ತನ್ನ 14 ವರ್ಷದ ಮಗಳ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಬಳಿಯ ಬಿಬ್ವೆವಾಡಿಯಲ್ಲಿ ಘಟನೆ ನಡೆದಿದೆ. 89ನೇ ತರಗತಿಯ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ತಾಯಿ ಮತ್ತು ಆಕೆಯ ಸ್ನೇಹಿತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದೇ ವರ್ಷದ ಜನವರಿಯಲ್ಲಿ ಬಾಲಕಿಯ ಚಿಕ್ಕಮ್ಮನಿಗೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿವೆ. ಬಳಿಕ, ಅವರು ಬಾಲಕಿಯ ಗಮನಕ್ಕೆ ತಂದಿದ್ದಾರೆ. ಈ ಕೃತ್ಯವನ್ನು ತನ್ನ ತಾಯಿಯೇ ಮಾಡಿದ್ದಾರೆ ಎಂಬುದನ್ನು ಅರಿತ ಬಾಲಕಿ, ಬಿಬ್ವೆವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. “ತಾನು ಸ್ನಾನ ಮಾಡುವಾಗ ಮತ್ತು ಬಟ್ಟೆ ಬದಲಿಸುವಾಗ ನನ್ನ ತಾಯಿ ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋಗಳನ್ನು ಸಂಬಂಧಿಕರೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಹರಿಬಿಟಿದ್ದಾರೆ” ಎಂದು ದೂರಿನಲ್ಲಿ ಬಾಲಕಿ ಆರೋಪಿಸಿದ್ದರು.
ತನ್ನ ತಾಯಿಯ ವಿವಾಹೇತರ ಸಂಬಂಧದ ಬಗ್ಗೆ ಬಾಲಕಿಗೆ ತಿಳಿದಿತ್ತು. ಈ ಬಗ್ಗೆ ಮನೆಯವರಿಗೆ ಹೇಳಿದ್ದರು. ಆ ಕಾರಣಕ್ಕಾಗಿ, ಆಕೆಯ ತಾಯಿ ಇಂಥಹ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.
ದೂರು ಸ್ವೀಕರಿಸಿದ ಪೊಲೀಸರು ವೀಡಿಯೊಗಳು ಮತ್ತು ಅವುಗಳನ್ನು ಅಪ್‌ಲೋಡ್ ಮಾಡಿದ ವೆಬ್‌ಸೈಟ್‌ಗಳ ವಿವರಗಳನ್ನು ಪರಿಶೀಲಿಸಿದ್ದಾರೆ. ವಿಡಿಯೋಗಳನ್ನು ವೆಬ್‌ಸೈಟ್‌ಗಳಿಂದ ಅಳಿಸಿಹಾಕಲು ಕ್ರಮ ಕೈಗೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಜಾತಿಗಣತಿ ವರದಿ ವಿರೋಧಿಸುತ್ತಿರುವ ಜಾತಿವಾದಿ ಲಿಂಗಾಯತರು
“ತನ್ನ ಮಗಳು ತನ್ನ ವಿವಾಹೇತರ ಸಂಬಂಧವನ್ನು ಬಹಿರಂಗಪಡಿದ್ದರಿಂದ ಮಹಿಳೆ ಕುಪಿತಗೊಂಡಿದ್ದರು. ಆದೇ ಸಿಟ್ಟಿನಲ್ಲಿ ತನ್ನ ಮಗಳ ಖಾಸಗಿ ದೇಶ್ಯಗಳನ್ನು ಚಿತ್ರೀಕರಿಸಿ ವೀಡಿಯೊಗಳನ್ನು ಇತರರೊಂದಿಗೆ ಹಂಚಿಕೊಂಡಿದ್ದರು. ಆಕೆ ವಿಡಿಯೋ ಹಂಚಲು ಆಕೆಯ ಸ್ನೇಹಿತ ಸಹಾಯ ಮಾಡಿದ್ದು, ಸ್ನೇಹಿತನನ್ನೂ ಬಂಧಿಸಿದ್ದೇವೆ” ಎಂದು ಬಿಬ್ವೆವಾಡಿ ಹಿರಿಯ ಇನ್ಸ್‌ಪೆಕ್ಟರ್ ಶಂಕರ್ ಸಾಲುಂಕೆ ಹೇಳಿದ್ದಾರೆ.
“ಪ್ರಕರಣವನ್ನು ತನಿಖೆ ನಡೆಸಿದಾಗ ಬಾಲಕಿಯ ತಾಯಿಯ ಸೆಲ್‌ಫೋನ್‌ನಿಂದ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಮತ್ತು ಅದೇ ಫೋನ್‌ನಿಂದ ಅಪ್‌ಲೋಡ್ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿ ತಾಯಿ ಪರಾರಿಯಾಗಿದ್ದರು. ಆಕೆಗಾಗಿ ಹಲವೆಡೆ ಹುಡುಕಾಟ ನಡೆಸಿ, ಶನಿವಾರ ಬಂಧಿಸಿದ್ದೇವೆ. ನಾವು ಆಕೆಯ ಸೆಲ್‌ಫೋನ್ಅನ್ನು ವಶಕ್ಕೆ ಪಡೆದಿದ್ದೇವೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ” ಎಂದು ಬಿಬ್ವೆವಾಡಿ ಪೊಲೀಸರ ಸಬ್ ಇನ್ಸ್‌ಪೆಕ್ಟರ್ ಅಶೋಕ್ ಯೆವಾಲೆ ಹೇಳಿದ್ದಾರೆ.