ಜನಿವಾರ ಬ್ರಾಹ್ಮಣರ ಉಪನಯನದ ಬಳಿಕ ಧರಿಸುವ ಶ್ರೇಷ್ಠ ದಾರ. ಅದನ್ನ ಒಮ್ಮೆ ಧರಿಸಿದ ಮೇಲೆ ಮತ್ತೊಮ್ಮೆ ತೆಗೆಯುವಂತಿಲ್ಲ. ಜನಿವಾರ ಹಳೆಯದಾದ ಬಳಿಕ ಹೊಸತನ್ನು ಹಾಕಿದ ಬಳಿಕವಷ್ಟೇ ಹಳೆಯದನ್ನು ತೆಗೆಯುತ್ತೇವೆ. ಹೀಗಿರುವಾ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಿರುವುದು, ವಿದ್ಯಾರ್ಥಿಯನ್ನು ಪರೀಕ್ಷೆಯಿಂದ ಹೊರಗುಳಿಯುವಂತೆ ಮಾಡಿರುವುದು ಖಂಡನೀಯ ಎಂದು ಜಿಲ್ಲಾ ಬ್ರಾಹ್ಮಣ ಮಹಾಸಭಾದ ಪ್ರತಿನಿಧಿ ನಾಗಭೂಷಣ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿವಮೊಗ್ಗ ಜನಿವಾರ ತೆಗೆಯದ ಕಾರಣ ವಿದ್ಯಾರ್ಥಿ ಪರೀಕ್ಷೆ ಬರೆದಿಲ್ಲ ಮತ್ತು ಬೀದರ್ ನಲ್ಲಿ ಜನಿವಾರ ತೆಗೆಸಿ ಕಸದಬುಟ್ಟಿಗೆ ಹಾಕಲಾಗಿದೆ. ಇದು ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಅಪಮಾನ. ಇದನ್ನು ಬ್ರಾಹ್ಮಣ ಸಮುದಾಯ ಎಂದಿಗೂ ಒಪ್ಪುವುದಿಲ್ಲ. ಕೂಡಲೇ ವಿದ್ಯಾರ್ಥಿ ಸುಚಿವ್ರತ್ ಎಂಬಾತನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ, ಆತನ ಮುಂದಿನ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ನಮ್ಮ ಆಂತರಿಕ ವರದಿಯ ಪ್ರಕಾರ ರಾಜ್ಯದಲ್ಲಿ ಸುಮಾರು 45 ಲಕ್ಷ ಬ್ರಾಹ್ಮಣರ ಜನಸಂಖ್ಯೆ ಇದೆ. ಆದರೆ, ಸರಕಾರ ಜಾತಿ ಗಣತಿಯ ಪ್ರಕಾರ ಶೇ.2.8ರಷ್ಟಿದೆ ಎಂದಿರುವುದು ಸರಿಯಲ್ಲ. ಸಮೀಕ್ಷೆಯಲ್ಲಿ ತಪ್ಪಾಗಿದೆ. ಹಾಗಾಗಿ ಸರಕಾರ ಮತ್ತೊಮ್ಮೆ ಸಮೀಕ್ಷೆ ನಡೆಸುವ ಮೂಲಕ ಜಾತಿ ಗಣತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಪ್ರಕಾಶ್ ಮಾತನಾಡಿ, ಶಿವಮೊಗ್ಗದಲ್ಲಿ ಕೆಇಎ ಅಧಿಕಾರಿಗಳು ಎಡವಟ್ಟಿನಿಂದ ಬಡ ವಿದ್ಯಾರ್ಥಿಗೆ ಅನ್ಯಾಯವಾಗಿದೆ. ಜನಿವಾರ ತೆಗೆಸಿರುವುದು ಸರಿಯಲ್ಲ. ಪರೀಕ್ಷಾ ಕೇಂದ್ರದಲ್ಲಿ ಏನನ್ನು ಧರಿಸಬೇಕು ಎಂಬುದರ ಕುರಿತು ಸರಕಾರ ಸಮಿತಿ ರಚಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ : ಬ್ರಾಹ್ಮಣ ಮಹಿಳೆಯರು ಜನಿವಾರ ಧರಿಸುವುದಿಲ್ಲ – ಅವರೂ ಶೂದ್ರರೇ: ಭಗವಾನ್
ರಾಜ್ಯದಲ್ಲಿ ಶೇ.15-20ರಷ್ಟು ಮಾತ್ರ ಜಾತಿ ಗಣತಿ ಸಮೀಕ್ಷೆ ಆಗಿದೆ. ಆದ್ದರಿಂದ, ಸರಿಯಾದ ಜಾತಿಗಣತಿ ನಡೆಸುವ ಮೂಲಕ ಎಲ್ಲಾ ಸಮದಾಯಗಳಿಗೂ ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಾಧ್ಯಕ್ಷರ ಹೇಳಿರುವಂತೆ ಇಡೀ ರಾಜ್ಯಾದ್ಯಂತ ಬ್ರಾಹ್ಮಣರು ಬೀದಿಗಿಳಿದು ದೊಡ್ಡಮಟ್ಟದ ಹೋರಾಟ ಮಾಡುತ್ತೇವೆ ಎಂದು ಕಿಡಿಕಾರಿದರು.
ಇದೇ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಬ್ರಾಹ್ಮಣ ಸಮಾಜದ ಮುಖಂಡರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರಮೇಶ್, ಚಿಂತಾಮಣಿ ರಮೇಶ್, ತಾಲೂಕು ಅಧ್ಯಕ್ಷ ಕೃಷ್ಣಪ್ಪ, ಅನುಪಮಾ, ಶಾರದ, ಉಮಾಶಂಕರ್ ಹಾಗೂ ಇತರರಿದ್ದರು.