ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ತಲಾ 10 ಕೆ.ಜಿ ಅಕ್ಕಿ ನೀಡಲು ಅಕ್ಕಿ ದಾಸ್ತಾನಿಗಾಗಿ ರಾಜ್ಯ ಸರ್ಕಾರ ಹೆಣಗಾಡುತ್ತಿದೆ. ಕೇಂದ್ರ ಸರ್ಕಾರ ಅಸಕಾರದಿಂದ ಬೇಸತ್ತಿರುವ ಸರ್ಕಾರ ಪಡಿತರದಾರರಿಗೆ ತಲಾ 5 ಕೆ.ಜಿ ಅಕ್ಕಿ ಮತ್ತು ಉಳಿದ ಐದು ಕೆ.ಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಘೋಷಿಸಿದೆ. ಈ ಮಧ್ಯೆ, ಹಣದ ಬದಲಿಗೆ ರೈತರು ಸ್ಥಳೀಯವಾಗಿ ಬೆಳೆಯುವ ರಾಗಿ, ಜೋಳಗಳನ್ನು ಖರೀದಿಸಿ, ಪಡಿತರದಾರರಿಗೆ ವಿತರಿಸಬೇಕೆಂಬ ಸಲಹೆಗಳೂ ಕೇಳಿಬಂದಿದೆ.
ಅದೇ ರೀತಿಯಲ್ಲಿ ಅನ್ನಭಾಗ್ಯ ಯೋಜನೆಯಡಿ ಸಿರಿಧಾನ್ಯಗಳನ್ನು ವಿತರಿಸಬೇಕು ಎಂಬ ಒತ್ತಾಯಗಳೂ ಇವೆ. ಪಡಿತರದಾರರಿಗೆ ಸಿರಿಧಾನ್ಯಗಳನ್ನು ವಿತರಣೆ ಮಾಡುವುದರಿಂದ, ಅವರಿಗೆ ಪೌಷ್ಠಿಕ ಆಹಾರ ದೊರೆಯುತ್ತದೆ. ಆರೋಗ್ಯವೂ ಸುಧಾರಣೆಯಾಗುತ್ತದೆ ಎಂದು ಹೇಳಲಾಗುತ್ತಿದೆ.
ಈ ಒತ್ತಾಯದ ಭಾಗವಾಗಿ, ಬೆಳಗಾವಿಯಲ್ಲಿ ಜುಲೈ 2ರ ಭಾನುವಾರ, ‘ಅನ್ನಭಾಗ್ಯದಡಿ ಸಿರಿಧಾನ್ಯ ತಂದು ಹಸಿವು, ಅಪೌಷ್ಟಿಕತೆ ಹೊಡೆದೋಡಿಸೋಣ’ ಎಂಬ ವಿಚಾರಗೋಷ್ಠಿಯನ್ನು ಆಯೋಜಿಸಲಾಗಿದೆ. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕೃಷಿ ಆರ್ಥಿಕ ತಜ್ಞ ಡಾ. ಪ್ರಕಾಶ ಕಮ್ಮರಡಿ ಮತ್ತು ಆರ್ಥಿಕ ತಜ್ಞ ಜಿ.ವಿ ಸುಂದರ ವಿಷಯ ಮಂಡಿಸಲಿದ್ದಾರೆ. ಜಾಗೃತ ಮಹಿಳಾ ವೇದಿಕೆಯ ಶಾರದಾ ಗೋಪಾಲ್, ಭಾರತೀಯ ಕೃಷಿಕ ಸಮಾಜದ ಸಿದಗೌಡ ಮೋದಗಿ, ಭಾರತೀಯ ಕಿಸಾನ್ ಯೂನಿಯನ್‌ನ ಕಾ. ಸಿದ್ದನಗೌಡ ಪಾಟೀಲ, ಕಾ. ನೇಗೇಶ ಸಾತೇರಿ ಭಾಗವಹಿಸಿದ್ದಾರೆ.
