- ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕೆಲ ನ್ಯೂನತೆಗಳು ಇವೆ
- ಹಂತವಾಗಿ ಒಂದು ನೀತಿಗೆ ಬದಲಾವಣೆ ತರುತ್ತೇವೆ
ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ. ಯಾವುದೇ ರೀತಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದ ರೀತಿ ಬದಲಾವಣೆಗೆ ಗಮನಹರಿಸುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, “ಎರಡು ವರ್ಷಗಳ ಹಿಂದೆ ಹಿಂದಿನ ಸರ್ಕಾರ ನಮ್ಮ ರಾಜ್ಯದಲ್ಲಿ ಎನ್‌ಇಪಿ ಅನುಷ್ಠಾನ ಮಾಡಿದೆ. ಅದಕ್ಕೆ ಬಹಳಷ್ಟು ಪೂರ್ವ ತಯಾರಿ ಆಗಬೇಕಿತ್ತು, ಆಗಿರಲಿಲ್ಲ. ಅದರಲ್ಲಿ ಕೆಲ ನ್ಯೂನತೆಗಳು ಇವೆ. ಈ ಎಲ್ಲವನ್ನೂ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸುತ್ತಿದ್ದೇವೆ” ಎಂದರು.
“ರಾಜ್ಯ ಶಿಕ್ಷಣ ನೀತಿ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟವಾದ ರೂಪ ಕೊಟ್ಟು ಬದಲಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ. ಯಾವುದೇ ನೀತಿ ಜಾರಿಗೆ ತರಬೇಕಾದರೆ ಮೂಲಭೂತ ಸೌಲಭ್ಯಗಳು ಇರಬೇಕು. ಅದಕ್ಕೆ ಬೇಕಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಅನುದಾನ ಒದಗಿಸುವ ಬಗ್ಗೆ ತಯಾರಿ ಮಾಡಬೇಕಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮಗಳ ಪುನರಾರಂಭ: ಸಿಎಂ ಸಿದ್ದರಾಮಯ್ಯ ಭರವಸೆ
“ಖಾಸಗಿ ಸಂಸ್ಥೆಗಳಲ್ಲಿ ಒಂದು ರೀತಿ ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತೊಂದು ರೀತಿ ಆಗುತ್ತದೆ. ಈ ಎಲ್ಲ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಹಂತ ಹಂತವಾಗಿ ಒಂದು ನೀತಿಗೆ ಬದಲಾವಣೆ ತರಬೇಕು” ಎಂದರು.
ಕೊಟ್ಟ ಮಾತಿನಂತೆ ನಡೆದಿದ್ದೇವೆ
“ಕೇಂದ್ರ ನಮ್ಮ ಕಾರ್ಯಕ್ರಮಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ಜನರಿಗೆ ನಡೆದುಕೊಂಡಿದ್ದಾರೆ. ಈ ಉದ್ದೇಶದಿಂದ ನೇರವಾಗಿ 5 ಕೆಜಿ ಅಕ್ಕಿ ಬದಲು ಹಣ ಕೊಡುತ್ತೇವೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಬಹುತೇಕರು ಒಪ್ಪಿದ್ದಾರೆ. ಕೇಂದ್ರದ ಮೇಲೆ ಸಂಸದರು ಒತ್ತಡ ಹೇರಬಹುದಿತ್ತು. ಈಗ ಅದೇ ಪ್ರಶ್ನೆಯನ್ನು ಬಿಜೆಪಿಗೆ ನಿರಂತರವಾಗಿ ಕೇಳುತ್ತಿದ್ದೇವೆ” ಎಂದರು.