ಉದ್ದಿಮೆಗೆ ಸಂಬಂಧಿಸಿದ ಕಾನೂನಿನ ಎಲ್ಲ ನಿಯಮಗಳನ್ನು ಅರಿತುಕೊಂಡು ಮೂಲ ಮಾಲೀಕರು ಹಾಗೂ ಗುತ್ತಿಗೆದಾರರು ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕು. ಜೊತೆಗೆ ಕಾಲ-ಕಾಲಕ್ಕೆ ಸರಿಯಾದ ವೇತನವನ್ನು ಒದಗಿಸಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ ಗುರುಪ್ರಸಾದ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವಾಗಳ ಪ್ರಾಧಿಕಾರ, ಇಪಿಎಫ್‌ಓ ಹಾಗೂ ಇಎಸ್‌ಐ ಇಲಾಖೆಗಳು ಜಂಟಿಯಾಗಿ ಸರ್ಕಾರದ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ಶಾಸನಬದ್ಧ ಸೌಲಭ್ಯಗಳ ಕುರಿತು ಅರಿವು ಕಾರ್ಯಕ್ರಮ ಆಯೋಜಿಸಿದ್ದವು. ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಮೂಲ ಮಾಲೀಕರು ಮತ್ತು ಗುತ್ತಿಗೆದಾರರು ಕರ್ನಾಟಕ ಸರ್ಕಾರ ನೀಡಿರುವ ಅಧಿಸೂಚನೆಯ ಅನುಸೂಚಿತ ಉದ್ದಿಮೆಗೆ ಸಂಬಂಧಿಸಿದಂತೆ ಕಾನೂನಿನ ಎಲ್ಲ ನಿಯಮಾವಳಿಗಳನ್ನು ತಿಳಿದುಕೊಂಡಿರಬೇಕು. ಕಾನೂನಿಗೆ ಅನುಗುಣವಾಗಿ ಕಾರ್ಮಿಕರ ಸಮಸ್ಯೆಗಳನ್ನು ಅರಿತು, ಅವರಿಗೆ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು” ಎಂದರು.
“ಕೆಲಸದ ಸಮಯದಲ್ಲಿ ಕಾರ್ಮಿಕರು ಅಪಘಾತಕ್ಕಿಡಾಗಿ ಗಾಯಗೊಂಡರೆ ಅಥವಾ ಸಾವಿಗಿಡಾದರೆ ಅಂತಹ ಕಾರ್ಮಿಕನಿಗೆ ಪರಿಹಾರ ನೀಡಬೇಕಾಗುತ್ತದೆ. ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಅಗತ್ಯದ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಅಗತ್ಯದ ಸುರಕ್ಷಾ ಸಾಮಗ್ರಿಗಳನ್ನೂ ದೊರಕಿಸಬೇಕು. ಅವುಗಳ ಬಳಕೆ ಕುರಿತು ಅರಿವು ನೀಡಬೇಕು. ಒಂದು ವೇಳೆ ಕಾರ್ಮಿಕರು ಕೆಲಸದ ಸಮಯದಲ್ಲಿ ಮಾಲೀಕರ ಸೂಚನೆ ಹಾಗೂ ಸುರಕ್ಷಾ ಸಾಮಗ್ರಿಗಳನ್ನು ಬಳಸದೇ ಅಪಘಾತಕ್ಕಿಡಾದಲ್ಲಿ ಅಂತಹ ಕಾರ್ಮಿಕರಿಗೆ ಪರಿಹಾರ ದೊರಕುವುದಿಲ್ಲ” ಎಂದು ಗುರುಪ್ರಸಾದ ಕೆ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, “ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಠ ವೇತನದ ಅಧಿಸೂಚನೆಗಳಂತೆ ವೇತನ ಪಾವತಿಸಬೇಕು. ಮೂಲ ಮಾಲೀಕರು ತಮ್ಮ ಗುತ್ತಿಗೆದಾರರು ಪಾವತಿಸಿರುವ ವೇತನದ ಕನಿಷ್ಠ ವೇತನದ ದರಕ್ಕಿಂತ ಕಡಿಮೆ ಇಲ್ಲದಂತೆ ಪಾವತಿಸಿರುತ್ತಾರೆಯೇ ಎಂದು ದಾಖಲೆಗಳ ಮೂಲಕ ಸರಿ ಪಡಿಸಿಕೊಳ್ಳಬೇಕು” ಎಂದು ತಿಳಿಸಿದರು.
“ಗುತ್ತಿಗೆ ನೌಕರರು ತಪ್ಪು ಮಾಡಿದಾಗ ಏಕಾಏಕಿ ಅವರನ್ನು ಕೆಲಸದಿಂದ ತೆಗೆಯಬಾರದು. ಒಂದೆರೆಡು ಸಲ ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಬೇಕು. ತಪ್ಪುಗಳು ಮರುಕಳಿಸಿದಾಗ ನಿಯಮಾನುಸಾರ ನೋಟಿಸ್ ಜಾರಿಗೊಳಿಸಿ, ವಿಚಾರಣೆಗೊಳಪಡಿಸಿ ಕೆಲಸದಿಂದ ವಜಾ ಮಾಡಬೇಕು. ಗುತ್ತಿಗೆ ನೌಕರರೂ ಸಹ ಸರ್ಕಾರಿ ನೌಕರರಗಿಂತ ಹೆಚ್ಚಿನ ಕಾರ್ಯ ಮಾಡುವವರಿದ್ದು, ಅವರನ್ನು ಪ್ರಶಂಸಿಸಬೇಕು” ಎಂದರು.
ಸರ್ಕಾರಿ ನೌಕರಿ ಸಂಘದ ಅಧ್ಯಕ್ಷ ರವಿ ಗುಂಜಿಕರ ಮಾತನಾಡಿ, “ಪಿಎಫ್ ಹಾಗೂ ಇಎಸ್‌ಐಗಳ ಬಗ್ಗೆ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಿಳಿದುಕೊಂಡಿರಬೇಕು. ಗುತ್ತಿಗೆ ನೌಕರನಿಗೆ ನಿಯಮಿತವಾಗಿ ಪಿಎಫ್ ಸಂದಾಯವಾಗುತ್ತಿರುವ ಕುರಿತು ನಿಗಾವಹಿಸಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ಡಿ.ಜಿ ನಾಗೇಶ, ಇಪಿಎಫ್‌ಓ ಅನುಷ್ಠಾನಾಧಿಕಾರಿ ಅಲಿಸ್ಟಾರ ಬಿ.ಎಲ್, ಇಎಸ್‌ಐ ಶಾಖಾ ವ್ಯವಸ್ಥಾಪಕ ವೈ.ಎಸ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಬಾಸಾಹೇಬ ನೇಮಗೌಡ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಭೀಮರಾವ್ ಜಾಧವ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.