನ್ನು ಚಿಂತೆಗೀಡುಮಾಡಿತ್ತು. ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಲೋರ್ಕಾನನ್ನು ಗುರಿ ಮಾಡಿತ್ತು. ಈ ಕಾರಣಕ್ಕೆ ಗ್ರನಡಾದ ಕೆಲವರಿಗೆ ಇವನು ಕಮ್ಯೂನಿಸ್ಟ್ ಥರ ಕಂಡಿದ್ದ. ಮತ್ತೆ ಕೆಲವರಿಗೆ ಲೋರ್ಕಾನ ಸಲಿಂಗಕಾಮದ ಬಗ್ಗೆ ಅಪಾರ ಸಿಟ್ಟಿತ್ತು. ಈ ಕಾರಣಕ್ಕೆ ಲೋರ್ಕಾನಿಗೆ ಇಷ್ಟ ಇರದಿದ್ದರೂ ಲೋರ್ಕಾನ ಪ್ರಾಣದ ಬೆಲೆಯನ್ನು ಮನಗಂಡಿದ್ದ ಅವನ ಹಿತೈಷಿಗಳು, ಗೆಳೆಯರು ಹಾಗೂ ಮನೆಯವರು ಲೋರ್ಕಾನನ್ನು ಅವನ ವಾರಿಗೆಯ ಹೊಸೆ ರೊಸೇಲೀಸ್ ಎಂಬ ಕವಿಯೊಬ್ಬನ ಮನೆಯಲ್ಲಿ ಅಡಗಿಸಿಡುತ್ತಾರೆ. ರಾಷ್ಟ್ರೀಯ ಪ್ರತ್ಯೇಕತಾವಾದಿಗಳು ಅದನ್ನು ಪತ್ತೆ ಹಚ್ಚಿ ಅಲ್ಲಿಗೆ ಹುಡುಕಿಕೊಂಡು ಹೋಗುತ್ತಾರೆ. ಆಗ ಹೊಸೆ ರೊಸೇಲೀಸ್ ಮನೆಯಲ್ಲಿ ಇರುವುದಿಲ್ಲ. ಅವನ ಹೆಂಡತಿ ರಾಷ್ಟ್ರೀಯ ಪ್ರತ್ಯೇಕತಾವಾದಿಗಳಿಗೆ ಕೇಳುತ್ತಾಳೆ, ‘ಯಾವ ತಪ್ಪು ಮಾಡಿದ್ದಕ್ಕಾಗಿ ನೀವು ಲೋರ್ಕಾನನ್ನು ಎಳೆದೊಯ್ಯಲು ಬಂದಿದ್ದೀರಿ?’ ಅದಕ್ಕವರು ಕೊಡುವ ಉತ್ತರ, ‘ಅವನ ಬರವಣಿಗೆ.’ ಆದರೆ ವಾಸ್ತವದಲ್ಲಿ ಅದಷ್ಟೇ ಆಗಿರುವುದಿಲ್ಲ. ಬದಲಿಗೆ ಬರವಣಿಗೆಯ ಜತೆಗೆ ಲೋರ್ಕಾಗೆ ಸಮಾಜವಾದಿ ಆಲೋಚನೆಯಲ್ಲಿ ಇದ್ದ ನಂಬಿಕೆ ಹಾಗೂ ಅವನ ಸಲಿಂಗ ಕಾಮದ ಬಗ್ಗೆ ಇದ್ದ ವದಂತಿಗಳಾಗಿರುತ್ತವೆ.
1936 ಆಗಸ್ಟ್ 16ರ ಸಂಜೆ, ಲೋರ್ಕಾನನ್ನು ಪ್ರತ್ಯೇಕತಾವಾದಿಗಳು ಎಳೆದೊಯ್ದು ಸೆರ ಇಟ್ಟಿದ್ದ ಜಾಗಕ್ಕೆ ರೊಸೇಲೀಸ್‌ಗೆ ಲೋರ್ಕಾನನ್ನು ನೋಡಲು ಪ್ರತ್ಯೇಕತಾವಾದಿಗಳು ಅವಕಾಶ ನೀಡುತ್ತಾರೆ. ಆಗ ಅವನು ಲೋರ್ಕಾನಿಗೆ ಕ್ಯಾಮೆಲ್ ಸಿಗರೇಟುಗಳಿದ್ದ ಪುಟ್ಟ ಪೆಟ್ಟಿಗೆಯೊಂದನ್ನು ಕೊಡುತ್ತಾನೆ. ಲೋರ್ಕಾ ತನ್ನ ಹೆಸರಿನಲ್ಲಿ ಫಲಾಂಜೆ ಕ್ರಾಂತಿಕಾರಿ ಸಂಘಟನೆಗೆ ಹಣ ಕೊಡುವಂತೆ ಅವನನ್ನು ಕೇಳಿಕೊಳ್ಳುತ್ತಾನೆ. ಅದೇ ಸಂಜೆ ರೋಸೇಲೀಸ್‌ನ ಪಕ್ಕದ ಮನೆಯವನೊಬ್ಬನನ್ನೂ ಲೋರ್ಕಾನನ್ನು ನೋಡಲು ಬಿಡುತ್ತಾರೆ. ಅವನು ಶ್ರೀಮತಿ ರೋಸೇಲ್ಸ್ ಕೊಟ್ಟಿದ್ದ ಕೆಲವು ರಗ್ಗುಗಳನ್ನು ನೀಡುತ್ತಾನೆ. ಅದರ ಮಾರನೆಯ ದಿನ ಅಂದರೆ, 1936 ಆಗಸ್ಟ್ 17ರಂದು ಏಂಜಲೀನಾ ಎಂಬ ಚಿಕ್ಕಂದಿನಲ್ಲಿ ಲೋರ್ಕಾನನ್ನು ನೋಡಿಕೊಂಡಿದ್ದ ದಾದಿ ಬರುತ್ತಾಳೆ. ಅವಳು ತಂದಿದ್ದ ಬುಟ್ಟಿಯಲ್ಲಿದ್ದ ಮೊಟ್ಟೆಗಳು ಹಾಗೂ ಪೊಟ್ಯಾಟೊ ಆಮ್ಲೆಟ್ಟನ್ನೂ, ಕಾಫಿ ಇದ್ದ ಫ್ಲಾಸ್ಕನ್ನೂ ಅಲ್ಲಿನ ಬಂದೂಕುಧಾರಿ ತಪಾಸಣೆ ಮಾಡಿ ಅವಳನ್ನು ಒಳಬಿಡುತ್ತಾನೆ. ಆಗ ಲೋರ್ಕಾ ಕೇಳುತ್ತಾನೆ, ‘ಅಯ್ಯೋ ಏಂಜಲೀನಾ ನೀನು ಯಾಕೆ ಬಂದೆ?’ ಅದಕ್ಕವಳು. ‘ನಿನ್ನ ಅಮ್ಮ ಕಳಿಸಿದ್ದು’ ಅನ್ನುತ್ತಾಳೆ.
ಲೋರ್ಕಾನ ಕೊಲೆಯಿಂದ ಅಪಾರ ನೋವಿಗೀಡಾಗಿದ್ದ ಕವಿ ಪ್ಯಾಬ್ಲೊ ನೆರೂಡ, ‘ಈ ಕೊಲೆಯನ್ನು ಎಂದೂ ಮರೆಯಲಾಗದು ಹಾಗೂ ಕ್ಷಮಿಸಲಾಗದು’ ಎಂಬುದಾಗಿ ಪ್ರತಿಕ್ರಿಯಿಸುತ್ತಾನೆ.
*
ಫೆಡರಿಕೊ ಗಾರ್ಸಿಯಾ ಲೋರ್ಕಾ ಹುಟ್ಟಿದ್ದು 1899ರ ಜೂನ್ 5ರಂದು ಗ್ರನಾಡಾದ ಸಮೀಪದ ಫುಯೆಂತೆಸ್‌ಕೇರೋ ಎಂಬ ಹಳ್ಳಿಯಲ್ಲಿ, ಅದು ಗ್ರನಾಡಾದಿಂದ ಹತ್ತು ಮೈಲಿ ಹಾಗೂ ಮೆಡಿಟರೇನಿಯನ್ ಸಮುದ್ರಕ್ಕೆ ಮುವ್ವತ್ತು ಮೈಲಿಗಳಷ್ಟು ದೂರದಲ್ಲಿತ್ತು. ತಂದೆ ತಾಯಂದಿನ ನಾಲ್ಕು ಮಕ್ಕಳಲ್ಲಿ ಹಿರಿಯವನು. ತಂದೆ ಫೆಡರಿಕೊ ಗಾರ್ಸಿಯಾ ರಾಡ್ರಿಗೆಝ್ ಒಬ್ಬ ಶ್ರೀಮಂತ ರೈತ. ತಾಯಿ ಡೋನ ವಿಸೆಂಟ ಲೋರ್ಕಾ ರೊಮೇರೊ ಅಲ್ಲಿನ ಸ್ಕೂಲೊಂದರಲ್ಲಿ ಶಿಕ್ಷಕಿಯಾಗಿದ್ದಳು. ಅವಳಿಗೆ ಸಂಗೀತದ ಬಗ್ಗೆ ತುಂಬಾ ಒಲವಿದ್ದುದ್ದರಿಂದ ಒಂದು ರೀತಿಯಲ್ಲಿ ಅವಳೇ ಮುಂದೆ ಅವನ ಸಂಗೀತದ ಗುರುವಾಗುತ್ತಾಳೆ. ಆದರೆ ಲೋರ್ಕಾನಿಗೆ ಅಪ್ಪನೆಂದರೆ ಪಂಚ ಪ್ರಾಣ. ನಿಜವಾದ ಅರ್ಥದಲ್ಲಿ ಅಪ್ಪನನ್ನೇ ಧ್ಯಾನಿಸಿದ. ಅಮ್ಮನನ್ನು ಪ್ರೀತಿಸಿದ.ಅಮ್ಮ ಓದಿಕೊಂಡವಳಾಗಿದ್ದರಿಂದ ಅವಳ ಬುದ್ಧಿವಂತಿಕೆಯನ್ನೂ ಅಪ್ಪ ಭಾವಜೀವಿಯಾಗಿದ್ದರಿಂದ ಅವನ ಭಾವವನ್ನೂ ತನ್ನ ವ್ಯಕ್ತಿತ್ವದಲ್ಲಿ ರೂಢಿಸಿಕೊಂಡ. ಅಪ್ಪ ಅಮ್ಮ ಇಬ್ಬರೂ ಸಂಗೀತ ಪ್ರಿಯರಾಗಿದ್ದರು. ಅಲ್ಲದೆ ಲೋರ್ಕಾನೆಗೆ ಎಂಟು ಮಂದಿ ಚಿಕ್ಕಮ್ಮ ಚಿಕ್ಕಪ್ಪಂದಿರುಗಳು ಇದ್ದರು. ಅವರೆಲ್ಲಾ ರಾತ್ರಿಯ ಹೊತ್ತು ಕಥೆಯ ಪುಸ್ತಕಗಳನ್ನು ಜೋರಾಗಿ ಓದುತ್ತಿದ್ದರು, ಇಲ್ಲವೇ ಕಥೆಗಳನ್ನು ಹೇಳುತ್ತಿದ್ದರು. ಕೆಲವೊಮ್ಮೆ ಮನೆಯವರೆಲ್ಲಾ ಒಟ್ಟಾಗಿ ಹಾಡುತ್ತಿದ್ದರು.
ಹಂಗಾಗಿ ಲೋರ್ಕಾನಿಗೆ ಸಂಗೀತ ಎಳೆವೆಯಿಂದಲೇ ಸಂಗಾತಿಯಾಗಿತ್ತು. ಜತೆಗೆ ಲೋರ್ಕಾ ಹಳ್ಳಿಯಲ್ಲಿ ಕೇಳಿಸಿಕೊಂಡಿದ್ದ ಸಂಗೀತ, ಜಾನಪದ ಹಾಡುಗಳು, ಲಾವಣಿಗಳು, ಪ್ರೇಮ ಪದ್ಯಗಳು ಮುಂದೊಂದು ದಿನ ಅವುಗಳನ್ನೆಲ್ಲಾ ಅವನು ಮರಳಿ ತನ್ನ ಕವಿತೆಗಳಿಗೆ ಕರೆ ತಂದು ಅವುಗಳನ್ನು ಲೋಕಕ್ಕೆ ಮುಖಾಮುಖಿಯಾಗಿಸಿದ. ಸಂಗೀತ ಅವನ ನುಡಿಗಟ್ಟಾಗಿತ್ತು. ನಂತರದ ದಿನಗಳಲ್ಲಿ ಲೋರ್ಕಾ ಪ್ರಖ್ಯಾತ ಜರ್ಮನ್ ಸಂಗೀತಗಾರ ಬೀಟೋವನ್‌ನನ್ನು ಬೆಂಬತ್ತತೊಡಗುತ್ತಾನೆ. ಜತೆಗೆ ಪಿಯಾನೋ ಕಲಿಯತೊಡಗುತ್ತಾನೆ. ಅವನು ಮನೆಯಲ್ಲಿ ಕೂತು ನುಡಿಸುತ್ತಿದ್ದ ಪಿಯಾನೋ ಸ್ಟೂಲ್ ಹಾಗೂ ಆ ಜಾಗ ಅವನಿಗೆ ತುಂಬಾ ಪ್ರಿಯವಾಗಿದ್ದವು.
ಅದೇ ರೀತಿ ಮಹಾನ್ ಕುತೂಹಲಿಯಾಗಿದ್ದ ಲೋರ್ಕಾನಿಗೆ ತನ್ನ ಮನೆಯ ಹತ್ತಿರದಲ್ಲೇ ಇದ್ದ ಹಳ್ಳಿಯ ಚರ್ಚಿನ ಗಂಟೆಗಳು ನೆಲದ ಎದೆಯಿಂದ ಎದ್ದು ಬರುತ್ತಿದ್ದ ಸದ್ದಿನಂತೆ ಭಾಸವಾಗುತ್ತಿದ್ದವು. ಅಪ್ಪನ ಜತೆಯಲ್ಲಿ ಹೊಲ ಗದ್ದೆಗಳಲ್ಲಿ ಸುತ್ತಾಡುತ್ತಾ, ಗೆಳೆಯರೊಂದಿಗೆ ಹಳ್ಳಿಯ ಸುತ್ತಮುತ್ತ ಅಡ್ಡಾಡುತ್ತಾ, ಅಲ್ಲಿ ಹರಿಯುತ್ತಿದ್ದ ನದಿಯ ತಡಿಯಲ್ಲಿ ನಡೆಯುತ್ತಾ ತನ್ನ ಬಾಲ್ಯವನ್ನು ಕಳೆದ ಲೋರ್ಕಾನಿಗೆ ತನ್ನ ನೆಲ ತಾನು ಕಂಡುಕೊಂಡ ಮೊದಲ ಅಚ್ಚರಿಯಾಗಿತ್ತು. ನಿರಂತರ ಸ್ಪೂರ್ತಿಯ ಸೆಲೆಯಾಗಿತ್ತು. ಆ ಹಳ್ಳಿಯ ನಡುವಲ್ಲೊಂದು ನೀರಿನ ಬುಗ್ಗೆ ಚಿಮ್ಮುತ್ತಿದ್ದುದ್ದರಿಂದ ಆ ಹಳ್ಳಿಗೆ ಫುಯೆಂತೆಸ್‌ಕೇರೋ ಎಂಬ ಹೆಸರು ಬಂದಿತ್ತು. ಫುಯೆಂತೆವಕೇರೋ ಅಂದರೆ ‘ದನಗಾಹಿಗಳ ನೀರಿನ ಚಿಲುಮೆ’ ಎಂದರ್ಥ. ಆ ಚಿಲುಮೆಯಿಂದ ಚಿಮ್ಮುತ್ತಿದ್ದ ನೀರನ್ನು ಪುಟ್ಟ ಪುಟ್ಟ ಕಾಲುವೆಗಳ ಮುಖಾಂತರ ಹರಿಸಿಕೊಂಡು ಸುತ್ತಮುತ್ತಲ ಹೊಲ ಗದ್ದೆಗಳ ನೀರಾವರಿಗೆ ಬಳಸಲಾಗುತ್ತಿತ್ತು. ಇಂಥ ಪರಿಸರದಲ್ಲಿ ಬಾಲ್ಯವನ್ನು ಕಳೆದ ಲೋರ್ಕಾ ಮಾನವ ಪರಂಪರೆ ಹಾಗೂ ಕೃಷಿ ಬದುಕಿನ ಲಯಗಳನ್ನು ಮುಂದೆ ತನ್ನ ಬರವಣಿಗೆಯಲ್ಲಿ ದಾಖಲಿಸುತ್ತಾ ಹೋಗುತ್ತಾನೆ. ತನ್ನ ಹತ್ತೊಂಭತ್ತನೆಯ ವಯಸ್ಸಿಗೇ ಬರೆಯುವ ಬದುಕಿಗೆ ಕಾಲಿಟ್ಟ ಲೋರ್ಕಾ ‘ನನ್ನ ಹಳ್ಳಿ’ ಎಂಬ ದೈನಂದಿನ ಬದುಕಿನ ವಿವರಗಳನ್ನೊಳಗೊಂಡ ಗದ್ಯ ಬರಹವನ್ನು ಬರೆದಿದ್ದ. ಮುಂದೆ ಅದನ್ನು ಲೋರ್ಕಾ ‘ಸ್ಪಟಿಕದ ಎದೆಯ ಮಬ್ಬು ನೆನಪು’ ಎಂಬುದಾಗಿ ನೆನಪಿಸಿಕೊಳ್ಳುತ್ತಾನೆ.
ಇದನ್ನು ಓದಿದ್ದೀರಾ?: ʼಸತ್ಯೊಲು – ಶ್ರಮಿಕರ ಜನಪದ ಐತಿಹ್ಯʼ; ಸತ್ಯಕ್ಕೊಂದು ಮುನ್ನುಡಿ
ಅಪಾರ ಓದುವ ಹುಚ್ಚಿದ್ದ ಲೋರ್ಕಾನಿಗೆ ಅವನ ಅಪ್ಪ ಲೋರ್ಕಾ ಸ್ಕೂಲಿಗೆ ಸೇರಿದ ಮೇಲೆ ಯಾವಾಗ ಬೇಕಾದರೂ ಹೋಗಿ ತನಗೆ ಬೇಕಾದ ಯಾವ ಪುಸ್ತಕವನ್ನಾದರೂ ಕೊಂಡುಕೊಳ್ಳುವ ಸಲುವಾಗಿ ಗ್ರನಾಡಾದ ಪುಸ್ತಕದ ಅಂಗಡಿಯೊಂದರಲ್ಲಿ ಖಾತೆಯೊಂದನ್ನು ತೆರೆಯುತ್ತಾನೆ. ಅಲ್ಲಿ ಲೋರ್ಕಾ ವೋಲ್ಟೇರನ ‘ಕಾಂಡೀಡ್’, ಡಾರ್ವಿನ್ನನ ‘ಆರಿಜಿನ್ ಆಫ್ ಸ್ಪೀಶೀಸ್’. ಶೇಕ್ಸ್ ಪಿಯರ್, ಹೇಸಿಯೋಡನ ‘ಥಿಯಾಗನಿ’, ಆಸ್ಕರ್ ವೈಲ್ಡನ ‘ಡೆ ಪ್ರೊಫಂಡಿಸ್’, ಆಗಸ್ಟೀನನ ‘ಕನ್ನೆಶನ್ಸ್’, ಭಾರತೀಯ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕಗಳು, ರವೀಂದ್ರನಾಥ ಟ್ಯಾಗೂರರ ಕಾವ್ಯ, ಉಮರ್ ಖಯಾಮ್ ಮುಂತಾದ ಲೇಖಕರ ಅಕ್ಷರ ಲೋಕ ಲೋರ್ಕಾನನ್ನು ಕಾಡತೊಡಗುತ್ತದೆ.
ಕೊಲೆಯಾಗುವುದಕ್ಕೆ ಕೆಲವು ದಿನಗಳಿಗೆ ಮುನ್ನ ಲೋರ್ಕಾ ತನ್ನ ಅಪ್ಪನಿಗೆ ಒಂದೇ ಒಂದು ಸಾಲಿನ ಪತ್ರವನ್ನು ಗೀಚುತ್ತಾನೆ. ಅದರಲ್ಲಿ ‘ಪ್ರೀತಿಯ ಅಪ್ಪ ಈ ಪತ್ರವನ್ನು ತರುವವನ ಕೈಯ್ಯಲ್ಲಿ ಒಂದಷ್ಟು ದುಡ್ಡು ಕೊಟ್ಟು ಕಳಿಸು’ ಎಂದಿರುತ್ತದೆ. ಲೋರ್ಕಾ ಕೊಲೆಯಾದ ಕೆಲವು ತಿಂಗಳ ನಂತರ ಅದು ಹೇಗೋ ಅವನ ಅಪ್ಪನ ಕೈ ಸೇರುತ್ತದೆ. ತನ್ನ ಮಗನ ಕೈ ಬರಹವನ್ನು ಬಲು ದೊಡ್ಡ ಆಸ್ತಿ ಎಂಬಂತೆ ಅದನ್ನು ಸಾಯುವವರೆಗೂ ತನ್ನ ಜತೆಯಲ್ಲೇ ಇಟ್ಟುಕೊಂಡಿರುತ್ತಾನೆ. ಮಗನ ಸಾವಿನಿಂದ ದಿಕ್ಕೆಟ್ಟ ಅಪ್ಪ ಸ್ಪೇನನ್ನು ತೊರೆದು ಅಮೆರಿಕಾದಲ್ಲಿ ನೆಲೆಸುತ್ತಾನೆ. ತನ್ನ ಮಗನ ಸಾವಿನ ಒಂಭತ್ತು ವರ್ಷಗಳ ನಂತರ ತೀರಿಕೊಳ್ಳುತ್ತಾನೆ. ತಾನು ಅಷ್ಟು ಪ್ರೀತಿಸುತ್ತಿದ್ದ ನೆಲವನ್ನು ಬಿಟ್ಟು ಹೋದ ಅವನು ಮತ್ತಿನ್ನೆಂದೂ ತನ್ನ ಮಗನಿಲ್ಲದ ಆ ಹಳ್ಳಿಗೆ ತಿರುಗಿ ಬರುವುದೇ ಇಲ್ಲ. ಅಮೆರಿಕಾದಲ್ಲಿ ಬದುಕಿದ್ದ ಅಷ್ಟೂ ವರ್ಷಗಳು ಅವನು ಇಂಗ್ಲಿಷ್ ಕಲಿಯಲಿಲ್ಲ. ಮೊಮ್ಮೊಗನೊಬ್ಬನಿಂದ ಇಂಗ್ಲಿಷ್ ಪತ್ರಿಕೆಗಳನ್ನು ಸ್ಪ್ಯಾನಿಷ್‌ಗೆ ತರ್ಜುಮೆ ಮಾಡಿಸಿಕೊಂಡು ಕೇಳಿಸಿಕೊಳ್ಳುತ್ತಿದ್ದ.
ಲೋರ್ಕಾನನ್ನು ಒಮ್ಮೆ ಪತ್ರಕರ್ತನೊಬ್ಬ ಕೇಳುತ್ತಾನೆ. ‘ನೀವು ಬರೆದಿರುವ ನಾಟಕಗಳಲ್ಲಿ ನಿಮಗೆ ತುಂಬಾ ಇಷ್ಟ ಆಗಿರುವುದು ಯಾವುದು?’ ಲೋರ್ಕಾ ಹೇಳುತ್ತಾನೆ. ‘ನಾನು ಬರೆದಿರುವ ನಾಟಕಗಳಲ್ಲಿ ತುಂಬಾ ಇಷ್ಟ ಅನ್ನುವುದು ಯಾವುದೂ ಇಲ್ಲ. ತುಂಬಾ ಇಷ್ಟ ಇರುವುದು ನಾನಿನ್ನೂ ಬರೆಯಬೇಕಾದುದರ ಬಗ್ಗೆ.’
ಲೋರ್ಕಾ ನಿಜ ಅರ್ಥದಲ್ಲಿ ‘ಜನರ ಕವಿ’ ಆಗಿದ್ದ. ಅವನ ಪ್ರಕಾರ ‘ಕಾವ್ಯ ಅನ್ನುವುದು ರಸ್ತೆಗಳಲ್ಲಿ ನಡೆದು ಬರುವಂಥದ್ದು. ಎಲ್ಲಾ ಅಂದರೆ ಎಲ್ಲಾ ಕಡೆ ಗಂಡಸರಲ್ಲಿ, ಹೆಂಗಸರಲ್ಲಿ, ನಾಯಿಯೊಂದರ ಊಹಿಸಲಾಗದ ಹಾದಿಯಲ್ಲಿ ಇರುವಂಥದ್ದು. ಕಾವ್ಯಕ್ಕೆ ಯಾವ ಮಿತಿಗಳೂ ಇಲ್ಲ… ನಾವು ದಣಿದು ಬಂದಾಗ ಬೆಳಕರಿಯುವ ಮುಂಚಿನ ಹೊತ್ತಲ್ಲಿ ನಮ್ಮ ಮನೆಯ ಮುಂಬಾಗಿಲಿನಲ್ಲಿ ಕಾವ್ಯ ನಮಗಾಗಿ ಕಾಯುತ್ತಿರಬಹುದು. ಅದು ನೀರಿನ ಬುಗ್ಗೆಯಲ್ಲಿ, ಆಲೀವ್ ಮರದ ತುದಿಯಲ್ಲಿ ಕೂತ ಹೂವಿನಲ್ಲಿ, ಮನೆಯ ಮಾಡಿನ ಮೇಲೆ ನಾವು ಒಗೆದು ಒಣಾಕಿರುವ ಬಟ್ಟೆಗಳಲ್ಲಿ ನಮಗಾಗಿ ಕಾಯುತ್ತಿರಬಹುದು. ಆದರೆ ಅಂಗಡಿಗೆ ಏನನ್ನೋ ಕೊಳ್ಳಲು ಹೋದವರ ರೀತಿ ಲೆಕ್ಕಾಚಾರದಲ್ಲಿ ಕಾವ್ಯ ಬರೆಯಲು ಕೂರುವುದನ್ನು ಮಾತ್ರ ನಾವು ಮಾಡಬಾರದು.’
‘ಈ ಕವಿ ಯಾರ ಎರಕದಿಂದಲೂ ಬಂದವನಾಗಿರಲಿಲ್ಲ. ಕಾವ್ಯವನ್ನು ಜಾನಪದ ಸರಳತೆ, ಮುಗ್ಧತೆ ಮತ್ತು ಹಾಡುಗಾರಿಕೆಗೆ ಹಿಂದಿರುಗಿಸುತ್ತಿದ್ದಂತೆ, ಮಹಾ ರೊಮ್ಯಾಂಟಿಕ್ ಭಾವೋದ್ವೇಗದವನಂತೆ ಕಾಣುತ್ತಿದ್ದ ಲೋರ್ಕಾ ಅಚ್ಚರಿ ಹುಟ್ಟಿಸುವ ರೀತಿಯಲ್ಲಿ ಕಾವ್ಯಕ್ಕೆ ಪರೋಕ್ಷ ನಿರೂಪಣೆ, ಸಾಂಕೇತಿಕ ದೃಷ್ಟಿ ತಂದಿದ್ದ. ಆತನ ಕಾವ್ಯ ಆಧುನಿಕ ಜಗತ್ತಿನ ರಾಜಕೀಯ ಸಂಘರ್ಷಗಳನ್ನು ಸೂಚಿಸುತ್ತಲೇ ಕವಿಯ ಖಾಸಗಿ ದುಃಖವನ್ನೂ ಮಂಡಿಸಿತು. ಪಿಕಾಸೊ ಮತ್ತು ಡಾಲಿಯ ಸರಿಯಲಿಸ್ಟಿಕ್ ಗ್ರಹಿಕೆಗಳು ಮತ್ತು ಅಬ್ಸರ್ಡ್ ನಾಟಕಗಳ ಅಸಂಗತ ರೂಪಕಗಳು, ನವ್ಯ ಕವಿಗಳ ಸಂಕೀರ್ಣ ಸೃಷ್ಟಿಗಳು… ಎಲ್ಲವನ್ನೂ ಒಳಗೊಂಡ ಲೋರ್ಕಾ ಕಾವ್ಯ ಮತ್ತು ನಾಟಕ ಇಪ್ಪತ್ತನೆಯ ಶತಮಾನದ ಅಚ್ಚರಿಗಳು’ ಎಂಬ ಪಿ.ಲಂಕೇಶ್‌ರ ಮಾತುಗಳು ಲೋರ್ಕಾನ ದೈತ್ಯ ಪ್ರತಿಭೆಗೆ ಸಾಕ್ಷಿಯಾಗಿವೆ.
(ಲೋರ್ಕಾ ನಾಲ್ಕು ನಾಟಕಗಳು ಕೃತಿಗೆ ಎಸ್.ಗಂಗಾಧರಯ್ಯ ಬರೆದ ಮುನ್ನುಡಿಯ ಆಯ್ದ ಭಾಗ)
