ಮೂರು ಬಾರಿ ಗೆದ್ದು ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ ಕಣ್ಣು ಕಾಣುತ್ತಿಲ್ಲ. ಹೀಗೇ ಆದಲ್ಲಿ ದೇಶದ ಯುವಜನರು ಅವರಿಗೆ ಪಾಠ ಕಲಿಸುವ ದಿನ ದೂರ ಇಲ್ಲ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ಇಂದು ಬಳ್ಳಾರಿಯಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟ ಕೇವಲ ಮುಸ್ಲಿಮರ ಹೋರಾಟ ಅಲ್ಲ. ಇದು ನಮ್ಮೆಲ್ಲರಿಗೆ ಸೇರಿದ ವಿಷಯ. ನಾವೆಲ್ಲರೂ ಸೇರಿ ಹೋರಾಟ ಮಾಡುತ್ತಿದ್ದೇವೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ಮುಸ್ಲಿಮರ ತ್ಯಾಗ ಇದೆ. ಇಂದು ನಾವು ಹಿಂದೂ, ಕ್ರೈಸ್ತ, ದಲಿತ, ಲಿಂಗಾಯತ ಎಂಬ ಧರ್ಮಾಧಾರಿತ ಸಮಾಜದಲ್ಲಿ ಬದುಕುತ್ತಿದ್ದೇವೆ. ಮುಸ್ಲಿಮರ ಮಾತ್ರವಲ್ಲದೆ ಎಲ್ಲಾ ಜನರ ಹಕ್ಕುಗಳ ರಕ್ಷಣೆ ಮಾಡಲು ಎಲ್ಲ ಧರ್ಮಗಳ ಜನರು ಒಗ್ಗಟ್ಟಾಗಬೇಕು” ಎಂದು ಕರೆ ನೀಡಿದರು.
“ಬಿಜೆಪಿ ಸರ್ಕಾರ ಮುಸ್ಲಿಮರ ಹಕ್ಕು ಕಿತ್ತುಕೊಂಡರೆ ನಮ್ಮ ಹಕ್ಕು ಕಿತ್ತುಕೊಂಡಂತೆ ಎಂಬುದನ್ನು ಮರೆಯಬಾರದು ಎಂದ ಅವರು,
ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರು ನೀಡಿದ ಶಕ್ತಿಯೇ ನಮ್ಮ ಇಂದಿನ ಹೋರಾಟಕ್ಕೆ ಪ್ರೇರಣೆಯಾಗಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗದಂತಹ ದೇಶ ಕಾಡುತ್ತಿರುವ ಸಮಸ್ಯೆಗಳಿಂದ ಜನರನ್ನು ಮೂರ್ಖರನ್ನಾಗಿಸಲು ಬಿಜೆಪಿ ಯತ್ನ ನಡೆಸಿದೆ. ಆದರೆ ಜನರು ಮೂರ್ಖರಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈ ದೇಶದ ಮೇಲೆ ಹಿಂದೂಗಳಿಗೆ ಎಷ್ಟು ಹಕ್ಕಿದೆಯೋ ಮುಸ್ಲಿಮರಿಗೂ ಕೂಡ ಅಷ್ಟೇ ಹಕ್ಕಿದೆ. ಹೋರಾಟ ಮಾಡುವ ಹಕ್ಕು ಕೂಡ ಮುಸ್ಲಿಮರಿಗಿದೆ. ಸಿಎಎ, ಎನ್‌ಆರ್‌ಸಿ, ಹಿಜಾಬ್ ನಂತಹ ವಿಷಯ ಮುಂದಿಟ್ಟು ಮುಖ್ಯ ವಿಷಯಗಳನ್ನು ಮರೆ ಮಾಚಲಾಗುತ್ತಿದೆ. ವಕ್ಫ್ ಬಿಲ್ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ” ಎಂದು ಹೇಳಿದರು.
ಪ್ರತಿಭಟನೆ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಬಿ ನಾಗೇಂದ್ರ, “ವಕ್ಫ್ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಮುಸ್ಲಿಮರು ಅಷ್ಟೇ ಅಲ್ಲ, ಹಿಂದೂಗಳು ಬಂದಿದ್ದಾರೆ. ಇಷ್ಟೊಂದು ಬಿಸಿಲಿನಲ್ಲಿ ಇಷ್ಟೊಂದು ಜನರು ಸೇರಿದ್ದೀರಾ ಅಂದ್ರೆ ಇದು ಎಷ್ಟು ಕರಾಳವಾಗಿದೆ ಎಂದು ಅರ್ಥವಾಗುತ್ತದೆ. ಕಾಂಗ್ರೆಸ್ನ ಎಲ್ಲಾ ನಾಯಕರು ನಿಮ್ಮ ಜೊತೆ ಇದ್ದೇವೆ. ನಿಮಗೆ ಶಕ್ತಿ ನೀಡಲು ನಾವು ಬಂದಿದ್ದೇವೆ. ಕಾಯ್ದೆಯ ಪ್ರತಿ ಹರಿದು ಹಾಕೋಣ. ಇದನ್ನು ನಾವು ಒಪ್ಪುವುದಿಲ್ಲ. ಇದು ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಕಾಯ್ದೆ ವಿರುದ್ಧದ ಹೋರಾಟ. ಬಳ್ಳಾರಿಯಲ್ಲಿ ಹಿಂದೂ-ಮುಸ್ಲಿಂ ಅಣ್ಣ ತಮ್ಮಂದಿರಂತೆ ಇದ್ದೇವೆ. ಕಾಯ್ದೆಯನ್ನು ಅನುಷ್ಠಾನ ಮಾಡಲು ಬಿಡಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಳ್ಳಾರಿ | ಬೆಂಬಲ ಬೆಲೆಯಡಿ ಜೋಳ ಖರೀದಿಗೆ ಅವಧಿ ವಿಸ್ತರಿಸಲು ರೈತರ ಆಗ್ರಹ

ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷ ಹುಮಾಯೂನ್ ಖಾನ್, ಮೇಯರ್ ಮುಲ್ಲಂಗಿ ನಂದೀಶ್, ಎ.ಮಾನಯ್ಯ, ಖಾಜಿ ಗುಲಾಂ ಸಿದ್ದೀಕಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಹುಸೇನ್ ಪೀರಾ, ಭಂ ಭಂ ದಾದಾ, ಕಣೇಕಲ್ ಮೆಹಬೂಬಸಾಬ, ಅಲ್ಲಾಬಕಷ್, ಕಾಂಗ್ರೆಸ್ ವಕ್ತಾರ ವೆಂಕಟೇಶ ಹೆಗಡೆ, ಪಾಲಿಕೆಯ ಸದಸ್ಯರಾದ ಜಬ್ಬಾರ್, ನೂರ್ ಮೊಹಮ್ಮದ್, ಆಸಿಫ್, ನಾಜು, ಮಿಂಚು ಸೀನಾ, ಕುಬೇರಾ, ಪೇರಂ ವಿವೇಕ್, ಗಾದೆಪ್ಪ, ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ಅಯಾಜ್, ಶಿವರಾಜ್, ಬಿಆರೆಲ್ ಸೀನಾ, ಗೋವಿಂದ ಸೇರಿದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.