ಉಳ್ಳಾಲದ ಮುನ್ನೂರು ಬಂಗುಲೆ ಸಮೀಪ ಸಾಮೂಹಿಕ ಅತ್ಯಾಚಾರಕ್ಕೀಡಾದ ಪಶ್ಚಿಮ ಬಂಗಾಳದ ಯುವತಿಯ ಅಕ್ಕ, ಆಟೊ ಚಾಲಕನಿಗೆ ‘ಗೂಗಲ್ ಪೇ’ ಮೂಲಕ ₹2,000 ಪಾವತಿಸಿ, ತಂಗಿಯನ್ನು ಸುರಕ್ಷಿತವಾಗಿ ರೈಲು ಹತ್ತಿಸುವಂತೆ ಕೇಳಿಕೊಂಡಿದ್ದಳು ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿಗಳಾದ ಆಟೊ ಚಾಲಕ ಪ್ರಭುರಾಜ್, ಆತನ ಸ್ನೇಹಿತರಾದ ಮಣಿ, ಮಿಥುನ್ ಎಂಬುವರನ್ನು ಘಟನೆ ನಡೆದ 24ಗಂಟೆಯೊಳಗೆ ಬಂಧಿಸಲಾಗಿತ್ತು.
ಸಂತ್ರಸ್ತೆಯು ಸುಮಾರು 3 ತಿಂಗಳ ಹಿಂದೆ ಪ್ರಿಯತಮನ ಜತೆ ಕೇರಳದ ಕಡೆಗೆ ಕೆಲಸಕ್ಕೆ ಬಂದಿದ್ದಳು. ಏಪ್ರಿಲ್ 16ರಂದು ಇಬ್ಬರ ನಡುವೆ ಜಗಳ ನಡೆದಿದ್ದು, ಪ್ರಿಯತಮ ಜಗಳ ಮಾಡಿ ಮೊಬೈಲ್ ಒಡೆದು ಹಾಕಿ ಮನೆಯಿಂದ ಹೊರಹಾಕಿದ್ದನು. ಇದರಿಂದ ನೊಂದ ಯುವತಿ ಕೇರಳದಿಂದ ಮಂಗಳೂರಿಗೆ ಬರುವ ರೈಲು ಹತ್ತಿದ್ದಳು. ಮಂಗಳೂರಿನಲ್ಲಿ ಇಳಿದ ಆಕೆ ಊರಿಗೆ ಹೋಗಲು ಹಣವಿಲ್ಲದೆ ಅಸಹಾಯಕಳಾಗಿದ್ದಳು. ಈ ಬಗ್ಗೆ ಆಟೊ ಚಾಲಕ ಪ್ರಭುರಾಜ್ ಜತೆಗೆ ಅಲವತ್ತುಕೊಂಡಿದ್ದಳು. ಅದನ್ನೇ ದುರ್ಬಳಕೆ ಮಾಡಿಕೊಂಡ ಚಾಲಕ ಆಕೆಯ ಮೊಬೈಲ್ ರಿಪೇರಿ ಮಾಡಿಸಿ ಪಶ್ಚಿಮ ಬಂಗಾಳದಲ್ಲಿರುವ ಸಹೋದರಿಗೆ ಕರೆ ಮಾಡುವಂತೆ ತಿಳಿಸಿದ್ದ.
ತಂಗಿ ಊರಿಗೆ ಬರುವ ಇಂಗಿತ ವ್ಯಕ್ತಪಡಿಸುತ್ತಿದ್ದಂತೆ ಆಟೊ ರಿಕ್ಷಾ ಚಾಲಕನ ಸಹಾಯ ಯಾಚಿಸಿದ ಅಕ್ಕ, ₹2,000ವನ್ನು ಗೂಗಲ್ ಪೇ ಮಾಡಿ ರೈಲು ಹತ್ತಿಸುವಂತೆ ತಿಳಿಸಿದ್ದಳು. ಪಶ್ಚಿಮ ಬಂಗಾಳದ ರೈಲು ತಡವಾಗಿದೆಯೆಂದು ನಂಬಿಸಿದ ಚಾಲಕ ಸುಮಾರು 6 ಗಂಟೆಗಳ ಕಾಲ ರಿಕ್ಷಾದಲ್ಲೇ ಸುತ್ತಾಡಿಸಿ ಮತ್ತು ಬರುವ ಪಾನೀಯ ಕುಡಿಸಿ ತಡರಾತ್ರಿ ಮೂವರು ಸೇರಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಿರುವುದಾಗಿ ಮೂಲಗಳು ತಿಳಿಸಿವೆ.
ಆರೋಪಿ ಮಿಥುನ್ ವಿರುದ್ಧ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣ ಇದೆ. ಡೆಲಿವರಿ ಬಾಯ್ ಮಣಿ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಕಳವು ಪ್ರಕರಣ ಇದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಏಪ್ರಿಲ್ 25ರವರೆಗೆ ಪೊಲೀಸ್ ವಶಕ್ಕೆ ನೀಡಲಾಗಿದೆ.
“ಸಂತ್ರಸ್ತೆ ಚೇತರಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಶುಕ್ರವಾರದ ಸಂಜೆವರೆಗೂ ಆಕೆಯ ಮನೆಯಿಂದ ಯಾರೂ ಬಂದಿಲ್ಲ. ಆಕೆಯನ್ನು ಊರಿನಿಂದ ಕರೆತಂದ ಪ್ರಿಯತಮನ ವಿಚಾರಣೆಯೂ ನಡೆದಿಲ್ಲ” ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಪ್ರತಿಭಟನಾಕಾರರು ಸರ್ಕಾರಿ ಕಾರು ಬಳಸಿದ ಆರೋಪ; ನಗರ ಪೊಲೀಸ್ ಆಯುಕ್ತರ ಸ್ಪಷ್ಟನೆ
ಕಾನೂನಿನ ಭಯವೇ ಇಲ್ಲದಿರು ಕಿರಾತಕರು ಬದುಕುತ್ತಿರುವ ಈ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲದಂತಾಗಿದೆ. ಹೆಣ್ಣುಮಕ್ಕಳನ್ನು ಕಂಡ ಕೂಡಲೇ ರಣಹದ್ದುಗಳಂತೆ ಹಾತೊರೆಯುವ ಪೈಶಾಚಿಕ ಗಂಡು ಮನಸುಗಳಿರುವವರೆಗೆ ಈ ನಾಡು ಗಾಂಧಿ ಕಂಡ ರಾಮರಾಜ್ಯವಾಗಲು ಹೇಗೆ ಸಾಧ್ಯವಾದೀತು?
