ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ (ಎಸ್‌ಸಿ/ಎಸ್‌ಟಿ) ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಿಗೆ ಸರ್ಕಾರಿ ಸೌಲಭ್ಯಗಳನ್ನು ಸೂಕ್ತ ಸಮಯದಲ್ಲಿ ತಲುಪುವಂತೆ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ನಡೆಎದ ‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಕುಂದುಕೊರತೆ ಸಭೆ’ಯಲ್ಲಿ ಪ್ರವಾಹದಿಂದ ಸ್ಥಳಾಂತರಗೊಂಡ ಕುಟುಂಬಗಳು, ಕಳಪೆ ರಸ್ತೆ ಕಾಮಗಾರಿ, ಅಂಬೇಡ್ಕರ್ ವೃತ್ತದಲ್ಲಿ ಬೀದಿ ದೀಪಗಳ ವ್ಯವಸ್ಥೆ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ, ಹಕ್ಕುಪತ್ರಗಳ ವಿತರಣೆ ಕುರಿತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಂದ ಕುಂದುಕೊರತೆಗಳನ್ನು ಜಿಲ್ಲಾಧಿಕಾರಿ ಆಲಿಸಿದರು.
“ಸರ್ಕಾರದಿಂದ ಬಿಡುಗಡೆಯಾಗಿರುವ ಎಸ್‌ಸಿಪಿ/ ಟಿಎಸ್‌ಪಿ ಅನುದಾನ ಸದ್ಭಳಕೆಯಾಗಬೇಕು. ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗದಂತೆ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು” ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಸ್ ನೇಮಗೌಡ ಮಾತನಾಡಿ, “ಜಿಲ್ಲೆಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ವಿಳಂಬ ಮಾಡದೇ ಕೂಡಲೇ ದಾಖಲಿಸಿಕೊಳ್ಳಬೇಕು. ಅದೇ ರೀತಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳಬೇಕು. ಅನಗತ್ಯವಾಗಿ ವಿಳಂಬ ತೋರಿದಲ್ಲಿ, ಅಂತಹ ಪೊಲೀಸ್ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ, ಡಿವೈಎಸ್‌ಪಿ ಎಂ.ಬಿ ಸಂಕದ, ವೈ.ಎಸ್ ವಾಗದ ಗೌಡರ, ತಮ್ಮರಾಯ ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮುದಾಯದವರು ಹಾಜರಿದ್ದರು.