ಸಂವಿಧಾನ ಜಾಗೃತಿ ಅಭಿಯಾನದ ಮೂಲಕ ಜನಸಾಮಾನ್ಯರಿಗೆ ಸಂವಿಧಾನ ಪರಿಚಯಿಸುವ ಕೆಲಸವಾಗಬೇಕು. ಅದರಲ್ಲಿ ಪ್ರಶ್ನಿಸುವ ಹಕ್ಕು ಇದೆ, ಸಮಾನತೆ, ಸೌಹಾರ್ದತೆ ಇದೆ’ ಎಂದು ಲಡಾಯಿ ಪ್ರಕಾಶಕ ಹಾಗೂ ಬಂಡಾಯ ಸಾಹಿತಿ ಬಸವರಾಜ್ ಸೂಳಿಬಾವಿ ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕನೂರಿಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು. ಅಂಬೇಡ್ಕರ್ ಅವರ ಭಾವಚಿತ್ರವನ್ನು ಮುಖ್ಯ ರಸ್ತೆಯಲ್ಲಿ ಹಾದು ಕಾರ್ಯಕ್ರಮ ಆಯೋಜಿಸಿದ್ದ ಬಾಬಾ ಸಾಹೇಬರ ವೃತ್ತದವರೆಗೆ ಮೆರವಣಿಗೆ ಮಾಡಿದ ಬಳಿಕ ಮಾತನಾಡಿದರು.
“ಅಂಬೇಡ್ಕರ್ ದಿನ ಆಚರಿಸುವಾಗ ಅವರ ಗೀತೆಗಳನ್ನು ಹಾಡಬೇಕು ಅಥವಾ ಸಂವಿಧಾನ ಪೂರ್ವ ಪೀಠಿಕೆ ಓದುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಬೇಕು. ಆದರೆ, ಬಾಬಾ ಸಾಹೇಬರ ದಿನದ ಕಾರ್ಯಕ್ರಮದಲ್ಲಿ ದೇವರ ಭಕ್ತಿಗೀತೆ ಹಾಡುತ್ತೇವೆಂದರೆ ನಮಗೆ ಅಂಬೇಡ್ಕರ್ ಭಾವಚಿತ್ರ ಪರಿಚಯವಾಗಿದೆಯೇ ಹೊರತು, ಅವರ ಚಿಂತನೆ, ವಿಚಾರ, ಸಿದ್ಧಾಂತಗಳು ಹಾಗೂ ಆದರ್ಶ ಬದುಕು ಬಹಳಷ್ಟು ಪರಿಚಯವಾಗಿಲ್ಲ” ಎಂದು ಕಾರ್ಯಕ್ರಮದ ಪೂರ್ವದಲ್ಲಿ ದೇವರ ಭಕ್ತಿಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಿಸಿದ್ದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
“ನಾವು ಸಾಹೇಬರ ಜಯಂತಿಗೆ ಬಂದಿದ್ದೇವೋ ಅಥವಾ ಯಾವುದಾದರೂ ಜಾತ್ರೆಗೆ ಬಂದಿದ್ದೇವೋ ಎನ್ನುವ ಅನುಮಾನ ನನ್ನನ್ನು ಕಾಡಲಾರಂಭಿಸಿತು. ಇವತ್ತಿಗೂ ದೇವಸ್ಥಾನದಲ್ಲಿ ದಲಿತರಿಗೆ ಅವಕಾಶ ಇದೆಯೇ? ದೇವಸ್ಥಾನದಲ್ಲಿ ಎಲ್ಲ ಸಮುದಾಯಗಳಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡುವುದು ಸಂವಿಧಾನದ ಹಾಗೂ ಅಂಬೇಡ್ಕರ್ ಅವರ ಆಶಯವಾಗಿದೆ. ಸಂವಿಧಾನ ಇಲ್ಲದೇ ಇದ್ದಿದ್ದರೆ, ದೇವಾಲಯ ಪ್ರವೇಶಕ್ಕು ಸಾಧ್ಯವಾಗುತ್ತಿರಲಿಲ್ಲ, ಈ ದೇಶದ ಮುಖ್ಯ ನ್ಯಾಯಾಧೀಶರಾಗಲೂ ಸಾಧ್ಯವಾಗುತ್ತಿರಲಿಲ್ಲ. ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಲು, ಚಹಾ ಮಾರುತ್ತಿದ್ದೆ ಎಂದವರು ಪ್ರಧಾನಿಯಾಗಿರುವುದು ಯಾವುದೇ ದೇವರಿಂದಲೂ ಅಲ್ಲ, ಧರ್ಮಗ್ರಂಥಗಳಿಂದಲೂ ಅಲ್ಲ. ಅದು ಬಾಬಾ ಸಾಹೇಬರು ರಚಿಸಿದ ಸಂವಿಧಾನದಿಂದ” ಎಂದರು.
“ನಮ್ಮ ದೆಶದ ಸಂಪನ್ಮೂಲ ಹಂಚಿಕೆಯಾಗಬೇಕು. ಅದರೆ, ಸಂಪತ್ತು ಕೆಲವೇ ಕೆಲವು ಜನರ ಕೈಯಲ್ಲಿದೆ. ಕೊರೊನಾ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಸಂಪನ್ಮೂಲ 6 ಪಟ್ಟು ಜಾಸ್ತಿಯಾಗುತ್ತದೆ. ಅದರೆ, ಸಾಮನ್ಯರ ಜನರ ಬದುಕು ದುರ್ಬಲವಾಗಿತ್ತು. ಸಂವಿಧಾನವನ್ನು ಸಾಮಾನ್ಯರಿಗೆ ಪರಿಚಯಿಸುವ ಕೆಲಸ ಮಾಡಿಲ್ಲ. ಯಾಕೆಂದರೆ, ಸಂವಿಧಾನ ಪ್ರಶ್ನಿಸುವ ಕೆಲಸ ಮಾಡುತ್ತದೆ. ಸಂವಿಧಾನ ಪರಿಚಯಿಸುವ ಕೆಲಸ ಮಾಡಿದ್ದರೆ ಈ ದೇಶದ ಸ್ಥಿತಿ ವಿಷಮ ಸ್ಥಿತಿಯಲ್ಲಿರುತ್ತಿರಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಪಂಚಮಸಾಲಿ ಸಮಾಜದ ಹಿಡಿತಕ್ಕೆ ಎರಡು ಗುಂಪುಗಳ ನಡುವೆ ಸಂಘರ್ಷ
“ಈ ದೇಶದ ಶ್ರೀಮಂತನಿಗೂ ಒಂದೇ ಮತ, ಸಾಮನ್ಯ ವ್ಯಕ್ತಿಗೂ ಒಂದೇ ಮತ. ಸಂವಿಧಾನ ಅಂತಹ ಸಮಾನತೆಯನ್ನು ಕಲ್ಪಿಸಿಕೊಟ್ಟಿದೆ. ಈ ದೇಶದ ಯಜಮಾನರು ಪ್ರಜೆಗಳು. ಯಾವುದೇ ನಾಯಕನೂ ಹಾಗೂ ಅಧಿಕಾರಿಗಳು ಈ ದೇಶದ ನಾಯಕನಲ್ಲ. ಅವರೆಲ್ಲ ಪ್ರಜೆಗಳ ಸೇವಕರು. ಸಂವಿಧಾನ ಓದುವ ಅಭಾವ ಹಾಗೂ ಕಾನೂನಿನ ಅರಿವಿನ ಕೊರತೆಯಿಂದ ನಮ್ಮ ಹಕ್ಕುಗಳ ಬಗ್ಗೆ ನಮಗೇ ಗೊತ್ತಾಗುತ್ತಿಲ್ಲ. ಸಂವಿಧಾನದ ಬಗ್ಗೆ ನಮ್ಮಲ್ಲಿ ಅರಿವು ಬಂದರೆ ಈ ದೇಶದ ಆಂತರಿಕ ಅರಿವು ಬರುತ್ತದೆ. ದಾರ್ಶನಿಕರನ್ನು ಜಾತಿಗೆ ಮೀಸಲಿಟ್ಟಿದ್ದೇವೆ. ಎಲ್ಲ ಸಮುದಾಯಕ್ಕೆ ನ್ಯಾಯ ಒದಗಿಸಿಕೊಟ್ಟಿರುವ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಮೀಸಲಿಟ್ಟಿರುವುದು ದುರಂತವೇ ಸರಿ” ಎಂದು ಕಳವಳ ವ್ಯಕ್ತಪಡಿಸಿದರು.
ಮಹಾಂತೇಶ ಆರಬೆರಳಿನ್, ಪೀರಸಾಬ್ ದಫೇದಾರ, ಶರಣಪ್ಪ ವೀರಪೂರ, ಲಕ್ಷ್ಮಣ ಕಾಳಿ, ರತ್ನಾಕರ ತಳವಾರ, ರವೀಂದ್ರ ಬಾಗಲಕೋಟೆ, ಎಚ್ ಪ್ರಾಣೇಶ ತಹಶೀಲ್ದಾರ್, ಸಂತೋಷ ಬಿರಾದರ ಪಾಟೀಲ್ ತಾ.ಪಂ.ಕಾ.ನಿ.ಅಧಿಕಾರಿ, ಶಶಿದರ ಸಕ್ರಿ ಸೇರಿದಂತೆ ಇತರರು ಇದ್ದರು.