ಎರಡು ಆಟೋ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಏಳು ಮಂದಿ ಸಾವನ್ನಪ್ಪಿರುವ ದುರ್ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ವಡ್ಡರಹಳ್ಳಿ ಸೇತುವೆ ಬಳಿ ಎರಡು ಆಟೋಗಳಿಗೆ ಲಾರಿ ಢಿಕ್ಕಿ ಹೊಡೆದಿದೆ. ಏಳು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಹೊಸಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯಲ್ಲಿ ಐವರು ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಎರಡು ಆಟೋಗಳ ಪೈಕಿ ಒಂದು ಆಟೋದಲ್ಲಿ ಬಳ್ಳಾರಿಯ ಕೌಲ್‌ಬಜಾರ್ ನಿವಾಸಿಗಳು ತುಂಗಭದ್ರ ಜಲಾಶಯ ನೋಡಲು ಹೊರಟಿದ್ದರು. ಆ ಆಟೋದಲ್ಲಿ 20 ಮಂದಿ ಪ್ರಯಾಣ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಅವರ ಪೈಕಿ ಶಾಶಮ್ಮ ಎಂಬ ಒಬ್ಬ ಮಹಿಳೆ ಮೃತಪಟ್ಟಿದ್ದಾರೆ. ಮತ್ತೊಂದು ಆಟೋದಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗಾಯಾಳುಗಳಲ್ಲಿ ಗಂಭೀರ ಪರಿಸ್ಥಿತಿಯಲ್ಲಿದ್ದ ಇಬ್ಬರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಿಸಿದೆ. ಅಲ್ಲದೆ, ಆಸ್ಪತ್ರೆ ವೆಚ್ಚವಾಗಿ ಗಾಯಾಳುಗಳಿಗೆ ತಲಾ 50,000 ರೂ. ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿದ್ದಾರೆ.