ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ದೊಂಬರನಹಳ್ಳಿ ಗ್ರಾಮದಲ್ಲಿ ಏ.22 ರಿಂದ 24 ರವರೆಗೆ ಗ್ರಾಮದೇವತೆಯಾದ ಮುತ್ತಿನಮ್ಮ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಪ್ರಾಣಿ ಬಲಿ ಹಾಗೂ ಗಾವು ಸಿಗಿತ ಕೃತ್ಯವನ್ನು ತಡೆಯುವಂತೆ ತುರುವೇಕೆರೆ ತಹಶೀಲ್ದಾರ್ ಆರಕ್ಷಕ ವೃತ್ತ ನಿರೀಕ್ಷಕರಿಗೆ ನಿರ್ದೇಶನ ನೀಡಿ ಆದೇಶ ಹೊರಡಿಸಿದಾರೆ.
ಧಾರ್ಮಿಕ ಸ್ಥಳಗಳಲ್ಲಿ ಪ್ರಾಣಿ ಬಲಿ ನಿಷೇಧ ಕಾಯ್ದೆಯು ಅನ್ವಯವಾಗುತ್ತದೆ ಎಂಬ ಅಂಶವನ್ನು ಸಂಬಂಧಿಸಿದ ಜಾತ್ರಾ ಆಯೋಜಕರಿಗೆ ಮತ್ತು ಗ್ರಾಮಸ್ಥರಿಗೆ ಮನವರಿಕೆ ಮಾಡಿ, ಸದರಿ ಕೃತ್ಯ ನಡೆಯುವುದನ್ನು ತಡೆಯಲು ನಿಯಮಾನುಸಾರ ಕ್ರಮ ಕೈಗೊಂಡು ವರದಿ ನೀಡಲು ಸೂಚಿಸಿರುತ್ತಾರೆ.
ಜಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ. ಮಕ್ಕಳು ಕೂಡ ಬರುವುರಿಂದ ಪ್ರಾಣಿ ಬಲಿ ಮತ್ತು ಗಾವು ಸಿಗಿತದಂತಹ ಆಚರಣೆಗಳಿಂದ ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಮತ್ತು ಕಾನೂನು ಉಲ್ಲಂಘನೆಯೂ ಆಗಲಿದೆ. ಜಾತ್ರೆಯಲ್ಲಿ ಹತ್ತಾರು ಕೋಣಗಳ ತಲೆಗಳು ನೆಕ್ಕುರುಳಲಿವೆ, ಮೇಕೆಯ ಕತ್ತನ್ನು ಬಾಯಿಯಲ್ಲಿಯೇ ಸಿಗಿಯುವ ಆಚರಣೆ ನಡೆಯುತ್ತಾ ಬಂದಿದೆ. ಆದ್ದರಿಂದ ಈ ಆಚರಣೆಯನ್ನು ನಿಲ್ಲಿಸಬೇಕೆಂದು ಸಾರ್ವಜನಿಕರು ಅಪರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಇದನ್ನು ಗಂಭಿರವಾಗಿ ಪರಿಗಣಿಸಿರುವ ಎಡಿಸಿ ಅವರು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ತುರುವೇಕೆರೆ ತಹಶೀಲ್ದಾರ್ ಅವರಿಗೆ ಪತ್ರವನ್ನು ವರ್ಗಾಯಿಸಿದ್ದಾರೆ.
ಅಧಿಕಾರಿಗಳ ಮೇಲೆ ಅನುಮಾನ!: ಹಿಂದೊಮ್ಮೆ ಇದೇ ಜಾತ್ರೆಯಲ್ಲಿ ಗಾವು ಸಿಗಿತ ಮತ್ತು ಪ್ರಾಣಿ ಬಲಿ ನಡೆಯಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿತ್ತು. ತಹಶೀಲ್ದಾರ್ ಮೌಢ್ಯ ತಡೆಯುವ ಭರವಸೆ ನೀಡಿದ್ದಾಗ್ಯೂ ಗ್ರಾಮಸ್ಥರು ಮತ್ತು ಪ್ರಭಾವಿಗಳೊಂದಿಗೆ ಶಾಮೀಲಾದ ಪೊಲೀಸರು ಬೆಳಗಿನ ಜಾವದಲ್ಲಿ ತಮ್ಮ ನಿರ್ಲಕ್ಷ್ಯತನದಿಂದ ಕೋಣ ಬಲಿಗೆ ಅವಕಾಶ ಮಾಡಿಕೊಟ್ಟರು ಎಂದು ದೂರುದಾರರು ಹೇಳಿದರು.
ಈ ಪ್ರಕರಣ ಮರುಕಳಿಸಿದರೆ ಅಧಿಕಾರಿಗಳನ್ನು ಅಮಾನತ್ತು ಮಾಡುವ ಕೆಲಸವಾಗಬೇಕು. ಸರ್ಕಾರ ರಚಿಸಿದ ಕಾನೂನನ್ನು ಅನುಷ್ಠಾನಕ್ಕೆ ತರುವಲ್ಲಿ ಅಧಿಕಾರಿಗಳು ವಿಫಲರಾದರೆ ಅವರಿಗೆ ಶಿಕ್ಷೆಯಾಗಲೇ ಬೇಕು. ಮುಖ್ಯವಾಗಿ ಕಾನೂನು ಸುವ್ಯವಸ್ಥೆಯ ಹೊಣೆ ಹೊತ್ತ ಪೊಲೀಸ್ ಇಲಾಖೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
” ಮೇಲಾಧಿಕಾರಿಗಳಿಂದ ಸೂಚನಾ ಪತ್ರ ಬಂದಿದೆ. ಪ್ರಾಣಿ ಬಲಿ ಮತ್ತು ಗಾವು ಸಿಗಿತ ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ವೃತ್ತ ನಿರೀಕ್ಷಕರಿಗೂ ನಿರ್ದೇಶನ ನೀಡಿದ್ದೇನೆ. ಈ ಮೌಢ್ಯ ಆಚರಣೆಯನ್ನು ತಡೆಯುವ ಪ್ರಯತ್ನ ಮಾಡಲಾಗುವುದು ಎಂದು ತುರುವೇಕೆರೆ ತಹಶೀಲ್ದಾರ್ ತಿಳಿಸಿದರು.