ಸಂಸತ್ತಿನಲ್ಲಿ ಜಾರಿಗೊಳಿಸಿದ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಸದಾಯೆ ಮಿಲ್ಲತ್ ಕಮಿಟಿಯಿಂದ ಯಾದಗಿರಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ಈ ಕುರಿತು ಪ್ರತಿಭಟನಾಕಾರರು ಕೈಯಲ್ಲಿ ಕಪ್ಪು ಧ್ವಜ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ʼಕೇಂದ್ರ ಸರ್ಕಾರವು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ-2025 ಬಹುಮತ ಮೂಲಕ ಪಾಸ್ ಮಾಡಿದೆ. ಇದಕ್ಕೆ ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ. ಆದರೆ ಈ ಶಾಸನವು ಮುಸ್ಲಿಂ ಸಮುದಾಯದ ವೆಬ್ ಆಸ್ತಿಗಳನ್ನು ಕಬಳಿಸಲು ಮಾಡಿರುವ ಕುತಂತ್ರದ ಕಾಯ್ದೆಯಾಗಿದೆʼ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ʼಈ ಕಾಯ್ದೆಯಲ್ಲಿ 1955ರ ಕಾಯ್ದೆಯ ಅನೇಕ ಅಂಶಗಳು ಕೈಬಿಡಲಾಗಿದೆ. ಈ ತಿದ್ದುಪಡೆ ಕಾಯ್ದೆಯು ಮುಸ್ಲಿಂ ಸಮುದಾಯದ ಸಾಮಾಜಿಕ, ಪರಂಪರೆ ಹಾಗೂ ವೈಯಕ್ತಿಕ ಕಾನೂನಿಗೆ ವಿರುದ್ಧವಾಗಿದೆ. ಸದರಿ ಕಾಯ್ದೆಯ ಸಮಿತಿಯಲ್ಲಿ ಮುಸ್ಲಿಂಯೇತರ ಸದಸ್ಯರನ್ನು ಸೇರಿಸಿರುವುದು ಕಾನೂನು ಬಾಹಿರವಾಗಿದೆʼ ಎಂದರು.
ʼಸಂವಿಧಾನದ 14ನೇ ವಿಧಿ, 25, 26 ವಿಧಿಗಳ ಉಲ್ಲಂಘನೆಯಾಗಿದೆ. ಯಾವುದೇ ವ್ಯಾಜ್ಯಗಳು ಬಂದರೆ ಅದನ್ನು ಬಗೆಹರಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಿರುವುದು ಕೂಡ ಸಂಶಯಕ್ಕೆ ಎಡೆ ಮಾಡಿ ಕೊಡುತ್ತದೆ. ನ್ಯಾಯಾಲಯಗಳ ಅಧಿಕಾರ ಸರ್ವೆ ಮಾಡುವ ವಿಧಾನ ಮುಂತಾದವುಗಳು ಮುಸ್ಲಿಂ ಸಮುದಾಯಕ್ಕೆ ಮಾರಕವಾಗಿದ್ದು, ವಕ್ಫ್ ತಿದ್ದುಪಡಿ ಮಸೂದೆ ಹಿಂಪಡೆದು ಮುಸ್ಲಿಂ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪಿಡಿಒ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ
ಸಂಘಟನೆಯ ಪ್ರಮುಖರಾದ ಖಮ್ರುಲ್ ಇಸ್ಲಾಂ, ಮುಹಮ್ಮದ್ ಆರಿಫ್ ಸಗ್ರಿ , ವರ್ಚಸ್ ಅಧ್ಯಕ್ಷ ಅಬ್ದುಲ್ ಗಫ್ಲಾರ್, ಖಾಜಾ ಮೊಯಿನುದ್ದೀನ್, ಮುಹಮ್ಮದ್ ಸಿರಾಜ್ ಕಂದಕೂರ್, ಪರ್ವೇಜ್ ಪಟೇಲ್, ಮೊಹಮ್ಮದ್ ಮಹೆಬೂಬ್, ಎಂ ಡಿ ಸಿರಾಜ್ ಮುಖದ್ದಮ್, ಎಂ ಯಾಖುಬ್ ದರ್ಜಿ, ಎಂ.ಡಿ.ಮುಶರ್ರಫ್ ಸೇರಿದಂತೆ ಅನೇಕರು ಭಾಗವಹಿಸಿದರು.