ಮಹಾಭಾರತದಲ್ಲಿ ದ್ರೌಪದಿಯನ್ನು ನಡೆಸಿಕೊಂಡ ರೀತಿಯನ್ನು ಉಲ್ಲೇಖಿಸುವ ದೆಹಲಿ ಹೈಕೋರ್ಟ್, ಮಹಿಳೆ ಗಂಡನ ಆಸ್ತಿಯಲ್ಲ ಎಂದಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497ರ ನಿಬಂಧನೆಯ ಅಡಿಯಲ್ಲಿ ವ್ಯಭಿಚಾರದ ಆರೋಪಗಳನ್ನು ಒಳಗೊಂಡ 2010ರ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಹೇಳಿಕೆ ನೀಡಿದೆ.
ಏಪ್ರಿಲ್ 17ರಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಪ್ರಕರಣದ ವಿಚಾರಣೆ ನಡೆಸಿದ್ದಾರೆ. “ಮಹಾಭಾರತದಲ್ಲಿ ದ್ರೌಪದಿಯನ್ನು ನಡೆಸಿಕೊಂಡ ರೀತಿ ಮತ್ತು ನಂತರದ ಪರಿಣಾಮಗಳನ್ನು ವಿವರಿಸಲಾಗಿದೆ. ಆದರೂ ಸ್ತ್ರೀದ್ವೇಷಿ ಮತ್ತು ಪಿತೃಪ್ರಧಾನ ಮನಸ್ಥಿತಿಯುಳ್ಳ ಸಮಾಜವು ಮಹಿಳೆಯರನ್ನು ತಮ್ಮ ಆಸ್ತಿ ಎಂಬಂತೆ ಕಾಣುತ್ತಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪ್ರತಿಭಟನೆ ಆಯೋಜನೆ ಮಾತ್ರಕ್ಕೆ ಯುಎಪಿಎ ದಾಖಲಿಸಬಹುದಾ?: ದೆಹಲಿ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ
“ಮಹಿಳೆಯನ್ನು ಗಂಡನ ಆಸ್ತಿ ಎಂದು ಪರಿಗಣಿಸುವುದರ ವಿನಾಶಕಾರಿ ಪರಿಣಾಮಗಳನ್ನು ಮಹಾಭಾರತದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಮಹಾಭಾರತದಲ್ಲಿ ದ್ರೌಪದಿಯನ್ನು ಅವಳ ಸ್ವಂತ ಪತಿ ಯುಧಿಷ್ಠಿರನು ಜೂಜಾಟದಲ್ಲಿ ಪಣಕ್ಕಿಟ್ಟನು. ಆಕೆಯ ಪತಿಯಂದಿರೇ ಆದ ಯುಧಿಷ್ಠಿರನ ನಾಲ್ವರು ಸಹೋದರರು ಮೂಕ ಪ್ರೇಕ್ಷಕರಾಗಿದ್ದರು. ದ್ರೌಪದಿ ತನ್ನ ಘನತೆಗಾಗಿ ಪ್ರತಿಭಟಿಸುವ ಯಾವುದೇ ಧ್ವನಿ ಇರಲಿಲ್ಲ. ಜೂಜಾಟದಲ್ಲಿ ಪಾಂಡವರು ಸೋತ ಬಳಿಕ ಮಹಾಭಾರತದ ಮಹಾ ಯುದ್ಧವಾಗಿದ್ದು, ಸಾಮೂಹಿಕ ಜೀವಹಾನಿ ಮತ್ತು ಕುಟುಂಬದ ಅನೇಕ ಸದಸ್ಯರು ನಾಶವಾಗಬೇಕಾಯಿತು” ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಅವರು ವಿವರಿಸಿದ್ದಾರೆ.
“ಮಹಿಳೆಯನ್ನು ಆಸ್ತಿಯಾಗಿ ಪರಿಗಣಿಸುವುದರಿಂದಾಗುವ ಪರಿಣಾಮಗಳ ಬಗ್ಗೆ ಉದಾಹರಣೆಗಳಿದ್ದರೂ ಕೂಡಾ ಜೋಸೆಫ್ ಶೈನ್ (ಸುಪ್ರಾ) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೆಕ್ಷನ್ 497 ಐಪಿಸಿಯನ್ನು ಸಂವಿಧಾನಬಾಹಿರವೆಂದು ಘೋಷಿಸಿದಾಗ ಮಾತ್ರ ನಮ್ಮ ಸಮಾಜದ ಸ್ತ್ರೀದ್ವೇಷಿ ಮನಸ್ಥಿತಿ ಇದನ್ನು ಅರ್ಥಮಾಡಿಕೊಂಡಿತು” ಎಂದು ನ್ಯಾಯಾಲಯ ಹೇಳಿದೆ.

ಐಪಿಸಿಯ ಸೆಕ್ಷನ್ 497 ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿಶೇಷ ಹಕ್ಕನ್ನು ನೀಡುತ್ತದೆ. ವ್ಯಭಿಚಾರದ ಆಧಾರದ ಮೇಲೆ ಪತಿ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಬಹುದು. ಆದರೆ ಮಹಿಳೆಯರನ್ನು ಆಸ್ತಿಯಂತೆ ಕಂಡಂತಾಗುತ್ತದೆ ಎಂದು ಐಪಿಸಿಯ ಸೆಕ್ಷನ್ 497 ಅನ್ನು 2018ರಲ್ಲಿ ಸುಪ್ರೀಂ ಕೋರ್ಟ್ ಸಂವಿಧಾನಬಾಹಿರ ಎಂದು ಘೋಷಿಸಿದೆ.
ಹಲವು ಪ್ರಕರಣಗಳಲ್ಲಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಆದೇಶಗಳು ಹೊರಬೀಳುತ್ತಿರುವ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್‌ನ ಈ ಆದೇಶ ಮಹತ್ವವನ್ನು ಪಡೆದಿದೆ. ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ತನ್ನ ಹಲವು ಆದೇಶಗಳನ್ನು ಮಹಿಳಾ ವಿರೋಧಿ ನೆಲೆಯಲ್ಲಿ ನೀಡಿ ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಮುಖ್ಯವಾಗಿ ಸ್ತನ ಮುಟ್ಟುವುದು ಅತ್ಯಾಚಾರವಲ್ಲ ಎಂಬ ಅಲಹಾಬಾದ್ ಹೈಕೋರ್ಟ್ ಆದೇಶವು ತೀವ್ರ ಟೀಕೆಗೆ ಗುರಿಯಾಗಿತ್ತು. ಇವೆಲ್ಲವುದರ ನಡುವೆ ಮಹಿಳೆಯರನ್ನು ತನ್ನ ಆಸ್ತಿಯಾಗಿ ಕಾಣುವ ಪುರುಷ ಪ್ರಧಾನ ಸಮಾಜದ ಮನಸ್ಥಿತಿಯ ವಿರುದ್ಧವಾಗಿ ಸಂವಿಧಾನಬದ್ಧ ನೆಲೆಗಟ್ಟಿನಲ್ಲಿ ದೆಹಲಿ ಹೈಕೋರ್ಟ್ ನ್ಯಾಯಾಧೀಶೆ ನೀನಾ ಬನ್ಸಾಲ್ ನೀಡಿರುವ ಹೇಳಿಕೆಯು ಸ್ವಾಗತಾರ್ಹ.
