ಡ್ರಗ್ಸ್ ಬಳಕೆ ಆರೋಪದಲ್ಲಿ ಕೇರಳದ ಕೊಚ್ಚಿ ನಗರ ಪೊಲೀಸರು ಶನಿವಾರ ಮಲಯಾಳಂ ಚಲನಚಿತ್ರ ನಟ ಶೈನ್ ಟಾಮ್ ಚಾಕೊ ಅವರನ್ನು ಬಂಧಿಸಿದ್ದಾರೆ. 2015ರ ಕೊಕೇನ್ ಪ್ರಕರಣದಲ್ಲಿ ಇತ್ತೀಚೆಗೆ ಚಾಕೊ ಖುಲಾಸೆಗೊಂಡಿದ್ದರು. ಚಾಕೊ ವಿರುದ್ಧದ ಎರಡನೇ ಡ್ರಗ್ಸ್ ಬಳಕೆ ಪ್ರಕರಣ ಇದಾಗಿದೆ.
ಎನ್‌ಡಿಪಿಎಸ್ ಕಾಯ್ದೆಯ ಸೆಕ್ಷನ್ 27 (ಮಾದಕ ವಸ್ತು ಸೇವನೆ) ಮತ್ತು 29 (ಮಾದಕ ವಸ್ತು ದುರುಪಯೋಗಕ್ಕೆ ಸಂಚು) ಅಡಿಯಲ್ಲಿ ಚಾಕೊ ಅವರನ್ನು ಬಂಧಿಸಲಾಗಿದೆ ಎಂದು ಕೊಚ್ಚಿ ನಗರ ಪೊಲೀಸರು ತಿಳಿಸಿದ್ದಾರೆ. ಚಾಕೊ ಸಂದೇಶಗಳು ಮತ್ತು ಡಿಜಿಟಲ್ ಪಾವತಿ ವಿವರಗಳನ್ನು ಪೊಲೀಸರು ಪರಿಶೀಲಿಸಿದಾಗ ಅವರು ಡ್ರಗ್ಸ್ ಮಾರಾಟಗಾರರೊಂದಿಗೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ತನಿಖೆಗೆಂದು ಕೇರಳಕ್ಕೆ ಹೋಗಿದ್ದ ಕರ್ನಾಟಕ ಪೊಲೀಸರ ಬಂಧನ!
ಬುಧವಾರ ರಾತ್ರಿ ಕೊಚ್ಚಿಯಲ್ಲಿರುವ ಅವರ ಹೋಟೆಲ್‌ನಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ಚಾಕೊ ತಪ್ಪಿಸಿಕೊಂಡಿದ್ದರು. ಹೋಟೆಲ್‌ನಲ್ಲಿನ ಸಿಸಿಟಿವಿಯಲ್ಲಿ ಚಾಕೊ ಹೋಟೆಲ್‌ನಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. ಅಲ್ಲಿಯೇ ಡ್ರಗ್ಸ್ ಮಾರಾಟಗಾರ ಇದ್ದ ಎಂದು ಶಂಕಿಸಲಾಗಿದೆ. ನಂತರ, ಪೊಲೀಸರು ಚಾಕೊಗೆ ನೋಟಿಸ್ ನೀಡಿದ್ದು, ಶನಿವಾರ ಪೊಲೀಸರ ಮುಂದೆ ಹಾಜರಾದ ನಟನ ಬಂಧನ ಮಾಡಲಾಗಿದೆ.
ಮಲಯಾಳಂ ನಟಿ ವಿನ್ಸಿ ಅಲೋಶಿಯಸ್, ಚಲನಚಿತ್ರ ನಟರ ಸಂಘವಾದ ಮಲಯಾಳಂ ಮೂವಿ ಆರ್ಟಿಸ್ಟ್ಸ್ ಅಸೋಸಿಯೇಷನ್ (AMMA) ಗೆ ದೂರು ನೀಡಿದ ನಂತರ ಈ ಪ್ರಕರಣ ಮುನ್ನಲೆಗೆ ಬಂದಿದೆ. ಚಾಕೊ ಅವರು ಡ್ರಗ್ಸ್ ಸೇವಿಸಿ ಸಿನಿಮಾ ಚಿತ್ರೀಕರಣದ ವೇಳೆ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
