ಕಾಂಗ್ರೆಸ್ ಸರ್ಕಾರದ ಸಚಿವರು ದೇವರು-ಧರ್ಮಾಧಿಕಾರಿಗಳ ಬುಡದಲ್ಲಿ ನಿಂತು, ಧರ್ಮ ರಕ್ಷಣೆಯ ಮಾತುಗಳನ್ನಾಡುತ್ತಿದ್ದಾರೆ. ಶೋಷಕರ ಪರ ನಿಂತು, ಶೋಷಿತರನ್ನು ತುಳಿಯುತ್ತಿದ್ದಾರೆ. ಪ್ರಜಾಪ್ರಭುತ್ವವನ್ನೇ ಅಣಕಿಸುತ್ತಿದ್ದಾರೆ. ವಿಧಾನಸೌಧಕ್ಕೇ ಜಾತಿ ಜನಿವಾರ ತೊಡಿಸುತ್ತಿದ್ದಾರೆ.
‘ಧರ್ಮಾಚರಣೆಗೆ ಯಾರೂ ಅಡ್ಡಿಪಡಿಸುವ ಹಾಗಿಲ್ಲ. ಆಚರಣೆಗಳಿಗೆ ಅಡ್ಡಿ ಮಾಡಿದಲ್ಲಿ ಶಿಕ್ಷೆ ನೀಡಲು ಸರ್ಕಾರ ಬದ್ಧವಾಗಿದೆ. ಸರ್ಕಾರದ ಪ್ರತಿನಿಧಿಯಾಗಿ ನಾನು ಧರ್ಮದ ರಕ್ಷಣೆಗೆ ತಯಾರಿದ್ದೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ. ಶಿವಕುಮಾರ್ ಹೇಳುವುದಕ್ಕೂ ಮುನ್ನವೇ ಅರಣ್ಯ ಸಚಿವ ಈಶ್ವರ ಖಂಡ್ರೆ, ಜನಿವಾರ ತೆಗೆಯದ ಕಾರಣಕ್ಕೆ ಸಿಇಟಿ ಗಣಿತ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿ ಮನೆಗೆ ತೆರಳಿದ್ದಾರೆ. ವಿದ್ಯಾರ್ಥಿ ಮತ್ತು ಪೋಷಕರನ್ನು ಸಂತೈಸಿದ್ದಾರೆ. ಧರ್ಮಾಚರಣೆಗೆ ಅಡ್ಡಿಪಡಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಸಾಲದು ಎಂದು, ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ವಿದ್ಯಾಲಯದಲ್ಲಿ ವಿದ್ಯಾರ್ಥಿಗೆ ಉಚಿತ ಪ್ರವೇಶ ನೀಡುವುದಾಗಿ ಭರವಸೆ ನೀಡಿದ್ದಾರೆ.
ಅಂದರೆ, ಒಬ್ಬ ವಿದ್ಯಾರ್ಥಿಗಾದ ತೊಂದರೆಗೆ ಸರ್ಕಾರ ಸ್ಪಂದಿಸಿದೆ. ಅದು ಸರಿಯಾದ ಕ್ರಮವಾಗಿದೆ. ಸರ್ಕಾರದ ವತಿಯಿಂದ ಮಾನವೀಯತೆಯ ಮಹಾಪೂರವೇ ಹರಿದುಬಂದಿದೆ. ಅದು ಉಳ್ಳವರ ಪರವಾಗಿದೆ.
ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್- ಆದದ್ದನ್ನು ಅವಘಡ ಎಂದು ಭಾವಿಸಿದ್ದಾರೆ. ಜನಿವಾರ ತೆಗೆಸಿದ್ದನ್ನು ಧರ್ಮಾಚರಣೆಗೆ ಅಡ್ಡಿ ಎಂದಿದ್ದಾರೆ. ಸರ್ಕಾರದ ಪ್ರತಿನಿಧಿಗಳಾಗಿ ನಾವು ಧರ್ಮದ ರಕ್ಷಣೆಗೆ ಸಿದ್ಧರಿದ್ದೇವೆ ಎಂದು ಮೇಲ್ಜಾತಿಗೆ ಶಿರಬಾಗಿದ್ದಾರೆ.
ಇಲ್ಲಿ ಪ್ರಶ್ನೆ ಇರುವುದು- 2022ರಲ್ಲಿ ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಧರಿಸಿ ಶಾಲೆಗೆ ಬಂದಾಗ, ತರಗತಿಗೆ ಹಾಜರಾಗಲು ಅವಕಾಶ ನೀಡದೆ ನಿರಾಕರಿಸಲಾಯಿತು. ಆಕೆ ಕೂಡ ಒಬ್ಬ ವಿದ್ಯಾರ್ಥಿಯಲ್ಲವೇ, ಆಕೆಯ ಭವಿಷ್ಯ ಬರಿದಾಯಿತಲ್ಲವೇ, ಅದು ಧರ್ಮಾಚರಣೆಗೆ ಅಡ್ಡಿ ಅಲ್ಲವೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ಸಂವಿಧಾನವೇ ಸಾರ್ವಭೌಮ’ ಎನ್ನುವ ಸತ್ಯ ಮರೆತರೇ ಧನಕರ್?
ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರ್ಕಾರ, ಅದನ್ನು ಅವಘಡ ಎಂದು ಭಾವಿಸಲಿಲ್ಲ, ಸಂತ್ರಸ್ತೆಯ ಮನೆಗೆ ಹೋಗಿ ಸಂತೈಸಲಿಲ್ಲ, ಸ್ಪಂದಿಸಲಿಲ್ಲ, ಧರ್ಮ ರಕ್ಷಣೆಯನ್ನೂ ಮಾಡಲಿಲ್ಲ. ಬದಲಿಗೆ ತಾನೇ ಮುಂದೆ ನಿಂತು ಹಿಂದೂ ವಿದ್ಯಾರ್ಥಿಗಳಿಗೆ ಕೇಸರಿ ಶಾಲುಗಳನ್ನು ವಿತರಿಸುವ ಮೂಲಕ, ಉರಿಯುವ ಬೆಂಕಿಗೆ ತುಪ್ಪ ಸುರಿಯಿತು. ಸಾಲದು ಎಂದು, ಕೆಲ ಸುದ್ದಿ ಮಾಧ್ಯಮಗಳ ಪತ್ರಕರ್ತರನ್ನು ಬಳಸಿಕೊಂಡು, ಒಂದು ಶಾಲೆಯ ಸುದ್ದಿಯನ್ನು ರಾಜ್ಯದ ಜ್ವಲಂತ ಸಮಸ್ಯೆಯನ್ನಾಗಿ ಬಿಂಬಿಸುವಲ್ಲಿ ಯಶಸ್ವಿಯಾಯಿತು.
ಆಗ ಮುಸ್ಲಿಂ ವಿದ್ಯಾರ್ಥಿನಿಯ ಹಿಜಾಬ್ ವಿಷಯವನ್ನು ಹಾಗೂ ಈಗ ವಿಪ್ರ ವಿದ್ಯಾರ್ಥಿಯ ಜನಿವಾರದ ವಿಚಾರವನ್ನು ಮುನ್ನೆಲೆಗೆ ತಂದಿದ್ದು, ಅತಿ ಎನಿಸುವಷ್ಟು ಹಿಂಜಿ ಎಳೆದು ರಾಡಿ ಎಬ್ಬಿಸಿದ್ದು ಸುದ್ದಿ ಮಾಧ್ಯಮಗಳು. ಆಗ ಅದು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾಗಿತ್ತು. ಈಗ, ಮೇಲ್ಜಾತಿ ಮನಸ್ಸು ತಾನೇ ತಾನಾಗಿ ಕೆಲಸ ಮಾಡಿತ್ತು. ಆಗ ಅದು ಆಚರಣೆಗಿಂತ ವಿದ್ಯೆ ಮುಖ್ಯ ಎಂದಿತ್ತು. ಈಗ ಜಾತಿ, ಧರ್ಮ ಮುಖ್ಯ ಎನ್ನುತ್ತಿದೆ. ಈ ದೇಶದಲ್ಲಿ- ಬ್ರಾಹ್ಮಣ್ಯವೇ ಆದರ್ಶವಾದ ಸಮಾಜದಲ್ಲಿ- ಇದೇನು ಹೊಸದಲ್ಲ. ಪರಂಪರಾಗತವಾಗಿ ನಡೆದುಕೊಂಡು ಬಂದದ್ದು. ಈಗಲೂ ನಡೆಯುತ್ತಿರುವುದು.
ಹೀಗಾಗಿಯೇ ಈ ವ್ಯವಸ್ಥೆಯಲ್ಲಿ ಜನಿವಾರ ತೆಗೆಸುವುದು ಪರಮಪಾಪದ ಕೆಲಸವಾಗುತ್ತದೆ. ಅದರಲ್ಲೂ ಜನಿವಾರಕ್ಕೆ ಜೋತುಬಿದ್ದ ಜಾತಿವಾದಿ ಪತ್ರಕರ್ತರು ಜಾಗೃತರಾಗುತ್ತಾರೆ. ವಿಪ್ರರು, ಹಿಂದೂ ಸಂಘಟನೆಗಳ ನಾಯಕರು, ಸ್ವಾಮೀಜಿಗಳು, ಮಠಾಧೀಶರು ಮತ್ತು ರಾಜಕೀಯ ನಾಯಕರನ್ನು ಸಂಪರ್ಕಿಸಿ, ನಡೆಯಬಾರದ ಅನಾಹುತ ನಡೆದುಹೋಗಿದೆ ಎನ್ನುವಂತೆ ಅಭಿಪ್ರಾಯ ರೂಪಿಸುತ್ತಾರೆ. ಮುದ್ರಣ ಮಾಧ್ಯಮವಾದರೆ, ಲೀಡ್ ಸುದ್ದಿಯನ್ನಾಗಿಸುತ್ತದೆ; ದೃಶ್ಯ ಮಾಧ್ಯಮವಾದರೆ, ದಿನದ ಇಪ್ಪತ್ನಾಲ್ಕು ಗಂಟೆಯೂ ಬಿತ್ತರಿಸುತ್ತದೆ. ಒಟ್ಟಿನಲ್ಲಿ ಅದನ್ನು ದೇಶದ ಜ್ವಲಂತ ಸಮಸ್ಯೆ ಎನ್ನುವಂತೆ ಬಿಂಬಿಸುತ್ತದೆ. ಜಾತಿ-ಧರ್ಮ ಮುಖ್ಯ ಎನ್ನುತ್ತದೆ, ಸಮಾಜ ಅದರ ಪರವಿರುವಂತೆ ಪ್ರಭಾವಿಸುತ್ತದೆ.
ಆಗ, 2002ರಲ್ಲಿ, ಹಿಜಾಬ್ ಬಿಜೆಪಿಗೆ ಬೇಕಾಗಿತ್ತು. ಅವರು ಹಿಂದುತ್ವ ಪ್ರತಿಪಾದಕರು. ಹಿಂದೂ ನಾವೆಲ್ಲ ಒಂದು ಎನ್ನುವವರು. ಹಿಂದು-ಮುಸ್ಲಿಮರ ನಡುವೆ ದ್ವೇಷ ಬಿತ್ತುವವರು. ಬಹುಸಂಖ್ಯಾತರನ್ನು ಬಳಸಿಕೊಂಡು ಅಲ್ಪಸಂಖ್ಯಾತರನ್ನು ಸದೆಬಡಿದವರು. ಅದರಿಂದ ರಾಜಕೀಯ ಲಾಭ ಪಡೆದವರು. ಅಧಿಕಾರ ಹಿಡಿದವರು.
ಈಗ, 2025ರಲ್ಲಿ, ಜನಿವಾರ ಕೂಡ ಬಿಜೆಪಿಗೆ ಅಸ್ತ್ರವಾಗಿ ಸಿಕ್ಕಿದೆ. ಏಕೆಂದರೆ ಅದರಲ್ಲಿ ಧರ್ಮ ಇದೆ, ಆಚರಣೆ ಇದೆ, ನಂಬಿಕೆ ಇದೆ. ಅದನ್ನು ತೆಗೆಸಿದರೆ ಅಪಚಾರ ಎಂದು ದೊಡ್ಡ ಗಂಟಲಿನಲ್ಲಿ ವಿರೋಧಿಸುವ ಸ್ವಾಮೀಜಿಗಳಿದ್ದಾರೆ, ಮಠಾಧೀಶರಿದ್ದಾರೆ. ಅವರು ಮತ್ತು ಅವರ ಜಾತಿಯನ್ನು ಶ್ರೇಷ್ಠವೆಂದು ಭಾವಿಸುವ ವ್ಯವಸ್ಥೆ ಇದೆ. ಹಾಗಾಗಿ ಅವರು ಮಾಡುವುದು ಸರಿ, ಅವರನ್ನು ಅನುಸರಿಸುವುದು ಸನ್ಮಾರ್ಗ ಎನ್ನುವ ಭ್ರಮೆ ಈ ಸಮಾಜಕ್ಕಿದೆ. ಇದರ ಲಾಭವನ್ನು ವಿಪ್ರರು ಮತ್ತು ಬಿಜೆಪಿ ಪಡೆಯುತ್ತಿದೆ.
ಆದರೆ, ಈ ವ್ಯವಸ್ಥೆಯ ಹುಳುಕುಗಳನ್ನು ಬಲ್ಲ, ಜಾತಿತಾರತಮ್ಯದಿಂದಾದ ಅನಾಹುತಗಳನ್ನು ಕಂಡುಂಡ; ವೈಚಾರಿಕ ಪ್ರಜ್ಞೆಯುಳ್ಳ, ಸಮಾಜವಾದಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನಾಗಿದೆ? ಇವುಗಳ ನಡುವೆಯೇ ಪರಿಶಿಷ್ಟ ಜಾತಿ, ವರ್ಗ ಮತ್ತು ಇತರ ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ಮತ್ತು ಶಿಕ್ಷಣ ಹಕ್ಕು ಕಲ್ಪಿಸುವ ಉದ್ದೇಶದಿಂದ ‘ರೋಹಿತ್ ವೇಮುಲ ಕಾಯ್ದೆ’ ರೂಪಿಸುವ ಮಾತನಾಡುತ್ತಿರುವುದು ವಿಪರ್ಯಾಸದಂತೆ ಕಾಣಿಸುತ್ತಿದೆ. ನುಡಿದಂತೆ ನಡೆದ ಸರ್ಕಾರ ಎನ್ನುವುದನ್ನು ಅಪಹಾಸ್ಯ ಮಾಡುತ್ತಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಭಾರತೀಯ ಸಮಾಜದಲ್ಲಿ ಬ್ರಾಹ್ಮಣ್ಯ-ಮನುವಾದ ಮರುಕಳಿಸುತ್ತಿದೆಯೇ?
ಇನ್ನು ಕಾಂಗ್ರೆಸ್ ಸರ್ಕಾರದ ಸಚಿವರು ದೇವರು-ಧರ್ಮಾಧಿಕಾರಿಗಳ ಬುಡದಲ್ಲಿ ನಿಂತು, ಧರ್ಮ ರಕ್ಷಣೆಯ ಮಾತುಗಳನ್ನಾಡುತ್ತಿದ್ದಾರೆ. ಶೋಷಕರ ಪರ ನಿಂತು, ಶೋಷಿತರನ್ನು ತುಳಿಯುತ್ತಿದ್ದಾರೆ. ಮಾನವೀಯತೆ ಎನ್ನುವುದು ತಮಗಿಂತ ದುರ್ಬಲರೆಡೆಗೆ ಇರಬೇಕಾದ ಸಹನಾಶೀಲ ಗುಣ ಎನ್ನುವುದನ್ನೇ ಮರೆಯುತ್ತಿದ್ದಾರೆ. ತಮ್ಮನ್ನು ಆರಿಸಿ ಕಳುಹಿಸಿದ ಮತದಾರಪ್ರಭುವನ್ನು ಪಕ್ಕಕ್ಕೆ ಸರಿಸಿ, ಪ್ರಜಾಪ್ರಭುತ್ವವನ್ನೇ ಅಣಕಿಸುತ್ತಿದ್ದಾರೆ. ವಿಧಾನಸೌಧಕ್ಕೇ ಜಾತಿ ಜನಿವಾರ ತೊಡಿಸುತ್ತಿದ್ದಾರೆ.
ಸರ್ವಜನಾಂಗದ ಶಾಂತಿಯ ತೋಟ ಎನ್ನುವುದು ಬರಿಮಾತಿನ ಬೊಗಳೆಯಾಗುವುದು ಇಂತಹ ಸಂದರ್ಭಗಳಲ್ಲಿಯೇ ಅಲ್ಲವೇ?

ತಿಳಿದು ಮಾತನಾಡಿದರೆ ಉತ್ತಮ. ಜನಿವಾರ ದೇಹದ ಒಳಗೆ ಇರುವಂತಹದ್ದು. ಮೈಯನ್ನು ಮುಚ್ಚೋದಿಲ್ಲ.ಹಿಜಾಬ್ ಹಾಗಲ್ಲ. ಎಕ್ಸಾಮ್ ಗೆ ವಸ್ತ್ರಸಂಹಿತೆ ಅಂತ ಇರುತ್ತೆ. ದ್ವೇಷಕ್ಕೆ ಕಾರಣ ಇರಲಿ. ದ್ವೇಷವೇ ಕಾರಣ ಆಗೋಡ್ ಬೇಡ.