ಮಹಾರಾಷ್ಟ್ರದ ಮುಂಬೈನ ವಿಲೇ ಪಾರ್ಲೆ ಪೂರ್ವದ ನೆಮಿನಾಥ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ಸುಮಾರು 90 ವರ್ಷ ಹಳೆಯದಾದ ಜೈನ ದೇಗುಲವನ್ನು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಧ್ವಂಸ ಮಾಡಲಾಗಿದೆ. ಬಿಎಂಸಿ ಅಧಿಕಾರಿಗಳ ಈ ಕಾರ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಈಸ್ಟ್ ವಾರ್ಡ್‌ನ ಉಸ್ತುವಾರಿ ವಹಿಸಿದ್ದ ಸಹಾಯಕ ಆಯುಕ್ತ ನವನಾಥ್ ಘಡ್ಗೆ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಘಡ್ಗೆ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಆದರೆ ಕಾರಣ ಬಹಿರಂಗಪಡಿಸಿರಲಿಲ್ಲ. ಆದರೆ ಪ್ರತಿಭಟನೆ ವೇಳೆ ಶಾಸಕ ಪರಾಗ್ ಅಲವಾನಿ ಅವರು ಘಡ್ಗೆ ವರ್ಗಾವಣೆಗೆ ಜೈನ ದೇಗುಲ ಧ್ವಂಸವೇ ಕಾರಣ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮುಂಬೈ ಬಿಎಂಸಿಯಿಂದ 90 ವರ್ಷದ ಜೈನ ದೇಗುಲ ಧ್ವಂಸ: ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನಾ ರ್‍ಯಾಲಿ
ಶ್ರೀ 1008 ದಿಗಂಬರ ಜೈನ ಮಂದಿರ ಟ್ರಸ್ಟ್ ನಿರ್ವಹಿಸುತ್ತಿರುವ ಈ ದೇವಾಲಯವು ಅಕ್ರಮ ಕಟ್ಟಡವೆಂದು ಹೇಳಿ ಏಪ್ರಿಲ್ 16ರಂದು ಕೆ-ಪೂರ್ವ ವಾರ್ಡ್‍ನ ಅಧಿಕಾರಿಗಳು ಧ್ವಂಸಗೊಳಿಸಿದ್ದರು. ಬಾಂಬೆ ಹೈಕೋರ್ಟ್ ತಡೆಯಾಜ್ಞೆ ಆದೇಶ ಬರುವುದಕ್ಕೂ ಮುನ್ನ ದೇಗುಲ ಕೆಡವಿರುವುದನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ಸದ್ಯ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ವಿಪಕ್ಷಗಳ, ಜೈನ ಸಮುದಾಯದ ವಾಗ್ದಾಳಿಗೆ ಗುರಿಯಾಗಿದೆ.
ಈ ಪ್ರದೇಶದಲ್ಲಿ ಬಾರ್ ತೆರೆಯಲು ಬಯಸಿದ್ದ ಹೋಟೆಲ್ ಉದ್ಯಮಿಯೊಬ್ಬರ ಒತ್ತಡಕ್ಕೆ ಒಳಗಾಗಿ ದೇವಾಲಯವನ್ನು ಕೆಡವಲಾಗಿದೆ ಎಂಬುದು ಜೈನ ನಾಯಕ ಅನಿಲ್ ಶಾ ಅವರ ಆರೋಪ. “ಹೋಟೆಲ್ ಉದ್ಯಮಿ ಹಲವು ಅಕ್ರಮ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಈ ಕಟ್ಟಡಗಳನ್ನು ಕೆಡವಲು ಕೋರ್ಟ್ ಆದೇಶವಿದ್ದರೂ ಅಧಿಕಾರಿಗಳು ಏನೂ ಮಾಡಿಲ್ಲ. ಆದರೆ ಈಗ ಅಧಿಕಾರಿಗಳು ಕೋರ್ಟ್ ಆದೇಶಕ್ಕೆ ಕಾಯದೆಯೇ ಹಳೆಯ ಜೈನ ದೇವಾಲಯವನ್ನು ತಕ್ಷಣವೇ ಕೆಡವಿದರು. ದೇವಾಲಯವನ್ನು ಕೆಡವಲು ತನ್ನ ಪ್ರಭಾವವನ್ನು ಬಳಸಿದ ಈ ಹೋಟೆಲ್ ಉದ್ಯಮಿಯ ವಿರುದ್ಧ ಈಗ ಇಡೀ ಜೈನ ಸಮುದಾಯವಿದೆ” ಎಂದು ಹೇಳಿದ್ದಾರೆ.
भाजपा सरकार के तहत मुंबई में तोड़े गये जैन मंदिर के विरोध में उमड़ा ये जैन समाज, देश में भाजपा सरकारों द्वारा अल्पसंख्यकों के उत्पीड़न के ख़िलाफ़ उफान पर आया वो क्रोध, रोष और आक्रोश है जिसका ज्वालामुखी बहुत दिनों से सुलग रहा था।
— Akhilesh Yadav (@yadavakhilesh) April 19, 2025
आज ये तस्वीरें पूरी दुनिया में देखी जा रही हैं।… pic.twitter.com/nExrMKoAYu
ಜೈನ ದೇಗುಲವನ್ನು ಕೆಡವುದರಿಂದ ತನ್ನ ಪಕ್ಷಕ್ಕೆ ಆಗುವ ನಷ್ಟವನ್ನು ತಡೆಯುವ ಪ್ರಯತ್ನವನ್ನು ಮಾಡಿದ ಬಿಜೆಪಿ, ಜೈನ ಧರ್ಮಕ್ಕೆ ಸೇರಿದ ತನ್ನ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರನ್ನು ಸ್ಥಳಕ್ಕೆ ಕಳುಹಿಸಿದೆ. ಆದರೆ ಆ ಹೊತ್ತಿಗೆ ಧ್ವಂಸ ಕಾರ್ಯವನ್ನು ಪೂರ್ಣಗೊಳಿಸಲಾಗಿತ್ತು. ಬಿಎಂಸಿ ನೇರವಾಗಿ ಬಿಜೆಪಿ ನಿಯಂತ್ರಿತ ರಾಜ್ಯ ಸರ್ಕಾರದ ಅಡಿಯಲ್ಲಿದೆ. ಸ್ಥಳೀಯ ಶಾಸಕ ಪರದ್ ಅಲವಾನಿ ಕೂಡ ಬಿಜೆಪಿಗೆ ಸೇರಿದವರು. ಆದ್ದರಿಂದ ಬಿಜೆಪಿ ವಿರುದ್ಧ ಜೈನ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನು ಓದಿದ್ದೀರಾ? ಉತ್ತರಾಖಂಡದ ಸುರಂಗ ಕಾರ್ಮಿಕರನ್ನು ರಕ್ಷಿಸಿದ್ದ ವಕೀಲ್ ಹಸನ್ ಮನೆ ಧ್ವಂಸಗೊಳಿಸಿದ ದೆಹಲಿ ಅಭಿವೃದ್ಧಿ ಪ್ರಾಧಿಕಾರ!
ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಸಿಂಗ್ ಯಾದವ್ ದೇಗುಲ ಧ್ವಂಸವನ್ನು ಖಂಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಧಾರ್ಮಿಕ ಅಲ್ಪಸಂಖ್ಯಾತರನ್ನು ಅವರ ಭೂಮಿ ಮತ್ತು ಆಸ್ತಿಯನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.
“ದೇಶದ ವಿವಿಧ ಭಾಗಗಳಲ್ಲಿ ಜೈನ ಮುನಿಗಳು ಮತ್ತು ಅವರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು ನಡೆಯುತ್ತಿದೆ. ಪ್ರಸ್ತುತ ಧಾರ್ಮಿಕ ಅಲ್ಪಸಂಖ್ಯಾತರಾಗಿರುವುದು ಒಂದು ಶಾಪ ಎಂಬಂತಾಗಿದೆ. ಅಲ್ಪಸಂಖ್ಯಾತ ಜೈನ ಸಮುದಾಯದಲ್ಲಿ ಭಯ, ಅಭದ್ರತೆ ಹೆಚ್ಚಾಗುತ್ತಿದೆ” ಎಂದರು.
“ಮಧ್ಯಪ್ರದೇಶದ ಸಿಂಗೋಲಿಯಲ್ಲಿ ಜೈನರ ಮೇಲೆ ಹಿಂಸಾತ್ಮಕ ದಾಳಿ, ವಿಲೇ ಪಾರ್ಲೆಯಲ್ಲಿ ದೇವಾಲಯದ ಧ್ವಂಸ, ಜಾರ್ಖಂಡ್‌ನ ಗಿರಿಧಿಹ್‌ನಲ್ಲಿ ಸಮ್ಮೇದ್ ಶಿಕಾರ್ ವಿಚಾರದಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಮತ್ತು ಉತ್ತರಪ್ರದೇಶದ ಭಾಗ್‌ಪತ್‌ನಲ್ಲಿ ಜೈನ ವಿಗ್ರಹ ಸ್ಥಾಪನೆಗೆ ವಿರೋಧ ಎಲ್ಲವೂ ಜೈನರ ವಿರುದ್ಧದ ಬಿಜೆಪಿಯ ಅಭಿಯಾನವನ್ನು ಸೂಚಿಸುತ್ತದೆ. ಬಿಜೆಪಿ ಭೂಕಬಳಿಕೆಯಲ್ಲಿ ತೊಡಗಿದೆ” ಎಂದು ಆರೋಪಿಸಿದರು. ಹಾಗೆಯೇ “ಭಾರತೀಯ ಜನತಾ ಪಕ್ಷವನ್ನು ಭಾರತೀಯ ಜಮೀನ್ ಪಕ್ಷ ಎಂದು ಮರುನಾಮಕರಣ ಮಾಡಬೇಕೆಂದು” ಎಂದು ವ್ಯಂಗ್ಯವಾಡಿದರು.
ಸದ್ಯ ಮುಂಬೈನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಜೈನ ಸಮುದಾಯವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆದಿದೆ.
