ಸಿಇಟಿ ಪರೀಕ್ಷೆಗೆ ಹಾಜರಾಗುವ ಜನಿವಾರ ತೆಗೆಸಿದ್ದನ್ನು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಸುಬುದೇಂದ್ರ ತೀರ್ಥರು ತೀವ್ರವಾಗಿ ಖಂಡಿಸಿದ್ದಾರೆ, ಜನಿವಾರವೆಂಬುದು ಧರ್ಮ, ಸಂಪ್ರದಾಯ, ಹಾಗೂ ಬ್ರಾಹ್ಮಣತ್ವದ ಪ್ರತೀಕ ಎಂದಿದ್ದಾರೆ. ಜನಿವಾರ ತೆಗೆಸಿದ್ದರಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಇದು ಸಂವಿಧಾನ ವಿರೋಧಿ ನಡೆಯೂ ಆಗಿದೆ, ಸಂವಿಧಾನದಲ್ಲಿ ಎಲ್ಲಾ ಧರ್ಮವನ್ನೂ ಆಚರಿಸುವ ಅವಕಾಶ ಕಲ್ಪಿಸಲಾಗಿದೆ ಎಂದಿರಿ. ಒಪ್ಪಿಕೊಳ್ಳೋಣ ಅಂದು ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಹಾಕಿದ್ದರಿಂದ ಶಾಲೆಯಿಂದ ಹೊರಗಟ್ಟಿದರಲ್ಲಾ ಆಗ ತಮಗೆ ಇದು ಸಂಪ್ರದಾಯ ವಿರೋಧಿ ಧರ್ಮ ವಿರೋಧಿ ಅನಿಸಲಿಲ್ವಾ. ಶಾಲೆಗೆ ಹೋಗುವ ಮಕ್ಕಳನ್ನು ಹಿಜಾಬ್ ಧರಿಸಿ ಕ್ಲಾಸಿಗೆ ಬರುವ ಹಾಗಿಲ್ಲಾ ಎಂದು ಶಾಲೆಯಿಂದ ಹೊರಹಾಕಿ ಆ ಹೆಣ್ಣು ಮಕ್ಕಳ ಶಿಕ್ಷಣದ ಭವಿಷ್ಯಕ್ಕೇ ಕೊಳ್ಳಿ ಇಟ್ಟಾಗ ತಮಗೆ ಇದು ಸಂವಿಧಾನ ವಿರೋಧಿ ಅನಿಸಲಿಲ್ವೇ ಸ್ವಾಮೀಜಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಜಾಪುರ ಜಿಲ್ಲೆಯಲ್ಲಿ ಅಂದು ದಲಿತ ಐದು ವರ್ಷದ ಬಾಲಕ ಪಂಚ ಕಜ್ಜಾಯದ ಪಾತ್ರೆ ಮುಟ್ಟಿದ ಎಂದು ಸೌಟಲ್ಲಿ ಹೊಡೆದು ಕೊಂದರಲ್ಲಾ ಆಗ ತಮಗೆ ಹಿಂದೂ ಧರ್ಮದ ನೆನಪು ಬರಲಿಲ್ವೇ, ತಪ್ಪು ಅನಿಸಲಿಲ್ವೇ, ಅರಿವಿಲ್ಲದೆ ದಲಿತ ಬಾಲಕರು ಗೆಜ್ಜೆ ಕೋಲು ಬಿದ್ದದ್ದನ್ನು ಎತ್ತಿಕೊಟ್ಟಿದ್ದೆ ಅಪರಾಧ ಎಂದು ಥಳಿಸಿ, ದಂಡ ಹಾಕಿ ಬಹಿಷ್ಕಾರ ಹಾಕಿದರಲ್ಲಾ ಆಗ ಎಲ್ಲಿ ಹೋಗಿತ್ತು ತಮ್ಮ ಮನುಷ್ಯತ್ವ ಧರ್ಮ ರಕ್ಷಣೆಯ ಜವಾಬ್ದಾರಿ ಎಂದು ಹೇಳಿದರು
ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಹಚ್ಚಬೇಡಿ ಸ್ವಾಮೀಜಿಯವರೇ ಭಾರತದ ಪ್ರಜಾಪ್ರಭುತ್ವದಲ್ಲಿ, ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ.