ಭಾರತೀಯ ವಕೀಲ ಪರಿಷತ್ತಿನ ಸದಸ್ಯರು, ಪದಾಂಕಿತ ಹಿರಿಯ ವಕೀಲರಾದ ವೈ ಆರ್ ಸದಾಶಿವರೆಡ್ಡಿಯವರ ಕಚೇರಿಗೆ ನುಗ್ಗಿ ಸದಾಶಿವರಡ್ಡಿಯವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಖಂಡಿಸಿ, ವಕೀಲರ ಸಂರಕ್ಷಣಾ ಕಾಯ್ದೆ ಪರಿಣಾಮಕಾರಿ ಜಾರಿಗೆ ದಾವಣಗೆರೆ ಜಿಲ್ಲಾ ವಕೀಲರು ವಕೀಲರ ಭವನದಲ್ಲಿ ಖಂಡನಾ ಸಭೆ ನಡೆಸಿ ಒತ್ತಾಯಿಸಿದರು. ಇದೇ ವೇಳೆ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ರವರಿಗೆ ಮನವಿ ಸಲ್ಲಿಸಲಾಯಿತು.

“ಎಪ್ರಿಲ್ 16ರಂದು ಬಳ್ಳಾರಿಯ ಸದಾಶಿವ ರೆಡ್ಡಿ ಅವರ ಕಚೇರಿಗೆ ನುಗ್ಗಿ ಅಪರಿಚಿತ ವ್ಯಕ್ತಿಗಳು ಫೈಬರ್ ಪೈಪ್ ನಿಂದ ಹಲ್ಲೆ ಮಾಡಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯನ್ನು ದಾವಣಗೆರೆ ಜಿಲ್ಲಾ ವಕೀಲರ ಸಂಘ ಮತ್ತು ವಕೀಲರು ಖಂಡಿಸಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಎಚ್. ಅರುಣ್ ಕುಮಾರ್, “ಇಂತಹ ಘಟನೆಗಳನ್ನು ಖಂಡಿಸುವುದು ಎಲ್ಲರ ಕರ್ತವ್ಯ. ರಾಜ್ಯ ಪರಿಷತ್ ಎಪ್ರಿಲ್ 16ರಂದು ನಡೆದ ಹಲ್ಲೆ ಘಟನೆಯನ್ನು ಖಂಡಿಸಲು ಎಪ್ರಿಲ್ 19ರಂದು ಕರೆ ನೀಡಿರುವುದು ಬೇಸರದ ಸಂಗತಿ. ಘಟನೆಯಲ್ಲಿ ವಕೀಲರಾದ ಸದಾಶಿವ ರೆಡ್ಡಿ ಅವರ ಕೈ ಮುರಿಯಲಾಗಿದೆ. ಕಾಲು ಸಹ ಮುರಿದಿದೆ. ಒಬ್ಬ ರಾಷ್ಟ್ರೀಯ ವಕೀಲರ ಪರಿಷತ್ ಸದಸ್ಯರ ಮೇಲೆ ಈ ರೀತಿ ಹಲ್ಲೆ ನಡೆಸಿದ್ದು ಆತಂಕಕಾರಿ” ಎಂದು ಆತಂಕ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷೆಯ ಸಹೋದರನ ಹಸ್ತಕ್ಷೇಪ, ಸದಸ್ಯರಿಂದ ಗ್ರಾಮ ಪಂಚಾಯಿತಿಗೆ ಬೀಗ.
ಸಂಘದ ಮಾಜಿ ಅಧ್ಯಕ್ಷ, ಹಿರಿಯ ವಕೀಲ ವಿಜಯಪ್ರಕಾಶ್ ಮಾತನಾಡಿ, “ವಕೀಲರ ರಕ್ಷಣೆಗೆ ಕಾನೂನು ಅಗತ್ಯವಿದೆ. ವಕೀಲರ ಸಂರಕ್ಷಣಾ ಕಾಯ್ದೆ ಯಾಕೆ ಪರಿಣಾಮಕಾರಿಯಾಗಿ ಜಾರಿ ಆಗಿಲ್ಲ” ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಬಸವರಾಜ್, ಉಪಾಧ್ಯಕ್ಷ ಬಸವರಾಜ್ ಗೋಪನಾಳು, ಮಾಜಿ ಕಾರ್ಯದರ್ಶಿ ಶ್ಯಾಂ, ವಕೀಲರಾದ ನಾಗರಾಜ್, ಆಂಜನೇಯ ಗುರೂಜಿ, ಎ.ಎಸ್. ಮಂಜುನಾಥ್, ಭಾಗ್ಯಲಕ್ಷ್ಮಿ, ಕಂದಗಲ್ ಗೌಡ್ರ ಮಲ್ಲಿಕಾರ್ಜುನ್, ಎ.ಸಿ.ರಾಘವೇಂದ್ರ, ಗಣೇಶ್, ಮಂಜುಳಾ ಸಭೆಯ ವೇದಿಕೆಯಲ್ಲಿದ್ದರು.