ನನ್ನನ್ನ ಸರಕಾರ ಕೂಡಲೇ ಅಧಿಕಾರದಿಂದ ಕೆಳಗಿಳಿಸಿದರೂ ಚಿಂತೆಯಿಲ್ಲ. ನನಗೆ ಸ್ವಜಾತಿ ಹಿತ ಮುಖ್ಯ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಯಲುವಹಳ್ಳಿ ರಮೇಶ್ ಕಿಡಿಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ವೈಯಕ್ತಿಕ ವರ್ಚಸ್ಸಿನಿಂದಷ್ಟೇ ಸರಕಾರ ನನಗೆ ಅಧ್ಯಕ್ಷ ಸ್ಥಾನ ಕೊಟ್ಟಿರುವುದು. ನಾವು ಮಾಡಿರುವ ಉತ್ತಮ ಕಾರ್ಯಕ್ರಮಗಳಿಂದ ಸರಕಾರ ನನಗೆ ಅಧಿಕಾರ ಕೊಟ್ಟಿದೆ. ಇದೀಗ ಅಧಿಕಾರ ಹೋದರೂ ಅಡ್ಡಿಯಿಲ್ಲ ಎಂದು ಹೇಳಿದರು.
ಸರಕಾರ ನಡೆಸಿರುವ ಜಾತಿ ಗಣತಿ ಸಂಪೂರ್ಣ ಅಪೂರ್ಣವಾಗಿದೆ. ಇಡೀ ರಾಜ್ಯಾದ್ಯಂತ ಸುಮಾರು 1 ಕೋಟಿ ಒಕ್ಕಲಿಗ ಜನಸಂಖ್ಯೆಯಿದೆ. ಸರಕಾರದ ಜಾತಿಗಣತಿಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಬಾರೀ ಅನ್ಯಾಯ ಆಗಿದೆ. ಕಾಂತರಾಜ್ ವರದಿಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗಿರುವುದು ಬೆಳಕಿಗೆ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗಳು ಸೇರಿ ಶೇ.90ರಷ್ಟು ಮರುಸ್ ಒಕ್ಕಲಿಗ ಸಮುದಾಯ ಇದೆ. ಒಕ್ಕಲಿಗ ಸಂಘ ನಡೆಸಿರುವ ಆಂತರಿಕ ವರದಿಯ ಪ್ರಕಾರ ಇದುವರೆಗೆ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 70 ಸಾವಿರ ಜನ 18ವರ್ಷಕ್ಕೆ ಮೇಲ್ಪಟ್ಟವರು ಸದಸ್ಯತ್ವ ಪಡೆದುಕೊಂಡಿದ್ದಾರೆ. ಹೀಗಿರುವಾಗ ಸರಕಾರದ ವರದಿಯಲ್ಲಿ ಅತೀ ಕಡಿಮೆ ಜನಸಂಖ್ಯೆಯನ್ನು ತೋರಿಸಲಾಗಿದೆ ಎಂದು ದೂರಿದರು.
2011ರಲ್ಲಿ ಜಾತಿಗಣತಿ ನಡೆದಿತ್ತು. ಬಳಿಕ 2021ರಲ್ಲಿ ಜಾತಿಗಣತಿ ನಡೆಯಬೇಕಿತ್ತು. ಆದರೆ ನಡೆದಿಲ್ಲ. ಕಾಂತರಾಜ್ ವರದಿಯನ್ನು ನಮ್ಮ ಸಮುದಾಯ ಸಂಪೂರ್ಣ ಬಹಿಷ್ಕರಿಸುತ್ತದೆ. ಆಧಾರ್ ಕಾರ್ಡ್ ಬಳಸಿ ಜಿಯೋ ಟ್ಯಾಗ್ ಬಳಸಿ ಸರಕಾರ ಮತ್ತೊಮ್ಮೆ ಮರು ಜಾತಿಸಮೀಕ್ಷೆ ನಡೆಸಲಿ. ಎಸಿ ಕಚೇರಿಯಲ್ಲಿ ಕುಳಿತು ಸಮೀಕ್ಷೆ ನಡೆಸಿದರೆ ಅದು ಸರಿಯಾದ ಕ್ರಮವಲ್ಲ. ಅದನ್ನು ನಾವು ಒಪ್ಪುವುದಿಲ್ಲ. ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿ. ಈ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಿ ಎಂದು ಆಗ್ರಹಿಸಿದರು.
ಇದನ್ನೂ ಓದಿ : ಜಾತಿಗಣತಿ ವರದಿ ವಿರೋಧಿಸುತ್ತಿರುವ ಜಾತಿವಾದಿ ಲಿಂಗಾಯತರು
ಮೇ 2ರಂದು ಮತ್ತೊಂದು ವಿಶೇಷ ಸಂಪುಟ ಸಭೆ ನಡೆಯಲಿದೆ ಎಂದು ವರದಿಯಾಗಿದೆ. ಅಂದು ಸರಕಾರ ಸರಿಯಾದ ತೀರ್ಮಾನ ಕೈಗೊಳ್ಳದಿದ್ದರೆ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಒಗ್ಗೂಡಿ ಉಗ್ರ ಹೋರಾಟ ನಡೆಸಲಿದ್ದೇವೆ. ಸರಕಾರ ಇನ್ನೂ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್, ಕೃಷ್ಣಪ್ಪ, ಗಂಗಾಧರ್, ಜನಾರ್ಧನ್ ಹಾಗೂ ಇತರರು ಹಾಜರಿದ್ದರು.