ರಾಜ್ಯದ ಪ್ರಬಲ ಸಮುದಾಯವಾದ ಪಂಚಮಸಾಲಿ ಸಮಾಜದಲ್ಲಿ ಆಂತರಿಕ ಕಲಹಗಳು ತಾರಕಕ್ಕೇರಿದ್ದು, ಕೂಡಲಸಂಗಮ ಪೀಠ ಹಾಗೂ ಸಮಾಜದ ಮೇಲೆ ಹಿಡಿತ ಸಾಧಿಸಲು ಎರಡು ಗುಂಪುಗಳ ನಡುವೆ ತಿಕ್ಕಾಟ ಏರ್ಪಟ್ಟಿದೆ.
ಕೂಡಲಸಂಗಮ ಪೀಠದ ಭವಿಷ್ಯ ನಿರ್ಧರಿಸಲು ಬಾಗಲಕೋಟೆಯಲ್ಲಿ ಏಪ್ರಿಲ್ 19ರಂದು ಅಖಿಲ ಭಾರತ ಪಂಚಮಸಾಲಿ ಸಮಾಜ ಟ್ರಸ್ಟ್ ಕರೆದಿದ್ದ ಸಭೆ, ಏಪ್ರಿಲ್ 20ರಂದು ಪೀಠಾಧ್ಯಕ್ಷ ಬಸವಜಯಮೃತ್ಯಂಜಯ ಸ್ವಾಮೀಜಿ ಕರೆದಿದ್ದ ಸಭೆಗಳು ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿವೆ. ಆದರೆ, ಸಮಾಜದ ನಾಯಕರೊಳಗಿನ ಅಸಮಾಧಾನ ಶಮನವಾಗಿಲ್ಲ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕು ಎಂಬ ಹೋರಾಟವು ರಾಜಕೀಯ ಮೇಲಾಟಕ್ಕೆ ಬಳಕೆಯಾಗುತ್ತಿದೆ. ಬಿಜೆಪಿ ಸರ್ಕಾರವಿದ್ದಾಗ, ಕಾಂಗ್ರೆಸ್ ಶಾಸಕರು ಹೋರಾಟದ ನೇತೃತ್ವ ವಹಿಸಿದ್ದರು. ಬಿಜೆಪಿ ಶಾಸಕರು ಅಂತರ ಕಾಯ್ದುಕೊಂಡಿದ್ದರು. ಈಗ ಕಾಂಗ್ರೆಸ್ ಸರ್ಕಾರ ಆಡಳಿತವಧಿಯಲ್ಲಿ ಬಿಜೆಪಿ ಶಾಸಕರು ಹೋರಾಟದ ಮುಂಚೂಣಿಯಲ್ಲಿದ್ದರೆ, ಕಾಂಗ್ರೆಸ್ ಶಾಸಕರು ಅಂತರ ಕಾಯ್ದುಕೊಂಡಿದ್ದಾರೆಂಬ ಆರೋಪವಿದೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಮೀಸಲಾತಿಗಾಗಿ ಹೋರಾಟಕ್ಕಿಳಿದಿದ್ದ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರವಾಗಿತ್ತು. ಅಲ್ಲಿಂದಲೇ ಸಮಾಜದೊಳಗೆ ತಿಕ್ಕಾಟ ತೀವ್ರವಾಗಿತ್ತು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆಯೊಂದಿಗೆ ಹೋರಾಟ ತಾರಕಕ್ಕೇರಿದೆ.
ಶಾಸಕ ಬಸನಗೌಡ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿದ್ದನ್ನು ಖಂಡಿಸಿ ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಬಹಿರಂಗವಾಗಿ ಹೋರಾಟದ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸ್ವಾಮೀಜಿ ಪರ, ವಿರೋಧ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಪೀಠದಿಂದ ಅವರನ್ನು ಕೆಳಗಿಳಿಸುವ ಯತ್ನವೂ ನಡೆದಿವೆ ಎನ್ನಲಾಗಿದೆ.
ಪಂಚಮಸಾಲಿ ಸಮಾಜ ದೊಡ್ಡದಿದೆ. 80 ಲಕ್ಷ ಜನಸಂಖ್ಯೆ ಇದೆ. ದೊಡ್ಡ ಜನಸಂಖ್ಯೆಗೆ ಮೂರು ಪೀಠ ಸಾಕಾಗಲ್ಲ. ಇನ್ನೂ ಎರಡು ಪೀಠ ಮಾಡುತ್ತೇವೆಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳುತ್ತಿದ್ದಾರೆ.
ಏಪ್ರಿಲ್ 19ರಂದು ಕರೆದಿದ್ದ ಸಭೆಯನ್ನು ಮಾಜಿ ಸಚಿವ ಎ ಬಿ ಪಾಟೀಲ ಮತ್ತು ಕೆಲ ಪ್ರಮುಖರ ಕೋರಿಕೆಯಂತೆ ಮುಂದೂಡಲಾಗಿದೆ. ಶೀಘ್ರದಲ್ಲೇ ಕೂಡಲಸಂಗಮದಲ್ಲಿ ಸಭೆ ಕರೆಯಲಾಗುವುದೆಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಜಿ+1 ಮನೆಗಳನ್ನು ವಿತರಣೆ ಮಾಡದಿದ್ದರೆ ಪುರಸಭೆ ಎದುರು ಧರಣಿ ನಡೆಸಲಾಗುವುದು: ಬಸವರಾಜ ಪೂಜಾರ ಎಚ್ಚರಿಕೆ
ಪಂಚಮಸಾಲಿ ಸಮಾಜದ ಮೊದಲ ಪೀಠ ಹರಿಹರದಲ್ಲಿದೆ. ರಾಜಕೀಯ ಮೇಲಾಟದ ಕಾರಣಕ್ಕೆ ಕೂಡಲಸಂಗಮದಲ್ಲಿ ಎರಡನೇ ಪೀಠ ಆರಂಭವಾಯಿತು. ಎರಡನೇ ಪೀಠದ ಸ್ವಾಮೀಜಿ ತಮಗೆ ಸಮರ್ಪಕವಾಗಿ ಸ್ಪಂದಿಸಲಿಲ್ಲವೆಂಬ ಕಾರಣಕ್ಕೆ ಕೆಲ ರಾಜಕಾರಣಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರಿನಲ್ಲಿ ಮೂರನೇ ಪೀಠ ಸ್ಥಾಪಿಸಿದರು.
“ಕೂಡಲಸಂಗಮ ಪೀಠದಿಂದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಕೆಳಗಿಳಿಸಿದರೆ ಅಲ್ಲಿಯೇ ಜಾಗ ತೆಗೆದುಕೊಂಡು ಮತ್ತೊಂದು ಪೀಠ ಸ್ಥಾಪಿಸಲಾಗುವುದು” ಎಂದು ಮಾಜಿ ಸಚಿವ ಸಿ ಸಿ ಪಾಟೀಲ ಎಚ್ಚರಿಕೆ ನೀಡಿದ್ದಾರೆಂದು ತಿಳಿದುಬಂದಿದೆ.