ರಾಜ್ಯದಲ್ಲಿ ಮುಂಗಾರು ಈಗ ಚುರುಕಾಗಿದ್ದು, ಎಲ್ಲೆಡೆ ಮಳೆ ಸುರಿಯುತ್ತಿದೆ. ಮಳೆಗಾಲ ಇರುವ ಹಿನ್ನೆಲೆ, ಗದಗ-ಬೇಟಗೇರಿ ನಗರಸಭೆಯ 35 ವಾರ್ಡ್‌ಗಳಲ್ಲಿರುವ ಚರಂಡಿಯನ್ನು ಕೂಡಲೇ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ, ನಗರಸಭೆ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡ ಮುತ್ತಣ್ಣ ಚೌಡಣ್ಣವರ ಎಚ್ಚರಿಕೆ ನೀಡಿದರು.
ಗದಗ-ಬೆಟಗೇರಿ ನಗರಸಭೆಯ 35 ವಾರ್ಡಗಳಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಕರವೇ ಕಾರ್ಯಕರ್ತರು ಗದಗ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುತ್ತಣ್ಣ ಔಡಣ್ಣವರ, “ನಗರದಲ್ಲಿರುವ ಬಹುತೇಕ ಚರಂಡಿಗಳು ತುಂಬಿ ಹರಿಯುತ್ತಿವೆ. ಕಸ-ಕಡ್ಡಿ ಸೇರಿದಂತೆ ಚರಂಡಿಯಲ್ಲಿ ಹೂಳು ತುಂಬಿಕೊಂಡಿದೆ. ಇದರಿಂದ ಗಬ್ಬು ವಾಸನೆ ಬರುತ್ತಿದೆ. ಮಳೆ ಬಂದಾಗ ನೀರು ಚರಂಡಿಯಲ್ಲಿ ಪೋಲಾಗಲು ದಾರಿಯಿಲ್ಲದೆ, ರಸ್ತೆಯ ಮೇಲೆ ಹರಿಯುತ್ತದೆ. ಇದರಿಂದ ಸಾರ್ವಜನಿಕರು ಅನಾರೋಗ್ಯಕ್ಕೆ ತುತ್ತಾಗುವಂತಹ ಸಂಭವ ಹೆಚ್ಚಾಗಿರುತ್ತದೆ” ಎಂದರು.
“ಕೂಡಲೇ ಅಧಿಕಾರಿಗಳು ಎಚ್ಚೆತ್ತು ನಗರದಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಜತೆಗೆ ನಗರಸಭೆಯ ಎಲ್ಲ ವಾರ್ಡಗಳಲ್ಲಿ ರಸ್ತೆ ಬದಿ ಗಿಡ ಗಂಟಿಗಳು, ಕಸ ತುಂಬಿದೆ. ಇವುಗಳನ್ನು ಸಹ ಸ್ವಚ್ಛ ಮಾಡಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬಸ್ ಅಪಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿ ಕುಟುಂಬಕ್ಕೆ ₹4 ಲಕ್ಷ ಪರಿಹಾರ: ಬೆಂಗಳೂರು ವಿಶ್ವವಿದ್ಯಾಲಯ
“ಅಧಿಕಾರಿಗಳು ಕೂಡಲೇ ಕಾರ್ಯನಿರ್ವಹಿಸದಿದ್ದರೆ, ನಗರಸಭೆಯ ಕಾರ್ಯಾಲಯದ ಮುಂದೆ ಪ್ರತಿಭಟನೆ ಮಾಡುತ್ತೇವೆ” ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರು ವಿನಾಯಕ ಬದಿ, ವಿರುಪಾಕ್ಷ ಹಿತ್ತಲಮನಿ, ದಾವಲಸಾಬ್ ಶಿರಹಟ್ಟಿ, ಇಸಾಭ್ ನದಾಪ್ ಸೇರಿದಂತೆ ಮತ್ತಿತರಿದ್ದರು.