ಬಡವರು ಮತ್ತು ಶೋಷಿತ ಸಮುದಾಯದ ಮಕ್ಕಳಿಗೆ ಸರ್ಕಾರಿ ಉದ್ಯೋಗ ದೊರೆಯಬೇಕು ಎಂಬ ಉದ್ದೇಶದಿಂದ ಶುರುವಾದ ತುಮಕೂರಿನ ಡಾ. ಬಿ ಆರ್ ಅಂಬೇಡ್ಕರ್ ಕೋಚಿಂಗ್ ಸೆಂಟರ್ ಹಲವು ಶೋಷಿತರ ಬದುಕನ್ನು ಹಸನಾಗಿಸಿದೆ.
2014ರ ಏಪ್ರಿಲ್ ತಿಂಗಳಲ್ಲಿ ಆರಂಭವಾಗಿ ಈಗ ದಶಮಾನೋತ್ಸವ ಸಂಭ್ರಮದಲ್ಲಿರುವದ ಸಂಭ್ರಮದಲ್ಲಿರುವ ಈ ಕೋಚಿಂಗ್ ಸೆಂಟರ್‌ನಿಂದ ತರಬೇತಿ ಪಡೆದ ಸುಮಾರು 190ಕ್ಕೂ ಹೆಚ್ಚು ಮಂದಿ ಪ್ರಸ್ತುತ ಸರ್ಕಾರಿ ಉದ್ಯೋಗ ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ತಳಸಮುದಾಯದಿಂದ ಬಂದ ಹಾಗೂ ಆರ್ಥಿಕವಾಗಿ ದುರ್ಬಲರಾದವರಿಗೆ ಬದುಕು ರೂಪಿಸಿಕೊಳ್ಳಲು ಈ ಸಂಸ್ಥೆ ದಾರಿ ತೋರುವ ಮಾರ್ಗದರ್ಶಿಯಾಗಿ ಮುನ್ನುಗ್ಗತಿದೆ.
ಕೂರಲು ಚೇರ್ ಕೂಡ ಇಲ್ಲದೆ ಬಾಡಿಗೆ ಚೇರು ಪಡೆದು, ಅಕ್ಷರ ವಂಚಿತ ಸಮುದಾಗಳಿಂದ ಬಂದ ಸಮಾನ ಮಾನಸ್ಕರು ಸೇರಿ ರೂಪಿಸಿದ ತರಬೇತಿ ಕೇಂದ್ರದಲ್ಲಿ ಇಂದು ಹತ್ತಾರು ಮಂದಿ ಕೂತು ತರಗತಿ ಕೇಳುತ್ತಿದ್ದಾರೆ. ಎಸ್‌ಡಿಎ, ಎಫ್‌ಡಿಎ, ಪೊಲೀಸ್ ಕಾನ್‌ಸ್ಟೆಬಲ್, ಎಸ್‌ಐ, ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ಕೆಂದ್ರ ಹಾಗೂ ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಿ ಸಮಾಜದಲ್ಲಿ ಗೌರವಯುತ, ಜವಾಬ್ದಾರಿಯುತ ನಾಗರಿಕರಾಗಿ ಬದುಕುತ್ತಿದ್ದಾರೆ.

ಅಂಬೇಡ್ಕರ್ ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟ ಈ ಮೂರು ತತ್ವಗಳು ತಳಸಮುದಾಗಳ ಏಳಿಗೆಗೆ ಮಹತ್ವದ್ದಾಗಿವೆ. ಸಮಾನತೆಯ ಮೊದಲ ಹೆಜ್ಜೆಯೇ ಶಿಕ್ಷಣ ನಂತರ ಹೋರಾಟ, ಸಂಘಟನೆ. ಈ ಹೋರಾಟದ ಮೊದಲ ಹೆಜ್ಜೆಯಾದ ಶಿಕ್ಷಣವನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಹಾಗೇ ಸಕಾರಗೊಳಿಸುವ ಕಡೆ ಹೆಜ್ಜೆ ಇಟ್ಟಿದ್ದಾರೆ.
ಇಲ್ಲಿ ತರಬೇತಿ ಪಡೆಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳೇ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆದಿರುವುದು ಈ ಕೋಚಿಂಗ್ ಸೆಂಟರ್‌ನ ವಿಶೇಷ. ಬಸ್ ಚಾರ್ಜಿಗೂ ಕಾಸಿಲ್ಲದೆ ಸಾವಿರ ಕನಸು ಹೊತ್ತು ಈ ಕೋಚಿಂಗ್ ಸೆಂಟರ್ ಗೆ ಬಂದ ಹಲವರು ಇಂದು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವ ವಿಷಯ ತಜ್ಞರಾಗಿ ರೂಪುಗೊಂಡಿದ್ದಾರೆ. ಶ್ರದ್ಧೆ, ಆಸಕ್ತಿ ಪರಿಶ್ರದ ಮಂತ್ರ ಜಪಿಸಿದ್ದರ ಫಲ ಇದಾಗಿದೆ. ಈ ಹತ್ತು ವರ್ಷದಲ್ಲಿ ಆರ್ಥಿಕವಾಗಿ ದುರ್ಬಲರಿಗೆ, ಶೋಷಿತರಿಗೆ, ಹೆಣ್ಣು ಮಕ್ಕಳಿಗೆ ಉಚಿತ ಕೋಚಿಂಗ್ ನೀಡಲಾಗುತ್ತಿದೆ.

ಇಲ್ಲಿ ತರಬೇತಿ ಪಡೆದು ಉದ್ಯೋಗ ಪಡೆದ ಅಭ್ಯರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಇಲ್ಲಿ ಸ್ಪರ್ಧಾರ್ಥಿಗಳಿಗೆ ಬೋಧನೆ ಮಾಡುತ್ತಾರೆ. ಅಂಬೇಡ್ಕರ್ ಚಿಂತನೆಯಿಂದ ರೂಪುಗೊಂಡ ಕಲಿತು, ಕಲಿಸುವ ಗುಣವನ್ನು ಇಲ್ಲಿನ ಸ್ಪರ್ಧಾರ್ಥಿಗಳು ಅಕ್ಷರಶಃ ಕಾರ್ಯರೂಪಕ್ಕೆ ತಂದಿದ್ದಾರೆ.
ಈದಿನ ಡಾಟ್ ಕಾಮ್‌ನೊಂದಿಗೆ ಮಾತನಾಡಿದ ಕೋಚಿಂಗ್ ಸೆಂಟರ್ ಅಧ್ಯಕ್ಷ ಪಿ ಜೆ ಜಯಶೀಲ್, “ಶುಲ್ಕ ಸೇರಿದಂತೆ ಇತರೆ ಯಾವುದೇ ರೀತಿಯ ಹಣ, ಲಾಭ ನಿರೀಕ್ಷಿಸದೆ ನಿವೃತ್ತ ಅಧ್ಯಾಪಕರು ಸೆರಿದಂತೆ ಉಪನ್ಯಾಸಕರು ಇಲ್ಲಿ ಪಾಠ ಮಾಡಿದ್ದಾರೆ. ಇಲ್ಲಿ ಎದುರಾದ ಸಾವಲುಗಳು ಇವರ ನಿಸ್ವಾರ್ಥ ಸೇವೆಗೆ ತಲೆಬಾಗಿವೆ. ಆರಂಭದಲ್ಲಿ ಆಗಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಬೇಡ್ಕರ್ ಭವನದಲ್ಲಿ ಒಂದು ಕೊಠಡಿ ನೀಡಿದ್ದರು. ಹಾಗೇ ಹಲವರು ಸಹಾಯ ಮಾಡಿದ್ದರ ಫಲವಾಗಿ ಕೋಚಿಂಗ್ ಸೆಂಟರ್ ಈ ಪರಿಯಾಗಿ ಬೆಳೆದು ನಿಂತಿದೆ. ಈ ತರಬೇತಿ ಜೊತೆಗೆ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ವಿಚಾರಗಳನ್ನು ತಿಳಿಸುತ್ತಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ರೂಪಿಸಲಾಗುತ್ತಿದೆ” ಎಂದು ತಿಳಿಸಿದರು.
ಕೋಚಿಂಗ್ ಸೆಂಟರ್‌ನ ನಿರ್ದೇಶಕ ನಾಗರಾಜ್ ಮಾತನಾಡಿ, “ಈ ಸಂಸ್ಥೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬದುಕಿನ ದಿಕ್ಕು ಬದಲಿಸಿದೆ. ಟಿಇಟಿ ತರಬೇತಿಯಿಂದ ಆರಂಭವಾದ ಕೋಚಿಂಗ್ ಸೆಂಟರ್ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುತ್ತಿದೆ. ಟಿಇಟಿ ತರಬೇತಿ ಆರಂಭ ಮಾಡಿದಾಗ 150 ಹೆಣ್ಣು ಮಕ್ಕಳು ಬಂದಿದ್ದರು. ಆದರೆ, ಕೂರಲು ಚೇರುಗಳು ಇರಲಿಲ್ಲ. ಆಗ ಬಾಡಿಗೆ ಚೇರ್ ತಂದು ಕೂರಿಸಿ ತರಬೇತಿ ಕೊಡಿಸಿದ್ದೆವು. ಹೀಗೆ ಹಕ್ಕಿ ಗೂಡು ಕಟ್ಟಿದಂತೆ ಈ ಕೋಚಿಂಗ್ ಸೆಂಟರ್ ಕಟ್ಟಿದ್ದೇವೆ. ಇರುವ ಸೌಲಭ್ಯಗಳನ್ನೇ ಬಳಸಿಕೊಂಡು ಗುಣಮಟ್ಟದ ತರಬೇತಿ ನೀಡಿದ್ದೇವೆ. ಗ್ರಂಥಾಲಯಕ್ಕೆ ಪುಸ್ತಕ, ಮಾಸ ಪತ್ರಿಕೆ ಸೇರಿದಂತೆ ಅಧ್ಯಯನ ಸಾಮಗ್ರಿಗಳ ಕೊರತೆ ಇದೆ. ಹಲವರ ಬಳಿ
ಮನವಿ ಮಾಡಿದ್ದೇವೆ ಅವರು ಕೊಡಿಸುವುದಾಗಿ ಹೇಳಿದ್ದಾರೆ” ಎಂದರು.

“ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಬೇಕಾದ ತಯಾರಿ ಮತ್ತು ಪೂರ್ವ ಸಿದ್ಧತೆಗೆ ಅಂಬೇಡ್ಕರ್ ಕೋಚಿಂಗ್ ಸೆಂಟರ್ ಅತ್ಯಂತ ಸಹಕಾರಿಯಾಗಿದೆ. ಪ್ರಮುಖವಾಗಿ ನಮ್ಮಲ್ಲಿ ಆತ್ಮ ವಿಶ್ವಾಸ ತುಂಬಿದೆ” ಎಂದು ವಿದ್ಯಾರ್ಥಿನಿ ಮಧು ತಿಳಿಸಿದರು.
ಇದನ್ನೂ ಓದಿ: ತುಮಕೂರು | ಹುಣಸೆ ಹಣ್ಣು, ಬೀಜಕ್ಕೆ ಭಾರೀ ಬೇಡಿಕೆ; ಬೆಳೆಗಾರರ ಮುಖದಲ್ಲಿ ಮಂದಹಾಸ
ಬಾಬಾ ಸಾಹೇಬರ ಚಿಂತನೆಗಳನ್ನು, ತಳಸಮುದಾಯಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಎತ್ತರಕ್ಕೆ ಬರಬೇಕು ಎನ್ನುವ ಅವರ ಕನಸುಗಳನ್ನು ಈ ಕೋಚಿಂಗ್ ಸೆಂಟರ್ ಸಾಕಾರಗೊಳಿಸುತ್ತಿದೆ. ಸಮುದಾಯಗಳು ಮುಖಂಡರು, ಜನಪ್ರತಿನಿಧಿಗಳು ಎನಿಸಿಕೊಂಡವರು ಮಾಡಬೇಕಾದ ಕೆಲಸವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ 10 ವರ್ಷಗಳಿಂದ ಈ ಸೆಂಟರ್ ಮಾಡಿಕೊಂಡು ಬರುತ್ತಿದೆ. ಈ ಸಂಸ್ಥೆಯು ಮತ್ತೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅಗತ್ಯ ನೆರವು ಬೇಕಿದೆ.
