ಮಂತ್ರಿ ಮಂಕಾಳ ವೈದ್ಯ ಸ್ವಕ್ಷೇತ್ರ ಭಟ್ಕಳದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಆತಂಕದಲ್ಲಿದ್ದಾರಾ? ಕ್ಷೇತ್ರ ಬದಲಾವಣೆ ಯೋಜನೆ ಹಾಕಿದ್ದಾರಾ? ಪಕ್ಷ ಬದಲಿಸುವ ಯೋಚನೆಯಲ್ಲಿದ್ದಾರಾ? ಮಂತ್ರಿ ಆಗಿದ್ದುಕೊಂಡೇ ಆಗಾಗ ಟಿಪಿಕಲ್ ಬಜರಂಗಿಯಂತೆ ಮಾತಾಡುವುದು ಇದಕ್ಕೆಲ್ಲ ಕಾರಣವಾಗಿದೆ...
ಉತ್ತರ ಕನ್ನಡದ ‘ಸುಸ್ತುವಾರಿ’ ಸಚಿವ ಎಂದೇ ಸುದ್ದಿಯಲ್ಲಿರುವ ಮಂಕಾಳ ವೈದ್ಯ ಸ್ವಕ್ಷೇತ್ರ ಭಟ್ಕಳದಲ್ಲಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಆತಂಕದಲ್ಲಿದ್ದಾರಾ? ಕ್ಷೇತ್ರ ಬದಲಾವಣೆ ಯೋಜನೆಯೇನಾದರೂ ಹಾಕಿದ್ದಾರಾ? ಪಕ್ಷ ಬದಲಿಸುವ ಯೋಚನೆಯಲ್ಲಿದ್ದಾರಾ? ಈ ಪ್ರಶ್ನೆಗಳ ಸುತ್ತ ರೋಚಕ ಚರ್ಚೆಗಳೀಗ ಉತ್ತರ ಕನ್ನಡದ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.
ಮಂಕಾಳ ವೈದ್ಯ ಕಾಂಗ್ರೆಸ್ ಸರಕಾರದ ಮಂತ್ರಿ ಆಗಿದ್ದುಕೊಂಡೇ ಆಗಾಗ ಟಿಪಿಕಲ್ ಬಜರಂಗಿಯಂತೆ ಮಾತಾಡುವುದು ಮತ್ತು ಪಕ್ಕದ ಹೊನ್ನಾವರ-ಕುಮಟಾ ಕ್ಷೇತ್ರದ ರಾಜಕಾರಣದಲ್ಲಿ ಅತೀ ಆಸಕ್ತಿ ತೋರಿಸುತ್ತಿರುವುದು ಇಂಥದೊಂದು ‘ಪಲ್ಲಟ’ದ ಸದ್ದು ಸೃಷ್ಟಿಸಿಬಿಟ್ಟಿದೆ.
ಭಟ್ಕಳ ಅಸೆಂಬ್ಲಿ ಕ್ಷೇತ್ರ ಧರ್ಮಕಾರಣದ ಆಡುಂಬೊಲವಷ್ಟೇ ಅಲ್ಲ, ಜಾತಿಕಾರಣದ ರಣರಂಗವೂ ಹೌದು. ನವಾಯತ ಮುಸಲ್ಮಾನರು ಭಟ್ಕಳ ನಗರ ಮತ್ತು ಹೊನ್ನಾವರದ ಹಲವು ಹಳ್ಳಿಗಳಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಭಟ್ಕಳದ ಬಹುತೇಕ ನವಾಯತರ ಮನೆಯ ಸದಸ್ಯರು ಕೊಲ್ಲಿ ರಾಷ್ಟ್ರದಲ್ಲಿದ್ದಾರೆ. ಅಲ್ಲಿ ದುಡಿದ ದುಡ್ಡನ್ನು ನವಾಯತರು ಇಲ್ಲಿ ಉದ್ಯಮ-ವ್ಯವಹಾರ, ವೈಭವದ ಬಂಗಲೆ, ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಐಶಾರಾಮಿ ವಾಹನಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಬಡ ಹಿಂದುಗಳು ಶ್ರೀಮಂತ ನವಾಯತರ ಮನೆ ಚಾಕರಿಗೆ ಹೋಗುತ್ತಾರೆ. ಹೀಗಾಗಿ ಭಟ್ಕಳದಲ್ಲಿ ಒಂಥರಾ ವರ್ಗ ಸಂಘರ್ಷ ಲಾಗಾಯ್ತಿನಿಂದಲೂ ನಡೆದಿದೆ. ಈ ದ್ವೇಷಾಸೂಯೆಯನ್ನು ಕೋಮು ದಂಗೆಯಾಗಿ ಪರಿವರ್ತಿಸಿ ಅಧಿಕಾರ ಅನುಭವಿಸಿದ ‘ಕೀರ್ತಿ’ ಸಂಘ ಪರಿವಾರದ ಹಿರೇಮಣಿಗಳಿಗೆ ಸಲ್ಲುತ್ತದೆ.
1990ರ ದಶಕದಲ್ಲಿ ಭಟ್ಕಳ ಕೋಮುಗಲಭೆಯ ಬೆಂಕಿಯಲ್ಲಿ ಒಂದಿಡೀ ವರ್ಷ ಹೊತ್ತಿ ಉರಿದಿತ್ತು. ಜನಸಂಘದ ಕಾಲದಿಂದ ಚುನಾವಣೆಗೆ ನಿಂತು-ನಿಂತು ಸೋಲುತ್ತಿದ್ದ ಹಿಂದುತ್ವದ ಪಿತಾಮಹರೆನಿಸಿದ್ದ ಡಾ.ಚಿತ್ತರಂಜನ್ ಈ ಕೋಮು ವೈಷಮ್ಯದ ಕಾವಿನಲ್ಲಿ(1994) ಎಮ್ಮೆಲ್ಲೆ ಭಾಗ್ಯ ಕಂಡಿದ್ದರು. ಇದೇ ಹಿಂದುತ್ವ ಯಜ್ಞಕುಂಡದ ಉಪ-ಉತ್ಪನ್ನಗಳೇ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಮಾಜಿ ಮಂತ್ರಿ ಶಿವಾನಂದ ನಾಯ್ಕ್, ಮಾಜಿ ಶಾಸಕ ಸುನೀಲ್ ನಾಯ್ಕ್ ಮತ್ತಿತರ ಕೇಸರಿ ಶಾಲಿನ ಸಂಘಕಾರಣಿಗಳು. ಹಿಂದುತ್ವದ ಸವಾರಿ ಹೊರಟಿದ್ದ ಚಿತ್ತರಂಜನ್‌ರನ್ನು ಆ ಹುಲಿಯೇ ತಿಂದುಹಾಕಿತು. ಭಟ್ಕಳದ ಮೇಲೆ ಆವಾಹನೆಯಾಗಿದ್ದ ಹಿಂದುತ್ವ ಭೂತ ಅವಿಭಜಿತ ದಕ್ಷಿಣ ಕನ್ನಡದಂತೆ ಶಾಶ್ವತವಾಗೇನೂ ಉಳಿಯಲಿಲ್ಲ. ಅನಂತ್ ಹೆಗಡೆಗೆ ‘ಕರ್ಮಭೂಮಿ’ ಭಟ್ಕಳದಲ್ಲೇ ಕಡಿಮೆ ಮತಗಳು ಬರಲಾರಂಭಿಸಿತು. ‘ಚಿತ್ತರಂಜನ್ ಕೊಲೆಗಡುಕ ಅನಂತಕುಮಾರ್ ಹೆಗಡೆ’ ಎಂಬ ಭಿತ್ತಿಪತ್ರಗಳು ಭಟ್ಕಳದ ಬೀದಿಗಳಲ್ಲಿ ಅನೇಕ ಸಲ ಕಂಗೊಳಿಸಿತು. ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ತಿಣುಕಾಡಬೇಕಾಯಿತು. ಬಿಜೆಪಿ ಹಲವು ಬಾರಿ ಸೋಲು ಕಂಡಿತು. ಉಗ್ರ ಹಿಂದುತ್ವಕ್ಕೆ ಪ್ರಬಲ ಜಾತಿಕಾರಣ ಸೇರಿಸಿದರೂ ಬಿಜೆಪಿಗೆ ಭಟ್ಕಳವನ್ನು ಕೈಜಾರದಂತೆ ಕಬ್ಜಾ ಮಾಡಿಕೊಳ್ಳಲು ಮಾತ್ರ ಆಗಿಲ್ಲ. ಹಾಗಂತ ಕೋಮು ಧ್ರುವೀಕರಣದ ರಾಜಕಾರಣವೇನು ನಿಂತಿಲ್ಲ.
ಹಾಗೆ ನೋಡಿದರೆ ಭಟ್ಕಳ ಅಖಾಡದಲ್ಲಿ ಧರ್ಮಕಾರಣಕ್ಕಿಂತ ಜಿದ್ದಾಜಿದ್ದಿನ ಜಾತಿ ರಾಜಕಾರಣವೇ ಜೋರು. ಒಂದು ಅಂದಾಜಿನಂತೆ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ನಾಮಧಾರಿ(ಈಡಿಗ) ಸಮುದಾಯದ ಮತಗಳು ಸುಮಾರು 65 ಸಾವಿರವಿದೆ. ಎಸ್.ಎಂ.ಯಾಹ್ಯಾ 1983ರಲ್ಲಿ ಸೋತ ಬಳಿಕ ಕಾಂಗ್ರೆಸ್ ಮತ್ತು ಅಂದಿನ ಪ್ರಮುಖ ಎದುರಾಳಿ ಪಕ್ಷವಾದ ಜನತಾ ಪಕ್ಷ-ದಳ ಪ್ರಬಲ ನಾಮಧಾರಿಗಳಿಗೆ ವಿಧಾನಸಭಾ ಚುನಾವಣೆ ಟಿಕೆಟ್ ಕೊಡುವ ಪರಿಪಾಠ ಆರಂಭವಾಯಿತು. ಚಿತ್ತರಂಜನ್ ನಿರ್ಗಮನದ ನಂತರ ಬಿಜೆಪಿಯೂ ನಾಮಧಾರಿ ಧೀರರನ್ನೇ ಕಣಕ್ಕಿಳಿಸಲಾರಂಭಿಸಿತು. ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಯಾರೇ ಶಾಸಕನಾಗಿ ಆಯ್ಕೆಯಾದರೂ ನಾಮಧಾರಿ ಕುಲದವರೇ ಆಗಿರುತ್ತಿದ್ದರು. ಭಟ್ಕಳ ನಾಮಧಾರಿ ಮೀಸಲು ಕ್ಷೇತ್ರದಂತಾಗಿ ಹೋಯಿತು.

ಈ ‘ನಾಮಧಾರಿ ಎಮ್ಮೆಲ್ಲೆ’ ಸಂಪ್ರದಾಯಕ್ಕೆ ತಡೆಹಾಕಿದ್ದು ಹಾಲಿ ಮಂತ್ರಿ ಮಂಕಾಳ ಸುಬ್ಬ ವೈದ್ಯ. ಪಕ್ಷೇತರನಾಗಿ ರಾಜಕೀಯ ರಂಗದಲ್ಲಿ ಪ್ರವರ್ಧಮಾನಕ್ಕೆ ಬಂದವರು ಮಂಕಾಳ ವೈದ್ಯ. ಕಾಂಗ್ರೆಸ್‌ನಲ್ಲಿ ರಾಜಕಾರಣ ಶುರುಹಚ್ಚಿಕೊಂಡಿದ್ದ ಮಂಕಾಳ ವೈದ್ಯ ಒಂದೂವರೆ ದಶಕದ ಹಿಂದೆ ಮುರ್ಡೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ಕೇಳಿದ್ದರು. ಆದರೆ ಅಲ್ಲಿ ದೇಶಪಾಂಡೆಯ ಪರಮಾಪ್ತ ಜಾತಿ ಬಂಧುವಾಗಿದ್ದ ಶ್ರೀಪಾದ್ ಕಾಮತ್ ಬಹುಕಾಲದಿಂದ ಸದಸ್ಯರಾಗಿದ್ದರು. ಹಾಗಾಗಿ ಮಂಕಾಳ ತಿಪ್ಪರಲಾಗ ಹಾಕಿದರೂ ಕೈ ಟಿಕೆಟ್ ಸಿಗಲಿಲ್ಲ. ಬಂಡೆದ್ದ ಮಂಕಾಳ ಪಕ್ಷೇತರನಾಗಿ ಸಮರಾಂಗಣಕ್ಕೆ ಧುಮುಕಿದರು. ಹಳೆ ಹುಲಿ ಕಾಮತ್‌ರನ್ನು ಮಣಿಸಿ ಜಿಪಂ ಸದಸ್ಯನಾಗಿ ಅಚ್ಚರಿ ಮೂಡಿಸಿದರು. ಆ ನಂತರ ಕಾಂಗ್ರೆಸ್ ಸೇರಿದ ಮಂಕಾಳ ವೈದ್ಯರಿಗೆ ಎರಡನೇ ಅವಧಿಯ ಜಿಪಂ ಉಪಾದ್ಯಕ್ಷನಾಗುವ ಯೋಗವೂ ಖುಲಾಯಿಸಿತು. ಮುಂದಿನ ಚುನಾವಣೆಯಲ್ಲಿ ಮಂಕಾಳ ಮಹಿಳಾ ಮೀಸಲಾತಿಯಿಂದಾಗಿ ಪಕ್ಕದ ‘ಜಾಲ’ ಕ್ಷೇತ್ರಕ್ಕೆ ವಲಸೆ ಹೋಗಬೇಕಾಗಿ ಬಂತು. ಅಲ್ಲವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು.
ಮೀನುಗಾರಿಕೆ, ಹೋಟೆಲ್ ಉದ್ಯಮ ಮತು ಪೆಟ್ರೋಲ್-ಡೀಸೆಲ್ ದಂಧೆ ನಡೆಸುತ್ತಿದ್ದ ಮಂಕಾಳ ವೈದ್ಯ ಅದಾಗಲೇ ಎರಡು ಬಾರಿ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಜಿಪಂ ಸದಸ್ಯನಾಗಿ ಹಣಾಹಣಿ ರಾಜಕಾರಣದಲ್ಲಿ ಪಳಗಿದ್ದರು. 2013ರ ಅಸೆಂಬ್ಲಿ ಚುನಾವಣೆ ಹೊತ್ತಲ್ಲಿ ಕೈ ಟಿಕೆಟ್ ಕ್ಲೇಮ್ ಮಾಡಿದರು. ಭಟ್ಕಳ ಕಾಂಗ್ರೆಸ್ ಅಭ್ಯರ್ಥಿತನ ‘ಸಂಪ್ರದಾಯ’ದಂತೆ ಬಹುಸಂಖ್ಯಾತ ನಾಮಧಾರಿ ಸಮುದಾಯದವರಿಗೇ ಕೊಡಲಾಗುತ್ತದೆ; ಮೀನುಗಾರ ಸಂಕುಲದ ‘ಮೊಗೇರ’ ಪಂಗಡದ ತನಗೆ ಕೈ ಕ್ಯಾಂಡಿಡೇಟಾಗುವುದು ಸಾಧ್ಯವೇ ಇಲ್ಲ ಎಂಬುದು ಮಂಕಾಳಗೆ ಪಕ್ಕಾ ಗೊತ್ತಿತ್ತು. ಪಕ್ಷೇತರ ಅಭ್ಯರ್ಥಿಯಾಗುವ ಯೋಜನೆ ಮಂಕಾಳ ಮೊದಲೇ ಹಾಕಿಕೊಂಡಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಯಡಿಯೂರಪ್ಪರ ಕೆಜೆಪಿಯಿಂದ ದೀವರು(ನಾಮಧಾರಿ) ಇಳಿಯುತ್ತಾರೆ; ನವಾಯತರ ಪವರ್‍ಫುಲ್ ‘ತಂಜೀಮ್’ ಆದ್ಮಿ ಜೆಡಿಎಸ್ ಹುರಿಯಾಳಾಗುವಂತೆ ನೋಡಿಕೊಂಡರೆ ತನ್ನ ದಾರಿ ಸುಗಮವಾಗುತ್ತದೆಂಬ ಯೋಚನೆ ಮಂಕಾಳು ವೈದ್ಯರದಾಗಿತ್ತು.
ಇದನ್ನು ಓದಿದ್ದೀರಾ?: ಪುತ್ತೂರು ಶಾಸಕ ಅಶೋಕ್ ರೈ ಯಾವ ಪಕ್ಷದಿಂದ ಗೆದ್ದಿದ್ದಾರೆ, ಯಾವ ಸಿದ್ಧಾಂತ ಅನುಸರಿಸುತ್ತಿದ್ದಾರೆ?
ಮಂಕಾಳ ವೈದ್ಯರ ಲೆಕ್ಕ ತಪ್ಪಲಿಲ್ಲ. ಬಲಾಢ್ಯ ದೀವರ ಏಕಸ್ವಾಮ್ಯದ ರಾಜಕಾರಣದಿಂದ ಇತರ ಸಣ್ಣ-ಪುಟ್ಟ ಜಾತಿ-ಜನಾಂಗ ರೋಸತ್ತುಹೋಗಿದ್ದ ಸಮಯವದಾಗಿತ್ತು; ಕ್ಷೇತ್ರದಲ್ಲಿದ್ದ ದೀವರ ಬಗೆಗಿನ ವಿರೋಧವನ್ನು ಮಂಕಾಳ ಧನಾಧಾರಿತ ಚಾಕಚಕ್ಯತೆಯಿಂದ ಬೆಂಬಲವಾಗಿ ಪರಿವರ್ತಿಸಿಕೊಂಡರು. ದೀವರ ಮತಬ್ಯಾಂಕ್ ಮೂರು ಪಾಲಾಗಿ ಹಂಚಿಹೋಯಿತು; ಕಾಂಗ್ರೆಸ್ ಹುರಿಯಾಳಿನ ಬಗ್ಗೆ ಬೇಸರದಲ್ಲಿದ್ದ ನವಾಯತರು ಒಟ್ಟಾಗಿ ಜೆಡಿಎಸ್‌ನ ಸ್ವಜಾತಿ ಅಭ್ಯರ್ಥಿಗೆ ಮತ ಚಲಾಯಿಸಿದರು. ಮಂಕಾಳ ವೈದ್ಯ ನಾಮಧಾರಿಯೇತರ ಜಾತಿ ಸಮೀಕರಣದಿಂದ ಶಾಸಕನಾದರು.
ಆ ಬಳಿಕ ಕಾಂಗ್ರೆಸ್ ಶಾಸಕಾಂಗದ ಸಹ ಸದಸ್ಯನಾದ ಮಂಕಾಳ ಆಡಳಿತಾರೂಢ ಪಕ್ಷದ ಸಖ್ಯದಿಂದ ಕ್ಷೇತ್ರದಲ್ಲಿ ವರ್ಚಸ್ಸು ಬೆಳೆಸಿಕೊಂಡರು. ಆದರೆ 2018ರ ಚುನಾವಣೆ ಸಂದರ್ಭದಲ್ಲಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಸತ್ತುಹೋಗಿದ್ದ ಹೊನ್ನಾವರದ ಹುಡುಗ ಪರೇಶ್ ಮೇಸ್ತನ ಸಾವಿಗೆ ಕೋಮು ಆಯಾಮ ಕೊಟ್ಟು ಸಂಘ ಪರಿವಾರ ಮಾಡಿದ ‘ಹೆಣದ ರಾಜಕಾರಣ’ದ ಅಬ್ಬರದಲ್ಲಿ ಮಂಕಾಳ ಮಂಕಾದರು. ಸೋತರೂ ಜನರ ಮಧ್ಯವೇ ಉಳಿದಿದ್ದ ಮಂಕಾಳ 2023ರಲ್ಲಿ ದೊಡ್ಡ ಮತದಂತರದಲ್ಲಿ ಚುನಾಯಿತರಾದರು.
ಮಂಕಾಳ ವೈದ್ಯರಿಗೆ ಕನಸಲ್ಲೂ ಎಣಿಸದ ಮಂತ್ರಿಗಿರಿಯೂ ಒಲಿದುಬಂತು. 1983ರಿಂದ ಜನತಾ ಪರಿವಾರ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಮಂತ್ರಿ ಸ್ಥಾನ ಗಿಟ್ಟಿಸುತ್ತಿದ್ದ ಹಳಿಯಾಳದ ಹಳೆ ಹುಲಿ ಆರ್.ವಿ.ದೇಶಪಾಂಡೆ ಸಿದ್ದು ಸರಕಾರ ಸೇರಲು ಶತಾಯಗತಾಯ ಸೆಣಸಾಡಿದರು; ಕೆಪಿಸಿಸಿ ಅಧ್ಯಕ್ಷ ಡಿಕೆಶಿಗದು ಬೇಡವಾಗಿತ್ತು. ಡಿಕೆಶಿ-ದೇಶಪಾಂಡೆ ನಡುವಿನ ಮನಃಸ್ತಾಪ ಹಾಗೂ ಮೀನುಗಾರ ಸಮುದಾಯದ ನುರಿತ ರಾಜಕೀಯ ಪಟು ಬಾಬುರಾವ್ ಚಿಂಚನಸೂರ್ ಗುರ್ಮಿಟ್ಕಲ್‌ನಲ್ಲಿ ಗೆಲ್ಲಲು ವಿಫಲರಾಗಿದ್ದು ಮಂಕಾಳಗೆ ವರವಾಯಿತು. ಉತ್ತರ ಕನ್ನಡ ಮತ್ತು ಮೀನುಗಾರ ಸಮುದಾಯ ಕೋಟಾದಲ್ಲಿ ಮಂಕಾಳಗೆ ಸಚಿವ ಪಟ್ಟ ಪಡೆಯುವ ಅವಕಾಶ ತಂತಾನೆ ಸೃಷ್ಟಿಯಾಯಿತು! ಯಾವುದೇ ಸೈದ್ಧಾಂತಿಕ ಬದ್ಧತೆಯಿಲ್ಲದ ಮಂಕಾಳ ಹಣವೊಂದೇ ರಾಜಕಾರಣಕ್ಕೆ ಬೇಕಾದ ಅನಿವಾರ್ಯ ಅರ್ಹತೆ ಎಂದು ನಂಬಿದವರು. ಹಾಗಾಗಿಯೇ ಇರಬೇಕು, ಮಂತ್ರಿಗಿರಿ ಸ್ಥಾನ-ಮಾನ ಸಿಗುತ್ತಲೇ ಮಂಕಾಳ ಧರತಿಯೂ ಬದಲಾಯಿತು. ಮೊದಲು ಸದಾ ಮಂದಿ ಮಧ್ಯೆ ಇರುತ್ತಿದ್ದ ಮಂಕಾಳ ವಂದಿಮಾಗಧರಿಂದ ಸುತ್ತುವರಿಯಲ್ಪಟ್ಟರು; ಕೇವಲ 8ನೇ ತರಗತಿ ತನಕ ಶಿಕ್ಷಣ ಮಾಡಿರುವ ಮಂತ್ರಿಗಳ ಪಿಎಚ್.ಡಿ ಪದವಿಯ ಎರಡನೇ ಮಡದಿ ಡಿಫ್ಯಾಕ್ಟೋ ಶಾಸಕಿ-ಸಚಿವೆಯಾಗಿ ಹೋದರು. ದಾನ-ದೇಣಿಗೆ-ಪ್ರಾಯೋಜಕತ್ವದ ಕಲೆ-ಕ್ರೀಡೆ-ಮದುವೆ-ಮುಂಜಿ ಕಾರ್ಯಕ್ರಮಗಳಿಂದ ಚಾಲ್ತಿಯಲ್ಲಿರುತ್ತಿದ್ದ ಮಂಕಾಳರನ್ನು ಆರ್ಥಿಕ ಮುಗ್ಗಟ್ಟು ಜನರಿಂದ ದೂರಾಗಿಸಿತೆಂಬ ಮಾತೂ ಕ್ಷೇತ್ರದಲ್ಲಿದೆ.

ಒಟ್ಟಿನಲ್ಲಿ ಮಂತ್ರಿಯಾಗಿ ವರ್ಷೊಪ್ಪತ್ತು ಕಳೆಯುತ್ತಿರುವಂತೆಯೆ ಭಟ್ಕಳ-ಹೊನ್ನಾವರ ಅಸೆಂಬ್ಲಿ ಕ್ಷೇತ್ರದ ಉದ್ದಗಲಕ್ಕೆ ಮಂಕಾಳ ವೈದ್ಯರ ನಡಾವಳಿ ಬಗ್ಗೆ ಬೇಸರ-ಸಿಟ್ಟು ಶುರುವಾಗಿಬಿಟ್ಟಿತು. ಹಳ್ಳಿ-ಹಳ್ಳಿಗಳಿಂದ ಅವರದೇ ‘ಗುಪ್ತಚರರು’ ತರುತ್ತಿದ್ದ ವರದಿಗಳನ್ನು ಕೇಳಿ ಮಂಕಾಳಗೆ ನಿದ್ದೆಯೇ ಬೀಳದಾಯಿತು. 2028ರಲ್ಲಿ ತಾನು ಭಟ್ಕಳ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟವೆಂಬ ಆತಂಕಕ್ಕೆ ಬಿದ್ದರು. ಡ್ಯಾಮೇಜ್ ಕಂಟ್ರೋಲ್‌ಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜನಸ್ಪಂದನೆ-ಅಸಮಧಾನಿತ ಕಾರ್ಯಕರ್ತರ ಓಲೈಕೆ ಸಭೆ ನಡೆಸಿದರು. ಅದು ನಿರೀಕ್ಷೆಯಷ್ಟು ಫಲ ಕೊಡಲಿಲ್ಲ. ಇದ್ದಕ್ಕಿದ್ದಂತೆ ಹಿಂದುತ್ವದ ಉಗ್ರ ಚಹರೆ ಪ್ರದರ್ಶಿಸಿ ಬಹುಸಂಖ್ಯಾತರನ್ನು ಮೆಚ್ಚಿಸಲು ಹವಣಿಸಿದರು. ಇಸ್ಲಾಮೋಫೋಬಿಕ್ ಹಿಂದುತ್ವ ಗುಪ್ತಗಾಮಿಯಾಗಿರುವ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ‘ಗೋ ರಾಜಕಾರಣ’ ಮಾಡಿದರೆ ಮತ್ತೆ ‘ಹೀರೋ’ ಆಗಬಹುದೆಂದು ಭಾವಿಸಿದರು. ಕಳೆದ ಜನವರಿಯಲ್ಲಿ ಹೊನ್ನಾವರದ ಸಾಲ್ಕೋಡ್ ಎಂಬ ಗ್ರಾಮದಲ್ಲಾದ ಆಕಳು ಹತ್ಯೆ ಪ್ರಕರಣದ ಗಲಾಟೆ ಸಂದರ್ಭವನ್ನು ಬಳಸಿಕೊಂಡ ಮಂಕಾಳ ನಡು ರಸ್ತೆಯಲ್ಲೇ ನಿಂತು ‘ಕೌ ಗನ್’ ಎತ್ತಿಕೊಂಡು ಯದ್ವಾತದ್ವಾ ಮತಾಂಧ ಗುಂಡು ಹಾರಿಸಿದರು.
ಮಂತ್ರಿ ವೈದ್ಯರ ಅಳಿವು-ಉಳಿವಿನ ಹೋರಾಟದ ರಾಜಕೀಯ ಈ ಹಸು ಹತ್ಯೆ ಮತ್ತು ಮಾಂಸ ಕಳ್ಳಸಾಗಾಣಿಕೆಯ ಹಿಂದುತ್ವ ಹರಾಕಿರಿಯೊಂದಿಗೆ ತಳಕು ಹಾಕಿಕೊಂಡಿದ್ದು ಕುತೂಹಲಕರವಾಗಿದೆ. ಕಳೆದ ಜನವರಿ 19ರಂದು ಸಾಲ್ಕೋಡ್‌ನ ಕೊಂಡಾಕುಳಿ ಬೆಟ್ಟದಲ್ಲಿ ಹಸುವೊಂದನ್ನು ಕಡಿದು ಮಾಂಸ ಒಯ್ದ ಕುರುಹುಗಳು ಕಂಡುಬಂದಿತ್ತು. ಕೃಷ್ಣ ಆಚಾರಿ ಎಂಬವರಿಗೆ ಸೇರಿದ ಈ ಹಸುವನ್ನು ವೃತ್ತಿನಿರತ ಗೋ ಮಾಂಸ ಕಳ್ಳರು ಕಾಡಲ್ಲಿ ಕಡಿದು ಮಾಂಸವನ್ನು ಸಮಾರಂಭವಿದ್ದ ಮುಸಲ್ಮಾನ್ ಕುಟುಂಬವೊಂದಕ್ಕೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ಮುಸಲ್ಮಾನರ ನಂಟಿರುವ ಇಂಥ ಗೋ ಪ್ರಕರಣಕ್ಕಾಗಿ ಸದಾ ಕಾತರದಿಂದ ಕಾಯುವ ಸಂಘ-ಬಿಜೆಪಿ ಪರಿವಾರಕ್ಕೆ ಸಾಲ್ಕೋಡ್ ಗೋವು ಹತ್ಯೆ-ಮಾಂಸ ಸಾಗಾಟ ಭಾನಗಡಿ ‘ಹಬ್ಬ’ದ ಸಡಗರದಂತಾಗಿತ್ತು.
ಅದು ಗಬ್ಬದ ಹಸುವಾಗಿತ್ತು; ಮಾಂಸ ಕಳ್ಳರು ಗರ್ಭಾವಸ್ಥೆಯಲ್ಲಿದ್ದ ಕರುವನ್ನು ಬೇರ್ಪಡಿಸಿ ಎಸೆದಿದ್ದರು. ಸಂಘಿಗಳ ಭಾವನಾತ್ಮಕ ಪ್ರಚೋದನೆಯ ಆರ್ಭಟಕ್ಕೆ ಇದಕ್ಕಿಂತ ಪ್ರಶಸ್ತ್ಯ ಅವಕಾಶ ಸಿಗುವುದುಂಟೇ?! ಭಟ್ಕಳದ ನವಾಯತ ಮುಸಲ್ಮಾನರಿಗೆ ಗೋ ಮಾಂಸ ಕಳ್ಳಸಾಗಣೆ ಆಗಿದೆ; ಕದ್ದ ಮಾಂಸಕ್ಕೆ ದೊಡ್ಡ ಮಾರ್ಕೆಟ್ ಇರುವುದೇ ಭಟ್ಕಳದ ನವಾಯತರ ಕೇರಿಗಳಲ್ಲಿ ಎಂದೆಲ್ಲ ಹುಯಿಲೆಬ್ಬಿಸಲಾಯಿತು. ಹೊನ್ನಾವರದಲ್ಲಿ ಸಂಘಿಗಳು ಕ್ಷೋಭೆ ಸೃಷ್ಟಿಸಿದರು. ಜಿಲ್ಲೆಯಾದ್ಯಂತ ಬಿಜೆಪಿಗರು ತಮ್ಮ ಪರಿಪಾಠದಂತೆ ಕೇಸರಿ ಬಾವುಟ ಎತ್ತಿ ಹಿಡಿದು ಅಬ್ಬರಿಸಿ ಬೊಬ್ಬಿರಿದರು. ಸಹಜವಾಗೇ ಜಿಲ್ಲಾಡಳಿತ ಬೆಚ್ಚಿಬಿತ್ತು. ಪೊಲೀಸರು ಗೋ ಮಾಂಸ ಕಳ್ಳರ ಹುಡುಕಾಟ ಶುರುಹಚ್ಚಿಕೊಂಡರು. ಬಂಧನದ ಪ್ರಕ್ರಿಯ ವೇಳೆ ಪೊಲೀಸರು ಮತ್ತು ಆರೋಪಿಗಳ ನಡುವೆ ಸಂಘರ್ಷವಾಗಿದೆ. ತಪ್ಪಿಸಿಕೊಳ್ಳಲು ನೋಡಿದ ಮಹಮ್ಮದ್ ಫೈಜಾನ್ ಎಂಬವನ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಬೇಕಾಯಿತು.
ಇದನ್ನು ಓದಿದ್ದೀರಾ?: ಮಂಗಳೂರು ಗ್ಯಾಂಗ್‌ರೇಪ್ | ಮೌನಕ್ಕೆ ಜಾರಿದ ಬಿಜೆಪಿ, ಸಂಘಪರಿವಾರ; ಕಾರಣ ಏನು ಗೊತ್ತೇ?
ಹೊತ್ತಲ್ಲದ ಹೊತ್ತಲ್ಲಿ ಹಳ್ಳಿಗಳಿಗೆ ನುಗ್ಗಿ ದನಕರುಗಳನ್ನು ಹೊತ್ತೊಯ್ಯುವ ಕಳ್ಳರ ಕಾಟದಿಂದ ಗಾಬರಿ ಬಿದ್ದಿದ್ದ ಜನರು ಪೊಲೀಸರ ಕಾರ್ಯಾಚರಣೆ ಮೆಚ್ಚಿದರು. ಬಿಜೆಪಿ ಪರಿವಾರ ಇದು ತಮ್ಮ ‘ಹೋರಾಟ’ದ ಫಲವೆಂದು ಗೆಲುವಿನ ನಿಟ್ಟುಸಿರುಬಿಟ್ಟಿತು. ಗೋ ಕಳ್ಳರಿಗೆ ತಕ್ಕ ಶಾಸ್ತಿಯಾಯಿತೆಂಬ ಲೆಕ್ಕ ಚುಕ್ತಾ ಸುದ್ದಿಗಳು ಹಬ್ಬಿದವು. ವಾಸ್ತವವಾಗಿ ಪೊಲೀಸರು ಗುಂಡು ಹಾಕಿದ್ದು ಆಕಳು ಕಳ್ಳರೆಂಬ ಕಾರಣಕ್ಕಲ್ಲ; ಗೋಗಳ್ಳರಿಗೆ ಗುಂಡು ಹೊಡೆಯುವ ಅಧಿಕಾರವೂ ಪೊಲೀಸರಿಗಿಲ್ಲ. ಅಸಲಿಗೆ ಅಂಥ ಕಾನೂನು ಇಲ್ಲ. ಗೋ ಮಾಂಸ ಕಳ್ಳ ಸಾಗಾಣಿಕೆದಾರರೆಂದು ಶಂಕಿಸಲಾದವರನ್ನು ಬಂಧಿಸಲು ಹೋದ ಪೊಲೀಸರ ಮೇಲೆ ದಾಳಿಯಾಗಿತ್ತು. ಆಗ ಅನಿವಾರ್ಯವಾಗಿ ಪೊಲೀಸರು ಗುಂಡು ಹಾರಿಸಬೇಕಾಗಿಬಂತು. ಆದರೆ ಇದು ಗೋ ಕಳ್ಳರ ಮೇಲೆ ಪೊಲೀಸರು ನಡೆಸಿದ ಕೆಚ್ಚೆದೆಯ ‘ಎನ್ಕೌಂಟರ್’ ಎಂಬಂತೆ ಬಿಂಬಿಸಲಾಯಿತು. ಮಾಮೂಲಿಯಂತೆ ಇದರ ‘ಶ್ರೇಯಸ್ಸು’ ಸಂಘ ಪರಿವಾರ ಪಡೆಯಲು ಪ್ರಯತ್ನಿಸಿತು.
ಇದರ ಬೆನ್ನಿಗೆ ಭಟ್ಕಳದ ನವಾಯತ ಮುಸಲ್ಮಾನ್ ಮುಂದಾಳುಗಳು ‘ತಮಗೆ ಕದ್ದ ದನದ ಮಾಂಸದ ಜರೂರತ್ತಿಲ್ಲ; ಗೋವು ಕಳ್ಳತನ-ಹತ್ಯೆಗೆ ತಮ್ಮ ಸಮುದಾಯ ಅವಕಾಶ ಕೊಡುವುದೂ ಇಲ್ಲ’ ಎಂಬ ವಿವೇಕದ ಹೇಳಿಕೆ ನೀಡಿದರು. ಪ್ರಚಲಿತ ಭಾರತದಲ್ಲಿ ‘ಪೊಲಿಟಿಕಲ್ ಪ್ರಾಣಿ’ಯಂತಾಗಿರುವ ಆಕಳಿನ ಸುತ್ತ ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ವರಸೆಗಳು ಶುರವಾದವು. ಭಟ್ಕಳ-ಹೊನ್ನಾವರದಲ್ಲಿ ಮೊದಲೆ ನರಮ್ ಆಗಿದ್ದ ಮಂತ್ರಿ ವೈದ್ಯ ಈ ಗೋ ಗಲಾಟೆಯಿಂದ ಮತ್ತಷ್ಟು ಹೈರಾಣಾಗುವ ಭೀತಿಗೆ ಬಿದ್ದರು. ಪೊಲೀಸರಿಗೆ ಸಿಕ್ಕಿದ ಹುಸಿ ಶಹಬ್ಬಾಸ್‌ಗಿರಿ ತಾನೂ ಪಡೆದು ಮಿಂಚಲು ಮುಂದಾದರು. ‘ಆಕಳ ಹಾಲು ಕುಡಿದು ಬೆಳೆದಿದ್ದೇನೆ; ಗೋ ಕಳ್ಳರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ ಪೊಲೀಸರಿಂದ ಗುಂಡು ಹಾಕಿಸುತ್ತೇನೆ…’ ಎಂದಬ್ಬರಿಸಿದರು. ತಾನು ಗೋಗಳ್ಳ ಮುಸಲ್ಮಾನರ ವಿರೋಧಿ, ಹಿಂದುತ್ವ ಪರಿಪಾಲಕ ಎಂದು ಪೋಸು ಕೊಡುವ ಆತುರದಲ್ಲಿ ಮಂತ್ರಿಗಿರಿ ‘ಮದ’ದಲ್ಲಿ ಕಾನೂನುಭಂಜಕ ಹೇಳಿಕೆ ಕೊಟ್ಟಿದ್ದಾರೆಂದು ಕೋಮು ಸೂಕ್ಷ್ಮ ಪ್ರದೇಶವಾದ ಭಟ್ಕಳದ ಮತೀಯ ರಾಜಕೀಯ ಚರಿತ್ರೆ ಬಲ್ಲವರು ಮಂಕಾಳ ಮಾತುಗಾರಿಕೆ ವಿಶ್ಲೇಷಿಸುತ್ತಾರೆ.
ತನ್ನ ಕುಸಿಯುತ್ತಿರುವ ಬುಡ ಭದ್ರ ಮಾಡಿಕೊಳ್ಳುವ ಒಳ ಉದ್ದೇಶದಿಂದ ಹಿಂದುತ್ವವಾದಿ ಗಲಾಟೆಕೋರರ ಮೆಚ್ಚಿಸಲು-ವಿರೋಧಿಗಳ ಬಾಯಿ ಮುಚ್ಚಿಸಲು ಆಡಿದ ‘ಆಟ’ ಮಂತ್ರಿ ಮಂಕಾಳಗೆ ತಿರುಗುಬಾಣವಾಯಿತು. ಗೋವು ಕಳ್ಳರಿಗೆ ಗುಂಡೇಟಿನ ಶಿಕ್ಷೆ ಕೊಡಿಸುವುದಾಗಿ ಗುಡುಗಿರುವ ಮಂಕಾಳ ವೈದ್ಯ ಸಂವಿಧಾನದ ಅರಿವಿಲ್ಲದ ಮಂಕು ಬುದ್ಧಿಯ ಮಂತ್ರಿ. ಗೋವು ರಕ್ಷಣೆಗೆ ಮನುಷ್ಯರನ್ನೇ ಬಲಿ ಪಡೆಯಲು ಮುಂದಾಗಿರುವ ಮಂಕಾಳ ವೈದ್ಯ ಶಿಕ್ಷಾರ್ಹ ಅಪರಾಧ ಮಾಡಿದ್ದಾರೆ. ಇಂಥ ಕ್ರಿಮಿನಲ್ ಐಡಿಯಾದ ಮತೋನ್ಮತ್ತನನ್ನು ಸಿಎಂ ಸಿದ್ದು ಕೂಡಲೆ ಸಚಿವ ಸಂಪುಟದಿಂದ ವಜಾ ಮಾಡಬೇಕೆಂಬ ಆಗ್ರಹಗಳು ಕೇಳಿಬಂದವು. ಸಿಎಂ ಸಿದ್ದು ಮಾತ್ರ ಏನೂ ಆಗದವರಂತೆ ಸುಮ್ಮನಿರುವುದು ಕಾಂಗ್ರೆಸ್ ಸರಕಾರದ ‘ಜಾತ್ಯತೀತತೆ’ ಅಸಲಿಯತ್ತಿನ ಮೇಲೆಯೇ ಅನುಮಾನ ಮೂಡಿಸಿದೆ ಎಂಬ ಆಕ್ರೋಶವೂ ವ್ಯಕ್ತವಾಯಿತು.
ಈಗ ಮಂಕಾಳ ಮತ್ತೊಂದು ಕುತೂಹಲಕರ ವರಸೆ ಆರಂಭಿಸಿದ್ದಾರೆ. ಮೊದಲ ಹೆಂಡತಿಯ ಮಗಳು ಬೀನಾರನ್ನು ಕ್ಷೇತ್ರದ ಉಸ್ತುವಾರಿಗೆ ಕಳಿಸುತ್ತಿದ್ದಾರೆ. ಅವರ ಕೈಯಿಂದ ‘ನೊಂದವರಿಗೆ’ ಹಣಕಾಸಿನ ನೆರವು ಕೊಡಿಸಿ ಜನರಿಗೆ ಹತ್ತಿರಾಗಲು ಹೆಣಗಾಡುತ್ತಿದ್ದಾರೆ. ಜತೆಜತೆಗೆ ಮಗಳಿಗೆ ರಾಜಕಾರಣಿ ತರಬೇತಿ ಕೊಡುತ್ತಿದ್ದಾರೆ. ಮಂಕಾಳರ ಈ ತಂತ್ರಗಾರಿಕೆಯಲ್ಲಿ ಎರಡು ಪ್ಲಾನ್ ಅಡಗಿದೆ. ಮಗಳನ್ನು ಹಳ್ಳಿಗಳಿಗೆ ಕಳಿಸಿ ಹೊಸ ಇಮೇಜು ರೂಪಿಸಿಕೊಳ್ಳುವುದು; ಜತೆಗೇ ಮಗಳನ್ನು ಮುಂದಿನ ಶಾಸಕಿಯಾಗಿ ತಯಾರು ಮಾಡುವುದು. ಎರಡೂವರೆ ವರ್ಷದಲ್ಲಿ ಎದುರಾಗುವ ವಿಧಾನಸಭಾ ಚುನಾವಣೆಯೊಳಗೆ ಮಗಳಿಂದಲೂ ತನ್ನ ಹದಗೆಟ್ಟ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗದಿದ್ದರೆ ಪಕ್ಕದ ಕುಮಟಾ ಕ್ಷೇತ್ರಕ್ಕೆ ಗುಳೆ ಹೋಗುವ ಇರಾದೆಯಲ್ಲಿ ಮಂತ್ರಿ ಮಂಕಾಳ ಇದ್ದಾರೆಂಬ ಮಾತು ಕ್ಷೇತ್ರದ ರಾಜಕೀಯ ಕಟ್ಟೆಯಲ್ಲಿ ಜೋರಾಗಿದೆ.
ಮಂಕಾಳ ವೈದ್ಯರ ಕ್ಷೇತ್ರ ಬದಲಾವಣೆ ತುಡಿತಕ್ಕೆ ಮತ್ತೊಂದು ಕಾರಣವೂ ಇದೆ. 2028ರ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೊಳಿಸಲಾಗುತ್ತದೆ. ಆಗ ಮಹಿಳಾ ಮತದಾರರು ಹೆಚ್ಚಿರುವ ಭಟ್ಕಳ ಕ್ಷೇತ್ರ ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆಯಿದೆಯೆಂದು ಮಂಕಾಳ ಭಯಬಿದ್ದಿದ್ದಾರೆ. ಆಗ ಕುಮಟಾ ನಲ್ಮೆಯ ನಿಲ್ದಾಣವೆಂದು ಭಾವಿಸಿದ್ದಾರೆ. ಹಾಗೊಮ್ಮೆ ಕ್ಷೇತ್ರ ಬದಲಾವಣೆ ಕಷ್ಟವಾದರೆ ಮಗಳನ್ನು ಮಹಿಳಾ ಕೋಟಾದಲ್ಲಿ ಭಟ್ಕಳದ ಶಾಸಕಿ ಮಾಡಿಕೊಳ್ಳುವ ಪ್ಲಾನ್-ಬಿ ಮಂಕಾಳಣ್ಣ ಹಾಕಿಕೊಂಡಿದ್ದಾರೆ ಎಂದವರ ಆಪ್ತ ವಲಯ ಹೇಳುತ್ತದೆ.

ಹಿಂದುತ್ವಕ್ಕೆ ಹೊರತಾದ ಹಲವು ಕಾರಣಕ್ಕೆ ಮಂಕಾಳ ವಿವಿಧ ಹಿಂದು ಸಮುದಾಯದ ಕೆಂಗಣ್ಣಿಗೆ ತುತ್ತಾಗಿದ್ದಾರೆ. ಮಂಕಾಳರ ಹಿಂದುತ್ವದ ಚಹರೆ ಮುಸಲ್ಮಾನರನ್ನು ಚಿಂತೆಗೀಡು ಮಾಡಿದೆ. ಹೀಗಾಗಿ ತಾನು ಕಾಂಗ್ರೆಸ್ ಕ್ಯಾಂಡಿಡೇಟಾದರೆ ಬಚಾಗುವುದಿಲ್ಲ ಎಂದು ಮಂಕಾಳ ಅಂದಾಜಿಸಿದ್ದಾರೆ. ಈಗಿತ್ತಲಾಗಿ ಭಜರಂಗಿಗಳೂ ನಾಚುವಂಥ ಮತಾಂಧ ಹೇಳಿಕೆಗಳನ್ನು ಮಂಕಾಳ ಕೊಡುತ್ತಿರುವುದಕ್ಕೆ ಕ್ಷೇತ್ರ ಕೈ ತಪ್ಪುತ್ತಿರುವ ಆತಂಕವೇ ಮೂಲ ಕಾರಣ. ಬಿಜೆಪಿಗೆ ಹತ್ತಿರಾಗುವ ಹಿಕಮತ್ತಿದು. ಕುಮಾಟಾ ಕಾಂಗ್ರೆಸ್ ಟಿಕೆಟ್ ಸಿಗುವುದು ಅಥವಾ ಭಟ್ಕಳದಲ್ಲಿ ಕಾಂಗ್ರೆಸ್‌ನಿಂದ ಗೆಲ್ಲುವುದು ಕಷ್ಟವೆಂದಾದರೆ ಬಿಜೆಪಿ ಅಭ್ಯರ್ಥಿಯಾಗುವ ಪ್ರಯತ್ನ ಮಂಕಾಳ ಮಾಡದೆ ಬಿಡುವುದಿಲ್ಲ. ಕಮಲ ಚಿನ್ಹೆಯಲ್ಲಿ ಕುಮಟಾ, ಭಟ್ಕಳ ಎರಡರಲ್ಲಿ ಎಲ್ಲಿ ಬೇಕಿದ್ದರೂ ಸ್ಫರ್ಧಿಸಲು ಮಂಕಾಳ ರೆಡಿಯಂತೆ. ಈ ಒಳ ಆಸೆಯಿಂದಲೇ ಮಂಕಾಳ ವೈದ್ಯ ಹೊನ್ನಾವರದ ಆಕಳು ಹತ್ಯೆ ಪ್ರಕರಣದಲ್ಲಿ ವೀರಾವೇಷದ ‘ತುಂಡುಗುಪ್ಪಳ’ ಹೊಡೆದು ಹಿಂಸಾತ್ಮಕ ಹಿಂದುತ್ವ ಪ್ರದರ್ಶಿಸಿದ್ದಾರೆ ಎಂಬ ಚರ್ಚೆಗಳಾಗುತ್ತಿದೆ. ಟಿಕೆಟ್ ಕೈದಿರಲಿ ಅಥವಾ ಕಮಲದ್ದೇ ಇರಲಿ, ಮಂತ್ರಿ ಮಂಕಾಳ ವೈದ್ಯ ಕುಮಟಾ ಕ್ಷೇತ್ರ ಹದಗೊಳಿಸುತ್ತಿರುವುದೇನೋ ನಿಜ.
ಕುಮಟಾ ಕ್ಷೇತ್ರದ ಬಿಜೆಪಿ-ಸಂಘ ಪರಿವಾರದ ಒಳಗುದಿ ಸಹಜವಾಗೆ ಮಂತ್ರಿ ಮಂಕಾಳರ ಚಿತ್ತ ಅತ್ತ ಸೆಳೆದಿದೆ. ಇಲ್ಲಿ ಬಿಜೆಪಿಯಿಂದ ಗೆದ್ದಿರುವ ದಿನಕರ ಶೆಟ್ಟಿ ಶಾಸಕ. ಆದರೆ ಜನತಾ ದಳದ ವಲಸಿಗನಾದ ಈ ಶೆಟ್ಟಿ ತಮ್ಮವನಲ್ಲ ಎಂಬ ತಾತ್ಸಾರ ಕಡು ಕೇಸರಿಗಳದು. ಕಳೆದ ಚುನಾವಣೆಯಲ್ಲಿ ಶೆಟ್ಟಿಯನ್ನು ಮತ್ತೆ ಅಭ್ಯರ್ಥಿ ಮಾಡಲು ಸಂಘ ಶ್ರೇಷ್ಠರಿಗೆ ಒಂಚೂರೂ ಮನಸ್ಸಿರಲಿಲ್ಲ. ಸಂಘ ಸರದಾರರು ಕ್ಷೇತ್ರದ ಪ್ರಥಮ ಬಹುಸಂಖ್ಯಾ ಹಾಲಕ್ಕಿ ಒಕ್ಕಲು ಸಮುದಾಯದ ಶಿಕ್ಷಕನೊಬ್ಬನಿಗೆ ‘ದೀಕ್ಷೆ’ ಕೊಟ್ಟು ಕಣಕ್ಕಿಳಿಸಲು ತಾಲೀಮು ನಡೆಸಿದ್ದರು. ಸರಕಾರಿ ನೌಕರಿಯಿಂದ ಸ್ವಯಮ್ ನಿವೃತ್ತಿ ಪಡೆದಿದ್ದ ಈ ಗೌಡ್ರನ್ನು ಶೆಟ್ಟಿ ‘ಬುಕ್’ ಮಾಡಿ ಸಂಘಿಗಳಿಗೆ ಬೇಸ್ತು ಬೀಳಿಸಿದರು. ಜತೆಗೇ ಯಡಿಯೂರಪ್ಪರ ಪೇಮೆಂಟ್ ಕೋಟಾದಲ್ಲಿ ಕೇಸರಿ ಟಿಕೆಟ್ ಗಿಟ್ಟಿಸಿದರು ಎಂಬ ಸಂಗತಿ ಇವತ್ತಿಗೂ ಜಿಲ್ಲೆಯ ರಾಜಕೀಯ ಅಂಗಳದಲ್ಲಿ ಅನುರಣಿಸುತ್ತಲೇ ಇದೆ. ಚುನಾವಣೆಯಲ್ಲಿ ಮೂಲ ಬಿಜೆಪಿಗರು ಶೆಟ್ಟಿಯನ್ನು ಸೋಲಿಸಲು ಒಳಸಂಚು ಮಾಡಿದ್ದು ಗುಟ್ಟಾಗೇನೂ ಉಳಿದಿಲ್ಲ. ಅಂತೂ ಆರು ನೂರು ಚಿಲ್ಲರೆ ಮತಗಳ ಅಂತರದಲ್ಲಿ ಶೆಟ್ಟಿ ಬಚಾವಾಗಿದ್ದರು.
ಇದನ್ನು ಓದಿದ್ದೀರಾ?: ಜಾತಿ ಗಣತಿಯ ಬಗ್ಗೆ ಬಾಬಾಸಾಹೇಬರು ಹೇಳಿದ್ದೇನು?
ಕುಮಟಾ-ಹೊನ್ನಾವರ ಬಿಜೆಪಿಯ ನಿಯಂತ್ರಕರಾದ ಸಂಘಿ ಕೊಂಕಣಿಗರಂತೂ 2028ರ ಚುನಾವಣೆ ಸಂದರ್ಭದಲ್ಲಿ ಶೆಟ್ಟಿಯನ್ನು ಕಡ್ಡಾಯ ನಿವೃತ್ತಿಗೊಳಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದಾರೆಂಬ ಸುದ್ದಿ ಬಿಜೆಪಿ ಬಿಡಾರದಿಂದ ಬಿತ್ತರವಾಗುತ್ತಿದೆ. ಸಂಘ ನಿಷ್ಠನೊಬ್ಬನನ್ನು 2028ರ ಚುನಾವಣೆಗೆ ನಿಲ್ಲಿಸುವ ಕಾರ್ಯಾಚರಣೆಗೆ ಆರೆಸೆಸ್ಸಿಗರು ವ್ಯವಸ್ಥಿತವಾಗಿ ಇಳಿದಾಗಿದೆ. ಆರೆಸೆಸ್‌ನ ಸರ್ವೋಚ್ಚ ನಾಯಕ ಮೋಹನ್ ಭಾಗವತ್ ನಂತರದ ಸ್ಥಾನದಲ್ಲಿರುವ ದತ್ತಾತ್ರೇಯ ಹೊಸಬಾಳೆ ಕೆಲವು ತಿಂಗಳ ಹಿಂದೆ ಕುಮಟಾದಲ್ಲಿ ಜರುಗಿದ ಸಂಘೀ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಪಕ್ಕದ ಶಿವಮೊಗ್ಗೆಯ ಸೊರಬ ಮೂಲದವರಾದ ಹೊಸಬಾಳೆಗೆ ಸಹಜವಾಗೆ ಉತ್ತರ ಕನ್ನಡ ‘ಸಂಘಕಾರಣ’ದ ಸಕಲ ಅರಿವಿದೆ. ಹೊಸಬಾಳೆ ಸಮ್ಮುಖದಲ್ಲೇ ಕುಮಟಾದಲ್ಲಿ ಶೆಟ್ಟಿಯನ್ನು ಮನೆಗೆ ಕಳಿಸುವ ಮತ್ತು ‘ಸಂಘದ ಹಿದುತ್ವ’ ಮೈಗೂಡಿಸಿಕೊಂಡಿರುವ ಹೊಸ ಮುಖ ಹುಡುಕಾಡುವ ಚರ್ಚೆ ಆಗಿದೆಯೆನ್ನಲಾಗಿದೆ. ಬಿಜೆಪಿಯಲ್ಲಿನ ಈ ಬೆಳವಣಿಗೆ ಮಂತ್ರಿ ಮಂಕಾಳ ವೈದ್ಯರಲ್ಲಿ ಆಸೆ ಮೂಡಿಸಿದೆ. ಕೊಂಕಣಿಗರಿಗೆ ಸಹ್ಯವಾದ ಸಮರ್ಥ ಹುರಿಯಾಳಿನ ಕೊರತೆಯಲ್ಲಿರುವ ಕುಮಟಾ ಬಿಜೆಪಿಗೆ ಮಂಕಾಳ ಒಪ್ಪಿಗೆಯಾದರೆ ಅಚ್ಚರಿಯೇನಿಲ್ಲ ಎಂದು ಸ್ಥಳಿಯ ರಾಜಕೀಯದ ಸೂತ್ರ-ಸಮೀಕರಣ ಬಲ್ಲವರು ಹೇಳುತ್ತಾರೆ.
ಕುಮಟಾ-ಹೊನ್ನಾವರ ಅಸೆಂಬ್ಲಿ ಕ್ಷೇತ್ರದಲ್ಲಿ ಹಾಲಕ್ಕಿ ಒಕ್ಕಲಿಗ, ಹವ್ಯಕ ಬ್ರಾಹ್ಮಣ, ನಾಮಧಾರಿ ಮತ್ತು ಮೀನುಗಾರ ಸಮುದಾಯದ ಮತ ದೊಡ್ಡ ಪ್ರಮಾಣದಲ್ಲಿದೆ. ಮೀನುಗಾರ(ಮೊಗೇರ) ಸಮುದಾಯದ ಮಂಕಾಳ ಮಂತ್ರಿಗಿರಿಯ ಅನುಕೂಲಗಳನ್ನು ಬಳಸಿಕೊಂಡು ಬಿಜೆಪಿಗರನ್ನು ಮೀರಿಸುವಂತೆ ವಿವಿಧ ಮಠಗಳ ‘ದೀಕ್ಷೆ’ ಪಡೆದಿದ್ದಾರೆ. ಸ್ತ್ರೀ ವ್ಯಾಮೋಹಿ ಆರೋಪದ ಹವ್ಯಕರ ವಿವಾದಾಸ್ಪದ ಕುಲಗುರು ರಾಘವೇಶ್ವರ ಮತ್ತು ಮಂಕಾಳ ನಡುವಿನ ಅಂಟಿದ ನಂಟು ತುಂಬ ಹಳೆಯದು. ಈಚೆಗೆ ಹೊನ್ನಾವರದಲ್ಲಿ ಸ್ಥಾಪನೆಯಾಗಿರುವ ಒಕ್ಕಲಿಗರ ಮಠಕ್ಕೆ ‘ಸಕಲ’ ಸಹಕಾರ ಕೊಟ್ಟಿರುವ ಮಂಕಾಳು ಆದಿಚುಂಚನಗಿರಿ ಮಠದ ಹಿರಿ-ಕಿರಿ ಪೀಠಾಧಿಪತಿಗಳಿಗೆ ಹತ್ತಿರತ್ತರ ಆಗುತ್ತಿದ್ದಾರೆ.
ಕರಾವಳಿಯ ಬಿಲ್ಲವ-ನಾಮಧಾರಿಗಳ ಬ್ರಹ್ಮಾನಂದ ಸರಸ್ವತಿ ಸ್ವಾಮಿಗಳಿಗೂ ಹತ್ತಿರಾಗುವ ಮೂಲಕ ನಾಮಧಾರಿ ವಿರೋಧಿಯೆಂಬ ಹಣೆಪಟ್ಟಿ ಕಳಚಿಕೊಳ್ಳುವ ಪ್ರಯತ್ನ ನಾಜೂಕಾಗಿ ಮಂಕಾಳ ಮಾಡುತ್ತಿದ್ದಾರೆ. ಬ್ರಹ್ಮಾನಂದರನ್ನು ಪ್ರಯಾಗ್ರಾಜ್ ಕುಂಭಮೇಳಕ್ಕೆ ಮಂಕಾಳು ಕರೆದುಕೊಂಡು ಹೋಗಿದ್ದರು. ಗುರು-ಶಿಷ್ಯರು ಜತೆಜತೆಯಾಗಿಯೇ ನದಿಯಲ್ಲಿ ಮುಳುಗು ಹಾಕಿಬಂದಿದ್ದಾರೆ. ಇದರ ಬೆನ್ನಿಗೆ ಕುಮಟಾದ ಒಡನಾಟ ಜಾಸ್ತಿ ಮಾಡಿಕೊಂಡಿದ್ದಾರೆ. ಈಚೆಗೆ ಕುಮಟಾದಲ್ಲಿ ಕೊಂಕಣಿಗರ ಪರ್ತಗಾಳಿ ಮಠಾಧೀಶರಿಗೆ ಸ್ಥಳೀಯ ಸ್ವಜಾತಿ ಮೊಗೇರರಿಂದ ‘ಸೇವೆ’ ಮಾಡಿಸಿದ್ದಾರೆ. ಕುಮಟಾ ಕಡೆಯ ಮೊಗೇರರಿಗೆ ಪರಿಚಯಿಸಿಕೊಳ್ಳುವುದರೊಂದಿಗೆ ಚುನಾವಣೆಯ ಗೇಮ್ ಚೇಂಜ್ ಮಾಡಬಲ್ಲ ಸಂಘೀ ಸಂಸ್ಕಾರದ ಕೊಂಕಣಿಗರ ಕೃಪಾಕಟಾಕ್ಷಕ್ಕೆ ಪಾತ್ರವಾಗುವ ಕಾರ್ಯಾಚರಣೆ ಇದೆಂದು ವ್ಯಾಖ್ಯಾನಿಸಲಾಗುತ್ತಿದೆ. ಕುಮಟಾದ ಕೆಡಿಪಿ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರ ನೇಮಕಾತಿ, ಸಹಕಾರ ಸಂಘಗಳ ಮತ್ತು ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮಂತ್ರಿ ಮಂಕಾಳು ವೈದ್ಯರ ಹೆಸರು ಭರ್ಜರಿಯಾಗಿ ಕೇಳಿಬಂದಿದೆ.

ಮಂಕಾಳ ಬಿಜೆಪಿ ಕ್ಯಾಂಡಿಡೇಟಾದರಷ್ಟೇ ಕುಮಟಾ ಕ್ಷೇತ್ರ ಜಾತಿ ಸಮೀಕರಣ ಮತ್ತು ಮಠಗಳ ಮಂತ್ರಾಕ್ಷತೆ ಫಲಿಸುತ್ತದೆ. ಮಂಕಾಳ ಕಾಂಗ್ರೆಸ್ಸಿನಿಂದ ಸ್ಪರ್ದಿಸಿ, ಬಿಜೆಪಿಯೇನಾದರು ಬ್ರಾಹ್ಮಣರಿಗೆ ಮಣೆ ಹಾಕಿದರೆ ಆಗ, ಹೈಗರ(ಬ್ರಾಹ್ಮಣ)ಸ್ವಾಮಿ ಕೈಕೊಡುತ್ತಾರೆ. ದೀವರ ಸ್ವಾಮಿ ಗೊಂದಲಕ್ಕೆ ಬೀಳುತ್ತಾರೆ ಎಂದು ಮಠಾಧೀಶರ ‘ಜಾತಿಕಾರಣ’ ಬಲ್ಲವರು ಹೇಳುತ್ತಾರೆ. ಒಟ್ಟಿನಲ್ಲಿ ಮಂಕಾಳ ಭಟ್ಕಳದಿಂದ ಪಲಾಯನ ಮಾಡುತ್ತಾರೆ ಇಲ್ಲವೇ ಸೊರಗಿರುವ ಮಂಕಾಳ ವೈದ್ಯರ ಸೋಲಿಸುವುದು ಸಲಭವೆಂದು ಬಿಜೆಪಿ ಅಭ್ಯರ್ಥಿಯಾಗುವ ಉಮೇದುವಾರರು ಭಟ್ಕಳದಲ್ಲಿ ಹೆಚ್ಚಾಗುತ್ತಿದ್ದಾರೆ. ಹಿಂದಿನ ಅವಧಿಯ ಬಿಜೆಪಿ ಶಾಸಕ ಸುನೀಲ್ ನಾಯ್ಕ್ ಕಂಡರೆ ಮಾಜಿ ಸಂಸದ ಅನಂತ್ ಹೆಗಡೆಗೆ ಆಗುತ್ತಿರಲಿಲ್ಲ. ಹಾಲಿ ಎಂಪಿ ಕಾಗೇರಿಗೂ ಸಂಘ ಪರಿವಾರದ ಕೆಂಗಣ್ಣಿಗೆ ತುತ್ತಾಗಿರುವ ಸುನೀಲ್ ನಾಯ್ಕ್ ಎಂದರೆ ಅಷ್ಟಕ್ಕಷ್ಟೇ. ಹಾಗಾಗಿ ಸುನೀಲ್‌ಗೆ ಕೇಸರಿ ಟಿಕೆಟ್ ಸಿಗೋದು ಕಷ್ಟವೆಂದು ಸಂಘಿಗಳು ತರ್ಕಿಸುತ್ತಾರೆ.
ಇದನ್ನು ಓದಿದ್ದೀರಾ?: ದಕ್ಷಿಣ ಕನ್ನಡ | ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಸಮಾವೇಶದ ಬ್ಯಾನರ್‌ಗಳನ್ನು ಹರಿದ ಕಿಡಿಗೇಡಿಗಳು
ಸಂಪ್ರದಾಯದಂತೆ ಭಟ್ಕಳದಲ್ಲಿ ಬಿಜೆಪಿ ನಾಮಧಾರಿ ಸಮುದಾಯದವರಿಗೇ ಅಭ್ಯರ್ಥಿ ಮಾಡುತ್ತದೆ. ಹಾಗಾಗಿ ಕೇಸರಿ ಟಿಕೆಟ್ ಆಕಾಂಕ್ಷಿ ದೀವರ ಸರದಿ ಸಾಲು ಬೆಳೆಯುತ್ತಿದೆ. ಸಂಘ ಪರಿವಾರದ ಗೋವಿಂದ್ ನಾಯ್ಕ್, ಸರಕಾರಿ ಕಾಮಗಾರಿ ಗುತ್ತಿಗೆದಾರ ಈಶ್ವರ್ ನಾಯ್ಕ್ ಮರಳಿ ಪ್ರಯತ್ನ ಮಾಡುತ್ತಿದ್ದಾರೆ. ಚೆನ್ನೈನಲ್ಲಿ ಹಣವಂತ ಉದ್ಯುಮಿಯಾಗಿರುವ ಮಾಸ್ತಪ್ಪ ನಾಯ್ಕ್ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಹಿಡಿದುಕೊಂಡು ‘ಹೋರಾಟ’ ನಡೆಸಿದ್ದಾರೆ. ಕಳೆದ ಪಾರ್ಲಿಮೆಂಟ್ ಇಲೆಕ್ಷನ್ ಹೊತ್ತಲ್ಲಿ ಈ ಮಾಸ್ತಪ್ಪ ಬಿಜೆಪಿ ಹುರಿಯಾಳಾಗಿದ್ದ ಅಣ್ಣಾಮಲೈಗೆ ಫಂಡ್ ಕೊಟ್ಟು ಸಖ್ಯ ಕುದುರಿಸಿಕೊಂಡಿದ್ದಾರೆಂಬ ಮಾತು ಕರಾವಳಿ ಬಿಜೆಪಿ ಬಿಡಾರದಲ್ಲಿದೆ. ಕುಮಟಾದಲ್ಲಿ ದೀವರಿಗೆ ಕ್ಯಾಂಡಿಡೇಟ್ ಮಾಡುವುದಕ್ಕೆ ಸ್ಥಳಿಯ ಕೊಂಕಣಿ ಸಂಘಿಗಳ ಪ್ರಬಲವಿರೋಧ ಇರುವುದರಿಂದ ಸಂಸದ ಕಾಗೇರಿ ಜೆಡಿಎಸ್‌ನಲ್ಲಿರುವ ತಮ್ಮ ದೀವರ ಶಿಷ್ಯ ಸೂರಜ್ ಸೋನಿಗೆ ಭಟ್ಕಳಕ್ಕೆ ಆಮದು ಮಾಡುವ ಯೋಚನೆ ಹಾಕಿದ್ದಾರೆನ್ನಲಾಗಿದೆ.
ಭಟ್ಕಳ ಮತ್ತು ಕುಮಟಾ ಅಸೆಂಬ್ಲಿ ಕ್ಷೇತ್ರಗಳ ರಾಜಕಾರಣ ಮಂತ್ರಿ ಮಂಕಾಳ ಸುತ್ತ ಗಿರಕಿ ಹೊಡೆಯುತ್ತಿದೆ. ಮಂಕಾಳ ವೈದ್ಯ ಕನ್ಫ್ಯೂಸ್‌ನಲ್ಲಿ ಕಂಗೆಟ್ಟಿದ್ದಾರೆ.
-ನಹುಷ
