ಕರ್ನಾಟಕದ ಜಾತಿ ಜನಗಣತಿ | ವಿವಾದಿತ ದತ್ತಾಂಶ ಏನನ್ನು ಹೇಳುತ್ತದೆ?

Date:

Advertisements

ಈ ಸಮೀಕ್ಷೆಯು ರಾಜ್ಯದ ಜನಸಂಖ್ಯಾಶಾಸ್ತ್ರೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಭೂದೃಶ್ಯವನ್ನು ನಕಾಶೆಯೊಂದರಲ್ಲಿ ಹಿಡಿದಿಡಲು ಯತ್ನಿಸಿದೆ. 1.35 ಕೋಟಿಗೂ ಹೆಚ್ಚು ಮನೆಗಳ 5.98 ಕೋಟಿ ಜನರನ್ನು ಮಾತನಾಡಿಸಿದೆ. 51 ಮಾನದಂಡಗಳನ್ನು ಹೊಂದಿದ್ದ 54 ಪ್ರಶ್ನೆಗಳಿಗೆ ಉತ್ತರಗಳನ್ನು ಸಂಗ್ರಹಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಯ ಮಟ್ಟವನ್ನು ಅಳೆಯಲು ಪ್ರತ್ಯೇಕ ಅರ್ಜಿ ನಮೂನೆಗಳನ್ನು ಬಳಸಲಾಗಿದೆ.

ಸಮೀಕ್ಷೆಯು ರಾಜ್ಯದ ಜನಸಂಖ್ಯಾಶಾಸ್ತ್ರೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಭೂದೃಶ್ಯವನ್ನು ನಕಾಶೆಯೊಂದರಲ್ಲಿ ಹಿಡಿದಿಡಲು ಯತ್ನಿಸಿದೆ. 1.35 ಕೋಟಿಗೂ ಹೆಚ್ಚು ಮನೆಗಳ 5.98 ಕೋಟಿ ಜನರನ್ನು ಮಾತನಾಡಿಸಿದೆ. 51 ಮಾನದಂಡಗಳನ್ನು ಹೊಂದಿದ್ದ 54 ಪ್ರಶ್ನೆಗಳಿಗೆ ಉತ್ತರಗಳನ್ನು ಸಂಗ್ರಹಿಸಿದೆ.

2015ರ ಕರ್ನಾಟಕ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು, ರಾಜ್ಯದ ಪ್ರಮುಖ ಜಾತಿಗಳನ್ನು ಒಳಗೊಂಡಂತೆ ಜನಸಂಖ್ಯಾ ದತ್ತಾಂಶದಲ್ಲಿ ನಿಖರತೆಯ ಕೊರತೆಯನ್ನು ಆರೋಪಿಸಿ ತೀವ್ರ ರಾಜಕೀಯ ಚರ್ಚೆಯನ್ನು ಬಡಿದೆಬ್ಬಿಸಿದೆ.  ದಶಕದ ಹಿಂದೆ ನಡೆಸಲಾದ ಸಮೀಕ್ಷೆಯ ವರದಿಯನ್ನು ಮೊನ್ನೆ ಮೊನ್ನೆ ಸಚಿವ ಸಂಪುಟದ ಮುಂದಿಡಲಾಗಿತ್ತು. 1,300 ಕ್ಕೂ ಹೆಚ್ಚು ಜಾತಿಗಳ ವಿವರ ದತ್ತಾಂಶ ಆಧರಿಸಿರುವ ಈ ವರದಿಯು ಇತರೆ ಹಿಂದುಳಿದ ಜಾತಿಗಳ ಮೀಸಲಾತಿಯನ್ನು ಶೇ. 51 ಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ. ಈ ವರದಿಯು ಅವೈಜ್ಞಾನಿಕ ಎಂಬ ಟೀಕೆಗೂ ಒಳಗಾಗಿದೆ. ವರದಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿರುವುದೇ ಅಲ್ಲದೆ ಕಸದ ಬುಟ್ಟಿಗೆ ಎಸೆಯುವಂತೆ ಆಗ್ರಹಪಡಿಸಲಾಗಿದೆ. ಆದರೆ ಆಯೋಗದ ಈ ಹಿಂದಿನ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ್ ಈ ಟೀಕೆಯನ್ನು ಒಪ್ಪುವುದಿಲ್ಲ. ಮೀಸಲಾತಿ ಮಾತ್ರವಲ್ಲದೆ ಸಮಾನತೆಯ ನೀತಿಗಳನ್ನು ರೂಪಿಸಲು ನಿರ್ಣಾಯಕ ಸಾಧನವೆಂದು ಈ ವರದಿಯನ್ನು ಬಣ್ಣಿಸಿದ್ದಾರೆ.

Advertisements

2015ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ್ ಅವರ ನೇತೃತ್ವದಲ್ಲಿ ನಡೆಸಲಾದ ಈ ಸಮೀಕ್ಷೆ ಆಂತರಿಕ ಮತಭೇದಗಳು ಮತ್ತು ಜಾತಿ-ಆಧಾರಿತ ಮೀಸಲಾತಿಯ ಕುರಿತು ರಾಜ್ಯದಲ್ಲಿ ರಾಜಕೀಯ ಬಿಗುವನ್ನು ಹುಟ್ಟಿಹಾಕಿದೆ. 

ಈ ವರದಿಯನ್ನು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲವಾದರೂ, ‘ಸೌತ್ ಫರ್ಸ್ಟ್’ ಸುದ್ದಿ ಸಂಸ್ಥೆಯು ಸೋರಿಕೆಯಾಗಿರುವ ವರದಿಯ ಪ್ರತಿಯನ್ನು ಪರಿಶೀಲಿಸಿ, ಅದರ ವಿವಾದಾತ್ಮಕ ಅಂಶಗಳು ಮತ್ತು ಶಿಫಾರಸುಗಳನ್ನು ವಿಶ್ಲೇಷಿಸಿದೆ.

ಈ ಸಮೀಕ್ಷೆಯು ರಾಜ್ಯದಲ್ಲಿ ಕೈಗೊಳ್ಳಲಾದ ಅತ್ಯಂತ ವ್ಯಾಪಕ ದತ್ತಾಂಶ ಸಂಗ್ರಹಣೆಯ ಚಟುವಟಿಕೆಗಳಲ್ಲೊಂದು. 1995ರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯಿದೆಯ ಸೆಕ್ಷನ್ 9(1) ರಿಂದ ಈ ಆಯೋಗ ಅಧಿಕಾರ ಪಡೆದಿದೆ. ಹಿಂದುಳಿದ ವರ್ಗಗಳ ಸ್ಥಿತಿಗತಿಯ ಮೌಲ್ಯಮಾಪನ ಮತ್ತು ಮೀಸಲಾತಿ ನೀತಿಗಳ ಬದಲಾವಣೆಗೆ ಶಿಫಾರಸು ಮಾಡುವ ಅಧಿಕಾರವನ್ನು ಈ ಕಾಯಿದೆಯು ಆಯೋಗಕ್ಕೆ ನೀಡುತ್ತದೆ. ಸೆಕ್ಷನ್ 11 ರ ಅಡಿಯಲ್ಲಿ, ಮೀಸಲಾತಿ ಪಡೆದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪ್ರತಿ ಹತ್ತು ವರ್ಷಗಳಿಗೊಮ್ಮೆ ಮರುಪರಿಶೀಲಿಸಬಹುದು.

ಈ ಸಮೀಕ್ಷೆಯು ರಾಜ್ಯದ ಜನಸಂಖ್ಯಾಶಾಸ್ತ್ರೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಭೂದೃಶ್ಯವನ್ನು ನಕಾಶೆಯೊಂದರಲ್ಲಿ ಹಿಡಿದಿಡಲು ಯತ್ನಿಸಿದೆ. 1.35 ಕೋಟಿಗೂ ಹೆಚ್ಚು ಮನೆಗಳ 5.98 ಕೋಟಿ ಜನರನ್ನು ಮಾತನಾಡಿಸಿದೆ. 51 ಮಾನದಂಡಗಳನ್ನು ಹೊಂದಿದ್ದ 54 ಪ್ರಶ್ನೆಗಳಿಗೆ ಉತ್ತರಗಳನ್ನು ಸಂಗ್ರಹಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹಿಂದುಳಿದಿರುವಿಕೆಯ ಮಟ್ಟವನ್ನು ಅಳೆಯಲು ಪ್ರತ್ಯೇಕ ಅರ್ಜಿ ನಮೂನೆಗಳನ್ನು ಬಳಸಲಾಗಿದೆ.

ಜಾತಿ ಮತ್ತು ಸಮುದಾಯದ ಗುರುತು, ಜನಸಂಖ್ಯಾ ಪ್ರವೃತ್ತಿಗಳು, ಶಿಕ್ಷಣ ಮಟ್ಟ, ಸಾಂಪ್ರದಾಯಿಕ ಉದ್ಯೋಗಗಳು, ಭೂ ಸ್ವಾಮ್ಯ, ಜೀವನ ಪರಿಸ್ಥಿತಿಗಳು, ರಾಜಕೀಯ ಪ್ರಾತಿನಿಧ್ಯ ಹಾಗೂ ಕಲ್ಯಾಣ ಯೋಜನೆಗಳ ಎಟುಕುವಿಕೆ ಒಳಗೊಂಡಂತೆ ನಾನಾ ಸೂಚಕಗಳನ್ನು ಒಳಗೊಂಡಿತ್ತು.

ವರದಿಯು ವಿವರವಾದ ಜಾತಿವಾರು ಜನಸಂಖ್ಯಾ ಅಂಕಿಅಂಶಗಳು ಮತ್ತು ಉದ್ದೇಶಿತ ಶೇಕಡಾವಾರು ಮೀಸಲಾತಿ

ಪರಿಶಿಷ್ಟ ಜಾತಿಗಳು- 1,09,29,347 ಮತ್ತು ಪರಿಶಿಷ್ಟ ಪಂಗಡಗಳು- 42,81,289. ಸಾಮಾನ್ಯ ವರ್ಗ- 29,74,153.

ಕೆಟಗರಿ 1ಎ- ಜನಸಂಖ್ಯೆ 34,96,638. ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣ 8.40. ಉದ್ದೇಶಿತ ಮೀಸಲಾತಿ- ಶೇ.6

ಕೆಟಗರಿ 1ಬಿ- ಜನಸಂಖ್ಯೆ- 73,92,313. ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣ 17.74. ಉದ್ದೇಶಿತ ಮೀಸಲಾತಿ ಶೇ.12.

ಕೆಟಗರಿ 2ಎ- ಜನಸಂಖ್ಯೆ 77,78,209. ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣ 18.70. ಉದ್ದೇಶಿತ ಮೀಸಲಾತಿ ಶೇ.10.

ಕೆಟಗರಿ 2ಬಿ- ಜನಸಂಖ್ಯೆ 75,25,880. ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣ 18.08. ಉದ್ದೇಶಿತ ಮೀಸಲಾತಿ ಶೇ.8.

ಕೆಟಗರಿ 3ಎ- ಜನಸಂಖ್ಯೆ 72,99,577. ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣ 17.53 ಉದ್ದೇಶಿತ ಮೀಸಲಾತಿ ಶೇ.7

ಕೆಟಗರಿ 3ಬಿ- ಜನಸಂಖ್ಯೆ 81,37,536. ಒಟ್ಟು ಜನಸಂಖ್ಯೆಯ ಶೇಕಡಾವಾರು ಪ್ರಮಾಣ 19.55 ಉದ್ದೇಶಿತ ಮೀಸಲಾತಿ ಶೇ.8.

ವಿವಾದಾತ್ಮಕ ಸಂಖ್ಯೆಗಳು 

ಮುಸ್ಲಿಂ ಸಮುದಾಯದ ಒಟ್ಟು ಜನಸಂಖ್ಯೆಯ ಶೇಕಡಾವಾರು ಮತ್ತು ಕ್ಯಾಟಗರಿ 2B ರಾಜಕೀಯ ಕೋಟಾದ ಅಡಿ ತೋರಿಸಲಾಗಿರುವ ಅದೇ ಸಮುದಾಯದ ಶೇಕಡಾವಾರು ವ್ಯತ್ಯಾಸವನ್ನು ವರದಿಯ ಅತ್ಯಂತ ವಿವಾದಾತ್ಮಕ ಅಂಶವೆಂದು ಹೇಳಲಾಗುತ್ತಿದೆ. 

“ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಇದನ್ನು ಹೆಚ್. ಕಾಂತರಾಜ್ ಅವರ ಅವಧಿಯಲ್ಲಿ ಸಂಕಲನಗೊಳಿಸಲಾಗಿತ್ತು. ನನ್ನ ಅವಧಿಯಲ್ಲಿ ವರದಿ ಬರೆದೆವು. ಆದರೆ, ಒಟ್ಟು ಜನಸಂಖ್ಯೆಯ ಶೇಕಡಾವಾರು ಮತ್ತು ಮೀಸಲಾತಿ ಪಡೆಯುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣದ ಕುರಿತು ಬಹಳ ಗೊಂದಲವಿದೆ” ಎಂದು ಆಯೋಗದ ಇತ್ತೀಚಿನ ಅಧ್ಯಕ್ಷರಾಗಿದ್ದ ಕೆ. ಜಯಪ್ರಕಾಶ್ ಹೆಗ್ಡೆ” ಹೇಳಿದ್ದಾರೆ.

vijaykarnataka 7

“ಉದಾಹರಣೆಗೆ, ಮುಸ್ಲಿಂ ಸಮುದಾಯದ ಒಟ್ಟು ಜನಸಂಖ್ಯೆ 76,99,425. ಈ ಜನಸಂಖ್ಯೆಯ ಶೇಕಡಾವಾರು ಪ್ರಮಾಣ 12.87. ಇದು ಕರ್ನಾಟಕದ ಒಟ್ಟು ಜನಸಂಖ್ಯೆ (5,98,14,942) ಆಧರಿಸಿದ ಲೆಕ್ಕಾಚಾರ. ಆದರೆ ರಾಜ್ಯದ ಹಿಂದುಳಿದ ವರ್ಗಗಳ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಂ ಸಮುದಾಯದ ಜನಸಂಖ್ಯೆಯ ಶೇಕಡವಾರು ಪ್ರಮಾಣ 18.70. ಏಕೆಂದರೆ ಕೆಟಗರಿ 2B  ಅಡಿಯಲ್ಲಿ 75,25,880 ಮಂದಿ ಮೀಸಲಾತಿಗೆ ಅರ್ಹರು. ಇಲ್ಲಿ ಶೇಕಡವಾರನ್ನು 4,16,30,153 ರಿಂದ ಲೆಕ್ಕಹಾಕಲಾಗಿದೆ. ಹೀಗಾಗಿ ಶೇ. 18.70. ಇದೇ ತರ್ಕವನ್ನು ಕೆಟಗರಿ 1A, 1B, 2A, 3A ಮತ್ತು 3B ಸೇರಿದಂತೆ ಎಲ್ಲಾ ವರ್ಗಗಳಿಗೆ ಅನ್ವಯಿಸಲಾಗಿದೆ” ಎಂದು ಹೆಗ್ಡೆ ಹೇಳಿದ್ದಾರೆ.

ರಾಜ್ಯದ ರಾಜಕೀಯ ಪ್ರಭಾವಶಾಲಿ ಸಮುದಾಯಗಳ ಕುರಿತ ಹೊಸ ಅಂಕಿಅಂಶಗಳನ್ನೂ ಈ ವರದಿ ಒದಗಿಸಿದೆ:

ಲಿಂಗಾಯತರು: 66,35,233 (11.09 ಶೇಕಡಾ) 

ಒಕ್ಕಲಿಗರು: 61,68,652 (10.31 ಶೇಕಡಾ) 

ಕುರುಬರು: 42,71,399 (7.14 ಶೇಕಡಾ) 

ಈ ಅಂಕಿಅಂಶಗಳು ಹಿಂದಿನ ಅಂದಾಜುಗಳಿಗಿಂತ ಕಡಿಮೆ. ಹಿಂದಿನ ಅಂದಾಜುಗಳು ಲಿಂಗಾಯತ ಮತ್ತು ಒಕ್ಕಲಿಗ ಜನಸಂಖ್ಯೆ ಅನುಕ್ರಮವಾಗಿ ಶೇ.14 ಶೇಕಡಾ ಮತ್ತು ಶೇ.17 ಶೇಕಡಾ ಎಂದಿದ್ದವು. ಹೀಗಾಗಿ ವಿಶೇಷವಾಗಿ ಲಿಂಗಾಯತ ಮತ್ತು ಒಕ್ಕಲಿಗ ನಾಯಕರು ಹೊಸ ದತ್ತಾಂಶಗಳನ್ನು ತೀವ್ರ ಟೀಕೆಗೆ ಗುರಿ ಮಾಡಿವೆ.

ಈ ಕುರಿತು ಆಯೋಗದ ಈ ಹಿಂದಿನ ಆಯೋಗದ ಅಧ್ಯಕ್ಷ ಎಚ್. ಕಾಂತರಾಜ್ “ಸೌತ್ ಫರ್ಸ್ಟ್”ಗೆ ನೀಡಿದ ವಿವರಣೆ-

“ಮುಖ್ಯವಾಗಿ, ನಾವು ಪ್ರತಿ ಮನೆಯ ಬಾಗಿಲಿಗೂ ಹೋಗಿ, ನಮಗೆ ನೀಡಿದ ಮಾಹಿತಿಯನ್ನು ದಾಖಲಿಸಲು ನಿಜವಾದ ಪ್ರಯತ್ನ ಮಾಡಿದ್ದೇವೆ. ಸಮೀಕ್ಷೆಯನ್ನು ಮುಗಿಸುವ ಮುನ್ನ, ಬೀಗ ಹಾಕಿದ್ದ ಅಥವಾ ಜನರು ಕೆಲಸಕ್ಕೆ ಹೋಗಿದ್ದ ಮನೆಗಳನ್ನು ಪುನಃ ಸಮೀಕ್ಷೆಯಲ್ಲಿ ಒಳಗೊಳ್ಳಲು ಪ್ರಯತ್ನಿಸಿದ್ದೇವೆ. ಟೋಲ್-ಫ್ರೀ ನಂಬರ್ ನೀಡಿದ್ದೆವು. ಹೀಗಾಗಿ ಜನರು ನಮಗೆ ಯಾವುದೇ ಸಮಯದಲ್ಲಿ ಕರೆ ಮಾಡಬಹುದಿತ್ತು. ಮತ್ತು ನಮ್ಮ ಗಣತಿದಾರರು ಅಲ್ಲಿಗೆ ಹೋಗಿ ಸಮೀಕ್ಷೆ ಮಾಡುತ್ತಿದ್ದರು. ಪ್ರತಿ ಗಣತಿದಾರರಿಗೆ 120 ದಿನಗಳಲ್ಲಿ 20 ಮನೆಗಳ ಸಮೀಕ್ಷೆಯ ಹೊಣೆ ನೀಡಲಾಗಿತ್ತು. ಕುಟುಂಬವು ಮನೆಯಲ್ಲಿ ಇಲ್ಲದಿದ್ದರೆ,  ಪುನಃ ಹೋಗಿ ಪರಿಶೀಲಿಸುವಂತೆ ಗಣತಿದಾರರಿಗೆ ಸೂಚಿಸಿದ್ದೆವು.”

“ಈ ಜನಸಂಖ್ಯೆಯ ಶೇಕಡಾವಾರನ್ನು ಕೇವಲ ಜನಸಂಖ್ಯೆಯ ಆಧಾರದಲ್ಲಿ ಮಾತ್ರವಲ್ಲದೆ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಲೆಕ್ಕಹಾಕಲಾಗಿದೆ. ಜೊತೆಗೆ ಜಾತಿಗಳ ಹೆಸರುಗಳಲ್ಲಿ ಸಮಾನಾರ್ಥಕ ನಾಮವಾಚಕಗಳ ಅಂಶವಿದೆ. ಒಂದು ಜಾತಿಗೆ ಎರಡು ವಿಭಿನ್ನ ಹೆಸರುಗಳು ಇರಬಹುದು. ಉದಾಹರಣೆಗೆ, ಅಗಸರ ಜಾತಿಯನ್ನು ಮಡಿವಾಳ ಎಂದೂ ಕರೆಯಲಾಗುತ್ತದೆ. ಲೆಕ್ಕಾಚಾರ ಮಾಡುವಾಗ ಈ ಅಂಶವನ್ನೂ ಗಣನೆಗೆ ತೆಗೆದುಕೊಳ್ಳಬೇಕು.”

ಜಾತಿ ಇಲ್ಲಎಂದ ಮತ್ತು ಏಕ ಅಂಕಿಯ ಸಮುದಾಯಗಳು 

ಜಾತಿಯನ್ನು ಬಹಿರಂಗಪಡಿಸದಿರುವ ಅಥವಾ ಜಾತಿ ದತ್ತಾಂಶವಿಲ್ಲದ ಜನರನ್ನು ಸಮೀಕ್ಷೆಯು ಗಣನೀಯ ಸಂಖ್ಯೆಯಲ್ಲಿ ದಾಖಲಿಸಿದೆ. 

 ಜಾತಿ ತಿಳಿದಿಲ್ಲ ಎಂದವರು- 1,94,003

ಯಾವುದೇ ಜಾತಿ ಇಲ್ಲ ಎಂದು ಘೋಷಿಸಿದವರು- 1,34,319

ಜಾತಿಯನ್ನು ಬಹಿರಂಗಪಡಿಸಲು ನಿರಾಕರಿಸಿದವರು – 2,53,954

“ಜನರು ಬಯಸದಿದ್ದಾಗ ಅವರ ಜಾತಿಯನ್ನು ಬಹಿರಂಗಪಡಿಸುವಂತೆ ನಾವು ಬಲವಂತ ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ 1,34,319 ಮಂದಿ ‘ತಮಗೆ ಯಾವುದೇ ಜಾತಿ ಇಲ್ಲ’ ಎಂದು ದಾಖಲಿಸಿದ್ದಾರೆ. ಇದನ್ನು ತಪ್ಪು ಅಥವಾ ಅವೈಜ್ಞಾನಿಕ ಎಂದು ಹೇಗೆ ಹೇಳಲು ಸಾಧ್ಯ?” ಎಂದು ಕಾಂತರಾಜ್ ಪ್ರಶ್ನಿಸಿದರು. 

ಅಂತಿಮ ವರದಿಯಲ್ಲಿ 1,351 ಜಾತಿಗಳು ಮತ್ತು ಸಮುದಾಯಗಳನ್ನು ಪಟ್ಟಿ ಮಾಡಲಾಗಿದೆ

180 ಪರಿಶಿಷ್ಟ ಜಾತಿಗಳು (Scheduled Castes) 

105 ಪರಿಶಿಷ್ಟ ಪಂಗಡಗಳು (Scheduled Tribes) 

398 ಗುರುತಿಸಲಾಗದ ಜಾತಿಗಳು 

ಕೆಲವು ಸಮುದಾಯಗಳು ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದವು

ಕಬಾಡಿ: ಇಬ್ಬರು

ಕಲಂಕುಳರ್: ಐವರು 

ಗವಾರ: 8 ಮಂದಿ 

ಗಿರಿ: 7 ಮಂದಿ

ಘಟ್ವಾರ್: 12 ಮಂದಿ 

ಇಷ್ಟೊಂದು ಸಣ್ಣ ಸಂಖ್ಯೆಯ ಜನರು ಈ ಸಮುದಾಯಗಳಲ್ಲಿ ಇರುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ ಕಾಂತರಾಜ್ ಉತ್ತರ- “ಅವರು ಈ ರಾಜ್ಯದ ಶಾಶ್ವತ ನಿವಾಸಿಗಳಾಗಿರದೇ ಇರಬಹುದು. ಕೆಲ ವ್ಯಾವಹಾರಿತ ಅಥವಾ ತಾತ್ಕಾಲಿಕ ಉದ್ದೇಶಗಳಿಗಾಗಿ ಕೆಲವೇ ವರ್ಷಗಳ ವಾಸಕ್ಕಾಗಿ ಇಲ್ಲಿಗೆ ಬಂದಿರಬಹುದು. ಆದರೆ ಈ ದತ್ತಾಂಶ ನೈಜ ಎಂದು ನಾನು ಖಚಿತಪಡಿಸಬಲ್ಲೆ. ಇಲ್ಲಿ ಯಾವುದೂ ತಿದ್ದಿ ತಿರುಚಲಾಗಿಲ್ಲ”.

ಧಾರ್ಮಿಕ ಅಲ್ಪಸಂಖ್ಯಾತರ ಪೈಕಿ: 

ಮುಸ್ಲಿಮರು: 76,99,425 (12.87%) 

ಬೌದ್ಧರು: 10,050 (0.0017%) 

ಜೈನರು: 4,19,375 (0.701%) 

ಕ್ರೈಸ್ತರು: 9,47,994 (1.58%) 

ಜಾಟ್ ವಲಸಿಗರು: 3,839 (0.006%) 

ಬ್ರಾಹ್ಮಣರು: 15,64,741 (2.6%) 

120 ಹೊಸ ಜಾತಿಗಳು ಮತ್ತು ಅನಾಥರಿಗೆ ಮೀಸಲಾತಿ 

ಆಯೋಗವು ಸಮುದಾಯದ ಮನವಿಗಳು ಮತ್ತು ಸಾರ್ವಜನಿಕ ಸಮಾಲೋಚನೆಗಳ ಆಧಾರದ ಮೇಲೆ 120 ಜಾತಿಗಳನ್ನು ಮೀಸಲಾತಿ ಪಟ್ಟಿಗೆ ಸೇರಿಸುವ ಪ್ರಸ್ತಾವವನ್ನು ಸರ್ಕಾರದ ಮುಂದಿರಿಸಿದೆ. ಈ ಶಿಫಾರಸುಗಳನ್ನು ಮೂರು ಪ್ರತ್ಯೇಕ ವರದಿಗಳಲ್ಲಿ ಸಲ್ಲಿಸಲಾಗಿದೆ. 

ಕೆಟಗರಿ 1ರ ಅಡಿಯಲ್ಲಿ ಪ್ರಸ್ತಾವಿತ ಸೇರ್ಪಡೆಗಳು: 

ಕಾಡುಗೊಲ್ಲ, ಹಟ್ಟಿಗೊಲ್ಲ, ಆಡವಿಗೊಲ್ಲ, ಖಂಜಿರ್ ಭಟ್, ಕಂಜರ್, ಖಂಜರ್ ಭಾಟ್, ಚಪ್ಪರ್ ಬಂದ್, ಪೊಮ್ಮಾಲ, ಕುಡುಬಿ 

ಮರುತುವರ್ ಜಾತಿಯನ್ನು ಕೆಟಗರಿ-2Aಗೆ ಸೇರಿಸಲು ಅದರೊಂದಿಗೆ ಗಾಣಿಗ ಸಮುದಾಯದ ಉಪಜಾತಿಗಳಾದ ದೇವಗಾಣಿಗ-ಒಂಥು ಗಾಣಿಗ, ವಣಿಯನ್, ಜ್ಯೋತಿಪನ, ಶಿವಜ್ಯೋತಿಪನ ಸೇರಿವೆ. 

ಇತರ ಪ್ರಸ್ತಾವಿತ ಸೇರ್ಪಡೆಗಳು:

ಆರೇರ: ಕೆಟಗರಿ-1ಬಿ

ಮಡಿ-ಒಕ್ಕಲಿಗ: ಕೆಟಗರಿ-2A

ಮಲ್ಲವ/ಮಲೆಗೌಡ: ಕೆಟಗರಿ-1ಬಿ 

ಹರೆ ಜಾತಿ: ಕೆಟಗರಿ-3ಬಿ 

ಹಾವುಗೊಲ್ಲ: ಕೆಟಗರಿ-1ಎ 

ಅಲ್ಲದೆ, ತೆಲಂಗಾಣ ಮತ್ತು ಮಹಾರಾಷ್ಟ್ರದ ಅಧ್ಯಯನ ಪ್ರವಾಸಗಳ ನಂತರ, ಆಯೋಗವು ಜಾತಿ ಗುರುತು ಇಲ್ಲದ ಅನಾಥ ಮಕ್ಕಳಿಗೆ (ವಿಶೇಷವಾಗಿ ಕೆಟಗರಿ-1ಎ ಯಲ್ಲಿ) ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ.1ರಷ್ಟು ಮೀಸಲಾತಿ ನೀಡಲು ಶಿಫಾರಸು ಮಾಡಿದೆ. 

ದಸ್ತಾವೇಜು ಸೂಚಿಸುವ ಪ್ರಕಾರ, ಶೇ.1ರ ಉಪ-ಕೋಟಾಗೆ ಅರ್ಜಿದಾರರು ಕಡಿಮೆ ಇದ್ದರೆ, ಖಾಲಿ ಉಳಿದ ಸೀಟುಗಳನ್ನು ಕೆಟಗರಿ-1ಎ ನ ಇತರ ಜಾತಿಗಳಿಗೆ ಹಿಂದಿರುಗಿಸಬೇಕು ಮತ್ತು ಅದನ್ನು ಹಿಂಬಾಕಿಯಾಗಿ (ಬ್ಯಾಕ್ಲಾಗ್) ಇಡಕೂಡದು. 

3:2:1 ಅನುಪಾತ ಸೂತ್ರ ಮತ್ತು ಏಕರೂಪದ ಕ್ರೀಮಿ-ಲೇಯರ್

ಮೀಸಲಾತಿ ಶೇಕಡಾವಾರನ್ನು ನಿಗದಿಪಡಿಸಲು, ಆಯೋಗವು ಸಾಮಾಜಿಕ, ಶೈಕ್ಷಣಿಕ ಮತ್ತು ಜೀವನೋಪಾಯದ ಸೂಚಕಗಳ ಆಧಾರದ ಮೇಲೆ 3:2:1 ಅನುಪಾತವನ್ನು ಅನ್ವಯಿಸಿದೆ. ಈ ದತ್ತಾಂಶವನ್ನು ಹಿಂದಿನ ಆಯೋಗಗಳು, ಕ್ಷೇತ್ರ ಭೇಟಿಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳಿಂದ ಸಂಗ್ರಹಿಸಲಾಗಿದೆ. 

ಒಟ್ಟಾರೆ ಶೇ.32ರಷ್ಟು ಮೀಸಲಾತಿಯನ್ನು ಶಿಫಾರಸು ಮಾಡಲಾಗಿದೆ, ಇದು ಜನಸಂಖ್ಯಾ ಪಾಲು ಮತ್ತು ಹಿಂದುಳಿದಿರುವಿಕೆಯ  ಮಟ್ಟವನ್ನು ಪ್ರತಿಬಿಂಬಿಸುತ್ತದೆ. 

ಆಯೋಗವು ಎಲ್ಲ ಹಿಂದುಳಿದ ವರ್ಗಗಳಿಗೂ (ಕೆಟಗರಿ-1A, 1B, 2A, 2B, 3A ಮತ್ತು 3B ಸೇರಿದಂತೆ) ಕ್ರೀಮಿ-ಲೇಯರ್ ನೀತಿಯನ್ನು ವಿಸ್ತರಿಸಲು ಶಿಫಾರಸು ಮಾಡಿದೆ, ವಿಶೇಷವಾಗಿ ಉದ್ಯೋಗ ಮೀಸಲಾತಿಗಳಿಗೆ ಅನ್ವಯಿಸುತ್ತದೆ.

ವರದಿಯ ಪ್ರಕಾರ ಕೆಟಗರಿ  1 ರಲ್ಲಿ ಹಲವಾರು ಜಾತಿಗಳ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆದೆ ಎಂದು ಹೇಳಲಾಗಿದೆ; ಕೆಲವರು ಯಶಸ್ವೀ ವ್ಯಾಪಾರ ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಮತ್ತು ಗಣನೀಯ ಸಂಪತ್ತನ್ನು ಸಂಗ್ರಹಿಸಿದ್ದಾರೆ, ಜೊತೆಗೆ ಉತ್ತಮ ಶಿಕ್ಷಣ ಮತ್ತು ರಾಜಕೀಯ ಪ್ರಾತಿನಿಧ್ಯ ಪಡೆದಿದ್ದಾರೆ.

ಅದೇ ವರ್ಗದಲ್ಲಿರುವ ವೇತನ ಪಡೆಯುವ ಬಡ ಕಾರ್ಮಿಕರು ಮತ್ತು ರೈತರ ಮಕ್ಕಳಿಗೆ “ಸಮಾನ ಅವಕಾಶ” ನೀಡಲು, ಆಯೋಗವು ಕ್ರೀಮಿ-ಲೇಯರ್ ಆದಾಯ ಪರೀಕ್ಷೆಯನ್ನು ಎಲ್ಲ ಹಿಂದುಳಿದ ವರ್ಗಗಳಿಗೆ ವಿಸ್ತರಿಸಲು ಶಿಫಾರಸು ಮಾಡಿದೆ ಮತ್ತು ಕೆಟಗರಿ ಒಂದನ್ನು 1A ಮತ್ತು 1B ಉಪ-ಗುಂಪುಗಳಾಗಿ ವಿಭಜಿಸಲು ಪ್ರಸ್ತಾಪಿಸಿದೆ.

ಸೀಲಿಂಗ್ ಹೊರತಾಗಿಯೂ OBC ಕೋಟಾ ಹೆಚ್ಚಳ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು, 2015 ರ ಸಾಮಾಜಿಕ-ಆರ್ಥಿಕ ಸಮೀಕ್ಷೆಯ ನಂತರದ ಅಧ್ಯಯನಗಳನ್ನು ಉಲ್ಲೇಖಿಸಿ, ಇತರ ಹಿಂದುಳಿದ ವರ್ಗಗಳ (OBC) ಕೋಟಾವನ್ನು ಶೇ.32ರಿಂದ ಶೇ. 51ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಿದೆ.

ರಾಜ್ಯ ಸರ್ಕಾರವು ಈಗಾಗಲೇ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೀಲಿಂಗ್ ನ್ನು ಶೇ.18ರಿಂದ ಶೇ.24  ಹೆಚ್ಚಿಸಿದೆ ಎಂದು ಹೇಳಲಾಗಿದೆ, ಇದು ಕರ್ನಾಟಕದ ಒಟ್ಟಾರೆ ಮೀಸಲು ಸೀಲಿಂಗ್ ನ್ನು ಶೇ. 56ಕ್ಕೆ ಮುಟ್ಟಿಸಿದೆ.

ರಾಷ್ಟ್ರೀಯವಾಗಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಶೇ.10ರ ಸೀಲಿಂಗ್  ಸೇರಿಸಿದರೆ, ಒಟ್ಟಾರೆ ಕೋಟಾ ಶೇ. 66 ಆಗುತ್ತದೆ.

ಪ್ರಸ್ತಾಪಿತ ಓಬಿಸಿ ಮೀಸಲಾತಿಯನ್ನು ಜಾರಿಗೆ ತಂದರೆ, ಕರ್ನಾಟಕದ ಒಟ್ಟಾರೆ ಸೀಲಿಂಗ್ ಶೇ.85ಕ್ಕೆ ಏರಬಹುದು.

1993ರ ಸುಪ್ರೀಂ ಕೋರ್ಟ್ ನ ಇಂದಿರಾ ಸಾಹ್ನಿ Vs ಭಾರತ ಸರ್ಕಾರ ತೀರ್ಪಿನ ಪ್ರಕಾರ ಮೀಸಲಾತಿಗೆ ಶೇ.50ರ ಮಿತಿ ನಿಗದಿಪಡಿಸಲಾಗಿತ್ತು. ಆದಾಗ್ಯೂ, ಜನಸಂಖ್ಯಾ ಆಧಾರಿತ ಅಗತ್ಯಗಳನ್ನು ಉಲ್ಲೇಖಿಸಿ, ತಮಿಳುನಾಡು (69 ಶೇಕಡಾ) ಮತ್ತು ಝಾರ್ಖಂಡ್ (77 ಶೇಕಡಾ) ರಾಜ್ಯಗಳಲ್ಲಿ ಹೆಚ್ಚಿನ ಮೀಸಲಾತಿಗಳನ್ನು ಅಳವಡಿಸಿಕೊಂಡ ನಿದರ್ಶನಗಳಿವೆ.

ಸಮೀಕ್ಷೆಯ ಪ್ರಕಾರ, ಒಬಿಸಿಗಳು ಕರ್ನಾಟಕದ ಜನಸಂಖ್ಯೆಯ ಶೇ.69.60ರಷ್ಟಿದ್ದಾರೆ. ಇದರ ಹೊರತಾಗಿಯೂ, ಪ್ರಸ್ತುತ ಅರ್ಧಕ್ಕಿಂತ ಕಡಿಮೆ ಜನರಿಗೆ ಮೀಸಲಾತಿಯ ಲಾಭ ಲಭಿಸುತ್ತಿದೆ ಎಂದು ವರದಿ ಹೇಳಿದೆ. ಹಿಂದುಳಿದ ವರ್ಗಗಳ ನಿಜವಾದ ಜನಸಂಖ್ಯಾ ಪಾಲನ್ನು ಮೀಸಲಾತಿ ಲಾಭಗಳೊಂದಿಗೆ ಹೊಂದಾಣಿಕೆ ಮಾಡದಿದ್ದರೆ, ಸರ್ಕಾರಿ ಸೌಲಭ್ಯಗಳ ಸಮಾನ ವಿತರಣೆ ಸಾಧ್ಯವಾಗುವುದಿಲ್ಲ. ಇದರ ಆಯ್ದ ಸೂತ್ರವನ್ನು ಬಳಸಿಕೊಂಡು, ಪ್ರಸ್ತುತ ಶೇ.32ರ ಮೀಸಲಾತಿಗೆ ಶೇ.19ರಷ್ಟು ಬಿಂದುಗಳನ್ನು ಸೇರಿಸುವುದರಿಂದ (ಒಟ್ಟು 51 ಶೇಕಡಾ) ಜನಸಂಖ್ಯಾ ಪಾಲು ಮತ್ತು ಆಡಳಿತಾತ್ಮಕ ಸಾಧ್ಯತೆಗಳ ನಡುವೆ ಸಮಂಜಸ  ಸಮತೋಲನದ ಸಾಧನೆಯಾಗುತ್ತದೆಂದು ವರದಿಯು ವಾದಿಸಿದೆ.

ವರದಿ ಅವೈಜ್ಞಾನಿಕ ಅಲ್ಲ

ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯತೀತ ಜನತಾ ದಳ ಸಮೀಕ್ಷೆಯನ್ನು ‘ಅವೈಜ್ಞಾನಿಕ’ ಎಂದು ಕರೆದು, ಇದು ಸಮಾಜದ ಧೃವೀಕರಣಕ್ಕೆ ದಾರಿ ಮಾಡುತ್ತದೆ ಎಂದು ಎಚ್ಚರಿಸಿ ಅದನ್ನು ತಿರಸ್ಕರಿಸುವಂತೆ ಒತ್ತಾಯಿಸಿವೆ.

ಆದರೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ತನ್ನ ಕಾರ್ಯವಿಧಾನ ಮತ್ತು ನಿಷ್ಕರ್ಷೆಗಳನ್ನು ಸಮರ್ಥಿಸಿಕೊಂಡಿದೆ. ಸ್ಥಾಪಿತ ಕಾನೂನು ನಿಯಮಗಳು ಮತ್ತು ಇದೇ ರೀತಿಯ ಅಧ್ಯಯನಗಳ ಇತಿಹಾಸದತ್ತ ಬೆರಳು ತೋರುತ್ತವೆಂದು ಹೇಳಿದೆ.

ಆಯೋಗವು ತನ್ನ ಕಾರ್ಯವಿಧಾನವನ್ನು ಪ್ರಭಾವಿತಗೊಳಿಸಿದ ಈ ಹಿಂದಿನ ವರದಿಗಳನ್ನು ಉಲ್ಲೇಖಿಸಿದೆ, ಇವುಗಳಲ್ಲಿ ಹಾವನೂರ್ ಆಯೋಗ (1975), ವೆಂಕಟಸ್ವಾಮಿ ಆಯೋಗ (1986), ನ್ಯಾಯಮೂರ್ತಿ ಒ. ಚಿನ್ನಪ್ಪ ರೆಡ್ಡಿ ಆಯೋಗ (1990), ನ್ಯಾಯಮೂರ್ತಿ ಕುಡೂರ್ ನಾರಾಯಣ ರೈ ಆಯೋಗ (1995), ಪ್ರೊ. ರವಿ ವರ್ಮಾ ಆಯೋಗ (2000), ಮುನಿರಾಜು ಆಯೋಗ (2003), ಸಿದ್ದಲಿಂಗಯ್ಯ ಆಯೋಗ (2006), ಡಾ. ಸಿ. ಎಸ್. ದ್ವಾರಕಾನಾಥ್ ಆಯೋಗ (2010), ಹಾಗೂ ಶಂಕರಪ್ಪ ಆಯೋಗ (2013) ಸೇರಿವೆ.

ಸಮೀಕ್ಷೆ ವ್ಯಾಪಕವಾಗಿದೆ ಎಂದು ಒಪ್ಪಿಕೊಂಡರೂ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹಲವು ಸವಾಲುಗಳು ಎದುರಾಗಿದ್ದವು ಎಂದು ಕಾಂತರಾಜ್ ತಿಳಿಸಿದರು. 1.35 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜಾತಿ ವಿವರಗಳನ್ನು ಹಂಚಿಕೊಳ್ಳಲಿಲ್ಲ ಮತ್ತು ಕೆಲವು ‘ಗೇಟೆಡ್ ಕಮ್ಯುನಿಟಿ’ಗಳು ಗಣತಿದಾರರನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ. “ಸಮೀಕ್ಷೆಯನ್ನು ಉತ್ತಮವಾಗಿ ಮಾಡಬಹುದಿತ್ತು ಎಂದು ನಾನು ಒಪ್ಪುತ್ತೇನೆ, ಆದರೆ ನಾವು ಅವರ ಮನೆಗೆ ಭೇಟಿ ನೀಡಿಲ್ಲ ಎಂಬ ಕೆಲವರ ಹೇಳಿಕೆಯನ್ನು ಕೇಳುವುದು ನಿರಾಶಾದಾಯಕ. ತಮ್ಮ ವಿವರಗಳನ್ನು ನೀಡದಿರುವ  ಆಯ್ಕೆ ಜನತೆಗಿತ್ತು, ಆದರೆ ಅದನ್ನು ದಾಖಲಿಸದಿರುವ ಆಯ್ಕೆ ನಮಗೆ ಇರಲಿಲ್ಲ. 1,35,000 ಕ್ಕೂ ಹೆಚ್ಚು ಜನ ತಮ್ಮ ಜಾತಿ ವಿವರಗಳನ್ನು ಒದಗಿಸಲೇ ಇಲ್ಲ. ಅಂತಹ ಸಂದರ್ಭಗಳಲ್ಲಿ, ಏನು ಮಾಡಬೇಕು? ನಾನು ವ್ಯಕ್ತಿಗತವಾಗಿ ಕರ್ನಾಟಕದಾದ್ಯಂತ ಉಸ್ತುವಾರಿ ಮಾಡಿದ್ದೇನೆ. ಇದನ್ನು ಮೀಸಲಾತಿ ನೀಡಲು ಮಾಡಲಾಗುತ್ತಿದೆಯೇ ಎಂದು ಜನ ಕೇಳುತ್ತಿದ್ದರು. ಇದು ಕೇವಲ ಮೀಸಲಾತಿಗಾಗಿ ಮಾತ್ರವಲ್ಲ ಎಂದು ನಾನು ಯಾವಾಗಲೂ ಹೇಳಿದ್ದೇನೆ” ಎಂದು ಕಾಂತರಾಜ್ ವಿವರಿಸಿದರು.

ಸಮೀಕ್ಷೆಯ ಉದ್ದೇಶ ಮೀಸಲಾತಿಗಿಂತ ವಿಶಾಲ, ಸಾಮಾಜಿಕ ಮತ್ತು ಅಭಿವೃದ್ಧಿ ನೀತಿಗೆ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ. “ಕೇವಲ ಮೀಸಲಾತಿ ಸಂಪೂರ್ಣ ಸಾಮಾಜಿಕ ನ್ಯಾಯ ಆಗುವುದಿಲ್ಲ. ಸಕಾರಾತ್ಮಕ ಕ್ರಮಕ್ಕಾಗಿ, ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಬಸ್ಸುಗಳು, ರಸ್ತೆಗಳು, ನೀರು, ವಿದ್ಯುತ್ ಮತ್ತು ಬಡವರಿಗಾಗಿ ಸರ್ಕಾರಿ ಯೋಜನೆಗಳನ್ನು ರೂಪಿಸಲು ಸಮೀಕ್ಷೆಯಿಂದ ಅನುಕೂಲವಾಗುತ್ತದೆ. ಕೆಲವು ಇತಿಮಿತಗಳ ಹೊರತಾಗಿಯೂ ಈ ದತ್ತಾಂಶ  ಉಪಯುಕ್ತವಾಗಿದೆ ಎಂದರು.

ವರದಿ : ರಶ್ಮಿ ಪಾಟೀಲ್ south first https://thesouthfirst.com/karnataka/decoding-karnatakas-caste-census-what-really-does-the-disputed-data-say/
ಅನುವಾದ : ಡಿ.ಉಮಾಪತಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X