ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ಅಶ್ವಿನಿ ಬಿದ್ರೆ-ಗೊರೆ ಅವರ ಹತ್ಯೆ ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಪೊಲೀಸ್ ಅಧಿಕಾರಿ ಅಭಯ್ ಕುರುಂಡ್ಕರ್ ಅವರನ್ನು ಇದೀಗ ಅಪರಾಧಿ ಎಂದು ಘೋಷಿಸಲಗಿದೆ. ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಮುಂಬೈನಲ್ಲಿ ಎಪಿಐ ಅಶ್ವಿನಿ ಬಿದ್ರೆ ಮತ್ತು ಪೊಲೀಸ್ ಅಧಿಕಾರಿ ಅಬಯ್ ಕುರುಂಡ್ಕರ್ ಒಟ್ಟಿಗೆ ಸೇವೆ ಸಲ್ಲಿಸುತ್ತಿದ್ದರು. ಅವರ ನಡುವೆ ಪ್ರೇಮ ಸಂಬಂಧವೂ ಇತ್ತು ಎಂದು ಹೇಳಲಾಗಿದೆ. 2016ರ ಏಪ್ರಿಲ್‌ನಲ್ಲಿ ಅಶ್ವಿನಿ ಅವರನ್ನು ಹತ್ಯೆಗೈದು, ಅವರ ಮೃತದೇಹವನ್ನು ತುಂಡು-ತುಂಡಾಗಿ ಕತ್ತರಿಸಿ ಎಸೆಯಲಾಗಿತ್ತು. ಅವರನ್ನು ಅಭಯ್ ಕುರುಂಡ್ಕರ್ ಅವರೇ ಹತ್ಯೆ ಮಾಡಿದ್ದಾರೆ ಎಂದು ಬಂಧಿಸಲಾಗಿತ್ತು.
ಆದರೆ, ಅಶ್ವಿನಿ ಅವರ ಮೃತದೇಹ ಪತ್ತೆಯಾಗದ ಕಾರಣ, ಅಭಯ್ ಅವರನ್ನು ಅಪರಾಧಿ ಎಂದು ಸಾಬೀತು ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರನ್ನು ಅಧೀನ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಎಪಿಐ ಅಶ್ವಿನಿ ಬಿದ್ರೆ ಅವರ ಕುಟುಂಬದವರು ಮೇಲಿನ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ಪನ್ವೇಲ್‌ನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಜಿ.ಪಲ್ದೇವಾರ್, “ಮೃತದೇಹ ಸಿಕ್ಕಿಲ್ಲ ಎಂಬುದು ಅಪರಾಧಿಯನ್ನು ಪಾರು ಮಾಡಲು ನೆರವಾಗುವುದಿಲ್ಲ” ಎಂದು ಹೇಳಿದ್ದಾರೆ. ಪ್ರಕರಣವನ್ನು ನವಿ ಮುಂಬೈ ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿಲ್ಲವೆಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಸುಪ್ರೀಂ ಕೋರ್ಟ್‌ನಿಂದ ಅಣ್ವಸ್ತ್ರ ಪ್ರಯೋಗ: ಧನಕರ್ ಹೇಳಿಕೆ ಸಮಂಜಸವೇ?
“ಇಡೀ ವ್ಯವಸ್ಥೆ ಆರೋಪಿ ಅಭಯ್ ಅವರ ಪರಾವಾಗಿ ಕೆಲಸ ಮಾಡಿದೆ. ಅವರನ್ನು ರಕ್ಷಿಸಲು ಯತ್ನಿಸಿದೆ” ಎಂದು ಹೇಳಿರುವ ಕೋರ್ಟ್, ತನಿಖೆಯಲ್ಲಿ ದೋಷ ಎಸಗಿರುವ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದೆ.
ಅಪರಾಧಿ ಅಭಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೆ, ಹತ್ಯೆಗೆ ಸಹಾಯ ಮಾಡಿದ ಅವರ ಕಾರು ಚಾಲಕ ಕುಂದನ್ ಭಂಡಾರಿ ಮತ್ತು ಸ್ನೆಹಿತ ಮಹೇಶ್ ಫಳ್ನೀಕರ್ ಎಂಬವರಿಗೆ ತಲಾ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.