ಪೋಪ್ ಅವರು ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿರುತ್ತಾರೆ. ಈ ಚರ್ಚ್ ಯೇಸುಕ್ರಿಸ್ತನನ್ನು ತನ್ನ ಅದೃಶ್ಯ ಮುಖ್ಯಸ್ಥರೆಂದು ಪರಿಗಣಿಸುತ್ತದೆ. ಆಯ್ಕೆಯಾಗುವ ಧರ್ಮಗುರು ಯೇಸುವಿನ ಆಜ್ಞೆಯಂತೆ ಕೆಲಸ ಮಾಡುತ್ತಾರೆ ಎಂದು ಹೇಳುತ್ತದೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕ್ಯಾಥೋಲಿಕ್ ಧರ್ಮಗುರು (ಪೋಪ್) ಫ್ರಾನ್ಸಿಸ್ ಅವರು ಸೋಮವಾರ (ಏಪ್ರಿಲ್ 21) ಬೆಳಗ್ಗೆ ಸಾವನ್ನಪ್ಪಿದ್ದಾರೆ. ವ್ಯಾಟಿಕನ್ ಸಿಟಿಯಲ್ಲಿ ನೆಲೆಸಿದ್ದ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಅಪೋಸ್ಟೋಲಿಕ್ ಚೇಂಬರ್‌ನ ಕ್ಯಾಮರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ತಿಳಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಬ್ರಾಂಕೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಫೆಬ್ರವರಿ 14ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ಅವರಿಗೆ ನ್ಯುಮೋನಿಯಾ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ತಮ್ಮ ನಿವಾಸಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಾರೆ.
1415ರಿಂದ ಈವರೆಗೆ ಓರ್ವ ಧರ್ಮಗುರುವನ್ನು ಹೊರತುಪಡಿಸಿ ಉಳಿದೆಲ್ಲ ಪೋಪ್‌ಗಳೂ ಅಧಿಕಾರದಲ್ಲಿದ್ದಾಗಲೇ ನಿಧನರಾಗಿದ್ದಾರೆ. 2005ರಲ್ಲಿ ಪೋಪ್ ಹುದ್ದೆಗೇರಿದ್ದ ಬೆನೆಡಿಕ್ಟ್ XVI ಅವರು ‘ತಾವು ಮಾನಸಿಕ ಮತ್ತು ದೈಹಿಕ ಸಮಸ್ಯೆ’ಯ ಕಾರಣ ನೀಡಿ 2013ರಲ್ಲಿ ನಿವೃತ್ತರಾಗಿದ್ದರು. ಅವರ ಬಳಿಕ, ಫ್ರಾನ್ಸಿಸ್ ಅವರು ಪೋಪ್ ಹುದ್ದೆಗೇರಿದ್ದರು.
ಈಗ ಪೋಪ್ ಫ್ರಾನ್ಸಿಸ್ ಅವರು ಅಧಿಕಾರದಲ್ಲಿದ್ದಾಗಲೇ ಸಾವನ್ನಪ್ಪಿರುವ ಕಾರಣ ಹೊಸ ಧರ್ಮಗುರುವನ್ನು ಆಯ್ಕೆ ಮಾಡಬೇಕಾಗಿದೆ.
ಪೋಪ್ ಸಾವಿನ ಘೋಷಣೆ;
ಪೋಪ್ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲು ಮತ್ತು ಒಬ್ಬ ಪೋಪ್‌ನಿಂದ ಮತ್ತೊಬ್ಬ ಪೋಪ್‌ಗೆ ಅಧಿಕಾರ ಹಸ್ತಾಂತರಿಸಲು ಕೆಲವು ಕಾನೂನು ಮತ್ತು ಮಾನದಂಡಗಳಿವೆ. 2024ರ ಏಪ್ರಿಲ್‌ನಲ್ಲಿ, ಧರ್ಮಗುರು ಫ್ರಾನ್ಸಿಸ್ ಅವರು ಪೋಪ್‌ಗಳು ಸಾವನ್ನಪ್ಪಿದ ಬಳಿಕ ಅವರ ಅಂತ್ಯಕ್ರಿಯೆಯಲ್ಲಿ ಅನುಸರಿಸಬೇಕಾದ ವಿಧಿ-ವಿಧಾನಗಳನ್ನು ಸೂಚಿಸುವ ಪ್ರಾರ್ಥನಾ ಪುಸ್ತಕವಾದ ‘ಆರ್ಡೊ ಎಕ್ಸೆಕ್ವಿಯರಮ್ ರೊಮಾನಿ ಪಾಂಟಿಫಿಸಿಸ್’ಗೆ ಕೆಲವು ಮಾರ್ಪಾಡುಗಳನ್ನು ಮಾಡಿದ್ದರು.
ಸಾಂಪ್ರದಾಯಿಕವಾಗಿ, ಪೋಪ್ ಅವರ ಮರಣವನ್ನು ಚರ್ಚ್‌ನ ಖಜಾಂಚಿಯಾಗಿ ಸೇವೆ ಸಲ್ಲಿಸುವ ಕಾರ್ಡಿನಲ್ ಕ್ಯಾಮೆರ್ಲೆಂಗೊ ಪರಿಶೀಲಿಸುತ್ತಾರೆ. ಅವರು ಪೋಪ್ ಅವರ ಬ್ಯಾಪ್ಟಿಸಮ್ ಹೆಸರನ್ನು ಕಿವಿಯ ಬಳಿ ಮೂರು ಬಾರಿ ಕೂಗುತ್ತಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಲ್ಲಿ, ಅವರು ಸತ್ತಿದ್ದಾರೆ ಎಂದು ಘೋಷಿಸುತ್ತಾರೆ.
ಬಳಿಕ, ಪ್ರಾರ್ಥನಾ ಮಂದಿರದಲ್ಲಿ ಮೀನುಗಾರನ ಉಂಗುರ, ಪೋಪ್ ಬಳಸುವ ಪೋಪಸಿ ಮುದ್ರೆಯುಳ್ಳ ಮುದ್ರಾ ಉಂಗುರವನ್ನು ಮುರಿದುಹಾಕುವ ಮುಲಕ ಪೋಪ್ ಅವರ ಅಧಿಕಾರ ಕೊನೆಗೊಂಡಿತು ಎಂದು ಸಾಂಕೇತಿಕವಾಗಿ ಸೂಚಿಸಲಾಗುತ್ತದೆ. ‘ಪಾಪಲ್ ಅಪಾರ್ಟ್ಮೆಂಟ್ಅನ್ನು ಲಾಕ್ ಮಾಡಲಾಗಿದೆ, ಪೋಪ್ ಇನ್ನಿಲ್ಲ’ವೆಂದು ಕಾರ್ಡಿನಲ್ ಕಾಲೇಜಿಗೆ ಕ್ಯಾಮೆರ್ಲೆಂಗೊ ಅವರು ತಿಳಿಸುತ್ತಾರೆ. ಅಂದಿನಿಂದ ನೊವೆಂಡಿಯೇಲ್ (ಒಂಬತ್ತು ದಿನಗಳ ಶೋಕಾಚರಣೆ) ನಡೆಸಲಾಗುತ್ತದೆ.
ಪೋಪ್ ಅವರ ಮೃತದೇಹಕ್ಕೆ ಪಾಪಲ್ ರಾಜಲಾಂಛನವುಳ್ಳ ಬಟ್ಟೆಯನ್ನು ಹೊದಿಸಿ, ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇರಿಸಲಾಗುತ್ತದೆ. 2022ರಲ್ಲಿಯೇ ಪೋಪ್ ಫ್ರಾನ್ಸಿಸ್ ಅವರು ತಾವು ಮೃತಪಟ್ಟ ಬಳಿಕ, ತಮ್ಮ ಮೃಹದೇಹವನ್ನು ಸರಳ ಶವಪೆಟ್ಟಿಗೆಯಲ್ಲಿ ಇರಿಸಲು ಸೂಚನೆ ನೀಡಿದ್ದರು. ಅದರಂತೆ, ಸೈಪ್ರೆಸ್, ಸೀಸ ಮತ್ತು ಓಕ್ ಕಟ್ಟಿಗೆಗಳಿಂದ ಮಾಡಿದ ಮೂರು ಶವಪೆಟ್ಟಿಗೆಗಳನ್ನು ಸಿದ್ದಗೊಳಿಸಿದ್ದರು. ಈ ಶವಪೆಟ್ಟಿಗೆಯಲ್ಲಿಯೇ ಪೋಪ್ ಪ್ರಾನ್ಸಿಸ್ ಅವರ ಮೃತದೇಹವನ್ನು ಸಾರ್ವಜನಿಕ ವೀಕ್ಷಣೆಗಾಗಿ ಇರಿಸಲಾಗಿದೆ.
ಪೋಪ್ ಅವರು ಅಂತ್ಯಕ್ರಿಯೆಯನ್ನು ನಾಲ್ಕರಿಂದ ಆರು ದಿನಗಳ ಒಳಗಾಗಿ ನಡೆಸಲಾಗುತ್ತದೆ. ಕಾರ್ಡಿನಲ್ಸ್ ಕಾಲೇಜಿನ ಡೀನ್ ನೇತೃತ್ವದಲ್ಲಿ ಪೋಪ್ ಅಂತ್ಯಕ್ರಿಯೆಯ ವಿಧಿ-ವಿಧಾನಗಳನ್ನು ಪೂರೈಸಲಾಗುತ್ತದೆ. ಹಲವಾರು ಪೋಪ್‌ಗಳನ್ನು ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಸಮಾಧಿ ಮಾಡಲಾಗಿದೆ. ಆದರೆ, ಪೋಪ್ ಫ್ರಾನ್ಸಿಸ್ ಅವರು ತಮ್ಮನ್ನು ವ್ಯಾಟಿಕನ್ ನಗರದಿಂದ ದೂರದಲ್ಲಿರುವ ರೋಮ್‌ನ ‘ಸಾಂಟಾ ಮಾರಿಯಾ ಮ್ಯಾಗಿಯೋರ್ ಬೆಸಿಲಿಕಾ’ದಲ್ಲಿ ಸಮಾಧಿ ಮಾಡಬೇಕೆಂದು 2022ರಲ್ಲಿಯೇ ಸೂಚಿಸಿದ್ದರು.
ಸ್ಥಾನ ಖಾಲಿ ಅವಧಿ ಮತ್ತು ಹೊಸ ಪೋಪ್ ಆಯ್ಕೆ
ಪೋಪ್ ಅವರ ನಿಧನ ಅಥವಾ ರಾಜೀನಾಮೆ ನೀಡಿದ ಸಮಯದಿಂದ ಸ್ಥಾನ ಖಾಲಿ ಅವಧಿ ಪ್ರಾರಂಭವಾಗುತ್ತದೆ. ಇದನ್ನು, ಕ್ಯಾಥೋಲಿಕ್ಕರು ‘ಸೆರೆ ಖಾಲಿ ಅವಧಿ’ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಚರ್ಚ್‌ನ ಆಡಳಿತವನ್ನು ಕಾರ್ಡಿನಲ್ಸ್ ಕಾಲೇಜು ನಿರ್ವಹಿಸುತ್ತದೆ.
ಪೋಪ್ ಹುದ್ದೆ ತೆರವಾದ 15-20 ದಿನಗಳಲ್ಲಿ ಹೊಸ ಪೋಪ್‌ರನ್ನು ಆಯ್ಕೆ ಮಾಡಬೇಕಾಗುತ್ತದೆ. ಅದಕ್ಕಾಗಿ, ವ್ಯಾಟಿಕನ್‌ನಲ್ಲಿ ಪಾಪಲ್ ಸಮಾವೇಶವನ್ನು ನಡೆಸಲಾಗುತ್ತದೆ. ಈ ಸಮಾವೇಶದಲ್ಲಿ ಪೋಪ್ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ರಹಸ್ಯ ಚುನಾವಣಾ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ, ಪ್ರಪಂಚದಾದ್ಯಂತ ಇರುವ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಡಿನಲ್‌ಗಳು ಭಾಗವಹಿಸುತ್ತಾರೆ.
ಭಾರತದಲ್ಲಿನ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ಕು ಕಾರ್ಡಿನಲ್‌ಗಳು ಪಾಪಲ್ ಸಮಾವೇಶದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. (ಆ ನಾಲ್ವರು ಕಾರ್ಡಿನಲ್‌ಗಳು: ಕಾರ್ಡಿನಲ್ ಫಿಲಿಪ್ ನೆರಿ ಫೆರಾವೊ, ಕಾರ್ಡಿನಲ್ ಕ್ಲೀಮಿಸ್ ಬಸೆಲಿಯೋಸ್, ಕಾರ್ಡಿನಲ್ ಆಂಥೋನಿ ಪೂಲಾ ಹಾಗೂ ಕಾರ್ಡಿನಲ್ ಜಾರ್ಜ್ ಜಾಕೋಬ್ ಕೂವಕಾಡ್.)
ಈ ವರದಿ ಓದಿದ್ದೀರಾ?: ರಾಷ್ಟ್ರಪತಿಗೆ ಸುಪ್ರೀಂ ಗಡುವು: ಕಾರ್ಯಾಂಗದ ಮೇಲೆ ನ್ಯಾಯಾಂಗ ಅತಿಕ್ರಮಣವೇ?
ವ್ಯಾಟಿಕನ್‌ನ ಸಿಸ್ಟೀನ್ ಚಾಪೆಲ್‌ನಲ್ಲಿ ನಡೆಯುವ ಮತದಾನದಲ್ಲಿ ಕಾರ್ಡಿನಲ್‌ಗಳು ಮತದಾನ ಮಾಡುತ್ತಾರೆ. ಪೋಪ್ ಹುದ್ದೆಯ ಸ್ಪರ್ಧೆಯಲ್ಲಿದ್ದವರಲ್ಲಿ ಒಬ್ಬ ಅಭ್ಯರ್ಥಿ ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವವರೆಗೆ ಹಲವಾರು ಸುತ್ತುಗಳಲ್ಲಿ ಮತ ಚಲಾಯಿಸುತ್ತಾರೆ. ಪ್ರತಿ ಸುತ್ತಿನ ಮತದಾನಕ್ಕೂ, ಪ್ರಾರ್ಥನಾ ಮಂದಿರದಿಂದ ಕಪ್ಪು ಹೊಗೆ ಬಿಡುಗಡೆಯಾಗುತ್ತದೆ. ಅಂತಿಮವಾಗಿ ಬಿಳಿ ಹೊಗೆ ಬಂದಾಗ, ಮತದಾನ ಪ್ರಕ್ರಿಯೆ ಮುಗಿಯುತ್ತದೆ ಮತ್ತು ಹೊಸ ಪೋಪ್ ಆಯ್ಕೆಯಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ.
ಬಳಿಕ, ಕಾರ್ಡಿನಲ್ಸ್ ಕಾಲೇಜಿನ ಪ್ರತಿನಿಧಿಯೊಬ್ಬರು ಸೇಂಟ್ ಪೀಟರ್ಸ್ ಬೆಸಿಲಿಕಾದ ಮುಖ್ಯ ಬಾಲ್ಕನಿಯಲ್ಲಿ ನಿಂತು, ‘ಹ್ಯಾಬೆಮಸ್ ಪಾಪಮ್’ (ನಮಗೆ ಪೋಪ್ ಆಯ್ಕೆಯಾಗಿದ್ದಾರೆ) ಎಂದು ಘೋಷಿಸುತ್ತಾರೆ. ಹೊಸ ಪೋಪ್, ಅದೇ ಬಾಲ್ಕನಿಯಲ್ಲಿ ನಿಂತು ಸಾರ್ವಜನಿಕವಾಗಿ ತಮ್ಮ ಮೊದಲ ಭಾಷಣ ಮಾಡುತ್ತಾರೆ.
ಪೋಪ್ ಕಚೇರಿ
ಪೋಪ್ ಅವರು ರೋಮ್‌ನ ಬಿಷಪ್ ಮತ್ತು ಕ್ಯಾಥೋಲಿಕ್ ಚರ್ಚ್‌ನ ಮುಖ್ಯಸ್ಥರಾಗಿರುತ್ತಾರೆ. ಈ ಚರ್ಚ್ ಯೇಸುಕ್ರಿಸ್ತನನ್ನು ತನ್ನ ಅದೃಶ್ಯ ಮುಖ್ಯಸ್ಥರೆಂದು ಪರಿಗಣಿಸುತ್ತದೆ. ಯೇಸು ತಮ್ಮ ಸರ್ವೋಚ್ಚ ಪೋಪ್ ಎಂದೂ ಭಾವಿಸುತ್ತದೆ. ಆಯ್ಕೆಯಾಗುವ ಧರ್ಮಗುರು ಯೇಸುವಿನ ಆಜ್ಞೆಯಂತೆ ಕೆಲಸ ಮಾಡುತ್ತಾರೆ ಎಂದು ಹೇಳುತ್ತದೆ. ಧರ್ಮಗುರುವಿನ ಕಚೇರಿಯನ್ನು ಪಪಾಸಿ ಎಂದು ಕರೆಯಲಾಗುತ್ತದೆ.
ಧರ್ಮಗುರುಗಳು ಪ್ರಧಾನವಾಗಿ ವ್ಯಾಟಿಕನ್ ನಗರದ ಕೇಂದ್ರ ಆಡಳಿತ ಮಂಡಳಿಯಾದ ‘ಹೋಲಿ ಸೀ’ಯ ಮೇಲ್ವಿಚಾರಣೆ ಮಾಡುತ್ತಾರೆ. ಹೋಲಿ ಸೀ – ವ್ಯಾಟಿಕನ್ ನಗರದ ಪ್ರತಿನಿಧಿಯಾಗಿ ಹಲವು ರಾಷ್ಟ್ರಗಳೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ನಿರ್ವಹಿಸುತ್ತದೆ.
ಪೋಪ್ ಫ್ರಾನ್ಸಿಸ್ ಅವರ ಜೀವನ
ಪೋಪ್ ಫ್ರಾನ್ಸಿಸ್ 266ನೇ ಪೋಪ್ ಆಗಿದ್ದರು. ಅವರು 2013ರ ಮಾರ್ಚ್ 13, 2013ರಂದು ಪೋಪ್ ಬೆನೆಡಿಕ್ಟ್ XVI ಅವರಿಂದ ಅಧಿಕಾರ ವಹಿಸಿಕೊಂಡರು.
1936ರಲ್ಲಿ ಬ್ಯೂನಸ್ ಐರಿಸ್‌ನಲ್ಲಿ ಜನಿಸಿದ ಫ್ರಾನ್ಸಿಸ್ ಅವರ ಮೂಲ ಹೆಸರು ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ. ಅವರು 1969ರಲ್ಲಿ ಜೆಸ್ಯೂಟ್ ಪಾದ್ರಿಯಾಗಿ ನೇಮಕಗೊಂಡರು. 1992ರಲ್ಲಿ ಬಿಷಪ್ ಆಗಿ ಮೇಲ್ದರ್ಜೆಗೇರಿದರು. 1998ರಲ್ಲಿ ಬ್ಯೂನಸ್ ಐರಿಸ್‌ನ ಆರ್ಚ್‌ಬಿಷಪ್ ಆಗಿ ಬಡ್ತಿ ಪಡೆದರು.
ಪೋಪ್ ಫ್ರಾನ್ಸಿಸ್ ಅವರನ್ನು ಮಧ್ಯಮವಾದಿ ಎಂದು ಪರಿಗಣಿಸಲಾಗಿತ್ತು. ಅವರು ಸಲಿಂಗಕಾಮವನ್ನು ವಿರೋಧಿಸಿದ್ದರು. ಸಲಿಂಗಕಾಮಿಗಳು ಚರ್ಚ್ ಮುಂದೆ ಕ್ಷಮೆ ಕೇಳಬೇಕೆಂದು ಹೇಳಿದ್ದರು. ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಗಳನ್ನು ವಿರೋಧಿಸಿದ್ದರು. ಗರ್ಭಪಾತವು ‘ಅತ್ಯಂತ ಭಯಾನಕ’ ಅಪರಾಧ ಎಂದು ವಾದಿಸಿದ್ದರು.