ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿರುವ ಡಿಜಿಟಲ್ ಗ್ರಂಥಾಲಯದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ. ಆದರೆ, ಗ್ರಂಥಾಲಯದಲ್ಲಿ ಸ್ವಚ್ಛತೆ ಇಲ್ಲದಿರುವ ಕಾರಣ ಸರಿಯಾಗಿ ಬಳಕೆ ಆಗುತ್ತಿಲ್ಲ. ಕೇವಲ ಹೆಸರಿಗಷ್ಟೆ ಗ್ರಂಥಾಲಯ ಇದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಕೋಟಿ, “ಗ್ರಾಮದ ಡಿಜಿಟಲ್ ಗ್ರಂಥಾಲಯವು ಸರಿಯಾಗಿ ಬಳಕೆ ಆಗುತ್ತಿಲ್ಲ. ಸಾರ್ವಜನಿಕರಿಗೆ ತಲುಪದೆ ಹೆಸರಿಗಷ್ಟೆ ಗ್ರಂಥಾಲಯವಾಗಿ ಉಳಿದಿದೆ. ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳಿದ್ದರೂ ಓದಲು ಜನರೇ ಇಲ್ಲದಂತಾಗಿದೆ. ಗ್ರಂಥಾಲಯವನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲ. ಪತ್ರಿಕೆಗಳು ಸಹ ಗ್ರಂಥಾಲಯಕ್ಕೆ ಬರುತ್ತಿಲ್ಲ” ಎಂದರು.
“ಸಾರ್ವಜನಿಕರು ಗ್ರಂಥಾಲಯಕ್ಕೆ ಬಂದು ಪುಸ್ತಕ ಒದಬೇಕಾದರೇ, ಮೊದಲಿಗೆ ಗ್ರಂಥಾಲಯಕ್ಕೆ ದಿನ ನಿತ್ಯ ಪತ್ರಿಕೆಗಳನ್ನು ತರಿಸಬೇಕು. ಇದರಿಂದ ಜನರು ಮೊದಲಿಗೆ ಓದಲು ಆಕರ್ಷಿತರಾಗುತ್ತಾರೆ. ಪತ್ರಿಕೆ ಓದಲು ಬಂದು ಪುಸ್ತಕಗಳನ್ನು ಓದಲು ಪ್ರಾರಂಭಿಸುತ್ತಾರೆ. ಗ್ರಂಥಾಲಯದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಓದುವ ಹಂಬಲವನ್ನು ಹೆಚ್ಚು ಮಾಡಬೇಕು. ಗ್ರಾಮದಲ್ಲಿ ಪ್ರತಿವಾರ ಓದುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ಎಲ್ಲ ವಾರ್ಡ್‌ಗಳ ಚರಂಡಿ ಸ್ಚಚ್ಚಗೊಳಿಸಿ; ಕರವೇ ಆಗ್ರಹ
“ಗ್ರಂಥಾಲಯದಲ್ಲಿ ಇಷ್ಟೊಂದು ಸಮಸ್ಯೆ ಇದ್ದರೂ ಸಹ ಗ್ರಾಮ ಪಂಚಾಯತ್ ಸದಸ್ಯರು, ಪಿಡಿಓ ಅಧಿಕಾರಿಗಳು ಒಂದು ಬಾರಿಯೂ ಗ್ರಂಥಾಲಯದ ಕಡೆಗೆ ಬಂದು ಸಮಸ್ಯೆ ಏನು ಎಂದು ನೋಡಿಲ್ಲ, ಕೂಡಲೆ ಗ್ರಂಥಾಲಯ ಸಮಗ್ರ ಅಭಿವೃದ್ಧಿ ಮಾಡಬೇಕು. ಕಣಕಾಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ್ ಸರ್ವಸದಸ್ಯರು ಈ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತವೆ” ಎಂದು ಎಚ್ಚರಿಕೆ ನೀಡಿದರು.