2023-24ನೇ ಸಾಲಿನ ಗ್ರೂಪ್ ಎ, ಬಿ, ಸಿ ಹಾಗೂ ಡಿ ವರ್ಗದ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಸರ್ಕಾರ ಮತ್ತೆ ವಿಸ್ತರಣೆ ಮಾಡಿದೆ.
ಜುಲೈ 3ರವರೆಗೆ ವಿಸ್ತರಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ವೀರಭದ್ರ ಅವರು ಇಂದು (ಜೂನ್ 30) ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಎರಡನೇ ಬಾರಿಗೆ ಸಾರ್ವತ್ರಿಕ ವರ್ಗಾವಣೆಗೆ ಸಿದ್ದರಾಮಯ್ಯ ಸರ್ಕಾರ ಅವಧಿ ವಿಸ್ತರಣೆ ಮಾಡಿದಂತಾಗಿದೆ. ಇದರೊಂದಿಗೆ ತಮಗೆ ಬೇಕಾದ ಕಡೆಗೆ ವರ್ಗಾವಣೆ ಮಾಡಿಕೊಳ್ಳಲು ಪರದಾಡುತ್ತಿರುವ ನೌಕರರಿಗೆ ಮತ್ತಷ್ಟು ಅನುಕೂಲವಾಗಿದೆ.
ಹಲವು ವರ್ಷಗಳಿಂದ ವರ್ಗಾವಣೆಗೆ ಕಾದು ಕುಳಿತಿದ್ದ ಸರ್ಕಾರಿ ನೌಕರರಿಗೆ ಅನುಕೂಲ ಆಗುವಂತೆ ಸಾರ್ವತ್ರಿಕ ವರ್ಗಾವಣೆಗೆ ಜೂನ್ 1 ರಿಂದ 15 ರವರೆಗೆ ವರ್ಗಾವಣೆ ಮಾಡಲು ಆದೇಶ ಹೊರಡಿಸಿತ್ತು. ತದನಂತರದಲ್ಲಿ ವರ್ಗಾವಣೆ ಅವಧಿ ಜೂ.30ರವರೆಗೆ ವಿಸ್ತರಣೆ ಮಾಡಲಾಗಿತ್ತು. ಈಗ ಮತ್ತೆ ಜುಲೈ 3 ರವರೆಗೆ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
