ಜನಿವಾರ ಧರಿಸಿದ ವಿದ್ಯಾರ್ಥಿ ಪರವಾಗಿ ಹೋರಾಡಲು ಒಂದು ದೊಡ್ಡ ವ್ಯವಸ್ಥೆಯೇ ಇದೆ. ಆ ವ್ಯವಸ್ಥೆಯ ಹೆಸರೇ ಜಾತಿ ವ್ಯವಸ್ಥೆ. ಅದು ಯಾವಾಗಲೂ ಈ ಜಾತಿ ಶ್ರೇಣೀಕರಣದ ಮೇಲಿನವರಿಗೇ ಅನುಕೂಲ ಮಾಡಿಕೊಡುತ್ತದೆ. ಅದು ಸರ್ಕಾರ, ಸಮಾಜ, ಮಾಧ್ಯಮದ ಮೇಲೆ ನಿಯಂತ್ರಣ ಹೊಂದಿದೆ. ಹೀಗಾಗಿ ನಾವು ಯಾರ ಪರವಾಗಿ ವ್ಯವಸ್ಥೆ ನಿಲ್ಲುವುದಿಲ್ಲವೋ ಅವರ ಪರವಾಗಿ ನಿಲ್ಲಬೇಕು....
ನಾನು ಫೇಸ್‌ಬುಕ್ಕಿನಲ್ಲಿ ಒಂದು ಪೋಸ್ಟ್ ಹಾಕಿದೆ. ಅದು ಇತ್ತೀಚೆಗೆ ನಡೆದ ಜನಿವಾರ ಪ್ರಕರಣಕ್ಕೆ ಸಂಬಂಧಿಸಿದಂತೆ. ಆಗ ಅದಕ್ಕೆ ಬಂದ ಒಂದು ಪ್ರತಿಕ್ರಿಯೆ– ‘ನೀವು ಹಿಜಾಬ್ ಪ್ರಕರಣದ ಸಂದರ್ಭದಲ್ಲಿ ಆ ಹೆಣ್ಣುಮಕ್ಕಳ ವಿಚಾರದಲ್ಲಿ ಹೋರಾಟ ಮಾಡಿದ್ದಿರಿ; ಈಗ ಜನಿವಾರ ಪ್ರಕರಣದ ಸಂದರ್ಭದಲ್ಲಿ ಆ ಹುಡುಗನ ಪರ ನಿಲ್ಲದೇ ಮೌನ ವಹಿಸಿದ್ದೀರಿ’ ಅಂತ. ಮೇಲ್ನೋಟಕ್ಕೆ ಹೌದಲ್ಲಾ, ಬೀದರಿನಲ್ಲಿ ಆ ಹುಡುಗನಿಗೆ ಪರೀಕ್ಷೆ ಬರೆಸದೇ ಹೊರಗುಳಿಸಿದರಲ್ಲಾ, ಹಿಜಾಬ್ ಹೆಣ್ಣುಮಕ್ಕಳ ಪರ ನಿಂತವರು ಇದರ ಪರವೂ ನಿಲ್ಲಬೇಕಲ್ಲಾ ಅಂತ ಅನ್ನಿಸಬಹುದು. ಹಾಗೆ ನೋಡಿದರೆ, ಆ ಹುಡುಗನ ಜನಿವಾರದ ಕಾರಣಕ್ಕೆ ಪರೀಕ್ಷೆಗೆ ಬರೆಯದೇ ಇರುವಂತಾಗಿದ್ದು ತಪ್ಪು. ಜನಿವಾರ ಯಾವ ರೀತಿಯಲ್ಲಿ ಪರೀಕ್ಷಾ ನಿಯಮಗಳನ್ನ ಉಲ್ಲಂಘಿಸುತ್ತೆ ಅಂತ ಪರೀಕ್ಷಾ ಮೇಲ್ವಿಚಾರಕರು ಅಥವಾ ಇದಕ್ಕೆ ಸಂಬಂಧಪಟ್ಟವರು ಹೇಳಬೇಕು. ಅಲ್ಲಿ ಮಾತ್ರವಲ್ಲ, ಬೇರೆ ಜಿಲ್ಲೆಗಳಲ್ಲೂ ಎಲ್ಲಿಯಾದರೂ ಆ ರೀತಿ ಆಗಿದ್ದರೆ ಅದು ತಪ್ಪೇ?
ಹಾಗಿದ್ದ ಮೇಲೆ ಹಿಜಾಬ್ ವಿಚಾರದಲ್ಲಿ ಹೆಣ್ಣುಮಕ್ಕಳ ಪರ ನಿಂತವರೆಲ್ಲಾ ಈ ಜನಿವಾರದ ಕಾರಣಕ್ಕೆ ತೊಂದರೆಗೊಳಗಾದ ಹುಡುಗನ ವಿಚಾರದಲ್ಲೂ ಕೂಡಲೇ ಹೋರಾಟ ಮಾಡಬೇಕಿತ್ತಾ? ಸಾಮಾನ್ಯ ಸಂದರ್ಭದಲ್ಲಿ ಇಂಥಾ ಪ್ರಕರಣದಲ್ಲಿ ನ್ಯಾಯಾನ್ಯಾಯ ವಿಚಕ್ಷಣೆಯ ತರ್ಕವನ್ನ ನಾವು ಮುಂದಿಟ್ಟರೆ ಅರ್ಥ ಆಗಲ್ಲ. ಆದರೆ, ಈ ಪ್ರಕರಣ– ನಮ್ಮೆಲ್ಲರ ಮುಂದೆ ಯಾವುದೇ ಸಂಶಯಕ್ಕೆ ಎಡೆಯಿಲ್ಲದ ಹಾಗೆ ಒಂದು ವಿಚಾರವನ್ನ ಸಾಬೀತು ಮಾಡಿದೆ. ಅದೇನೆಂದರೆ– ಹಿಜಾಬ್ ವಿಚಾರದಲ್ಲಿ ಹೆಣ್ಣುಮಕ್ಕಳ ಪರ ನಿಂತಿದ್ದು ಸರಿ ಮತ್ತು ಜನಿವಾರ ಪ್ರಕರಣದಲ್ಲಿ ಆ ಹುಡುಗನಿಗೆ ಅಡ್ಡಿ ಆಗಬಾರದಿತ್ತು; ಹಾಗಂತ ನಮ್ಮಂತವರು ಕೂಡಲೇ ಆತನ ನೆರವಿಗೆ ಧಾವಿಸದೇ ಇರುವುದರಲ್ಲಿ ಏನೂ ತಪ್ಪಿರಲಿಲ್ಲ ಅಂತ.
ಇದನ್ನ ನಾನು ಹೇಳಿದರೆ, ಕೆಲವರಿಗೆ ಹೌದೌದು ಅನ್ನಿಸಬಹುದು. ಕೆಲವರಿಗೆ ‘ಅದ್ಹೇಗೆ?’ ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಆ ಹುಡುಗನ ನೆರವಿಗೆ ನಾವೂ ಹೋಗಬೇಕಿತ್ತಲ್ಲವೇ ಅಂತ ಅನ್ನಿಸುತ್ತದೆ. ಅಂಥವರಿಗೆ ನನ್ನ ಮನವಿ ಇಷ್ಟೇ:
ನಾನು ಫೇಸ್‌ಬುಕ್ಕಿನಲ್ಲಿ ಪೋಸ್ಟ್ ಮಾಡಿದ ಈ ಪುಟ್ಟ ಬರಹ ಓದಿ. ಇದು ಕನ್ನಡದ ಪ್ರಮುಖ ಕವಿ, ಬರಹಗಾರ, ಪತ್ರಕರ್ತ, ಮಾನವೀಯ ಮನಸ್ಸಿನ ಗೆಳೆಯ ಬಿ.ಎಂ.ಬಶೀರ್ ಅವರು ಬರೆದಿದ್ದು. ನಾನು ಅದನ್ನು ಕಾಪಿ ಮಾಡಿ, ಅವರ ಹೆಸರನ್ನೂ ಬರೆದು ಪೋಸ್ಟ್ ಮಾಡಿದ್ದೆ. ಅದರಲ್ಲೇನಿತ್ತು?
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು: ಇದೆಂತಯ್ಯಾ?
ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ! ಕೂಡಲ ಸಂಗಮದೇವಾ!
ನೀಟ್ ತರಗತಿಯೊಳಗೆ ಜನಿವಾರ ತೆಗೆ ಎಂದರೆ
ಯಾಕೆ ತೆಗೆಯಲಿ ಎಂದು ಕೇಳುವರು
ದೇಗುಲದೊಳಗೆ ಪ್ರವೇಶಿಸುವ ಭಕ್ತಗೆ ಮಾತ್ರ
ಬಟ್ಟೆಯನ್ನೆ ತೆಗೆ ತೆಗೆ ಎನ್ನುವರು
ಹಿಜಾಬ್ ಬೇಕೋ ಶಿಕ್ಷಣ ಬೇಕೋ ಎಂದು ಕೇಳಿದವರು
ಈಗ ನೋಡಿದರೆ ಶಿಕ್ಷಣಕ್ಕಿಂತ ಜನಿವಾರ ಮೇಲು ಎನ್ನುವರು
ಜನಿವಾರವಿಲ್ಲದುದನು ಮುಂದೊಡ್ಡಿ ದೇಗುಲ ಪ್ರವೇಶ ತಡೆದವರು
ಜನಿವಾರ ಮುಂದೊಡ್ಡಿ ತರಗತಿಯ ಪ್ರವೇಶ ತಡೆದುದಕ್ಕೆ
ಇದೇನಿದು ಅನ್ಯಾಯವೆಂದು ಸಿಟ್ಟಾದರು
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು: ಇದೆಂತಯ್ಯಾ?
ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ!
ಬಟ್ಟೆ ಅನ್ನೋ ಪದಕ್ಕೆ ಕನ್ನಡದಲ್ಲಿ ದಾರಿ, ಮಾರ್ಗ ಅನ್ನುವ ಅರ್ಥವಿದೆ. ಬಸವಣ್ಣನವರ ವಚನವನ್ನು ಮಾರ್ಪಡಿಸಿ ಬಶೀರ್ ಅವರು ಬರೆದಿದ್ದ ಕವನವನ್ನು ನಾನು ಹಾಕಿದ ಮೇಲೆ, ಅವರಿಗೆ ಇನ್ನೂ ಸಿಟ್ಟು ಬರಬಹುದು. ಯಾಕಂದ್ರೆ, ನೀನು ಈ ಹುಡುಗನ ಪರ ನಿಲ್ಲಲಿಲ್ಲ, ಬದಲಿಗೆ ಅದರ ಮೂಲಕ ಅವನನ್ನ ವ್ಯಂಗ್ಯ ಮಾಡ್ತಾ ಇದ್ದೀಯ ಅಂತ.
ಓದುಗರು, ನಾನು ಪಕ್ಷಪಾತಿಯಾಗಿದ್ದೇನಾ ಅಂತ ದಯವಿಟ್ಟು ಪರಾಂಬರಿಸಬೇಕು. ವಾಸ್ತವ ಏನು ಅಂತ ನೋಡಬೇಕು.
ಯಾಕೆ ಅಂದರೆ ಬಹಳ ಜನ ಈ ಪ್ರಶ್ನೆ ಕೇಳಿದ್ದಾರೆ. ಯಾರೇ ಮಕ್ಕಳಿಗೆ ಅವರು ಹಾಕಿಕೊಳ್ಳುವ ಬಟ್ಟೆ ಅಥವಾ ಧಾರ್ಮಿಕ ಆಚರಣೆಗಳ ಭಾಗವಾಗಿ ಕಟ್ಟಿಕೊಳ್ಳುವ ದಾರ ಇತ್ಯಾದಿಗಳಿಗೆ ಅಡ್ಡಿ ಮಾಡೋದು ತಪ್ಪು ಅನ್ನೋದಾದರೆ– ಇಬ್ಬರಿಗೂ ಅನ್ಯಾಯವಾದಾಗ ಒಂದೇ ರೀತಿ ನೋಡಬೇಕಲ್ಲವೇ ಅಂತ.

ಮೊದಲನೆಯದಾಗಿ, ಹಿಜಾಬ್ ವಿಚಾರಕ್ಕೂ ಜನಿವಾರಕ್ಕೂ ಹೋಲಿಕೆ ಇಲ್ಲ ಅಂತ ಗಮನಿಸಬೇಕು. ಪರೀಕ್ಷೆ ಬರೆಯುವಾಗ, ಬೇರೆ ಬೇರೆ ರೀತಿಯಲ್ಲಿ ನಕಲು ಮಾಡೋಕೆ ಕಾಪಿ ಮಾಡೋಕೆ ಬಹಳ ಕ್ರಿಯೇಟಿವ್ ವಿಧಾನಗಳನ್ನ ವಿದ್ಯಾರ್ಥಿಗಳು ಬಳಸ್ತಾ ಇದ್ದಾರೆ ಅಂತ ಪರೀಕ್ಷಾ ಪ್ರಾಧಿಕಾರದವರು ನಿರ್ಬಂಧಗಳನ್ನೂ ಜಾಸ್ತಿ ಮಾಡ್ತಾ ಇದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಒಂದಷ್ಟು ಮೈಕ್ರೋ ಉಪಕರಣಗಳ ಮುಖಾಂತರ ನಕಲು ಮಾಡ್ತಾರೆ ಅನ್ನೋದು ಅವರ ತಕರಾರು. ಜನಿವಾರದಿಂದ ಅದ್ಹೇಗೆ ನಕಲು ಮಾಡಬಹುದೋ ನನಗೆ ಗೊತ್ತಿಲ್ಲ. ಆದರೆ, ಇದು ಕೇವಲ ಜನಿವಾರಕ್ಕೆ ಅನ್ವಯಿಸಲ್ಲ; ಎಲ್ಲಾ ರೀತಿಯ ದಾರಗಳನ್ನೂ ಕತ್ತರಿಸಿ ತೆಗೀತಾರೆ ಅಂತ ಹಲವಾರು ವಿದ್ಯಾರ್ಥಿಗಳು ಹೇಳಿದಾರೆ. ಈ ನಿಯಮಗಳು ಕಾಂಗ್ರೆಸ್ ಸರ್ಕಾರ, ಬಿಜೆಪಿ ಸರ್ಕಾರಕ್ಕೆ ಸಂಬಂಧವೂ ಇಲ್ಲ. ಇದನ್ನ ಪರೀಕ್ಷಾ ಪ್ರಾಧಿಕಾರದವರು ಮಾಡ್ತಾರೆ. ಒಂದು ವೇಳೆ ಅವರು ಅತೀ ಮಾಡ್ತಾ ಇದಾರೆ, ಸರಿ ಇಲ್ಲ ಅಂದರೆ ಅದನ್ನ ಹೇಳಬೇಕು. ಇದರಲ್ಲಿ ನಿರ್ದಿಷ್ಟ ಧರ್ಮಕ್ಕೆ ಮಾತ್ರ ಸೀಮಿತ ಮಾಡಿದ್ದಾರೆ ಅನ್ನೋದಕ್ಕೂ ಯಾವ ಆಧಾರವೂ ಇಲ್ಲ.
ಆದರೆ, ಹಿಜಾಬ್ ವಿಚಾರದಲ್ಲಿ ಆಗಿದ್ದು– ಪರೀಕ್ಷೆಯ ವಿಚಾರ ಅಲ್ಲ. ಕಾಲೇಜಿನ ಒಳಗೆ ಬರೋದಕ್ಕೇನೇ ನೀವು ತಲೆ ಮೇಲಿನ ಬಟ್ಟೆಯನ್ನ ತೆಗೆದು ಬರಬೇಕು ಅಂತ ಅಂದಿದ್ದು. ತರಗತಿಯಲ್ಲಿ ಪಾಠ ಕೇಳೋಕೆ, ಸಮವಸ್ತ್ರಾನೂ ಹಾಕಿಕೊಂಡು, ಅದರ ಜೊತೆಗೆ ಒಂದು ಸಮುದಾಯಕ್ಕೆ ಸೇರಿದ ಹೆಣ್ಣುಮಕ್ಕಳಲ್ಲಿ ಕೆಲವರು ತಲೆ ಮೇಲೂ ಒಂದು ಬಟ್ಟೆಯನ್ನ ಹಾಕಿಕೊಂಡು ಬರೋದೇನೇ ದೊಡ್ಡ ಸಮಸ್ಯೆ ಅಂತ ಬಿಂಬಿಸಿದ್ದು– ಸ್ವತಃ ಆ ಕಾಲೇಜಿನ ಪ್ರಾಂಶುಪಾಲರು ತಾವೇ ಆ ಹೆಣ್ಣುಮಕ್ಕಳನ್ನ ಹೊರಗೆ ನಿಲ್ಲಿಸಿ ಗೇಟು ಹಾಕಿದ್ದು– ಇದು ಮತ್ತು ಪರೀಕ್ಷೆಯ ಸಂದರ್ಭದ ನಿರ್ಬಂಧ ಎರಡೂ ಬೇರೆ ಅನ್ನೋದು ಮೊದಲ ವಿಚಾರ.
ಇದನ್ನು ಓದಿದ್ದೀರಾ?: ಜನಿವಾರ ಬ್ರಾಹ್ಮಣರಿಗೆ ಎಷ್ಟು ಅತ್ಯಗತ್ಯವೋ ಹಿಜಾಬ್ ಕೂಡ ನಮಗೆ ಅಷ್ಟೇ ಅಗತ್ಯ: ಸಂತ್ರಸ್ತ ಮುಸ್ಲಿಂ ವಿದ್ಯಾರ್ಥಿನಿ ಆಲಿಯಾ
ಎರಡನೇದು ಮತ್ತು ಮುಖ್ಯವಾದದ್ದು: ಆ ಹಿಜಾಬ್ ಹಾಕಿದ ಹೆಣ್ಣುಮಕ್ಕಳನ್ನು ಕಾಲೇಜು ಗೇಟಿನ ಹೊರಗೆ ನಿಲ್ಲಿಸಿದ ಮೇಲೆ ಏನಾಯಿತು ಅನ್ನೋದು. ಸರ್ಕಾರೀ ವಲಯದ ಯಾವುದೇ ಅಧಿಕಾರಿ ಅವರ ಪರವಾಗಿ ಮಾತಾಡಲಿಲ್ಲ. ಇಡೀ ಸರ್ಕಾರವೇ ಆ ಹೆಣ್ಣುಮಕ್ಕಳ ವಿರುದ್ಧ ನಿಂತಿತು. ರಾಜ್ಯದ ಬಹುಪಾಲು ಟಿವಿ ಚಾನೆಲ್ಲುಗಳು ಆ ವಿದ್ಯಾರ್ಥಿನಿಯರ ವಿರುದ್ಧ ನಿಂತವು. ಹೋಗಲಿ, ವಿರೋಧ ಪಕ್ಷದವರಾದರೂ ಬಹಳ ಸ್ಪಷ್ಟ ಮಾತುಗಳಲ್ಲಿ ಅವರ ಪರ ನಿಂತರಾ? ಅಂದರೆ, ಅದೂ ಆಗಲಿಲ್ಲ. ಅಂತಿಮವಾಗಿ ರಾಜ್ಯದ ಹೈಕೋರ್ಟು ಮತ್ತು ಸುಪ್ರೀಂಕೋರ್ಟುಗಳೂ ಸಹಾ ಆ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಪರ ನಿಲ್ಲಲಿಲ್ಲ. ರಾಜ್ಯ ಹೈಕೋರ್ಟು, ಸರ್ಕಾರದ– ಅಂದರೆ ಬಿಜೆಪಿ ಸರ್ಕಾರದ– ಹಿಜಾಬ್ ನಿಷೇಧ ಆದೇಶವನ್ನ ಎತ್ತಿ ಹಿಡಿದಿತ್ತು. ಸುಪ್ರೀಂಕೋರ್ಟಿಗೆ ಅದರ ಮೇಲೆ ಅಪೀಲು ಹೋದಾಗ ತಡೆಯಾಜ್ಞೆ ಏನೂ ಬರಲಿಲ್ಲ; ಬದಲಿಗೆ ಕೇಸನ್ನ ವಿಚಾರಣೆಗೆ ತೆಗೆದುಕೊಳ್ಳಲಿಕ್ಕೇ ತಡವಾಯಿತು.
ಓದುಗರು ಈ ಟೈಮ್ ಲೈನ್ ಗಮನಿಸಿದರೆ, ಅದು ಇನ್ನಷ್ಟು ನಿಚ್ಚಳವಾಗಿ ಕಾಣಬಹುದು.
2022ರ ಜನವರಿ 1ನೇ ತಾರೀಕು ಹಿಜಾಬ್ ಹಾಕಿದ ಹೆಣ್ಣುಮಕ್ಕಳನ್ನ ಉಡುಪಿಯ ಕಾಲೇಜಿನಲ್ಲಿ ಒಳಕ್ಕೆ ಬಾರದಂತೆ ತಡೆಯಲಾಯಿತು. ಇದನ್ನ ಪ್ರತಿಭಟಿಸಿದ ಆರು ಜನ ಮುಸ್ಲಿಂ ಹೆಣ್ಣುಮಕ್ಕಳನ್ನ ಮಾರನೇ ದಿನ, ಕಾಲೇಜಿನಿಂದ ಅಮಾನತು ಮಾಡಲಾಯಿತು. ಜನವರಿ 26ನೇ ತಾರೀಕು ಸರ್ಕಾರ ಇದಕ್ಕೊಂದು ಪರಿಣಿತರ ಸಮಿತಿಯನ್ನ ರಚಿಸಿತು. ಈ ಇಡೀ ಅವಧಿಯಲ್ಲಿ ಸರ್ಕಾರದ ಪರವಾಗಿರುವ ಪ್ರತಿಯೊಬ್ಬರೂ ಬಹಳ ಹೀನಾಯವಾಗಿ ನಡೆದುಕೊಂಡರು, ಆ ಹೆಣ್ಣುಮಕ್ಕಳನ್ನ ಕನಿಷ್ಠ ಕಾಲೇಜಿನ ಒಳಕ್ಕೆ ಕರೆದುಕೊಂಡು ತರಗತಿಗಳಲ್ಲಿ ಪಾಠ ಕೇಳೋಕೂ ಅವಕಾಶ ಕೊಡಲಿಲ್ಲ. ಉಳಿದಂತೆ ರಾಜ್ಯದ ಎಷ್ಟೋ ಕಾಲೇಜುಗಳಲ್ಲಿ ಅವತ್ತಿನತನಕ ಯಾವುದೇ ಸಮಸ್ಯೆ ಇರಲಿಲ್ಲ. ಇದಾದ ಮೇಲೆ ಸಮಸ್ಯೆಯನ್ನ ಉದ್ದೇಶಪೂರ್ವಕವಾಗಿ ಸೃಷ್ಟಿ ಮಾಡಲಾಯಿತು. ಫೆಬ್ರವರಿ 5ನೇ ತಾರೀಕು ಸರ್ಕಾರ ಅಧಿಕೃತವಾಗಿ ಆದೇಶವನ್ನೇ ಹೊರಡಿಸಿ, ಶಾಲೆ ಒಳಕ್ಕೆ ಬರುವುದಾದರೆ ಹಿಜಾಬ್ ತೆಗೆದಿಟ್ಟೇ ಬರಬೇಕು ಎಂದಿತು.
ಫೆಬ್ರವರಿ 7ಕ್ಕೆ ಆ ಮಕ್ಕಳು ಹೈಕೋರ್ಟಿಗೆ ಹೋದರು. ನೀವಿಲ್ಲಿ– ಆ ಹೆಣ್ಣುಮಕ್ಕಳ ವಿರುದ್ಧ ಇರುವ ಶಕ್ತಿಯ ಅಗಾಧತೆಯನ್ನ ಗಮನಿಸಬೇಕು. ಅವರು ಎಷ್ಟು ಸಮಯ ತಗೋತಾರೆ ಈ ವಿಚಾರದಲ್ಲಿ ಪ್ರತಿಕ್ರಿಯಿಸೋಕೆ ಅನ್ನೋದನ್ನ ನೋಡಬೇಕು. ಆ ಹೆಣ್ಣುಮಕ್ಕಳು ಅಥವಾ ಅವರ ಪರವಾಗಿರುವವರು ಏನ್ಮಾಡ್ತಾ ಇದ್ದರು ಅನ್ನೋದನ್ನ ನೋಡಬೇಕು.
ಫೆಬ್ರವರಿ 10ಕ್ಕೆ ರಾಜ್ಯ ಹೈಕೋರ್ಟು ಮಧ್ಯಂತರ ಆದೇಶ ಕೊಡುತ್ತೆ, ಆದರೆ ನಿಷೇಧ ತೆಗೆಯಲ್ಲ. ಫೆಬ್ರವರಿ 25ರತನಕ ವಿಚಾರಣೆ, ವಾದ ನಡೆಯುತ್ತೆ, ಆದರೆ ಆದೇಶವನ್ನ ಕಾಯ್ದಿರಿಸಲಾಗುತ್ತೆ. ಮಾರ್ಚ್ 15ಕ್ಕೆ ರಾಜ್ಯ ಹೈಕೋರ್ಟು ಬಿಜೆಪಿ ಸರ್ಕಾರದ ಆದೇಶದ ಪರವಾಗಿ, ಹೆಣ್ಣುಮಕ್ಕಳು ಹಿಜಾಬ್ ಧರಿಸಿ ಶಾಲೆ ಒಳಗೆ ಹೋಗಲು ಅಡ್ಡಿಯಾಗಿದ್ದ ಆದೇಶದ ಪರವಾಗಿ ಆದೇಶ ಕೊಡುತ್ತೆ.
ಹೆಣ್ಣುಮಕ್ಕಳು ಶಾಲೆ ಅಥವಾ ಕಾಲೇಜಿನಲ್ಲಿ ನಿಗದಿಯಾಗಿರುವ ಸಮವಸ್ತ್ರವನ್ನೇ ಹಾಕಿಕೊಂಡು, ಅದರ ಜೊತೆಗೆ ತಲೆ ಮೇಲೆ ಒಂದು ಬಟ್ಟೆಯನ್ನೂ ಸುತ್ತಿಕೊಂಡು ಹೋಗಿ, ಪಾಠ ಕೇಳೋಕೆ ಆಗಿದ್ದ ಅಡ್ಡಿ ಅದು. ಆ ವಿಚಾರದಲ್ಲಿ ರಾಜ್ಯದ ದೊಡ್ಡ ದೊಡ್ಡ ಧಾರ್ಮಿಕ ಸಂಘಟನೆಗಳು (ಅವರನ್ನ ನಾನು ಹಿಂದೂ ಸಂಘಟನೆಗಳು ಅಂತ ಕರೆಯಲ್ಲ– ಯಾಕಂದ್ರೆ ಅದು ಹಿಂದೂ ಧರ್ಮ ಅಲ್ಲ. ಅವರು ಕೋಮುವಾದಿ ಸಂಘಟನೆಗಳು ಅಷ್ಟೇ), ಅವರೂ, ಸರ್ಕಾರ, ಶಾಸಕರು, ಮಂತ್ರಿಗಳು, ಮುಖ್ಯಮಂತ್ರಿ, ಇಡೀ ಟಿವಿ ಚಾನೆಲ್ಲುಗಳು, ಬಹುತೇಕ ಪತ್ರಿಕೆಗಳು ಎಲ್ಲರೂ ಅವರ ವಿರುದ್ಧ ಇದ್ದರು ಮತ್ತು ಕೋರ್ಟಿನಲ್ಲಿ ಹೀಗಾಯಿತು.

ಹೌದು, ನಾವು ಮತ್ತು ನಮ್ಮಂಥವರು ಆ ಹೆಣ್ಣುಮಕ್ಕಳ ಪರವಾಗಿ ಇದ್ದೆವು. ಯಾರನ್ನ ಇವತ್ತು ಜನಿವಾರದ ಹುಡುಗನ ಪರವಾಗಿ ನಿಂತಿಲ್ಲ ಅಂತ ನೀವು ಆರೋಪಿಸ್ತಾ ಇದ್ದೀರೋ, ಆ ನಾವು ಆ ಹೆಣ್ಣುಮಕ್ಕಳ ಪರವಾಗಿ ನಿಂತಿದ್ದೆವು. ಈ ಹುಡುಗನ ವಿಚಾರಕ್ಕೆ ನಂತರ ಬರೋಣ.
ಹೈಕೋರ್ಟಿನಲ್ಲಿ ಹೆಣ್ಣುಮಕ್ಕಳ ವಿರುದ್ಧ ತೀರ್ಪು ಬಂದ ನಂತರ, ಮಾರ್ಚ್ 16ಕ್ಕೆ ಹಿರಿಯ ವಕೀಲ ಸಂಜಯ್ ಹೆಗಡೆಯವರು ಮಾನ್ಯ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ ‘ಸ್ವಾಮೀ ಮಾರ್ಚ್ 28ರಿಂದ ಪರೀಕ್ಷೆಗಳಿವೆ. ಹಾಗಾಗಿ ಕೂಡಲೇ ಈ ವಿಚಾರವನ್ನು ಕೈಗೆತ್ತಿಕೊಳ್ಳಬೇಕು’ ಅಂತ ಮನವಿ ಮಾಡಿದ್ರು. ಅದಕ್ಕೆ ಹೋಳಿ ರಜೆಯ ನಂತರ ತಗೊಳ್ಳೋಣ ಅಂತ ಅಂದಿನ ಸಿಜೆ ಹೇಳಿದ್ರು. ಮಾರ್ಚ್ 17ರಿಂದ 19ರವರೆಗೆ ಹೋಳಿ ರಜೆ ಇತ್ತು. ಆದರೆ, ಕೇಸನ್ನು ರಜೆಯ ನಂತರ ಕೈಗೆತ್ತಿಕೊಳ್ಳಲಿಲ್ಲ. ದಯವಿಟ್ಟು ಗಮನಿಸಿ, ಹಿಜಾಬ್ ಧರಿಸಿ ಸರ್ಕಾರೀ ಕಾಲೇಜುಗಳಲ್ಲಿ ಓದಲು ಬಂದ ಹೆಣ್ಣುಮಕ್ಕಳ ವಿರುದ್ಧವೇ ಇಡೀ ವ್ಯವಸ್ಥೆ ಇತ್ತು. ಸುಪ್ರೀಂಕೋರ್ಟಿನ ನ್ಯಾಯಾಧೀಶರ ಮುಂದೆ ವಕೀಲ ದೇವದತ್ತ ಕಾಮತ್ ಮಾರ್ಚ್ 24ಕ್ಕೆ ಮತ್ತೆ ಮನವಿ ಮಾಡಿದ್ರು, ’28ಕ್ಕೇ ಪರೀಕ್ಷೆ ಇದೆ, ದಯವಿಟ್ಟು ತೆಗೆದುಕೊಳ್ಳಿ’ ಅಂತ. ಅವತ್ತು ಮುಖ್ಯ ನ್ಯಾಯಾಧೀಶರು ‘ಪರೀಕ್ಷೆಗಳಿಗೂ ಇದಕ್ಕೂ ಸಂಬಂಧವಿಲ್ಲ, ಆಗಲ್ಲ’ ಅಂದರು. ಅಂತಿಮವಾಗಿ ಆಗಸ್ಟ್ 29ಕ್ಕೆ ಕೇಸು ಲಿಸ್ಟ್ ಆಯಿತು. ನಂತರ ಅಕ್ಟೋಬರ್ 13ಕ್ಕೆ ತೀರ್ಪು ಬಂದಿತು. ಇಬ್ಬರು ನ್ಯಾಯಾಧೀಶರಲ್ಲಿ ಒಬ್ಬೊಬ್ಬರ ಅಭಿಪ್ರಾಯ ಒಂದೊಂದು ಇದ್ದಿದ್ದರಿಂದ, ಯಾವುದೂ ಊರ್ಜಿತವಾಗಲಿಲ್ಲ. ಹೈಕೋರ್ಟ್ ಆದೇಶವೇ ಇದುವರೆಗೆ ಜಾರಿಯಲ್ಲಿದೆ.
ಈ ಮಧ್ಯೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಹಿಜಾಬ್ ವಿಚಾರದಲ್ಲಿ ಬಿಜೆಪಿಯ ವ್ಯವಸ್ಥೆ ಆ ಹೆಣ್ಣುಮಕ್ಕಳ ವಿರುದ್ಧ ಇತ್ತು. ಕಾಲೇಜುಗಳಲ್ಲಿ ಹತ್ತು ಹದಿನೈದು ವಿದ್ಯಾರ್ಥಿಗಳು ಹಿಜಾಬ್ ವಿರುದ್ಧ ಪ್ರತಿಭಟಿಸಿದರೂ, ಇಡೀ ಕಾಲೇಜಿಗೆ ಕಾಲೇಜೇ ಹತ್ತಿ ಉರಿಯುತ್ತಿದೆ ಅನ್ನುವ ಥರಾ ಕೆಲವು ಮಾಧ್ಯಮಗಳು ಬಿಂಬಿಸಿದವು. ಯಾವ ಮಟ್ಟಕ್ಕೆ ಬಿಂಬಿಸಿದ್ವು ಅಂದರೆ, ಕಾಂಗ್ರೆಸ್ ನಾಯಕರುಗಳೇ ಕಾಲೇಜುಗಳನ್ನು ತಾತ್ಕಾಲಿಕವಾಗಿ ಮುಚ್ಚಿ ಅಂತ ಆಗ್ರಹ ಮಾಡಿದರು. ವಾಸ್ತವದಲ್ಲಿ ಒಂದು ಕಾಲೇಜು ಬಿಟ್ಟರೆ ಎಲ್ಲೂ ಮೂವತ್ತು ಜನವೂ ಸೇರಿರಲಿಲ್ಲ.
ಇದನ್ನು ಓದಿದ್ದೀರಾ?: ಗುಜರಾತ್ | ಈಸ್ಟರ್ ಸಭೆಗೆ ನುಗ್ಗಿ ವಿಎಚ್‌ಪಿ ಕಾರ್ಯಕರ್ತರ ದಾಂಧಲೆ
ಈ ಸಮಾಜದಲ್ಲಿ, ಕುಟುಂಬಗಳಲ್ಲಿ ಇರುವ ಎಲ್ಲಾ ಅಡೆತಡೆಗಳನ್ನು ಮೀರಿ ಈ ಹೆಣ್ಣುಮಕ್ಕಳು ಕಾಲೇಜಿಗೆ ಬರುತ್ತಿದ್ದರು. ಹೆಣ್ಣುಮಕ್ಕಳು ಈ ಪ್ರಮಾಣದಲ್ಲಿ ವಿದ್ಯಾಭ್ಯಾಸ ಮಾಡಲು ಶುರು ಮಾಡಿದ್ದೇ ಕೆಲವು ದಶಕಗಳಿಂದ. ಅದರಲ್ಲೂ ಮುಸ್ಲಿಂ ಹೆಣ್ಣುಮಕ್ಕಳಿಗೆ ಇನ್ನೂ ಕಷ್ಟ. ಹೀಗಿರುವಾಗ ಅವರ ವಿರುದ್ಧ ಹೇಗೆ ಇಡೀ ವ್ಯವಸ್ಥೆ ಕೆಲಸ ಮಾಡಿತು ಎಂಬುದನ್ನು ದಯವಿಟ್ಟು ಗಮನಿಸಿ. ಹೌದು, ನಮ್ಮಂತಹ ಕೆಲವರು ಅವರ ಪರವಾಗಿ ಇದ್ದೆವು. ಅದರಿಂದ ಅಂತಹದ್ದೇನೂ ಪ್ರಯೋಜನವಾಗಲಿಲ್ಲ.
ಈಗ ಜನಿವಾರದ ವಿಚಾರಕ್ಕೆ ಬರೋಣ.
ಮೊದಲು ಅದು ಚರ್ಚೆಗೆ ಬಂದಿದ್ದು ಶಿವಮೊಗ್ಗದಲ್ಲಿ. ನಂತರ ಬೀದರಿನಲ್ಲಿ. ಈ ಮಧ್ಯೆ ಸಾಗರ ಹಾಗೂ ಧಾರವಾಡದಲ್ಲೂ ನಡೆದಿದೆ ಅಂತ ಒಂದೆರಡು ವರದಿಗಳು ಹೇಳುತ್ತವೆ. ಏಪ್ರಿಲ್ 16ಕ್ಕೆ ಶಿವಮೊಗ್ಗದಲ್ಲಿ ಮತ್ತು ಏಪ್ರಿಲ್ 17ಕ್ಕೆ ಬೀದರಿನಲ್ಲಿ ಈ ಪ್ರಕರಣ ನಡೆದಿವೆ. ಏಪ್ರಿಲ್ 16ಕ್ಕೆ ಬ್ರಾಹ್ಮಣ ಹುಡುಗನ ಜನಿವಾರವನ್ನು ಕತ್ತರಿಸಲಾಯಿತು ಅಂತ ಕಂಪ್ಲೇಂಟ್ ಆಗಿತ್ತು. ಆದರೆ, ಶಿವಮೊಗ್ಗದ ಡಿಸಿ ಗುರುದತ್ ಹೆಗಡೆಯವರು ಸಿಸಿಟಿವಿ ನೋಡಿ, ಆ ಹುಡುಗನ್ನ ತಡೆದಿದ್ದು ನಿಜ, ಆದರೆ ಜನಿವಾರ ಕತ್ತರಿಸಿಲ್ಲ. ಹೋಂಗಾರ್ಡ್ ತಡೆದು ಸಮಸ್ಯೆ ಆದಾಗ, ಪ್ರಿನ್ಸಿಪಾಲ್ ಬಂದು ಬಗೆಹರಿಸಿದರು ಅಂತ ಹೇಳಲಾಗಿದೆ. ಆದರೂ, ಒಂದೇ ದಿನದಲ್ಲಿ ಮಧ್ಯಪ್ರವೇಶಿಸಿದ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯ ಮೇರೆಗೆ ಆ ಹೋಂಗಾರ್ಡನ್ನ ಅಮಾನತ್ತು ಮಾಡಲಾಗಿದೆ. ಸಾಗರದ ಘಟನೆ ನಡೆದಿರುವುದು ಸಿಸಿಟಿವಿಯಲ್ಲಿ ಕಾಣುತ್ತಿಲ್ಲ ಅಂತ ಜಿಲ್ಲಾಧಿಕಾರಿ ಗುರುದತ್ ಹೆಗಡೆಯವರು ಹೇಳಿದ್ದಾರೆ. ಆದರೂ ದೂರು ದಾಖಲಾಗಿದೆ.
ಅದರ ಮರುದಿನ ಬೀದರಿನಲ್ಲಿ, ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಪರೀಕ್ಷೆಗಳನ್ನ ಬರೆದಿದ್ದ ಜನಿವಾರಧಾರಿ ಹುಡುಗನಿಗೆ, ಮ್ಯಾಥಮೆಟಿಕ್ಸ್ ಪರೀಕ್ಷೆ ಬರೆಯೋಕೆ ತೊಂದರೆ ಕೊಟ್ಟು, ಪರೀಕ್ಷೆ ತೆಗೆದುಕೊಳ್ಳೋಕೇ ಬಿಡಲಿಲ್ಲ ಅಂತ ವರದಿಯಾಗಿದೆ.
ಇವೆರಡೂ ಬಂದ ಮೇಲೆ, ರಾಜ್ಯದ ವಿರೋಧ ಪಕ್ಷಗಳು ಖಂಡಿಸೋದಿರಲಿ, ಮಾಧ್ಯಮಗಳೆಲ್ಲಾ ಎರಡು ದಿನ ಅದರ ಮೇಲೆ ಬಿದ್ದಿದ್ದೂ ಇರಲಿ, ಸ್ವತಃ ಆಡಳಿತ ಪಕ್ಷದ ನಾಯಕರು, ಶಾಸಕರು, ಮಂತ್ರಿಗಳೂ ಸಹಾ ಖಂಡಿಸಿಬಿಟ್ಟರು. ಸಂಬಂಧಪಟ್ಟವರ ಮೇಲೆ ಕ್ರಮ ಸಹ ಘೋಷಣೆಯಾಯಿತು. ಶಿಕ್ಷಣ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರುಗಳು ನಾಮುಂದು ತಾಮುಂದು ಅಂತ ಭರವಸೆಗಳನ್ನು ಕೊಟ್ಟರು. ಸ್ವತಃ ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟರು. ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗವು ಸುವೋ ಮೋಟೋ ಕೇಸು ತೆಗೆದುಕೊಂಡಿತು. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿ ಬಿಟ್ಟಿತು.
ಬೀದರ್‌ನ ವಿಚಾರ ಇನ್ನೂ ಮುಂದಕ್ಕೆ ಹೋಯಿತು. ಆ ಹುಡುಗನ ಪರವಾಗಿ ಕೆಲವು ಮಾಧ್ಯಮಗಳು ಅಭಿಯಾನವನ್ನೇ ನಡೆಸಿಬಿಟ್ಟವು. ನಂತರ ಜಿಲ್ಲಾ ಉಸ್ತುವಾರಿ ಸಚಿವರು ಸದರಿ ಹುಡುಗನ ಮನೆಗೆ ಹೋಗಿ ಆತ ಈ ಪರೀಕ್ಷೆಯಲ್ಲಿ ಗಣಿತ ಪರೀಕ್ಷೆ ತಗೊಂಡು, ಪಡೆದುಕೊಳ್ಳಬಹುದಾಗಿದ್ದು ಏನಾಗಿತ್ತೋ, ಅದನ್ನೂ ಉಚಿತವಾಗಿ ಘೋಷಿಸಿಬಿಟ್ಟರು. ಸದರಿ ಹುಡುಗನಿಗೆ ಇಂಜಿನಿಯರಿಂಗ್ ಸೀಟೇ ಸಿಕ್ಕಿಬಿಟ್ಟಿತು. ವಾರೆವ್ಹಾ… ಇನ್ನೇನು ಬೇಕು?
ಕೇವಲ ಕಾಲೇಜಿನೊಳಗೆ ಹೋಗಿ, ತರಗತಿಯಲ್ಲಿ ಕೂತು ಪಾಠ ಕೇಳಲು ಸಾವಿರಾರು ಹೆಣ್ಣುಮಕ್ಕಳಿಗೆ ತಲೆ ಮೇಲಿನ ಬಟ್ಟೆ ಅಡ್ಡಿ ಅಂತ ಇಡೀ ವ್ಯವಸ್ಥೆ– ಅದರಲ್ಲೂ ಬಿಜೆಪಿ ಮುಖ್ಯಮಂತ್ರಿಯೂ ಸೇರಿ ಅಡ್ಡಿಯಾಗಿಬಿಟ್ಟಿದ್ದರು. ಇಲ್ಲಿ ಪರೀಕ್ಷೆ ಬರೆಯಲು ನಾಲ್ಕು ಹುಡುಗರಲ್ಲಿ ಮೂವರಿಗೆ ಕಿರುಕುಳ ಆಗಿತ್ತು. ಒಬ್ಬ ಹುಡುಗನಿಗೆ ಪರೀಕ್ಷೆ ಮಿಸ್ ಆಗಿದ್ದು ಇದೇ ಕಾರಣಕ್ಕೆ ಅಂತ ಇಟ್ಟುಕೊಳ್ಳೋಣ. ಆತನಿಗೆ ಇಂಜಿನಿಯರಿಂಗ್ ಸೀಟೇ ಸಿಕ್ಕಿಬಿಟ್ಟಿತು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜಾತಿ-ಜನಿವಾರಕ್ಕೆ ಜೋತುಬಿದ್ದ ‘ಜಾತ್ಯತೀತ’ ಸರ್ಕಾರ
ಹೌದು. ಆ ಹುಡುಗನಿಗೂ ಶಿಕ್ಷಣದ ಹಕ್ಕಿದೆ. ತನ್ನ ಧಾರ್ಮಿಕ ನಂಬಿಕೆ ಅಥವಾ ಆಚರಣೆಯ ಕಾರಣಕ್ಕೆ ಅದಕ್ಕೆ ಅಪಚಾರ ಆಗಬಾರದು. ಆದರೆ, ಆತನ ಪರವಾಗಿ ಹೋರಾಡಲು ಒಂದು ದೊಡ್ಡ ವ್ಯವಸ್ಥೆಯೇ ಇದೆ. ಆ ವ್ಯವಸ್ಥೆಯ ಹೆಸರೇ ಜಾತಿ ವ್ಯವಸ್ಥೆ. ಅದು ಯಾವಾಗಲೂ ಈ ಜಾತಿ ಶ್ರೇಣೀಕರಣದ ಮೇಲಿನವರಿಗೇ ಅನುಕೂಲ ಮಾಡಿಕೊಡುತ್ತದೆ. ಅದು ಸರ್ಕಾರದ ಮೇಲೆ, ಸಮಾಜದ ಮೇಲೆ ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮದ ಮೇಲೆ ನಿಯಂತ್ರಣ ಹೊಂದಿದೆ. ಹೀಗಿರುವಾಗ– ನಾವು ಆ ಹುಡುಗನ ಪರವಾಗಿ ದನಿಯೆತ್ತಿಲ್ಲ ಅಂತ ನಮ್ಮನ್ನು ಪ್ರಶ್ನೆ ಮಾಡುವವರಿಗೆ ಏನು ಹೇಳೋಣ? ನಮಗೆ ಸೀಮಿತವಾದ ಸಮಯ, ಶಕ್ತಿ, ಸಂಪನ್ಮೂಲ ಇದೆ. ಅದನ್ನ ನಾವು ಯಾರ ಪರವಾಗಿ ಬಳಸಬೇಕು? ಯಾರಿಗೆ ಅದರ ಅಗತ್ಯ ಅತ್ಯಂತ ಹೆಚ್ಚು ಇದೆಯೋ ಅವರ ಪರವಾಗಿ ಬಳಸಬೇಕು. ಯಾರ ಪರವಾಗಿ ವ್ಯವಸ್ಥೆ ನಿಲ್ಲುವುದಿಲ್ಲವೋ ಅವರ ಪರವಾಗಿ ಬಳಸಬೇಕು.
ಅದನ್ನೇ ನಾವು ಮಾಡಿದ್ದು. ಅದು ಆ ಅಸಹಾಯಕ ಹೆಣ್ಣುಮಕ್ಕಳ ಪರವಾಗಿ ನಿಂತಿದ್ದು. ಇದೇ ಸಾಮಾಜಿಕ ನ್ಯಾಯ, ಇದೇ ಸಂವಿಧಾನದ ಆಶಯ, ಇದೇ ಮನುಷ್ಯತ್ವ, ಇದೇ ಧರ್ಮ.

ಅದೆಲ್ಲಾ ಮಾಡಿಯೂ ಆ ಹೆಣ್ಣುಮಕ್ಕಳಿಗೆ ನ್ಯಾಯ ಸಿಗಲಿಲ್ಲ. ಯಾಕೆಂದರೆ, ಅನ್ಯಾಯ, ಸಂವಿಧಾನದ ವಿರೋಧಿ ಸಿದ್ಧಾಂತ, ಅಮಾನವೀಯತೆ, ಅಧರ್ಮ ಮೇಲುಗೈ ಸಾಧಿಸಿತು. ಆದರೆ, ಕೆಲವರಾದರೂ ಅದರ ವಿರುದ್ಧ ದನಿಯೆತ್ತಿದೆವಲ್ಲಾ, ಅದು ಈ ಸಮಾಜವನ್ನು ಇಷ್ಟಾದರೂ ಮಾನವೀಯಗೊಳಿಸುತ್ತದೆ. ಅದನ್ನ ನಾವು ಮಾಡ್ತಾ ಇರ್ತೀವಿ.
ನೀವೇನು ಮಾಡ್ತಾ ಇರ್ತೀರಿ? ನೀವು ಜನಿವಾರ ತೊಡದವರಿಗೆ ಒಂದು ಬಗೆಯ ದೇವದರ್ಶನ, ಒಂದು ಬಗೆಯ ಪಂಕ್ತಿ ಭೋಜನ ಮಾಡಬೇಕು ಅಂತ ದೇವಸ್ಥಾನ ಪ್ರವೇಶಿಸುವಾಗ ಅಂಗಿ ತೆಗೆಸ್ತೀರಿ. ಅದಕ್ಕಾಗಿಯೇ ಬಸವಣ್ಣನವರು ಕೇಳಿದ ಪ್ರಶ್ನೆಯನ್ನ ನಾವು ಕೇಳ್ತೀವಿ.
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು: ಇದೆಂತಯ್ಯಾ?
ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ! ಕೂಡಲ ಸಂಗಮದೇವಾ!
ನನ್ನನ್ನ ಪ್ರಶ್ನೆ ಮಾಡಿದವರು ವಿಪ್ರರು ಮಾತ್ರವಲ್ಲ, ಅವರು ಕೇಳಿದ್ದು ಕಡಿಮೆಯೇ. ಆದರೆ, ಯಾವ ಸಿದ್ಧಾಂತ ಎಲ್ಲರನ್ನೂ ಶೋಷಣೆ ಮಾಡುತ್ತಿದೆಯೋ, ಆ ಸಿದ್ಧಾಂತದ ಪ್ರಭಾವಕ್ಕೆ ಒಳಗಾದವರು ಅವರು. ಅವರಿಗೆ ಹೇಳೋದು ಇಷ್ಟೇ: ಅಯ್ಯಗಳಿರಾ… ದಯವಿಟ್ಟು ಇದನ್ನು ಅರ್ಥ ಮಾಡಿಕೊಳ್ಳಿ. ಶೋಷಿತರ ಪರವಾಗಿ ನಿಲ್ಲಿ. ಆ ಕೂಡಲ ಸಂಗಮದೇವನು ನಿಮಗೆ ಒಳಿತನ್ನೇ ಮಾಡುವನು.
*ನೆನಪಿರಲಿ…*
⬛ *_ಜನಿವಾರ ತೆಗೆಯಬೇಕೆಂದು ಹೇಳಿದವರಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಇರಲಿಲ್ಲ._*
⛔ *ಆದರೆ….*
⬛ *_ಹಿಜಾಬ್ ತೆಗೆಸುವ ಷಡ್ಯಂತ್ರ ರೂಪಿಸಿದವರು “ತಮ್ಮನ್ನು ತಾವು ಹಿಂದೂ ಎಂದು ಹೇಳಿಕೊಂಡವರು” ಆಗಿದ್ದರು._*
⬛ *_ಆ ಷಡ್ಯಂತ್ರವನ್ನು ಬೆಂಬಲಿಸಿದವರು “ತಮ್ಮನ್ನು ತಾವು ಹಿಂದೂ ಎಂದು ಹೇಳಿಕೊಂಡವರು” ಆಗಿದ್ದರು._*
⬛ *_ಹಿಜಾಬ್’ನ ನೆಪದಲ್ಲಿ ಊರಿಡಿ ಕೋಮು ಉದ್ವಿಗ್ನತೆ ಸೃಷ್ಟಿಸಿ ಕ್ಷೋಬೆ ಹರಡಲು ಸರ್ವ ಪ್ರಯತ್ನ ಮಾಡಿದವರು “ತಮ್ಮನ್ನು ತಾವು ಹಿಂದೂ ಎಂದು ಹೇಳಿಕೊಂಡವರು” ಆಗಿದ್ದರು._*
🦂 🦀 🐜 🐞 🐝
https://www.facebook.com/share/p/1AhpeQhdhk/