ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಜುಲೈ 3ಕ್ಕೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಮಂತ್ರಿಮಂಡಲದ ಸಭೆ ಕರೆದಿದ್ದು, ಸಂಪುಟ ಪುನಾರಚನೆ ಆಗುವ ಸಾಧ್ಯತೆಯಿದೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಹತ್ವದ ಮಾತುಕತೆ ನಡೆಸಿದ್ದಾರೆ. ಸೆಪ್ಟೆಂಬರ್ನಲ್ಲಿ ಜಿ20 ಶೃಂಗಸಭೆಯನ್ನು ಆಯೋಜಿಸುವ ನವದೆಹಲಿಯ ಪ್ರಗತಿ ಮೈದಾನದಲ್ಲಿರುವ ಕನ್ವೆಷನ್ ಸಭಾಂಗಣದಲ್ಲಿ ಮಂತ್ರಿ ಮಂಡಲ ಸಭೆ ನಡೆಯಲಿದೆ. ಜುಲೈ 3ನೇ ವಾರದಿಂದ ಮಳೆಗಾಲದ ಅಧಿವೇಶನ ಆರಂಭಗೊಳ್ಳಲಿದೆ. ಇದಕ್ಕೂ ಮೊದಲು ಕೇಂದ್ರ ಸಂಪುಟ ಪುನಾರಚನೆ ಆಗುವ ಸಾಧ್ಯತೆ ಇದೆ.
ಚುನಾವಣೆ ದೃಷ್ಟಿಯಿಂದ ಕೆಲ ಪ್ರಮುಖ ನಾಯಕರಿಗೆ ಮಣೆಹಾಕಲು ಕೇಂದ್ರ ಮುಂದಾಗಿದೆ. ಹೀಗಾಗಿ ಯಾರಿಗೆ ಕೊಕ್, ಯಾರಿಗೆ ಸಚಿವನ ಸ್ಥಾನ ಸಿಗಲಿದೆ ಅನ್ನುವ ಚರ್ಚೆ ಕೂಡ ಪಕ್ಷದ ವಲಯದಲ್ಲಿ ಹರಿದಾಡುತ್ತಿದೆ. ಲೋಕಸಭಾ ಚುನಾವಣೆ ಜೊತೆಯಲ್ಲೇ ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ, ಛತ್ತೀಸಘಡ ರಾಜ್ಯದ ವಿಧಾನಸಭಾ ಚುನಾವಣೆಗಳೂ ನಡೆಯಲಿದೆ. ಹೀಗಾಗಿ ಬಿಜೆಪಿ ಚುನಾವಣೆ ತಂತ್ರದ ಜೊತೆಗೆ ಸಂಪುಟ ವಿಸ್ತರಣೆಗೂ ಮುಂದಾಗಿದೆ.
ಈ ಸುದ್ದಿ ಓದಿದ್ದೀರಾ? ಮುಂದಿನ ಪ್ರತಿಪಕ್ಷಗಳ ಮಹಾಸಭೆ ಬೆಂಗಳೂರಿನಲ್ಲಿ ಆಯೋಜನೆ: ಶರದ್ ಪವಾರ್
ಹಿಮಾಚಲ ಪ್ರದೇಶ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ, ಸಂಪುಟ ಪುನಾರಚನೆ ಮೂಲಕ ಎಚ್ಚರಿಕೆ ಹೆಜ್ಜೆಯಿಡಲು ಮುಂದಾಗಿದೆ.
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಲೋಕಸಭೆ ಚುನಾವಣೆಗೂ ಮುನ್ನ ಏಕರೂಪ ನೀತಿ ಸಂಹಿತೆ ಜಾರಿಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದರು. ಏಕರೂಪ ನಾಗರಿಕ ಸಂಹಿತೆ ಪರ ಸುಪ್ರೀಂ ಕೋರ್ಟು ಒಲವು ತೋರಿದೆ. ಆದರೆ ಮತ ಬ್ಯಾಂಕ್ ರಾಜಕೀಯದ ಕಾರಣ ವಿಪಕ್ಷಗಳು ಮುಸ್ಲಿಮರ ದಾರಿ ತಪ್ಪಿಸಿ ಪ್ರಚೋದಿಸುತ್ತಿವೆ ಎಂದು ಹೇಳಿದ್ದರು.
ಮೋದಿಯವರ ಧರ್ಮ ರಾಜಕಾರಣದ ನೀತಿಯನ್ನು ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಖಂಡಿಸಿದ್ದರು.