ಮಾಜಿ ಪ್ರೇಮಿಯ ಬ್ಲ್ಯಾಕ್‌ಮೇಲ್‌ಗೆ ಬೇಸತ್ತ ದೈಹಿಕ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆಯ ಅಸುಂಡಿ ಗ್ರಾಮದಲ್ಲಿ ನಡೆದಿದೆ. ಸೈರಾಬಾನು ನದಾಫ್ (29) ಮೃತ ಶಿಕ್ಷಕಿ.
ಕಳೆದ 5 ವರ್ಷಗಳಿಂದ ಮೈಲಾರಿ ಎಂಬಾತನನ್ನು ಸೈರಾಬಾನು ಪ್ರೀತಿ ಮಾಡುತಿದ್ದರು. ಆದರೆ, ಕೆಲ ದಿನಗಳ ಹಿಂದೆ ಪ್ರೀತಿಯ ಸಂಬಂಧ ಮುರಿದು ಬಿದ್ದಿತ್ತು. ಬಳಿಕ ಪೋಷಕರ ಒತ್ತಾಯ ಮೇರೆಗೆ ಬೇರೆ ಮದುವೆಗೆ ಒಪ್ಪಿಗೆ ನೀಡಿದ್ದರು. ಇತ್ತ ಮಾಜಿ ಗೆಳತಿಯ ಮದುವೆ ತಯಾರಿ ನೋಡಿ ಮೈಲಾರಿ ಮೇಲಿಂದ ಮೇಲೆ ಮಾನಸಿಕವಾಗಿ ಹಿಂಸಿಸಲು ಶುರು ಮಾಡಿದ್ದಾನೆ. ಬೇರೆ ಮದುವೆ ಆದರೆ ಇಬ್ಬರ ಪೋಟೋ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕದ್ದಾನೆ. ಇದರಿಂದ ಮರ್ಯಾದೆಗೆ ಅಂಜಿ ಸೈರಾಬಾನು ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಮದುವೆಗೆ 8 ದಿನ ಇದ್ದದ್ದರಿಂದ ಯುವತಿ ಪೋಷಕರು ಮದುವೆ ಸಾಮಗ್ರಿಗಳನ್ನು ತರಲು ಹೋಗಿದ್ದರು. ಪೋಷಕರು ಮರಳಿ ಬರುವಷ್ಟರಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೈರಾಬಾನು ರಾಷ್ಟ್ರೀಯ ಮಟ್ಟದ ಕುಸ್ತಿಪಟು ಆಗಿದ್ದರು. ಹತ್ತಾರು ಮೆಡಲ್, ಕಪ್ ಗೆದ್ದು ಸಾಕಷ್ಟು ಹೆಸರು ಮಾಡಿದ್ದರು. ಆದರೀಗ ಮಾಜಿ ಪ್ರೇಮಿಯ ಮಾನಸಿಕ ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
