ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್ಸಿ) ಶುಕ್ರವಾರ(ಜೂನ್ 30) ಹೊಸ ನಿಯಮಾವಳಿಗಳನ್ನು ಜಾರಿಗೊಳಿಸಿದ್ದು, ಇದರನ್ವಯ ದೆಹಲಿ ಮೆಟ್ರೋ ಒಳಗೆ ಒಬ್ಬ ವ್ಯಕ್ತಿ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲು ಅನುಮತಿ ನೀಡಲಾಗಿದೆ. ಆದರೆ ಮೆಟ್ರೋ ಆವರಣದಲ್ಲಿ ಮದ್ಯಪಾನ ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮತ್ತು ಡಿಎಂಆರ್ಸಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ ಹೊರತುಪಡಿಸಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು. ಈಗ ಹಳೆಯ ಆದೇಶವನ್ನು ಪರಿಶೀಲಿಸಿದ ನಂತರ ಈ ನಿರ್ಧಾರವನ್ನು ಜಾರಿಗೊಳಿಸಲಾಗಿದೆ. ನವೀಕರಿಸಿದ ನಿಯಮಾವಳಿಗಳ ಪ್ರಕಾರ ದೆಹಲಿ ಮೆಟ್ರೋದ ಯಾವುದೇ ಭಾಗದಲ್ಲಿ ಬೇಕಾದರೂ ಓರ್ವ ವ್ಯಕ್ತಿಗೆ ಎರಡು ಸೀಲ್ ಮಾಡಿದ ಬಾಟಲಿ ಮದ್ಯ ಸಾಗಿಸುವ ಅವಕಾಶ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜ್ಯಪಾಲರ ಭೇಟಿ: ರಾಜೀನಾಮೆ ಸಾಧ್ಯತೆ
ಡಿಎಂಆರ್ಸಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಪ್ರತಿ ವ್ಯಕ್ತಿಗೆ ಎರಡು ಸೀಲ್ ಮಾಡಿದ ಮದ್ಯದ ಬಾಟಲಿಗಳನ್ನು ದೆಹಲಿ ಮೆಟ್ರೋದಲ್ಲಿ ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ನಲ್ಲಿನ ನಿಬಂಧನೆಗಳಿಗೆ ಸಮನಾಗಿ ಸಾಗಿಸಲು ಅನುಮತಿಸಲಾಗಿದೆ. ಸಿಐಎಸ್ಎಫ್ ಮತ್ತು ಡಿಎಂಆರ್ಸಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಹಿಂದಿನ ಆದೇಶವನ್ನು ಪರಿಶೀಲಿಸಿದೆ. ಹಳೆಯ ನಿಯಮದ ಪ್ರಕಾರ, ಏರ್ಪೋರ್ಟ್ ಎಕ್ಸ್ಪ್ರೆಸ್ ಲೈನ್ ಹೊರತುಪಡಿಸಿ ದೆಹಲಿ ಮೆಟ್ರೋದಲ್ಲಿ ಮದ್ಯ ಸಾಗಿಸುವುದನ್ನು ನಿಷೇಧಿಸಲಾಗಿತ್ತು. ಆದಾಗ್ಯೂ, ಮೆಟ್ರೋ ಆವರಣದಲ್ಲಿ ಮದ್ಯಪಾನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸುವಾಗ ಸರಿಯಾದ ವರ್ತನೆಯನ್ನು ಕಾಪಾಡಿಕೊಳ್ಳಲು ವಿನಂತಿಸಲಾಗಿದೆ. ಪ್ರಯಾಣಿಕರು ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ, ಕಾನೂನಿನ ಅನ್ವಯ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.