ಮಂಗಳೂರು | ‘ವಿನೂತನ ಒಳಮೀಸಲಾತಿ ನೀತಿ’ ಪ್ರಕಟಿಸಿ ಲೋಲಾಕ್ಷ ಅಭಿಮತ

Date:

Advertisements

ಶಿಕ್ಷಕರಿಲ್ಲದ, ಸರಿಯಾಗಿ ಪಠ್ಯ ಪುಸ್ತಕಗಳೇ ಇಲ್ಲದೆ, ಕಾಲಿಗೆ ಚಪ್ಪಲಿಯೂ ಇಲ್ಲದೆ ಸರಕಾರಿ ಶಾಲೆಗಳಲ್ಲಿ ಓದುವ ನಮ್ಮ ನಗರಗಳಲ್ಲಿ ಬೀದಿ ಗುಡಿಸುವ, ಚರಂಡಿ ಸ್ವಚ್ಛ ಮಾಡುವ ಬಡ ಪೌರ ಕಾರ್ಮಿಕರ ಮಕ್ಕಳು, ರಸ್ತೆ ಬದಿಗಳಲ್ಲಿ ಬೂಟ್ ಪಾಲಿಶ್ ಮಾಡುವವರ ಮಕ್ಕಳು ಮತ್ತು ಎಲ್ಲ ಸೌಲಭ್ಯ – ಸೌಕರ್ಯಗಳೊಂದಿಗೆ ಮೊಂಟೆಸ್ಸೋರಿ, ಸಿ ಬಿ ಎಸ್ ಸಿ ಮತ್ತು ಐ ಸಿ ಎಸ್ ಸಿ ಶಾಲೆಗಳಲ್ಲಿ ಓದುವ ಮತ್ತು ಐ ಎ ಎಸ್, ಐ ಪಿ ಎಸ್ ಅಧಿಕಾರಿಗಳು ಮತ್ತು ಮಂತ್ರಿಗಳ ಮಕ್ಕಳು, ಕೇವಲ ಅವರೆಲ್ಲರ ಜಾತಿ ಒಂದೇ ಎಂಬ ಕಾರಣಕ್ಕಾಗಿ, ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮತ್ತು ಸರಕಾರಿ ನೌಕರಿ ಪಡೆಯಲು ಒಂದೇ ಕೋಟಾದಡಿಯಲ್ಲಿ ಸ್ಪರ್ಧೆ ಎದುರಿಸಬೇಕು ಎಂಬ ಚಿಂತನೆ ಮತ್ತು ಅಂತಹ ನೀತಿ ಮೂಲತಃ ಅತ್ಯಂತ ಅಮಾನವೀಯ. ಆದ್ದರಿಂದ ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಮುಂದಾಗಿರುವ ಈ ಸಂದರ್ಭದಲ್ಲಿ, ಈ ಅಮಾನವೀಯ ಮೀಸಲಾತಿ ನೀತಿಯನ್ನು ಆಮೂಲಾಗ್ರ ವಾಗಿ ಪರಿಷ್ಕರಿಸಿ ಅಥವಾ ತಿರಸ್ಕರಿಸಿ, ಈ ಶೋಷಿತ ಜಾತಿಗಲ್ಲಿರುವ ಅತ್ಯಂತ ದುರ್ಬಲರೂ ಅಸಹಾಯಕರೂ ಆಗಿರುವ ಶ್ರಮಜೀವಿಗಳ ವರ್ಗಗಳಿಗೆ ವಿಶೇಷ ಆದ್ಯತೆ ಮತ್ತು ಸಂರಕ್ಷಣೆ ನೀಡುವ ವಿನೂತನ ಮೀಸಲಾತಿ ನೀತಿಯನ್ನು ರೂಪಿಸಲಾಗಿದೆ ಎಂದು ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಹೇಳಿದ್ದಾರೆ.

ಭಾನುವಾರ ಮಂಗಳೂರು ನಗರದ ಹೊಟೇಲ್ ಶ್ರೀನಿವಾಸ್ ನಲ್ಲಿ ಸಂಘಟಿಸಲಾಗಿದ್ದ’ಪರಿಶಿಷ್ಟ ಜಾತಿಗಳ ನಡುವೆ ಒಳಮೀಸಲಾತಿ ಕುರಿತ ಸಮಾಲೋಚನಾ ಸಭೆ’ ಯಲ್ಲಿ ಲೋಲಾಕ್ಷ ಮಾತನಾಡುತ್ತಿದ್ದರು.

ಪವರ್ ಪಾಯಿಂಟ್ ಮೂಲಕ ಪರಿಶಿಷ್ಟ ಜಾತಿಗಳ ಕುರಿತು ಸಂವಿಧಾನದ ಪರಿಕಲ್ಪನೆ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರಿತು ಸಂವಿಧಾನದ ಆಶಯ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಪ್ರಸಕ್ತ ಸ್ಥಿತಿ ಗತಿ ಕುರಿತು ಸಾಕಷ್ಟು ಸರಕಾರಿ ವರದಿಗಳನ್ನು, ದತ್ತಾಂಶಗಳನ್ನು ಪ್ರಸ್ತುತ ಪಡಿಸುತ್ತಾ, ಈ ವಿಚಾರದ ವಿಸ್ತ್ರತ ವಿಶ್ಲೇಷಣೆ ನಡೆಸಿದ ಲೋಲಾಕ್ಷ ಅವರು, ಬದಲಾವಣೆಗೆ ಈಗ ಕಾಲ ಪಕ್ವವಾಗಿದೆ ಎಂದರು.

Advertisements

ಆಳುವ ವರ್ಗಗಳು ಸಿದ್ಧ ಪಡಿಸುವ ನೀತಿಗೆ ಪರ್ಯಾಯವಾಗಿ, ತಾವು ಸಿದ್ಧ ಪಡಿಸಿದ ಒಳಮೀಸಲಾತಿ ನೀತಿ ಮತ್ತು ಅದರ ಪರಿಣಾಮ ಕಾರಿ ಅನುಷ್ಠಾನ ಹೇಗೆ ಮತ್ತು ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳು ಎಂದು ಅಧಿಸೂಚಿತ 101 ಜಾತಿಗಳಲ್ಲಿರುವ ವಿವಿಧ ವರ್ಗಗಳ ಜನರ ಸಂರಕ್ಷಣೆ ಹೇಗೆ ಖಾತರಿ ಮಾಡ ಬಹುದು ಎಂಬುದನ್ನು 100 ಪಾಯಿಂಟ್ ರೋಸ್ಟರ್ ಮೂಲಕ ವಿವರಿಸಿ, ವಿಶ್ಲೇಷಣೆ ನಡೆಸಿದರು.

ಈ ವೈಜ್ಞಾನಿಕ, ಸಂವಿಧಾನದ ಆಶಯಗಳಿಗೆ ಬದ್ಧವಾಗಿರುವ ಈ ವಿನೂತನ ಮೀಸಲಾತಿ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ನಮ್ಮ ಪ್ರಜ್ಞಾವಂತ ನಾಗರಿಕ ಸಮಾಜ ನಮಗೆ ನೆರವು ನೀಡಬೇಕು ಎಂದು ಮನವಿ ಮಾಡಿದ ಅವರು, ಈ ಬಗ್ಗೆ ಶೀಘ್ರದಲ್ಲಿ ಮಹಾಒಕ್ಕೂಟದ ನಿಯೋಗ ನಮ್ಮ ಜನಪ್ರತಿನಿದಿನಗಳನ್ನು ಭೇಟಿ ಮಾಡಿ ಚರ್ಚಿಸಲಿದೆ ಎಂದು ಹೇಳಿದರು.

‘ಆಯೋಗದಿಂದಲೇ ಸಂವಿಧಾನಕ್ಕೆ ಅಪಚಾರ’

ಕರ್ನಾಟಕ ರಾಜ್ಯಕ್ಕೆ ಅಧಿಸೂಚಿತವಾಗಿರುವ ‘ಆದಿ ಆಂಧ್ರ’, ‘ಆದಿ ದ್ರಾವಿಡ’ ಮತ್ತು ‘ಆದಿ ಕರ್ನಾಟಕ’ ಎಂಬ ಹೆಸರಿನ ಜಾತಿಗಳನ್ನು ‘ಅವುಗಳು ಜಾತಿಗಳಲ್ಲ, ಜಾತಿಗಳ ಗುಂಪುಗಳು. ಆದ್ದರಿಂದ ಈ ಗುಂಪುಗಳಿಗೆ ಸೇರಿದವರು ಸಮೀಕ್ಷೆಯಲ್ಲಿ ತಮ್ಮ ಉಪ ಜಾತಿಗಳನ್ನು ದಾಖಲಿಸ ಬೇಕು’ ಎಂದು ಹೇಳುತ್ತಾ ಸರಕಾರದ ಓರ್ವ ಸಚಿವರು ಮತ್ತು ಸ್ವತಃ ನ್ಯಾ. ನಾಗಮೋಹನ್ ದಾಸ್ ಅವರು ಪರಿಶಿಷ್ಟ ಸಮುದಾಯಗಳಲ್ಲಿ ಅನಗತ್ಯ ಗೊಂದಲಗಳನ್ನು ಮೂಡಿಸುತ್ತಿದ್ದಾರೆ.

‘ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ಇರಬಹುದು ಅಥವಾ ದಿ. 27.07.1977 ರಂದು ಜಾರಿಗೆ ಬಂದಿರುವ ತಿದ್ದುಪಡಿ ಆದೇಶ (Act 108 of 1976- Govt of India) ಇರಬಹುದು, ಈ ಮೂರನ್ನೂ ಪರಿಶಿಷ್ಟ ಜಾತಿಗಳು ಎಂದೇ ಅಧಿಸೂಚಿಸಲಾಗಿದೆ. ಇವುಗಳನ್ನು ‘ಜಾತಿಗಳ ಗುಂಪುಗಳು’ ಎಂದು ಕರೆಯಲು, ಪರಿಗಣಿಸಲು ಆಯೋಗಕ್ಕಾಗಲಿ, ಸಚಿವರಿಗೆ ಆಗಲಿ ಯಾವುದೇ ಅಧಿಕಾರ ಇಲ್ಲ. ಇದು ಸಂವಿಧಾನಕ್ಕೆ ಮಾಡುವ ಅಪಚಾರ. ಹೇಗಾದರೂ ಮಾಡಿ ಪರಿಶಿಷ್ಟ ಜಾತಿಗಳನ್ನು, ಜಾತೀಯ ನೆಲೆಯಲ್ಲಿಯೇ ಒಡೆದು, ಅವರನ್ನು ಇನ್ನಷ್ಟು ದುರ್ಬಲ ಗೊಳಿಸಬೇಕು ಎಂಬ ವಿಕೃತ ಮನಸ್ಸು ಇದು ಎಂದು ಅವರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.

ಕರ್ನಾಟಕ ರಾಜ್ಯದ 101 ಪರಿಶಿಷ್ಟ ಜಾತಿಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿ, ಅದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 13 ಜಾತಿಗಳು ಸೇರಿ, 89 ಅತ್ಯಂತ ದುರ್ಬಲ ಜಾತಿಗಳಿಗೆ ಶೇಕಡಾ 1 ಮೀಸಲಾತಿ ನಿಗದಿ ಗೊಳಿಸಿ, ಈ ಬಗ್ಗೆ ಸಂವಿಧಾಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕು ಎಂದು ಬಸವರಾಜ ಬೊಮ್ಮಯಿ ನೇತೃತ್ವದ ರಾಜ್ಯ ಸರಕಾರ ದಿ. 27.03.2023 ರಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ನಮ್ಮ ಮಹಾಒಕ್ಕೂಟ ಇದನ್ನು ಆಗಲೇ ತೀವ್ರವಾಗಿ ವಿರೋಧಿಸಿತ್ತು.

ಈ ವರ್ಷ ಏಪ್ರಿಲ್ 14 ರಂದು ತೆಲಂಗಾಣದ ಸರಕಾರ ಆ ರಾಜ್ಯದ 59 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಿ, ಅತೀ ಹೆಚ್ಚು ಹಿಂದುಳಿದಿರುವ 25 ಪರಿಶಿಷ್ಟ ಜಾತಿಗಳಿಗೆ ಶೇಕಡಾ 1 ಮೀಸಲಾತಿ ಕಲ್ಪಿಸಿ ಅಧಿಸೂಚನೆ ಹೊರಡಿಸಿದೆ.

ಈ ವರ್ಷದ ಏಪ್ರಿಲ್ 17 ರಂದು ಆಂಧ್ರ ಪ್ರದೇಶ ಸರಕಾರ ಆ ರಾಜ್ಯದ 59 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಿ, ಅತ್ಯಂತ ಹಿಂದುಳಿದ 12 ಪರಿಶಿಷ್ಟ ಜಾತಿಗಳಿಗೆ ಶೇಕಡಾ 1 ಮೀಸಲಾತಿ ನಿಗದಿಗೊಳಿಸಿ Andhra Pradesh Scheduled Castes ( Sub Classification) Ordinance, 2025 ನ್ನು ಹೊರಡಿಸಿದೆ. ಇವೆಲ್ಲವೂ ಸಂವಿಧಾನದ ಆಶಯಕ್ಕೆ ವ್ಯತಿರಿಕ್ತವಾಗಿವೆ. ಇದರಿಂದ, ಪರಿಶಿಷ್ಟ ಜಾತಿಗಳನ್ನು ಒಡೆದು ಆಳುವ ನೀತಿಯನ್ನು ಈ ಮೂರೂ ರಾಜ್ಯಗಳ ಆಳುವ ವರ್ಗ ಅನುಸರಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

‘ಅಸಮಾನ ಶಿಕ್ಷಣದಿಂದ ಆತಂಕಕಾರಿ ಅಸಮಾನತೆ’

ಈ ಸಮಾಲೋಚನಾ ಸಭೆಯಲ್ಲಿ ತಮ್ಮ ಚಿಂತನೆಗಳನ್ನು ಪ್ರಸ್ತುತ ಪಡಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಮತ್ತು ಮಕ್ಕಳ ಹಕ್ಕುಗಳ ಕುರಿತ ತಜ್ಞರಾದ ರೆನ್ನಿ ಡಿ’ ಸೋಜ ಅವರು, ಸಮಾಜದಲ್ಲಿ ಇರುವ ಶ್ರೇಣೀಕೃತ ವ್ಯವಸ್ಥೆಯಂತೆಯೇ ಶಿಕ್ಷಣ ಪದ್ಧತಿಯಲ್ಲೂ ಶ್ರೇಣಿಕರಣ ಇದ್ದು, ಇದು ಪರಿಶಿಷ್ಟ ಜಾತಿಗಳಲ್ಲಿ ಆತಂಕಕಾರಿಯಾದ ಅಸಮಾನತೆಗೆ ಕಾರವಾಗುತ್ತಿದೆ ಎಂದು ಪಿ ಪಿ ಟಿ ಮೂಲಕ ಸಾಕಷ್ಟು ದತ್ತಾಂಶಗಳ ಮೂಲಕ ವಿವರಿಸಿ, ವಿಶ್ಲೇಷಣೆ ನಡೆಸಿದರು.

ಈ ಸಮಾಲೋಚನಾ ಕಾರ್ಯಕ್ರಮವನ್ನು ವಿಶ್ರಾಂತ ಪೌರ ಕಾರ್ಮಿಕೆ ಪೂವಮ್ಮ ಉದ್ಘಾಟಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ ಎ ಎಂ ಹನೀಫ್, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಹಿರಿಯ ಪತ್ರಕರ್ತರಾದ ಎಸ್ ಜಯರಾಮ್ ಮತ್ತು ರಮೇಶ್ ಪೆರ್ಲ, ಮಾಜಿ ಕರ್ಪೂರೇಟರ್ ಪ್ರೇಮ್ ಬಲ್ಲಾಳ್ ಭಾಗ್, ಡಿ ಎಸ್ ಎಸ್ ಸಂಚಾಲಕ ಗಿರೀಶ್ ಉಳ್ಳಾಲ್, ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್, ಉಪಾಧ್ಯಕ್ಷರಾದ ಮೋಹನಾಂಗಯ್ಯ ಸ್ವಾಮಿ, ಸೀತಾರಾಮ್ ಕೊಂಚಾಡಿ, ಉಪ ಕಾರ್ಯದರ್ಶಿ ಪದ್ಮನಾಭ ಮೂಡಬಿದರೆ, ಪ್ರೊ. ಐಡಾ ಡಿ ಸೋಜ, ಜಿಲ್ಲಾ ಡಿ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಅನಿಲ್ ಕಂಕನಾಡಿ, ವಿ ವಿ ಯ ಶಿಕ್ಷಕ ಡಾ. ಅನಿಲ್ ಮತ್ತು ಜಿಲ್ಲೆಯ ವಿವಿಧ ಪರಿಶಿಷ್ಟ ಜಾತಿಗಳ ಸಂಘಟನೆಗಳ ನಾಯಕರು, ವಿವಿಧ ನೌಕರರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಸಮಾಲೋಚನೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X